ಬಣ್ಣದ ಡ್ರೆಸ್

(ಕಿರುಗತೆ)

ಅವಳಿನ್ನೂ ಪುಟ್ಟ ಹುಡುಗಿ.  ಅಪ್ಪ ಸೈನಿಕ.  ದೂರದ ಗಡಿಯಲ್ಲಿ ಕೆಲಸ. 

ಕಳೆದ ವಾರವಷ್ಟೇ ಸ್ಕೈಪಲ್ಲಿ ಬಂದು ಮಗಳೊಡನೆ ಬಹಳ ಹೊತ್ತು ಮಾತಾಡಿದ್ದ.  ʼಪುಟ್ಟಿ,  ಮುಂದಿನ ತಿಂಗಳು ನಾನು ಬರುತ್ತೇನೆ. ನೀನು ಶಾಲೆಗೆ ಚಕ್ಕರ್‌ ಹೊಡೆಯಬಾರದು.  ಕ್ಲಾಸಲ್ಲಿ ತಂಟೆ ಮಾಡಬಾರದು.  ಚೆನ್ನಾಗಿ ಓದಬೇಕು.    ಅಮ್ಮನಿಗೆ  ಹಠ ಮಾಡಿ ತೊಂದರೆ ಕೊಡಬಾರದು.  ನಾನು ಬರುವಾಗ  ನಿನಗೆ ಒಳ್ಳೆಯ ಮೂರು ಬಣ್ಣದ ಡ್ರೆಸ್‌ ತರುತ್ತೇನೆʼ ಎಂದಿದ್ದ.  ಮಗಳಿಗೆ ಖುಷಿಯೋ ಖುಷಿ.  ಅಪ್ಪ ತರುವ ಬಣ್ಣ ಬಣ್ಣಗಳ ಉಡುಗೆಯ ಕನಸು.

ತಿಂಗಳ ಕೊನೆಯಲ್ಲಿ ಅಪ್ಪನ ದೇಹವನ್ನು ಮನೆಗೆ ತಂದರು.   ನಂತರ ಮಿಲಿಟರಿ ಮರ್ಯಾದೆಯೊಡನೆ ಅಂತಿಮ ಕಾರ್ಯಕ್ಕೆ ಅಣಿಮಾಡಲು ಕೊಂಡೊಯ್ದರು. 

ಏನೂ ಅರಿಯದ ಪುಟ್ಟ ಮಗಳು ಅಂತಿಮ ಸಂಸ್ಕಾರದ ಸಮಯ, ಅಪ್ಪನ ದೇಹ ತಂದ ಸೈನಿಕನೊಬ್ಬನ ಬಳಿ ಮೆಲು ಧ್ವನಿಯಲ್ಲಿ ಕೇಳಿದಳು, ʼಅಪ್ಪ ಯಾಕೋ ಇನ್ನೂ ಮಲಗಿದ್ದಾರೆ.  ಅವರು ನನಗೆ ಮೂರು ಬಣ್ಣದ ಡ್ರೆಸ್‌  ತರ್ತೀನಿ ಅಂದಿದ್ದರು.  ತಂದಿದ್ದಾರಾ ಅಂಕಲ್?ʼ

ಸೈನಿಕ ಅವಳನ್ನು ಅಪ್ಪನ ದೇಹದ ಬಳಿ ಕೊಂಡೊಯ್ದ,  ಅದರ ಮೇಲೆ ಹೊದಿಸಿದ್ದ ಧ್ವಜ ತೆಗೆದು ಮಡಚಿ ಅವಳ ಕೈಯಲ್ಲಿಟ್ಟು ಹೇಳಿದ  ʼಮಗೂ. ಈ ಧ್ವಜವನ್ನು ಎತ್ತಿ ಹಿಡಿಯಲು ನಿನ್ನ ಅಪ್ಪ ಹೋರಾಡಿದ್ದಾರೆ ಗೊತ್ತಾ?   ಅದರ ನೆನಪಿಗೆ ಇದನ್ನು ನಿನ್ನ ಬಳಿ ಇಟ್ಟುಕೊ.  ಇದು ನಿನ್ನ ಬಳಿ ಇದ್ದರೆ ಅಪ್ಪನಿಗೆ ತುಂಬಾ ಖುಷಿಯಾಗುತ್ತದೆ.ʼ 

ಸೈನಿಕನ ಮಾತು ಅವಳಿಗೆ ಅಷ್ಟಾಗಿ ಅರ್ಥವಾಗಲಿಲ್ಲ.  ಧ್ವಜದ ಕೇಸರಿ, ಬಿಳಿ, ಹಸಿರಿನ ಮೂರು ಬಣ್ಣಗಳು  ಅವಳ ಮನಸ್ಸು ಹೊಕ್ಕಿತು. 

ತನ್ನ ಪುಟ್ಟ ಮಗಳ ಭವಿಷ್ಯವೂ ತ್ರಿವರ್ಣ ಧ್ವಜದ ರಕ್ಷಣೆಗೇ  ಮುಡಿಪು ಎಂದು ಅಲ್ಲಿ ಮೌನದಲ್ಲಿ ಕುಳಿತ ತಾಯಿ ಹೃದಯ ನಿರ್ಧರಿಸಿತು. 

(Pic : Google)

ಹುಟ್ಟುಹಬ್ಬ

(ಕಿರುಗತೆ)

ಬೆಳಿಗ್ಗೆ ಎದ್ದವನ ಸಂಭ್ರಮ ಹೇಳತೀರದು. ಅದಕ್ಕೆ ಕಾರಣ, ಈ ದಿನ ಪ್ರಿಯ ಪತ್ನಿಯ ಜನ್ಮದಿನ. ಅವನು ಮನಸ್ಸಿನಲ್ಲೇ ಅಂದಿನ ಕಾರ್ಯಕ್ರಮಗಳ ಪಟ್ಟಿ ಮಾಡಿಕೊಂಡ. ಮೊದಲು ಸುಂದರ ಹೂಗುಚ್ಛ, ನಂತರ ಸ್ವೀಟ್‌ ಅಂಗಡಿಯಿಂದ ಅವಳ ಮೆಚ್ಚಿನ ಮೈಸೂರು ಪಾಕ್‌, ನಂತರ ಗೆಳೆಯ, ಗೆಳತಿಯರನ್ನು ಸಂಜೆ ಮನೆಗೆ ಆಮಂತ್ರಿಸಲು ಕಾಲ್‌ ಮಾಡಬೇಕಿರುವುದು. ಅವರಿಗೆ ಬೇಕಾದ ತಿಂಡಿ, ತಂಪು ಪಾನೀಯ ಇತ್ಯಾದಿ.

ಬೇಗ ಬೇಗ ಸ್ನಾನ ಮುಗಿಸಿ, ತಲೆ ಬಾಚಿ, ಇಸ್ತ್ರಿ ಹಾಕಿದ ಬಟ್ಟೆ ಧರಿಸಿದ. ಅವಳ ಮೆಚ್ಚಿನ ಸೆಂಟ್‌ ಹಾಕಿಕೊಳ್ಳು ಮರೆಯಲಿಲ್ಲ.

ಮನೆಯಿಂದ ಹೊರಟವನು ಮೊದಲು ಕೊಂಡದ್ದು ಸಮೀಪದ ಅಂಗಡಿಯಲ್ಲಿ ಆ ಸುಂದರ ಹೂ ಗುಚ್ಛ. ಅಲ್ಲೇ ಬಂದ ಪರಿಚಯದ ಆಟೋ ಡ್ರೈವರ್‌ , “ನಮಸ್ತೆ ಸರ್‌, ಓ ಇವತ್ತು ಮೇಡಂ ಬರ್ತ್‌ ಡೇನಾ? ಸರಿ, ಬನ್ನಿ” ಎನ್ನುತ್ತಾ ತನ್ನ ಗಾಡಿಯಲ್ಲಿ ಕೂರಿಸಿಕೊಂಡ. ಮೈಸೂರು ರಸ್ತೆ ಮುಗಿಸಿ, ಕೆಂಗೇರಿ ದಾಟಿ ಆ ಆಟೋ ಒಂದು ತೋಟದ ಬಳಿ ನಿಂತಿತು. ಹೂ ಗುಚ್ಛದೊಂದಿಗೆ ಅವನು ಆ ತೋಟದ ಗೇಟು ತೆರೆದು ಒಳ ಹೋದ. ನೀರವ ಮೌನ. ಆಟೋ ಮತ್ತು ಡ್ರೈವರ್‌ ಅವನಿಗಾಗಿ ಕಾದರು.

ಸ್ವಲ್ಪ ಹೊತ್ತಾದ ಮೇಲೆ ಹಿಂತಿರುಗಿದವನು, ” ಹೊರಡೋಣವಾ?” ಅಂದ.

ಹಿಂತಿರುಗುತ್ತಾ ಆಟೋ ಡ್ರೈವರ್, ” ಸರ್‌, ಮೇಡಂ ಹೋಗಿ, ಐದು ವರ್ಷ ಆಯ್ತಲ್ಲವೆ?” ಅಂತ ಮಾತು ಪ್ರಾರಂಭಿಸಿದ.

ಕಿರು ಕತೆ – ಗೆರೆ

ಆಕೆ ಪ್ರಸಿದ್ಧ ತಾರೆ, ಶಿಸ್ತಿನ ತಾಯಿ.
ಪುಟ್ಟ ಮಗ ಆರು ವರ್ಷ.
ನೋಟ್‌ ಪುಸ್ತಕದ ಮೇಲೆ ಅವನೆಂದೂ ಎಳೆಯುತ್ತಿರಲಿಲ್ಲ ನೇರ ಗೆರೆ
ತಾಯಿಗೆ ಬೇಸರ, ಗದರುತ್ತಿದ್ದಳು,
ʼನೇರ ಗೆರೆ ಎಳೆಯುವುದನ್ನು ಬೇಗ ಕಲಿ.ʼ

ಇಂದು ಪುಟ್ಟ ಮಗ ಆಸ್ಪತ್ರೆ ಬೆಡ್ಡಿನ ವೆಂಟಿಲೇಟರಿನಲ್ಲಿ.
ಕ್ಷೀಣ ಉಸಿರಾಟ, ತಾಯಿಯ ಪರಿಪರಿ ಪ್ರಾರ್ಥನೆ,
ʼಇಸಿಜಿಯಲ್ಲಿ ನೇರ ಗೆರೆ ಮಗನ ಹೃದಯ ಬರೆಯದಿರಲಿ ದೇವರೆ!ʼ

(ಅನಾಮಿಕ ಇಂಗ್ಲೀಷ್ ಬರಹವೊಂದರ ಭಾವಾನುವಾದ)

ಹುರಿದ ಕಡಲೆ

peanut

(ಗೆಳೆಯ ಕಳುಹಿದ ಕತೆ)

ನಾನು ನಿನ್ನೆ ಬೆಳಿಗ್ಗೆ ಜಾಲಹಳ್ಳಿಲಿ ಮೆಟ್ರೋ ಇಳಿದಾಗ, ಚುಟು ಚುಟು ಮಳೆ. ಸ್ವಲ್ಪ ಚಳಿ ಚಳಿ ಅನ್ನಿಸುತ್ತಿತು. ಫುಟ್ಪಾತ್‌ ಪಕ್ಕ ಕಟ್ಟೆಯಲ್ಲಿ ಮಧ್ಯವಯಸ್ಕ ತೆಳುದೇಹದ ಅವನು ತಳ್ಳುಗಾಡಿಯಲ್ಲಿ ಕಡಲೆಕಾಯಿ  ಬೀಜ ಬಿಸಿ ಬಿಸಿಯಾಗಿ ಹುರಿಯತ್ತಿದ್ದ. ಆ ಹವೆ ಬಿಸಿ ಬಿಸಿಯಾದ್ದು ತಿನ್ನಬೇಕು ಅನ್ನುವ ಚಪಲ ಹುಟ್ಟಿಸಿತು.  ಕಟ್ಟೆ ಮೇಲೆ ಹುರಿಯತ್ತ ಕುಳಿತ ಅವನ ಬಳಿ ಹೋದಾಗ ಗೊತ್ತಾಯಿತು, ಪಾಪ ಅವನಿಗೆ ಕಾಲಿರಲಿಲ್ಲ.

ನಾನು ಹತ್ತು ರುಪಾಯಿ ಚಾಚಿ ಕೈಮುಂದು ಮಾಡಿದೆ. ಅವನು ಆಗಲೇ ಹುರಿದಿಟ್ಟಿದ್ದನ್ನ ಚೂಪು ಪೊಟ್ಟಣಕ್ಕೆ ಹಾಕಿಕೂಟ್ಟ. ಬಿಸಿಯಾಗಿ ಹುರಿಯುತ್ತಿರುವುದನ್ನು ಕೊಡಲಿಲ್ಲ ಎಂದು ಮನಸ್ಸಿನಲ್ಲಿ ಇರಿಸುಮುರಿಸು. “ಇದು ಬೇಡಪ್ಪ, ಇದು ಆರಿದೆ,  ಈಗ ಬಾಣಲೆಯಲ್ಲಿ ತೆಗೆಯುತ್ತಿರುವ ಬಿಸೀದು ಕೊಡು” ಎಂದೆ.

ಅವನು ಯಾವ ಬೇಜಾರು ಇಲ್ಲದೆ, ಪೊಟ್ಟಣದಲ್ಲಿದ್ದ ಕಾಳು ಹಳೆಯಕಾಳಿನ ಡಬ್ಬಕ್ಕೆ ಸುರಿದು, ಬಾಣಲೆಯಿಂದ ಬಿಸಿಯ ಕಾಳನ್ನು ಪೊಟ್ಟಣದ ತುಂಬ ಹಾಕಿಕೊಟ್ಟ. ಹಾಗೇ ಜೊತೆಗೆ ಹತ್ತಿಪ್ಪತ್ತು ಹುರಿದು ಆರಿದ್ದ ಕಾಳುಗಳನ್ನು ಕೈಗೆ ಕೊಸರಿನಂತೆ ಕೊಟ್ಟ.  “ಏನಿದು?” ಎಂದು ಕೇಳುವಷ್ಟರಲ್ಲಿ ಆಟೋದಲ್ಲಿ ಕುಳಿತಿದ್ದೆ.

ಕೊಸರಾಗಿ ಬಂದಿದ್ದ ಆರಿದ ಕಾಳು ಬಾಯಾಡಿದೆ. ಅದು ಗರಿಗರಿಯಾಗಿದ್ದು ಬಾಯಲ್ಲಿ ಕರಗಿ ಹೋಯಿತು.

ನಂತರ ನಾನು ಬಿಸಿ ಬಿಸಿ ಕಾಳು ತಿನ್ನಲಾರಂಬಿಸಿದೆ.   ಕಚಕಚ  ಗರಿಗರಿ ಇಲ್ಲ. ತಿನ್ನುವ ಮಜಾ ಜಾರಿ ಹೋಯಿತು. ಹಾಗೇ ಬಿಟ್ಟೆ.

*ಮನದಲ್ಲಿ ಒಂದು ಸ್ವಗತ ಬಂದು ಹೋಯಿತು.*

ಮಾರುವವನು ಎಷ್ಟು ಬುದ್ಧಿವಂತ ಅನ್ನಿಸಿತು.  ಏನೂ ಹೇಳದೆ, ತನ್ನ ಮೌನದಿಂದಲೆ ಎಲ್ಲವನ್ನೂ ಹೇಳಿದ್ದ.  ಸಾರ್ ನಿಮ್ಮ ಬಿಸಿಯ ಬೇಡಿಕೆ ತರವಲ್ಲ, ನನ್ನನ್ನು ಬೈದುಕೊಳ್ಳಬೇಡಿ, ಎಂದುಕೊಂಡು, ಮಾತಿಲ್ಲದೆ ಕೊಸರು ನೀಡಿ ಆ ಗರಿಗರಿಯ ಕಾಳಿನ ರುಚಿಯನ್ನು ತೋರಿಸಿದ್ದ.  ಅಲ್ಲಿಯವರೆಗೂ ಬಿಸಿಯ ಬಯಕೆ ಹಾಗೂ ಆಯ್ಕೆಯ ಬಗೆಗೆ ಒಂದುರೀತಿಯ ಅಹಂಭಾವದಲ್ಲಿದ್ದ ನನ್ನನ್ನು, ಅವನ ಬುದ್ದಿಮತ್ತೆ  ಕೊಸರಸಿ ಕೆಡವಿತ್ತು !  ಆರಿದ ಮೇಲಷ್ಟೇ ಗರಿಗರಿಯಾಗುವುದು ಎನ್ನುವ ಸೂಕ್ಷ್ಮತೆ, ನನ್ನ ಅನನುಭವ ಮತ್ತು ಆಯ್ಕೆಯ ದಡ್ಡತನ ಎಲ್ಲವನ್ನು ಒಮ್ಮಗೇ ತೋರಿಸಿ ಭೂಮಿಗಿಳಿಸಿದ್ದ.

ಹುರಿವ ಕಡಲೆಯ ಆ ತೆಳು ಮನುಷ್ಯನೊಡನೆಯ ಈ ಪ್ರಸಂಗ ನನಗೆ ಕನ್ನಡಿಯಾಯಿತು. 😌

(ಗೆಳೆಯ ಸಿ.ವಿ. ಶ್ರೀನಿವಾಸ ಪ್ರಸಾದ್ ಕಳುಹಿಸಿದ ಸ್ವಾನುಭವದ ಕತೆ)

(Pic courtesy:Google)

ಎರಡು ಘಟನೆ-ಒಂದೇ ಕಥೆ

mob

ಕಳ್ಳ

ಬೆಂಗಳೂರಿನ ಪೀಕ್ ಅವರ್( peak hour). ಜನರಿಂದ ತುಂಬಿ ತುಳುಕುತ್ತಿರುವ ಬಿಎಂಟಿಸಿ ಬಸ್ಸು. ಜನಜಂಗುಳಿಯ ಮೈಸೂರು ರಸ್ತೆಯಲ್ಲಿ ಹೋಗುತ್ತಿದೆ. ನಾನು ಹಿಂದಿನ ಕೊನೆಯ ಸೀಟಿನಲ್ಲಿ ಕುಳಿತಿದ್ದೇನೆ. ಆ ತುಳುಕುವ ಬಸ್ಸಿನಲ್ಲೂ ನನಗೆ ಸ್ವಲ್ಪ ನಿದ್ರೆ ಹತ್ತಿದೆ. ತಿಂಗಳ ಬಸ್ ಪಾಸ್ ಇರುವುದರಿಂದ, ಟಿಕೆಟ್ ತೆಗೆದುಕೊಳ್ಳುವ ರಗಳೆ ಇಲ್ಲ. ಬಸ್ ಹತ್ತುವಾಗಲೆ ’ಪಾಸ್’ ಅಂತ ಹೇಳಿದ್ದರಿಂದ ಕಂಡಕ್ಟರ್ ನನ್ನ ಈ ಕೋಳಿ ನಿದ್ರೆಗೆ ಭಂಗ ತರುವುದಿಲ್ಲ ಅಂದುಕೊಂಡಿದ್ದೇನೆ.

ಅಂಥ ಚಿಕ್ಕ ನಿದ್ರೆ ಒಂದು ರೀತಿಯಲ್ಲಿ ನನಗೆ ರಿಲಾಕ್ಸ್ ಆಗಲು ಸಹಕಾರಿ. ಮತ್ತೆ ಕಣ್ಣು ಮುಚ್ಚುವುದರಿಂದ ಚಿತ್ರಾವಿಚಿತ್ರದ ಮಂದಿಯನ್ನು ನೋಡಿ ತಲೆಬಿಸಿ ಮಾಡಿಕೊಳ್ಳದ ಸಮಾಧಾನ. ಡ್ರೈವರನಿಗೆ ಒಳ್ಳೆ ಸರ್ವೀಸ್ ಆಗಿರಬೇಕು, ಹಂಪ್ ಬರುವಲ್ಲೆಲ್ಲ ಮೆಲ್ಲಗೆ ಹೋಗುತ್ತಾನೆ. ಆಗಾಗ ವೇಗ ಹೆಚ್ಚುಮಾಡಿ ಹೋಗುತ್ತಿದ್ದಾನೆ. ಆದರೆ ಕುಳಿತವರಿಗೆ, ನಿಂತವರಿಗೆ ಹೆಚ್ಚು ಓಲಾಡದಂತೆ ಓಡಿಸುತ್ತಿದ್ದಾನೆ. ಅದಕ್ಕೇ ಇರಬೇಕು ನನಗೆ ಸ್ವಲ್ಪ ಜೋರಾದ ಜೋಂಪು ಹತ್ತಿಬಿಟ್ಟಿದೆ.

ಆ ಜೋಂಪಿನ ಸುಖ ಪೂರ್ತಿ ಅನುಭವಿಸುವುದರಲ್ಲೆ ಗಲಾಟೆಯಾಗುತ್ತಿರುವ ಶಬ್ಧ ಇದ್ದಕ್ಕಿದ್ದಂತೆ ಬಸ್ಸಿನ ಮಧ್ಯಭಾಗದಿಂದ ಕೇಳತೊಡಗಿತು. ಏನೂ ಕಾಣಿಸುತ್ತಿಲ್ಲ. ಆದರೆ ಜನರಾಡುತ್ತಿರುವ ’ಸುಂದರವೂ ಇಂಪಾಗಿರುವುದೂ’ ಆದ ಮಾತುಗಳು ಕಿವಿಗೆ ಬೀಳತೊಡಗಿದೆ!

“ಹೊಡೀರಿ ಆ ಮುಠ್ಠಾಳಂಗೆ, ಹಾಕ್ರಿ ಇನ್ನೂ ನಾಲ್ಕು.. ಮಗಂಗೆ” ಅಂತ ಒಬ್ಬರು, “ಬಿಡ್ಬ್ಯಾಡ್ರಿ. ತದುಕ್ರಿ ಅವ್ನ” ಅಂತ ಇನ್ನೊಬ್ಬರು. ಮತ್ತಷ್ಟು “@#‍‍‍****..&*$#*!” ಹೀಗೆ ವಿವಿಧ ರೂಪಗಳ ಕೋಪದ ಕೂಗುಗಳು, ಬೈಗುಳಗಳು.   ಹಿಗ್ಗಾಮುಗ್ಗಾ ಜಗ್ಗಾಟ ನಡೆಯುತ್ತಿದೆ. ಬಯ್ಗುಳಗಳು ಜೊತೆಗೆ ಯಾರಿಗೊ ಕೆಲವರು ಹೊಡೆಯುತ್ತಿರುವ ಸದ್ದು. ಹೀಗೆಲ್ಲ ಆಗುತ್ತಿರುವುದರಿಂದ, ಒಂದು ರೀತಿಯಲ್ಲಿ ಬಸ್ ಪೂರ್ಣ ಚಾರ್ಜ್ ಆಗಿಬಿಟ್ಟಿದೆ! ಎಲ್ಲರಲ್ಲೂ ಏನೋ ಉದ್ವೇಗ. ಏನಿರಬಹುದು ಅನ್ನುವ ಕುತೂಹಲ ಬಸ್ಸಿನ ಎರಡೂ ತುದಿಯ ಜನರಲ್ಲಿ ತುಂಬಿಹೋಗಿದೆ.

ಸ್ವಲ್ಪ ದೂರದಲ್ಲಿ ಬಸ್ ಸ್ಟಾಪಲ್ಲಿ ಬಸ್ ನಿಂತಿತು. ಹಾಗೆ ಹೊಡಿಯೊ ಶಬ್ಢ ಕೂಡ.  ಎಲ್ಲರೂ ನೋಡುತ್ತಿರುವಂತೆಯೆ ಒಬ್ಬ ಯುವಕ ಬಸ್ಸಿನ ಜನರನ್ನು ಭೇದಿಸಿ ಸರಕ್ಕನೆ ಹಿಂಬಾಗಿಲಿಂದ ಇಳಿದು ಓಡಿದ.  ಅವಮಾನದಲ್ಲಿ ಕುದ್ದುಹೋಗಿರುವ ಮುಖ. ತಲೆ ತಗ್ಗಿಸಿ ಅವನು ಓಡಿಬಿಟ್ಟ. ಅವನ ಅಂಗಿ ಹರಿದಿತ್ತು, ಕೂದಲು ಕೆದರಿ ಹೋಗಿದ್ದುವು. ಕಣ್ಣು, ಕೆನ್ನೆ ಊದಿಕೊಂಡಿದ್ದುವು.  ಅವನ ಚಪ್ಪಲಿ ರಸ್ತೆಯಲ್ಲಿ ಅನಾಥವಾದುವು. ತಿರುಗಿ ನೋಡದೆ ಓಡಿದ. ಅವನು ತಪ್ಪಿಸಿಕೊಂಡಿದ್ದ.

ಬಸ್ಸಿನೊಳಗೆ ಕೂಗುತ್ತಿದ್ದರು. “ಅಯ್ಯೊ ಓಡೋಗ್ತಾ ಇದಾನೆ. ಬಿಡಬ್ಯಾಡ್ರಿ.. ಹಿಡೀರಿ.. ಹಿಡೀರಿ.. ಕಳ್ ನನ್ ಮಕ್ಳನ್ನು ಕೊಂದ್ರೂ ಪಾಪ ಬರಲ್ಲ”. ಕೆಲವರು ಸ್ವಲ್ಪ ದೂರ ಅವನ ಹಿಂದೆ ಓಡಿದರು. ಆದರೆ ಹಿಡಿಯಲಾಗದೆ ಹಿಂತಿರುಗಿದರು, ಡ್ರೈವರನಿಗೆ ಕೈ ಸನ್ನೆ ಮಾಡಿ, ಬಸ್ಸು ನಿಲ್ಲಿಸಿ ಮತ್ತೆ ಹತ್ತಿಕೊಂಡರು. ಕೆಲವರು ತಮ್ಮ ಪ್ಯಾಂಟ್ ಜೇಬುಗಳನ್ನು ಭದ್ರವಾಗಿ ಹಿಡಿದು, ಕಿಟಕಿ ಮೂಲಕ ಇನ್ನೇನಾದರೂ ನಾಟಕ ಕಣ್ಣಿಗೆ ಬೀಳಬಹುದೇನೊ ಎಂದು ಗೋಣನ್ನು ಆಚೆ ಈಚೆಗೆ, ಹಿಂದಕ್ಕೆ ಮುಂದಕ್ಕೆ ಆಡಿಸತೊಡಗಿದರು. ಏನೂ ಕಾಣದಿದ್ದರಿಂದ ಕೆಲವರು ಬೇಸರಿಸಿಕೊಂಡರು!

ಆದರೆ ನನಗೆ ಆಶ್ಚರ್ಯ ವಾದದ್ದು ಆ ಬಸ್ಸಿನಲ್ಲಿದ್ದ ಒಬ್ಬ ಕೂಡ ಆ ಕಳ್ಳನ ಹಿಡಿದು ಪೊಲೀಸರಿಗೆ ಕೊಡಬೇಕೆನ್ನುವ ಆಲೋಚನೆ ಮಾಡದೆ ಇದ್ದುದಕ್ಕೆ. ಆ ಕಳ್ಳನನ್ನು ನೋಡದವರು ಅಥವಾ ಕಳ್ಳತನ ಮಾಡುವುದನ್ನು ಕಾಣದವರು ಕೂಡ ಕಳ್ಳ ಸಿಕ್ಕರೆ ನಾಲ್ಕು ತದುಕಿ ತಮ್ಮ ಜೀವನದ ಬಹು ದೊಡ್ಡ ಆಸೆಯನ್ನು ತೀರಿಸಿಕೊಳ್ಳಲು ಕಾತರರಾಗಿದ್ದಾರೆನ್ನಿಸಿತು.

ಬಸ್ಸು ಚಲಿಸತೊಡಗಿತು. ಯಾರದೋ ಧ್ವನಿ ಖುಷಿಯಲ್ಲಿ ಉರುಲುತ್ತಿತ್ತು. ’ನಾ ಬಿಡ್ಲಿಲ್ಲ ಅವ್ನನ್ನ… ಇಲ್ನೋಡಿ ಅವನ ಕಾಲರ್ ಹಿಡಿದು ಎಳೆದು ಮುಖಕ್ಕೆ ಸರಿಯಾಗಿ ಇಕ್ಕಿದ್ದಕ್ಕೆ, ಅವನ ಅಂಗಿಯ ಎರಡು ಬಟನ್ ನನ್ನ ಕೈಯಲ್ಲೇ ಇದೆ!’

ಸುತ್ತಲಿದ್ದವರು ಅವನನ್ನು ಹೀರೋ ಥರ ನೋಡುತ್ತಿರಬೇಕೆಂದು ಊಹೆ ಮಾಡಿಕೊಂಡೆ.
ಮೆಲ್ಲಗೆ ಪಕ್ಕದವರನ್ನ ಕೇಳಿದೆ. “ಆ ಕಳ್ಳನ್ನ ಹೊಡಿಯೋ ಬದ್ಲು, ಪೊಲೀಸ್ಗೆ ಹಿಡ್ಕೊಟ್ಟು ಬಿಡಬಹುದಾಗಿತ್ತು”.

ಪಕ್ಕದವರು ನನ್ನ ಪಾಪದ ಮನುಷ್ಯನ ನೋಡುವಂತೆ ನೋಟ ಬೀರಿದರು. ಕರುಣೆಯಿಂದ ಶ್ರೀಕೃಷ್ಣ ಪರಮಾತ್ಮನು ಶಿಷ್ಯ ಅರ್ಜುನನಿಗೆ ತಿಳಿಹೇಳುವಂತೆ, “ಯಾರ್ಗೆ ಹಿಡ್ಕೊಡ್ತೀರ. ಅವ್ರೆಲ್ಲ ಶಾಮೀಲು ರಾಯರೆ. ನೀವು ಸ್ಟೇಷನ್ ನೋಡಿಲ್ವ? ಕಳ್ಳ ಪೊಲೀಸ್ ಎಲ್ಲ ಒಳಗೊಳಗೆ ಫ಼್ರೆಂಡ್ಸ್. ಇವೆಲ್ಲ ಪ್ರಪಂಚಕ್ಕೇ ಗೊತ್ತಿರೊ ವಿಷಯ. ಏನೂ ಪ್ರಯೋಜ್ನ ಇಲ್ಲ! ನಾವು ಸಿಕ್ಕ ಅವಕಾಶ ಬಿಡಬಾರದು. ಈ ಕಳ್ಳನನ್ ಮಕ್ಕಳಿಗೆ ಬುದ್ಧಿ ಇಲ್ಲೆ ಕಲಿಸಿಬಿಡಬೇಕು….ಮತ್ತ್ಯಾವತ್ತು ಇಂಥ ಕೆಲ್ಸಕ್ಕೆ ಕೈ ಹಾಕ್ಬಾರ್ದು. ಏನಂತೀರಾ?”
ನಾನು ನೋವಾಗುವಷ್ಟು ಗೋಣು ಅಲ್ಲಾಡಿಸಿದೆ!

ಈ ಘಟನೆಯಾಯಿತಲ್ಲ ಅದರ ಮರುದಿನ ದಿನ ಪತ್ರಿಕೆ ಓದುತ್ತಿದ್ದೆ. ಪತ್ರಿಕೆಯ ಎರಡನೇ ಪುಟದಲ್ಲಿ ಅಪರಾಧ ಕಾಲಂಗಳು ತುಂಬಿಹೋಗಿದ್ದವು. ಕೊಲೆ, ಸುಲಿಗೆ, ಮಾರಾಮಾರಿ, ಅತ್ತೆಸೊಸೆ ಜಗಳಗಳ ಕೊಲೆಗಳು, ಅನುಮಾನಾಸ್ಪದ ವ್ಯಕ್ತಿಗಳ ಬಂಧನ ಇತ್ಯಾದಿಯತ್ತ ಕಣ್ಣಾಡಿಸುತ್ತಿರುವಾಗ ಪತ್ರಿಕೆಯ ಮೂಲೆಯಲ್ಲಿ ಒಂದು ಸುದ್ದಿ ಗಮನ ಸೆಳೆಯಿತು. ’ಬಸ್ಸಿನಲ್ಲಿ ಅಮಾಯಕನ ಮೇಲೆ ಹಲ್ಲೆ” ಎಂದು.

ಶ್ರಿಯುತ ರಾಮು ಎಂಬುವರನ್ನು ಬಸ್ಸೊಂದರಲ್ಲಿ ಐದಾರು ಜನರ ಕಳ್ಳರ ತಂಡ ಸುತ್ತುವರಿದು ಪಿಕ್ ಪಾಕೆಟ್ ಮಾಡಿದ್ದಾರೆ. ಬಸ್ಸಿನೊಳಗೆ ಸುಳ್ಳು ಗಲಾಟೆ ಎಬ್ಬಿಸಿ ರಾಮು ಅವರಲ್ಲಿದ್ದ ಹಣದ ಪರ್ಸು, ವಾಚು, ಚಿನ್ನದ ಉಂಗುರ ಲಪಟಾಯಿಸಿರುತ್ತಾರೆ. ಮತ್ತೆ ರಾಮು ಅವರ ಬಾಯಿ ಮುಚ್ಚಿ ಕಳ್ಳ ಕಳ್ಳ ಎಂದು ಕೂಗಿ ಅವರನ್ನು ಬಿಂಬಿಸಿರುತ್ತಾರೆ. ಹಣ, ಮೊಬೈಲು, ವಾಚು, ಬಂಗಾರದ ಚೈನು ಕಳಕೊಂಡಿರುವ ಶ್ರೀರಾಮು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾರೆ. ದೂರು ದಾಖಲಾಗಿದೆ.

ಘಟನೆಯ ದಿನಾಂಕ ನೋಡಿದ ಮೇಲೆ ಮನವರಿಕೆಯಾಯಿತು ಆ ದಿನ ಯುವಕನೊಬ್ಬ ಓಡಿ ಹೋದದ್ದು ಕಳ್ಳರಿಂದ ತಪ್ಪಿಸಿಕೊಳ್ಳಲು. ಕಳ್ಳರ ಗುಂಪು ಬಸ್ಸಿನ ಇತರ ಪ್ರಯಾಣಿಕರನ್ನು ಏಮಾರಿಸಿ ಅಮಾಯಕನನ್ನು ತದುಕಿಸಿಬಿಟ್ಟಿದ್ದರು. ಗುಂಪಿನಲ್ಲಿ ಬರುವ ಟಿಪ್ ಟಾಪ್ ಕಳ್ಳರು ಇತ್ತೀಚೆಗೆ ಹೆಚ್ಚಿದ್ದಾರೆಂದು ಅನುಭವದಿಂದಷ್ಟೆ ಗೊತ್ತಾಗಬೇಕಾಗಿದೆ. ಕಳ್ಳತನ ಮತ್ತು ದರೋಡೆಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಿವೆ. ಅಪರಾಧ ಪತ್ತೆಯಲ್ಲಿ ಹಳೆಯ ದಾರಿ ಬಿಟ್ಟು ಹೊಸ ಆವಿಷ್ಕಾರಗಳ ಕಡೆ ಗಮನವಿರಿಸಲೇಬೇಕಾಗಿದೆ.

ಸ್ತ್ರೀ ಶಕ್ತಿ

ಟವಿಯಲ್ಲಿ ಸುದ್ದಿವಾಹಿನಿಯೊಂದನ್ನು ನೋಡುತ್ತಿದ್ದೆ. ಚಾನಲ್ ಏನನ್ನೋ ಒದರುತ್ತಿತ್ತು. ’ಬ್ರೇಕಿಂಗ್ ನ್ಯೂಸ್’ ಅಂತ ಮತ್ತೆ ಮತ್ತೆ ಢಂಗುರ ಶಬ್ಧ ಕೇಳಿಸಿತು. ಗಮನ ಅತ್ತ ಹರಿಸಿದೆ. ’ಕಾಮುಕ ಯುವಕನಿಗೆ ಹೆಂಗಸರಿಂದ ಥಳಿತ’ ಅನ್ನುವ ಸುದ್ದಿ. ಸ್ವಲ್ಪ ಸಮಯ ಸುದ್ದಿ ಪುನರಿಪಿಸಿದ ಮೇಲೆ, ಆ ಥಳಿತದ ವಿಡಿಯೊ ತೋರಿಸತೊಡಗಿದರು.

ಹಳ್ಳಿಯೊಂದರ ರಸ್ತೆಯ ಬದಿಯಲ್ಲಿ ಒಬ್ಬ ಯುವಕನನ್ನು ಮರವೊಂದಕ್ಕೆ ಕಟ್ಟಿಹಾಕಿದ್ದಾರೆ. ಸುತ್ತಲೂ ಜನ ಮುತ್ತಿಗೆ ಹಾಕಿದ್ದಾರೆ. ಆ ಯುವಕನ ಮುಖ ಊದಿಕೊಂಡಿದೆ. ತುಟಿ, ಕಿವಿಗಳ ಬಳಿ ರಕ್ತ ಒಸರುತ್ತಿದೆ. ಒಂದಷ್ಟು ಹೆಂಗಸರು ಕೈಯಲ್ಲಿ ಪೊರಕೆ, ಚಪ್ಪಲಿ, ಕೋಲುಗಳನ್ನು ಹಿಡಿದು ಹಿಂದುಮುಂದು ಅವನಿಗೆ ಹೊಡೆಯುತ್ತಿದ್ದಾರೆ. ಸರದಿಯಲ್ಲಿ ಬಂದು ಅವನಿಗೆ ಮನಸಾ ಇಚ್ಛೆ ಬಾರಿಸುತ್ತಿದ್ದಾರೆ!

ಬಹುಶ: ಯಾರೊ ಅಲ್ಲಿಯ ದೃಶ್ಯ ವಿಡಿಯೊ ಮಾಡುತ್ತಿರುವುದನ್ನು ಆ ವೀರ ಮಹಿಳಾಮಣಿಗಳು ಗಮನಿಸಿರಬೇಕು. ಹಾಗಾಗಿ, ತಮ್ಮ ವೇಷಭೂಷಣ ಆದಷ್ಟೂ ಸರಿಮಾಡಿಕೊಂಡು, ಚಲನ ಚಿತ್ರದ ಖಡಕ್ ಸಂಭಾಷಣಾ ಚತುರೆ ಮತ್ತು ಫೈಟಿಂಗ್ ಕ್ವೀನ್ ಅಂತ ಹೆಸರು ಮಾಡಿದ ನಾಯಕಿಯೊಬ್ಬಳ ಭಂಗಿಯನ್ನು ಆದಷ್ಟು ನಕಲು ಮಾಡುತ್ತ ಆ ’ಮಾನಗೆಟ್ಟ’ (!?) ಯುವಕನಿಗೆ ಥಳಿಸತೊಡಗಿದ್ದಾರೆ.

ಸುಮಾರು ಐವತ್ತು ಅರವತ್ತು ಜನ ಕೈಕಟ್ಟಿ ನಗುತ್ತ ಅಥವಾ ಶಿಳ್ಳೆ ಹೊಡೆಯುತ್ತ ಈ ’ದೃಶ್ಯ ಕಾವ್ಯ ’ ಸವಿಯುತ್ತಿದ್ದಾರೆ! ನನ್ನ ಮನಸ್ಸಿನಲ್ಲಿ ಆ ಕ್ಷಣ ನಿಜಕ್ಕೂ ಮೂಡಿದ್ದು ಈ ಜನ ಯಾವ ರೌಡಿಗಳಿಗೂ ಕಡಿಮೆ ತೂಕದವರಲ್ಲವೆಂದೇ!

ಥಳಿಸಿಕೊಳ್ಳುತ್ತಿರುವ ವ್ಯಕ್ತಿ ಪ್ರಜ್ಞೆತಪ್ಪಿದ. ಅವನ ತಲೆ ಜೋತಾಡತೊಡಗಿತು. ಅದ್ಯಾವುದರ ಬಗೆಗೂ ಆ ಜನಕ್ಕೆ ಗಮನವಿದ್ದಂತಿಲ್ಲ. ಮತ್ತಷ್ಟು ಬೈಗುಳ “##***@!&*” ಜೋರಾಗತೊಡಗಿತು. ಆ ಅಸಹ್ಯ ಮತ್ತು ಬರ್ಬರ ಬೈಗುಳಗಳನ್ನು ’ಠಣ್’ ಎನ್ನುವ ಮತ್ತುಷ್ಟು ಭಯಂಕರ ಶಬ್ಧದಿಂದ ಮರೆಸತೊಡಗುವ ಕಾರ್ಯ ಸುದ್ದಿವಾಹಿನಿ ಮಾಡುತ್ತಿದೆ! ಮತ್ತೆ ದೃಶ್ಯಗಳು ಪುನರಾವರ್ತನೆಯಾಗತೊಡಗಿದವು. ಅಂದರೆ, ವಾಹಿನಿಯ ಆಶಯ ಮತ್ತೇನೊ ಇರಬೇಕೆಂದು ಕಾಣುತ್ತಿದೆ. ನಾನು ಟಿವಿ ಶಬ್ಧ ಕಡಿಮೆ ಮಾಡಿದೆ.

ನಿಜಕ್ಕೂ ದಿಗ್ಭ್ರಮೆಯಾದದ್ದು, ವಾಹಿನಿಯಲ್ಲಿ ಸುದ್ದಿ ಓದುವವನ ಅವ್ಯಕ್ತ ತೃಪ್ತ ಮುಖ ನೋಡಿದಾಗ. ಎಲ್ಲ ಸುದ್ದಿಗಳನ್ನೂ ತನ್ನ ನಗುಮುಖದಿಂದಲೇ ಬಿತ್ತರಿಸುವ ಅವನು ಈ ಸುದ್ದಿಗೆ ಮತ್ತಷ್ಟು ಖುಷಿಯ ಮುಖ ಹೊತ್ತು ಬಡಬಡಿಸುತ್ತಿರುವುದು ಕಾಣುತ್ತಿದೆ.

ಯುವಕನನ್ನು ಹೊಡೆಯುವ ಸ್ತ್ರೀ ಶಕ್ತಿಗೆ ಪ್ರಾಣ ತೆಗೆಯುವಂಥ ತಾಕತ್ತು! ಹೊಡೆತಗಳನ್ನು ಕಣ್ಣು ತುಂಬಿಕೊಳ್ಳುತ್ತಿರುವ ಸುತ್ತಲೂ ಸೇರಿದ್ದ ಗಂಡು ಜನಾಂಗದ ನಗೆ. ಕಳಶವಿಟ್ಟಂತೆ, ಸುದ್ದಿಗಾರನಿಂದ ಟಿವಿ ವೀಕ್ಷಕರಿಗೆ ಎಚ್ಚರಿಕೆಯ ಧ್ವನಿ! ’ಜನರೇ.. ಎಚ್ಚರ.. ದಾರಿ ತಪ್ಪಿದರೆ ಜನ ಎಂಥ ಶಿಕ್ಷೆಗೂ ಸಿದ್ಧ ಎಂದು ಈ ಹಳ್ಳಿಯ ಮುಗ್ಧ ಜನ ತೋರಿಸುತ್ತಿದ್ದಾರೆ!’

ಆಶ್ಚರ್ಯವಾಯ್ತು. ಪೊಲೀಸ್ ಇಲಾಖೆ ಅಂತ ಒಂದಿದೆ ಅನ್ನುವುದು ಯಾರಿಗೂ ನೆನಪಾಗದಿರುವುದಕ್ಕೆ. ವಾಹಿನಿಯ ಸುದ್ದಿಗಾರನಂತೂ ನ್ಯಾಯ ಒದಗಿಸುವ ಕುರ್ಚಿಯಲ್ಲಿ ಕುಳಿತು ಮಾತಾಡುತ್ತಿದ್ದಾನೆ. ಬಹುಶ: ಅವನಿಗೆ ಈ ದೇಶದಲ್ಲಿ ನ್ಯಾಯಾಲಯಗಳು ಕೆಲಸ ಮಾಡುತ್ತಿಲ್ಲ ಅಂತ ಖಾತ್ರಿಮಾಡಿಕೊಂಡಿರಬೇಕು!

ಸಾಮಾನ್ಯ ಜನರಿಗೆ ಕಾನೂನಿನ ಕೆಲವು ಆಯಾಮಗಳು ತಿಳಿಯದಿರುವ ಸಾಧ್ಯತೆ ಇದೆ. ನಿಜ. ಹೆಚ್ಚು ಜನ ಸೇರಿದಲ್ಲಿ ಗುಂಪು ಸಂಮೋಹಕ್ಕೆ ಒಳಗಾಗಿಬಿಡುತ್ತಾರೆ. ವಿವೇಚನೆ ಕಳೆದುಕೊಳ್ಳುತ್ತಾರೆ. ಆದರೆ ಆ ಸಣ್ಣ ಹಳ್ಳಿಯ ಅಷ್ಟೂ ಜನ ಅದ್ಯಾವವ ಸಂಮೋಹಕ್ಕೆ ಒಳಗಾಗುತ್ತಾರೆ ಅನ್ನುವುದೇ ಅಚ್ಚರಿ. ಊರಿನ ಒಂದಿಬ್ಬರಾದರೂ ವಿವೇಚನೆಯಿಂದ ಆ ವಿವೇಕರಹಿತ ಹೊಡೆತಗಳನ್ನು ತಡೆಯುವ ಪ್ರಯತ್ನ ಏಕೆ ಮಾಡುವುದಿಲ್ಲ!? ಸರಿಯಾದ ರೀತಿಯಲ್ಲಿ ವಿಚಾರಿಸುವುದಿಲ್ಲವೇಕೆ!?

ಎಲ್ಲವೂ ವ್ಯವಸ್ಥಿತ ರೀತಿಯಲ್ಲಿ ಇರಬೇಕೆಂದು ಬಯಸುವ ನಾವು ವ್ಯವಸ್ಥೆಯೊಂದು ನಮ್ಮ ಸಮಾಜದ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ ಅನ್ನುವುದನ್ನು ಪೂರ್ಣ ಮರೆತಿರುವುದು. ಕ್ರೌರ್ಯದ ವಿರುದ್ಧ ಮಾತನಾಡುವ ನಾವು, ಅರಿವಿಲ್ಲದೇ ಕ್ರೂರಿಗಳಾಗಿ ಬದಲಾಗಿಬಿಟ್ಟಿರುವುದು. ಹಿಂಸೆಯನ್ನು ವಿರೋಧಿಸುತ್ತಲೆ ಹಿಂಸೆಯ ವಿವಿಧ ಪ್ರಕಾರಗಳ ಅಧ್ಯಯನ ಮನಸ್ಸಿನಲ್ಲಿ ಮಾಡತೊಡಗಿರುವುದು. ವಿಕೃತರನ್ನು ದ್ವೇಷಿಸುತ್ತಲೆ ವಿಕೃತವನ್ನು ದೃಶ್ಯದಲ್ಲಿ ನೋಡುವ ಮನಸ್ಸಿನವರಾಗುತ್ತಿರುವುದು.

ಎಲ್ಲಿ ಎಡವುತ್ತಿದ್ದೇವೆ. ಯಾರು ನಮ್ಮನ್ನು ಹಿಂದಿನಿಂದ ದೂಡಿ ಎಡವುವ ತಂತ್ರ ಹೂಡುತ್ತಿದ್ದಾರೆ? ಸ್ವಲ್ಪ ಯೋಚಿಸೋಣ. ಯೋಚಿಸುವ ಕೆಲಸ ನಮ್ಮಿಂದಾಗದು ಅನ್ನಿಸುತ್ತೆ! ಹೋಗಲಿ ಬಿಡಿ, ಮುಂದಿನ ಜನಾಂಗವಾದರೂ ನಮ್ಮಂತಾಗದಿರಲಿ ಅನ್ನುವ ಪ್ರಾರ್ಥನೆ ಮಾಡೋಣ.

“ಆ ದಿನ ನಿಜವಾಗಿ ನಡೆದದ್ದೇನು?” ಅನ್ನುವ ಶೀರ್ಷಿಕೆಯಲ್ಲಿ ಅದೊಂದು ದಿನ ಮತ್ತೊಂದು ಸುದ್ದಿ ವಾಹಿನಿ ಒದರುತ್ತಿತ್ತು.

ಅಂದರೆ ಕಾಮುಕ ಯುವಕನಿಗೆ ಥಳಿತವಾದ ಒಂದು ವಾರದ ನಂತರ ಮತ್ತೊಂದು ಸುದ್ದಿ ವಾಹಿನಿ ರಹಸ್ಯವೊಂದನ್ನು ಭೇದಿಸುವ ಬಗೆಗೆ ತಿಳಿಸತೊಡದೆ!

ಮತ್ತೊಂದು ಊರಿನ ಯುವಕನೊಬ್ಬ ಈ ಘಟನೆಯಾದ ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ. ಅವಳೂ ಅವನನ್ನು ಪ್ರೇಮಿಸಿದ್ದಾಳೆ. ಆಗಾಗ ಅವರಿಬ್ಬರೂ ಹಳ್ಳಿಯಲ್ಲಿ ಭೇಟಿ ಮಾಡಿದ್ದಾರೆ. ಆದರೆ ಆ ಹಳ್ಳಿಯಲ್ಲಿ ಹುಡುಗಿಗೇ ಗೊತ್ತಿಲ್ಲದೆ ಮತ್ತೊಬ್ಬ ಗುಪ್ತ ಪ್ರೇಮಿ ಉದ್ಭವಿಸಿದ್ದಾನೆ. ಅವನಿಗೆ ತನ್ನ ಪ್ರೇಯಸಿಗೆ (!) ಮತ್ತೊಬ್ಬ ನಿಜ ಪ್ರೇಮಿ ಇರುವ ವಿಷಯ ಗೊತ್ತಾಗಿಬಿಟ್ಟಿದೆ. ಈ ಹಳ್ಳಿಯ ಪ್ರೇಮಿ ಚಡಪಡಿಸಿದ್ದಾನೆ, ಅಸೂಯೆಯಲ್ಲಿ ಬೇಯುತ್ತಿದ್ದಾನೆ ಮತ್ತು ಕೋಪಗೊಂಡಿದ್ದಾನೆ. ತಾನೂ ಅವಳನ್ನು ಪ್ರೇಮಿಸುತ್ತಿದ್ದು, ತನಗೆ ಅನ್ಯಾಯ ಮಾಡಬಾರದೆಂದು ಅವಳ ಬಳಿ ಬಡಬಡಿಸಿದ್ದಾನೆ. ಹುಡುಗಿ ಅವನ ಹೊಸ ಪ್ರೇಮ ನಿವೇದನೆ ತಳ್ಳಿ ಹಾಕಿದ್ದಾಳೆ.

ಆಕಾಶ ಬಿದ್ದಂತಾದ ಹುಡುಗ ಭಗ್ನ ಹೃದಯದ ’ದೇವದಾಸ’ನಂತೆ ಆಗದೆ ಖಳನಟನಾಗಿಬಿಟ್ಟಿದ್ದಾನೆ! ಅವಳಿಗೆ ಎಚ್ಚರಿಕೆ, ಧಮಕಿ ಹಾಕಿ ಕೆಲ ಸಮಯದ ಅವಧಿ ಕೊಟ್ಟು ಗಮನಿಸಿದ್ದಾನೆ. ಆದರೂ ಹುಡುಗಿ ಇವನಿಗೆ ಸೊಪ್ಪು ಹಾಕಿಲ್ಲ.

ವೈಷಮ್ಯ ಬೆಳೆಸಿಕೊಂಡ ಅವನು ತನ್ನ ಕೆಲವು ಗೆಳೆಯರನ್ನು ಗುಂಪು ಕೂಡಿಸಿ, ಆ ಪರ ಊರಿನ ಯುವಕ ’ಅತ್ಯಾಚಾರಿ’ ಎಂದು ಬಿಂಬಿಸಿದ್ದಾನೆ. ಹಳ್ಳಿಯ ಕೆಲವು ಹೆಂಗಸರನ್ನು ನಂಬಿಸಿಯೂಬಿಟ್ಟಿದ್ದಾನೆ. ಸಮಯಕ್ಕೆ ಹೊಂಚು ಹಾಕಿ, ಆ ನಿಜ ಪ್ರೇಮಿಯನ್ನು ಕಟ್ಟಿಹಾಕಿಸಿ ಹೆಣ್ಣುಮಕ್ಕಳಿಂದಲೇ ಹೊಡೆಸಿರುವ ಅತಿ ಚಾಣಾಕ್ಷ. ಇಷ್ಟೆಲ್ಲ ನಡೆಯುವಾಗ ಆ ಹುಡುಗಿಗೆ ಯಾವ ಸುದ್ದಿಯೂ ತಿಳಿಯದಂತೆ ನೋಡಿಕೊಂಡಿದ್ದಾನೆ!

ಧರ್ಮದೇಟು ತಿಂದು, ಪ್ರಜ್ನೆ ತಪ್ಪಿ ಬಿದ್ದಿದ್ದ ಆ ’ಅತ್ಯಾಚಾರಿ’ ಯುವಕನನ್ನು ಪೊಲೀಸರು ಬಂದು ಎಳೆದುಕೊಂಡು ಹೋಗಿದ್ದಾರೆ. ಅವನ ಚಿಂತಾಜನಕ ಸ್ಥಿತಿ ನೋಡಿ, ಠಾಣೆಯಲ್ಲಿ ಪ್ರಾಣ ಹೋದರೆ ತಮ್ಮ ತಲೆಗೆ ಬರಬಹುದೆನ್ನುವ ಭಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿದ್ದಾರೆ. ಚೇತರಿಸಿಕೊಂಡ ಹುಡುಗ ತನ್ನ ತಾಯಿತಂದೆಯರನ್ನು ಸೇರಿದ್ದು, ಇದೀಗ ಯಾರ ಮೇಲೆ ದೂರು ಸಲ್ಲಿಸುವುದೆಂಬ ಚಿಂತೆ ಕಾಡಿದೆ.

ಹಳ್ಳಿಯ ಗುಪ್ತ ಪ್ರೇಮಿ ಸದ್ಯಕ್ಕೆ ತಲೆಮರೆಸಿಕೊಂಡಿರುವುದು,  ಪೊಲೀಸರು ಅವನ  ಬೇಟೆಯಾಡುತ್ತಿರುವುದು ಸುದ್ದಿ ವಾಹಿನಿ ಬಿತ್ತರಿಸುತ್ತಿದೆ!  ಹಳ್ಳಿಯ ಸ್ತ್ರೀಶಕ್ತಿಯ ಕೊಡುಗೆಯನ್ನು ಎಲ್ಲರೂ ಮರೆತ ನಾಟಕವಾಡಿದ್ದಾರೆ. ಹಳ್ಳಿಯಲ್ಲಿ ಇತ್ತೀಚೆಗೆ ಕುತೂಹಲದ ವಿಷಯಗಳು ಕಡಿಮೆಯಾಗಿದ್ದರಿಂದ ಜನ ಬೇಸರ ಮತ್ತು ಉತ್ಸಾಹ ಹೀನತೆಯಲ್ಲಿದ್ದಾರೆ!

***

 

ಪೊರೆ

khalelogo

ಇವನು ನನ್ನ ಕೊರಳಿಗೆ ತಾಳಿ ಕಟ್ಟಿ ಆಗಲೆ ಮೂರು ತಿಂಗಳುಗಳಾದುವು. ಮೊದಲೆರಡು ವಾರ ಆ ಊರಿನಿಂದ ಈ ಊರಿಗೆ, ಈ ಊರಿನ ಈ ಮನೆಯೊಳಗೆ, ಮನೆಯೊಳಗಿನ ಅವನ ರೂಮಿಗೆ ಕಾಲೂರುವ ಸಂಭ್ರಮದಲ್ಲಿ ಕಳೆದುಬಿಟ್ಟೆ.

ಹನಿಮೂನಿಗೆಂದು ಒಂದು ವಾರ ಊಟಿಗೆ ಹೋದದ್ದಷ್ಟೆ. ನೆನಪಿಡುವ ಮಧುಚಂದ್ರ ಅಂತ ನನಗಂತೂ ಅನ್ನಿಸಲಿಲ್ಲ. ಮತ್ತಷ್ಟು ದಿನ ಅವನ ಪಿಸುಗುಡುವಿಕೆಯ ಮಾತುಗಳಷ್ಟೆ ಈ ತುಂಬಿದ ಮನೆಯೊಳಗೆ ನನ್ನ ಕಿವಿಯಲ್ಲಿ ಮಾತ್ರ ಗುಣುಗುಣಿಸುತ್ತಿದ್ದವು. ಮತ್ತೇನೂ ವಿಶೇಷಗಳಿಲ್ಲವ ಅನ್ನುವ ಕುತೂಹಲವಿದ್ದರೆ, ಅದು ಸಹಜ. ಆದರೆ ಅಸಹಜವೆನ್ನಿಸುವಷ್ಟು ನಮ್ಮಿಬ್ಬರ ಮಧ್ಯೆ ಒಂದು ಪೊರೆ ಇರುವುದು ನನಗೆ ಮಾತ್ರ ಗೊತ್ತಿದೆ.

ಮದುವೆಗೆ ಮೊದಲ ಒಂಟಿ ಜೀವನದಂತೆ ಇಬ್ಬರದೂ.   ಅಪರಿಚಿತರು ಪರಿಚಯಮಾಡಿಕೊಳ್ಳುವಂತೆ, ದಿನವೂ ಗುಡ್ ಮಾರ್ನಿಂಗ್ ನಿಂದ ಬೆಳಗು ಮಾಡಿಕೊಳ್ಳುತ್ತೇವೆ. ಸ್ನಾನ ಆದರೆ ತಿಂಡಿಗೆ ಬನ್ನಿ, ತಿಂಡಿಯಾದರೆ ಆಫ಼ೀಸಿಗೆ ಹೊರಡಿಸು ಇತ್ಯಾದಿ. ಅಬ್ಬಾ, ಮೂರು ತಿಂಗಳು ಕಳೆದೆ. ನನಗೆ ನಿಜಕ್ಕು ತಿಳಿದಿದೆ. ಮದುವೆಯ ಸಂಭ್ರಮ ಹೊಸತಿನಲ್ಲಿ ಇಬ್ಬರಲ್ಲು ಹೇಗಿರುತ್ತದೆಂದು. ಅದನ್ನು ಮದುವೆಗೆ ಮೊದಲೆ ಕಲ್ಪನೆ ಮಾಡಿ ಖುಷಿ ಪಟ್ಟಿದ್ದೆ. ಈಗ ಅನ್ನಿಸುತ್ತಿದೆ ಎಲ್ಲವೂ ಕಲ್ಪನೆಯಲ್ಲೆ ಚೆನ್ನ.

ಇವತ್ತು ಮದುವೆಯಾದ ತೊಂಭತ್ತೊಂದನೆ ದಿನ, ಬೆಳಿಗ್ಗೆ ಅವನು ಮೊದಲೆ ಎದ್ದುಬಿಟ್ಟಿದ್ದಾನೆ.   ನನ್ನ ಎಚ್ಚರವನ್ನು ಕಾಯುತ್ತಿದ್ದನೊ ಏನೊ. ಕಣ್ಣು ಬಿಟ್ಟಾಗ ಅವನ ನಗು ಮುಖ ಕಂಡೆ. ಗಂಡನ ನಗು ಮುಖ ಕಣ್ಣು ಬಿಡುತ್ತಲೆ ಕಂಡದ್ದರಿಂದ ಇರಬೇಕು ಒಳಗ ಸ್ವಲ್ಪ ಖುಷಿ ಆವರಿಸಿದೆ.

“ಗುಡ್ ಮಾರ್ನಿಂಗ್, ಇವತ್ತು ಸಂಜೆ ಹೊರಗೆ ಸುತ್ತಾಟಕ್ಕೆ ಹೋಗೋಣವ?’’

ಆಶ್ಚರ್ಯ ಸೂಚಕವಾಗಿ ಕಣ್ಣುಗಳನ್ನು ಅಗಲಿಸಿದೆ.

“ಸಂಜೆ ಐದಕ್ಕೆಲ್ಲ ರೆಡಿಯಾಗು’’

ಕಣ್ಣಿನಲ್ಲೆ ’ಎಲ್ಲಿಗೆ?’ ಕೇಳಿದೆ.

’ಅದು ಗುಟ್ಟು..’ ಪಿಸುಗುಟ್ಟಿದ.

ಏನೊ ಸಂಭ್ರಮ ಅವನಲ್ಲಿದ್ದಂತೆ ನನ್ನಲ್ಲೂ. ಹೊರಗೆ ಎಲ್ಲಿಗೆಂದು ತಿಳಿಯದು. ಸದ್ಯ, ದೇವಸ್ಥಾನಕ್ಕೆ ಕರೆದುಕೊಂಡು ಹೋಗದಿದ್ದರೆ ಸಾಕು ಅಂದಿತು ಮನಸ್ಸು! ತಕ್ಷಣ ಕೆನ್ನೆ ಬಡಿದುಕೊಂಡೆ!

ಕಾಯುತ್ತಿದ್ದ ಸಂಜೆ ತಡವಾಗಿಯೆ ಬಂತು ಅನ್ನಿಸಿತು. ಇಬ್ಬರೂ ಹೊರಟೆವು. ಆವನು “ಆಟೋ ” ಅಂದ. ಕುಳಿತಮೇಲೆ, ದೇವಸ್ಥಾನದ ಹೆಸರೊಂದು ಹೇಳಿದ.

“ದೇವಸ್ಥಾನ ಅಂತ ಮೊದಲೆ ಹೇಳುವುದಲ್ಲವ?” ಮೆಲ್ಲಗೆ ಕೇಳಿದೆ.

“ಅಲ್ಲ.. ಅಲ್ಲಿಗಲ್ಲ.. ಅದರ ಹಿಂದಿರುವ ದೊಡ್ಡ ಕೊಳಕ್ಕೆ.. ನಿನಗೆ ಅದನ್ನು ತೋರಿಸುತ್ತೇನೆ”

ಖುಷಿಯಾಯಿತು. ಆಟೋ ಕುಲುಕಾಟಕ್ಕೆ ಇಬ್ಬರೂ ಸ್ವಲ್ಪ ಹತ್ತಿರವೇ ಆದೆವು! ಗೆಳತಿಯರು ಛೇಡಿಸುತ್ತಿದ್ದದ್ದು ನೆನಪಾಯಿತು. ’ತಾಳಿ ಬಿಗಿಯುವುದೇ ತಡ. ನೀನವನಿಗೆ ಅಂಟಿಬಿಡುತ್ತೀಯ, ನೋಡುತ್ತಿರು.’

ಆದರೆ ಹಾಗೇನೂ ಆಗಲಿಲ್ಲ.   ಇಬ್ಬರೂ ಅಂದುಕೊಂಡಂತೆ ಅಂಟಿಕೊಳ್ಳಲಿಲ್ಲ.   ನನ್ನ ಅವನ ಬಗೆಗಿನ ಕುತೂಹಲ ಇನ್ನೂ ಉಳಿಸಿಕೊಂಡಿದ್ದಾನೆ. ಆಶ್ಚರ್ಯವೆಂದರೆ, ಅವನಿಗೇಕೆ ನನ್ನ ಬಗೆಗೆ ಕುತೂಹಲವಿಲ್ಲ!?

ಆಟೋ ಇದೀಗ ಆ ದೇವಸ್ಥಾನ ಬಳಸಿ ಮುಂದೆ ಹೋಗಿದೆ. ಐದು ನಿಮಿಷಗಳಾದಮೇಲೆ ಆಟೋದವನು ಹೇಳುತ್ತಿದ್ದಾನೆ. “ಇನ್ನು ಮುಂದೆ ಬರಲ್ಲ ಸಾರ್.. ರಸ್ತೆ ಸರಿ ಇಲ್ಲ. ನಡೆದುಕೊಂಡೆ ನೀವು ಆ ಕೊಳದ ಕಡೆ ಹೋಗಿ. ಸ್ವಲ್ಪ ಹುಷಾರು.”

ಇಬ್ಬರೂ ಇಳಿದೆವು. ಮೌನವಿದೆ. ಮಾತಾಡಿಸಲೆ. ಬೇಡ. ಅವನೇ ಮಾತಾಡಲಿ. ನಡೆಯುತ್ತ ನಡೆಯುತ್ತ ಕೊಳದ ಹತ್ತಿರ ಬಂದಿದ್ದೇವೆ. ಎದುರಲ್ಲಿ ದೊಡ್ಡ ಕೊಳ. ತಿಳಿ ಜಲ. ತಂಪಿನ ಗಾಳಿ. ಹಿಂದೆ ಹಿಂಡು ಹಿಂಡಾಗಿ ತಾಳೆ ಮರಗಳು. ಪಕ್ಕದಲ್ಲಿ ಸಪ್ತಪದಿ ತನ್ನೊಟ್ಟಿಗೆ ಮೆಟ್ಟಿದ ವರ! ಸುತ್ತೆಲ್ಲ ಪಸರಿಸಿದ ಪರಿಮಳ.

ಇಬ್ಬರೂ ಕುಳಿತೆವು. ಸ್ವಲ್ಪ ದೂರ….. ದೂರ. ನಾನು ಕುಳಿತಮೇಲೆ ಅವನು ಕುಳಿತ. ಹತ್ತಿರವೇ ಕೂರಬಹುದಿತ್ತಲ್ಲ!

ಸುತ್ತ ಮುತ್ತ ಕಣ್ಣಗಲಿಸಿ ನೋಡತೊಡಗಿದೆ. ಚಿಕ್ಕಂದಿನ ನೆನಪು ಮರುಕಳಿಸತೊಡಗಿದೆ. ನನ್ನೂರಿನ ತಾಳೆ ಹಿಂಡಿನ ಬದಿ ಅಮ್ಮನೊಡನೆ ಹೆಜ್ಜೆ ಊರುವಾಗ ಹೊರಳೆಗೆ ಅಡರುತ್ತಿದ್ದ ವಿಚಿತ್ರ ಘಾಟು. ಅಮ್ಮ ಅದು ಸಣ್ಣ ಅಕ್ಕಿಯ ಪರಿಮಳದಂತಿದೆ ಅನ್ನುತ್ತಿದ್ದಳು.   ನನಗೆ ಅನಿಸುತ್ತಿತ್ತು ಅದು  ಕಾಯಿಸಿದ ತುಪ್ಪದ ತೆರ. ಅಮ್ಮ ಅನ್ನುತ್ತಿದ್ದಳು,  ’ಹುಷಾರು ಹುಡುಗಿ, ಹಾವುಗಳ ಬೀಡು ಇಲ್ಲಿ. ಮುಳ್ಳು ಹಾದಿ.  ಉಡಗಳು ಓತಿ ಹಲ್ಲಿಗಳು, ಜಿಗಿವ ಕಪ್ಪೆಗಳೂ.’    ಆ ಪರಿಮಳದ ಆಸೆ ಎಷ್ಟೇ ಇದ್ದರೂ ಒಂಟಿಯಾಗಿ ನಾನಲ್ಲಿ ಎಂದೂ ಹೋಗಲೇ ಇಲ್ಲ. ಅಂಥ ಭಯ ಅಮ್ಮನ ಎಚ್ಚರಿಕೆಯಿಂದ ಮನಸ್ಸಿನಲ್ಲಿ ಬೇರೂರಿಬಿಟ್ಟಿತ್ತು.

ಈಗ  ನೆನಪಲ್ಲಷ್ಟೇ  ಅಂದಿನ  ಪುಟ್ಟ ಗೆಳತಿಯರೂ  ಬಂದು ಹೋಗುತ್ತಾರೆ.   ಆ ತಾಳೆ ಮರಗಳ ಬಳಿ ಗೆಳತಿಯರೊಡನೆ ಹೋಗುತ್ತಿದ್ದೆ.   ಪರಿಮಳದ ಸೆಳೆತ.     ಅವರು ಆಟವಾಡುವಾಗ  ಚಪ್ಪಾಳೆ ತಟ್ಟಿ ಕೂಗುತ್ತಿದ್ದರು, ’ಸಿರಿ…ಕೀಟ ಹಿಡಿವ ಕಪ್ಪೆ ನೋಡಿದ್ದೇವೆ. ಕಪ್ಪೆ ಹಿಡಿದ ಹಾವು ನೋಡಿದ್ದೇವೆ. ಹಾವು ಹಿಡಿದ ಗಿಡುಗ ನೋಡಿದ್ದೇವೆ’. ನಾನು ಕೇಳುತ್ತಿದ್ದುದು ಮಾತ್ರ, ’ನೋಡಿದ್ದೀರಾ ಪೊರೆ ಕಳಚುತ್ತಿರುವ ಹಾವು ?’. ಹಾಗೆ ಕೇಳಿದ್ದೇ , ಹೌಹಾರಿ ಓಡಿ ಹೋದ ಪೋರಿಯರು ನನ್ನ ಗೆಳತಿಯರು!

ನಿಜದ ಈ ನಿರ್ಜನ ಬಯಲಲ್ಲಿ ಭಯ ಊರತೊಡಗಿದೆ. ಕೈಹಿಡಿದವನ ಮಾರ್ಜಾಲದಾಟದ ಲಯ ಇದೀಗ ಶುರುವಾಗಬಹುದೆ?  ತಡೆರಹಿತ ವೇಗ ಅವನೊಳಹೊಕ್ಕ ಸಂಶಯ  ನನ್ನೊಳಗೆ  ನಿಬಿಡವಾಗುವ ಮುನ್ನ ಮತ್ತೇಕೊ ತೂಗುಯ್ಯಾಲೆಯಲ್ಲಿ ಮನಸ್ಸು. ಇಲ್ಲ…. ಸಂಶಯಗಳು ಮತ್ತು ನನ್ನೊಳಗೆ ಅವಿತಿರುವ ಸಣ್ಣ ಆಸೆಗಳು  ನಿಜವಾಗುತ್ತಿಲ್ಲ.   ಇಷ್ಟು  ದಿನಗಳಲ್ಲಿ  ಆಗದ  ಸಂಗತಿಗಳು  ಈಗ  ಆಗಲು ಪವಾಡವೆ ನಡೆಯಬೇಕೇನೊ!

ಅವನು ಹಾಗೆಯೆ ಅಲ್ಲಿಯೆ ಕುಳಿತಿದ್ದಾನೆ. ಏನೋ ಪ್ರಶ್ನೆಗಳ ಕೇಳಬೇಕೆಂಬ ಬಯಕೆ ಇರಬಹುದೆ?

ಬಹಳ ಸಮಯ ಹೀಗೇ ಮೌನದಲ್ಲಿ ಕಳೆದೆವು. ನನ್ನೊಳಗೆ ಮಡುಗಟ್ಟುತ್ತಿರುವ ಅವನ ಬಗೆಗಿನ ಅನುಮಾನಗಳನ್ನು ಮೆಲ್ಲಗೆ ದೂರ ಸರಿಸುವ ಪ್ರಯತ್ನ ಮಾಡಿದೆ.

“ಹೋಗೋಣವ?” ನನ್ನ ಪ್ರಶ್ನೆಗೆ ಬೆಚ್ಚಿದಂತೆ, ಮುಖ ನೋಡಿದ. ಮರುಮಾತಿಲ್ಲದೆ ಎದ್ದು ಹೊರಟ. ನಾನು ಅವನ ಹಿಂದೆ. ನಿರ್ಧಾರವೊಂದನ್ನು ಮನಸ್ಸಿನಲ್ಲಿ ಮಾಡಿಬಿಟ್ಟೆ. ನಾನಂದುಕೊಂಡದ್ದನ್ನು ಖಂಡಿತ ಮಾಡಲೆ ಬೇಕು. ಅವನ ಪ್ರತಿಕ್ರಿಯೆ ಹೇಗಿರಬಹುದು ಅಥವ ಅದು ಅನಾಹುತವೊಂದರ ಮುನ್ನುಡಿಯೂ ಆಗಬಹುದು. ಏನೇ ಆದರು ಸಂಯಮಕ್ಕೂ ಒಂದು ಮಿತಿ ಇದೆ. ಅಂದುಕೊಂಡದ್ದು ಆಗಿಬಿಡಲಿ!

ಹೋಗುತ್ತ ಅವನನ್ನು ಕೇಳಿದೆ. “ನಾಳೆ, ನಾನು ಡಾಕ್ಟರೊಬ್ಬರನ್ನು ನೋಡಬೇಕಿತ್ತು. ಹೋಗೋಣವ?”

“ಖಂಡಿತ ಹೋಗೋಣ. ಯಾವ ಡಾಕ್ಟರ್?”

“ಡಾ.ಪ್ರತೀಕ್ಷಾ”

“ಓ.. ಆಗಲಿ.. ಆಗಲಿ.. ನಾಳೆಗೆ ಅಪಾಯಿಂಟ್ಮೆಂಟ್ ತಗೊಳ್ತೀನಿ”

ನನಗೆ ಆಶ್ಚರ್ಯವೆನಿಸಿತು. ಅವನು ಸಲೀಸಾಗಿ ಒಪ್ಪಿಬಿಟ್ಟ, ಮತ್ತೇನೂ ಕೇಳದೆ! ಡಾ.ಪ್ರತೀಕ್ಷ ಎಲ್ಲರಿಗೂ ಪರಿಚಿತ ಮನೋವಿಜ್ಞಾನ ವೈದ್ಯೆ! ಅವನಿಗೆ ಕುತೂಹಲವಿರಬೇಕಿತ್ತು. ಈ ಡಾಕ್ಟರೆ ಏಕೆ ಎಂದು. ಇಲ್ಲ ಅವನೇನೂ ಕೇಳಲೇ ಇಲ್ಲ! ಪಾಪ ಅನ್ನಿಸಿತು!

ಮರುದಿನ ಡಾಕ್ಟರಲ್ಲಿ ಏನು ಮಾತಾಡಬೇಕೆಂದು ನಿರ್ಧರಿಸಿದೆ. ಆದರೆ, ಅವನ್ನೆಲ್ಲ ಇವನೆದುರಿಗೆ ಮಾತಾಡಬಾರದು.

ಬೆಳಿಗ್ಗೆ ಎದ್ದಾಗ ಪ್ರಫ಼ುಲ್ಲನಾಗಿದ್ದ. ಸ್ನಾನ, ಕಾಫ಼ಿ, ತಿಂಡಿ ಎಲ್ಲ ಆದಮೇಲೆ ಮನೆಯಲ್ಲಿ ಇಲ್ಲೇ ಷಾಪಿಂಗ್ ಎಂದು ಹೊರಟೆವು.

ಕ್ಲಿನಿಕ್ ಸರಿ ಸಮಯಕ್ಕೆ ತಲುಪಿದೆವು. ನಾನು ಹೇಳಿದೆ, “ಸ್ವಲ್ಪ ಡಾಕ್ಟರನ್ನ ಮಾತಾಡಿಸಿ ಬರುತ್ತೇನೆ. ಆಮೇಲೆ ಅವರು ನಿಮ್ಮನ್ನು ಕರೆಯುತ್ತಾರೆ. ಸಂಕೋಚ ಬೇಡ. ಅವರೊಟ್ಟಿಗೆ ಖುಲ್ಲ ಮಾತಾಡಿ”

ಡಾಕ್ಟರ್ ನಗು ಮುಖದಿಂದ ಮಾತಾಡಿಸಿದರು. ಅವರಿಗೆ ವಿವರಿಸತೊಡಗಿದೆ.

“ಡಾಕ್ಟರ್.. ನಮ್ಮ ದಾಂಪತ್ಯ ಸರಿ ಹೋಗಲು ನಿಮ್ಮ ಸಹಾಯ ಬೇಕಿದೆ. ನನ್ನ ಮದುವೆಯಾಗಿ ಮೂರು ತಿಂಗಳಾಯಿತು. ಮೊದಲ ದಿನದಿಂದಲೆ ಅವರನ್ನು ಅಬ್ಸರ್ವ್ ಮಾಡ್ತಾ ಇದ್ದೇನೆ. ಎಲ್ಲ ವಿಷಯಗಳಲ್ಲು ನಾರ್ಮಲ್ ಇದಾರೆ. ಆದರೆ, ನನ್ನೊಟ್ಟಿಗೆ ಗಂಡನ ಥರ ಬಿಹೇವ್ ಮಾಡ್ತಾ ಇಲ್ಲ. ಏಕಾಂತದಲ್ಲಿರುವಾಗ ಏನೋ ಗಹನ ಯೋಚನೆಯಲ್ಲಿರುವಂತೆ. ನನ್ನ ಮುಟ್ಟಲೂ ಸಂಕೋಚ ಪಡುತ್ತಾರೆ. ಈ ಬಗ್ಗೆ ಸ್ವಲ್ಪ ಸ್ಟಡಿ ಮಾಡಿದೆ. ಅವರಿಗೆ ಅಫೆನ್’ಫಾಸಂಫೋಬಿಯ ಸಿಂಪ್ಟಮ್ಸ್ ಇದ್ದಂತಿದೆ. ಇದರ ಬಗ್ಗೆ ನಿಮಗೆ ಚೆನ್ನಾಗೆ ಗೊತ್ತಿರುತ್ತೆ. ಇವರ ನಡವಳಿಕೆ ಹಾಗೆಯೇ ಕಾಣಿಸುತ್ತೆ. ನನ್ನ ಮುಟ್ಟಲೂ ಭಯ, ಮಾತಾಡಲೂ ಭಯ.. ಹತ್ತಿರ ಬಂದಾಗ ಅವರ ಕೈ ಸೂಕ್ಷ್ಮವಾಗಿ ನಡುಗುತ್ತಿರುತ್ತೆ. ಇವನ್ನೆಲ್ಲ ನಾನು ಅವರಿಗೆ ಹೇಳಿ ಮತ್ತಷ್ಟು ಮುಜುಗರ ಮಾಡಲು ಇಷ್ಟವಿಲ್ಲ. ಹಾಗೆ ಹೇಳುವುದರಿಂದ ಮತ್ತೇನಾದರೂ ತೊಂದರೆಗಳು ಎದುರಾದರೆ ಅಂತ ಸುಮ್ಮನಾಗಿದ್ದೇನೆ. ಈ ದಿನದಿಂದ ಅವರಿಗೆ ಕೌನ್ಸೆಲಿಂಗ್ ಪ್ರಾರಂಭಿಸಲು ಸಾಧ್ಯವಾ?”

ಹೊರಬಂದೆ, ಅವನಿಗೆ ಹೇಳಿದೆ, “ಡಾಕ್ಟರನ್ನು ಒಮ್ಮೆ ಮಾತಾಡಿಸು”

ಗೆಲುವಾಗಿಯೆ ಅವನು ಡಾಕ್ಟರ ರೂಮಿಗೆ ಹೋದ! ಸುಮಾರು ಅರ್ಧ ಗಂಟೆ ಕೌನ್ಸೆಲಿಂಗ್ ಆಗಿರಬೇಕು. ಹೊರಬಂದು “ಡಾಕ್ಟರ್ ಇಬ್ಬರನ್ನೂ ಒಟ್ಟಿಗೆ ಬರಲು ಹೇಳಿದರು” ಅಂದ. ನಾನು ಅವನೊಡನೆ ರೂಮಿನೊಳಹೊಕ್ಕೆ.

“ಬನ್ನಿ.. ಇಬ್ಬರೂ ಕುಳಿತುಕೊಳ್ಳಿ.. ಮೊದಲು ನಿಮಗೆ ಅಭಿನಂದನೆಗಳು. ಮದುವೆಯಾಗಿ ಇವತ್ತಿಗೆ ಮೂರು ತಿಂಗಳು ಪೂರಯಿಸಿದ್ದೀರ!”

ಇಬ್ಬರೂ ಧನ್ಯವಾದ ಹೇಳಿದೆವು.

“ನಿಮ್ಮಿಬ್ಬರದು ಹೇಳಿ ಮಾಡಿಸಿದ ಸುಂದರ ಜೋಡಿ. ಮದುವೆ ಮಾಡಿಸಿದ ನಿಮ್ಮಿಬ್ಬರ ಪೇರೆಂಟ್ಸ್ ಗೆ ಅಭಿನಂದನೆ ಹೇಳ ಬೇಕು. ನೀವು ಅವರಿಗೆ ಥ್ಯಾಂಕ್ಸ್ ಹೇಳ ಬೇಕು ಅಲ್ವ?” ಅಂತ ನಕ್ಕರು.

“ಯಾವುದೇ ವಿಷಯದ ಬಗೆಗೆ ಯೋಚಿಸುತ್ತಾ.. ಆ ವಿಷಯದ ಬಗೆಗೆ ಸಂಶಯ ಬೆಳೆಸಿಕೊಳ್ಳುತ್ತಾ.. ಮತ್ತೆ ನಮಗೆ ನಾವೆ ನಿರ್ಧಾರಕ್ಕೆ ಬರುವುದರಿಂದ ಇಂಥ ಎಡವಟ್ಟುಗಳು ಆಗುತ್ತವೆ”

ಡಾ.ಪ್ರತೀಕ್ಷಾ ನಗು ತಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಅನ್ನಿಸಿತು!

ಅವರು ಏನು ಹೇಳುತ್ತಿದ್ದಾರೆ ಇಬ್ಬರಿಗೂ ತಿಳಿಯಲಿಲ್ಲ. ಮತ್ತೆ ತಮ್ಮ ಮಾತು ಮುಂದುವರಿಸಿದರು,

“ಇನ್ನು ಫ಼ೋಬಿಯದ ಬಗೆಗೆ ನೀವು ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಯಾವುದೊ ವಸ್ತು ಅಥವ ವಿಷಯದ ಬಗೆಗೆ ವಿನಾಕಾರಣ ಅತಿಯಾದ ಭಯ ಕಾಣಿಸಿಕೊಂಡರೆ ಅದು ಫ಼ೋಬಿಯಾದ ಲಕ್ಷಣಗಳು. ದೇಹ, ಕೈಕಾಲುಗಳು ನಡುಗುವುದು, ಹೃದಯ ಬಡಿತ ಏರಿಬಿಡುವುದು, ಉಸಿರುಗಟ್ಟುವುದು, ತಲೆ ತಿರುಗುವುದು, ಮೂರ್ಛೆ ಹೋಗುವುದು, ಸಾಯುತ್ತಿದ್ದೇನೆ ಅಂತ ಆತಂಕ ಪಡುವುದು ಇವೆಲ್ಲ ಫ಼ೋಬಿಯದಿಂದ ಆಗುವ ಪರಿಣಾಮಗಳು”.

ಹೀಗೆ ವಿವರಿಸುತ್ತ ಡಾಕ್ಟರ್ ನನ್ನ ಕಡೆಗೆ ನೋಡಿ , “ನಿಮ್ಮ ಗಂಡ ನಿಮಗೆ ಈ ರೀತಿಯ ಮನೋ ದೌರ್ಬಲ್ಯಗಳಿರಬಹುದೆ ಅಂತ ಕೇಳುತ್ತಿದ್ದಾರೆ. ಹೇಳಲೆ ?” ಅಂದರು.

ಒಂದು ಕ್ಷಣ ಗಲಿಬಿಲಿಯಾಯಿತು. ಇವರೇನು ಹೇಳುತ್ತಿದ್ದಾರೆ?! ನನಗೆ ದೌರ್ಬಲ್ಯಗಳೆ?! ಸಾವರಿಸಿಕೊಂಡು ಕುತೂಹಲದಿಂದ, “ಖಂಡಿತ ಹೇಳಿ ಡಾಕ್ಟರ್” ಅಂದೆ.

“ಗ್ಯಾಮೊಫ಼ೋಬಿಯ ಅಂದರೆ ಮದುವೆಯ ಬಗೆಗಿನ ಭಯ ಅಥವ ಹೆಟ್ರೊಫ಼ೋಬಿಯ ಅಂದರೆ ಗಂಡಸಿನ ಭಯ ಅಥವ ಲಾಕಿಯೊಫ಼ೋಬಿಯ ಅಂದರೆ ಮಗು ಹೆರುವ ಭಯ ಇಷ್ಟರಲ್ಲಿ ಒಂದು ನಿಮ್ಮನ್ನು ಬಾಧಿಸುತ್ತಿರಬಹುದು ಅಂತ ಆತಂಕ ಪಡುತ್ತಿದ್ದಾರೆ” ಅಂದರು.

ನಾನು ತಡೆಯಲಾರದೆ ಜೋರಾಗಿ ನಗತೊಡಗಿದೆ. ಡಾಕ್ಟರ್ ಕೂಡ ಜೋರಾಗಿ ನಕ್ಕರು. ಇವನು ಇನ್ನೂ ಗಂಭೀರವಾಗೇ ಇದ್ದ. ಅದನ್ನು ನೋಡಿ ನನ್ನ ನಗು ಮತ್ತಷ್ಟು ಹೆಚ್ಚೇ ಆಯಿತು.

ಇವನನ್ನು ಉದ್ದೇಶಿಸಿ ಡಾಕ್ಟರ್, “ನಿಮ್ಮ ಬಗ್ಗೆ ನಿಮ್ಮ ಹೆಂಡತಿ ಪಡುತ್ತಿರುವ ಸಂಶಯ ಏನೆಂದು ಹೇಳಲೆ?” ಕೇಳಿದರು.

“ನನ್ನ ಬಗೆಗ…? ಹೇಳಿ.. ಹೇಳಿ” ಕುತೂಹಲದಿಂದ ಕೇಳಿದ.

“ಅಫೆನ್’ಫಾಸಂಫೋಬಿಯ ಅಂದರೆ ಯಾರಾದರು ಮುಟ್ಟುವ/ಪ್ರೀತಿಸುವ ಭಯ ಅಥವ ಗೆನೊಫ಼ೋಬಿಯ ಅಂದರೆ ಹೆಣ್ಣಿನ ಭಯದ ಲಕ್ಷಣಗಳು ನಿಮ್ಮಲ್ಲಿವೆಯಂತೆ!”

ಈಗ ಗಹಗಹಿಸಿ ನಗುವ ಸರದಿ ಇವನದಾಯಿತು. ನಾನಂದುಕೊಂಡ ಪ್ರತಿಕ್ರಿಯೆ ಇದಲ್ಲ! ಈಗ ಎಲ್ಲರೂ ನಗುತ್ತಿದ್ದೆವು.

“ಎಷ್ಟೋ ವಿಷಯಗಳಲ್ಲಿ ನಾವು ಮೈಕ್ರೋ ಸ್ಟಡಿ ಮಾಡಿ, ಸರಿಯಾದ ಗೈಡೆನ್ಸ್ ಇಲ್ಲದೆ ನಮಗೆ ನಾವೆ ನಿರ್ಧಾರಕ್ಕೆ ಬರುತ್ತೇವೆ. ಗೂಗಲ್ ಸರ್ಚ್ ಮಾಡಿ ವಿಷಯ ಸಂಗ್ರಹದ ಪರಿಣಾಮ ಇರಬೇಕು ಇದೆಲ್ಲ… ಅಲ್ಲವ?” ಕೇಳಿದರು ಡಾಕ್ಟರ್.

“ನೋಡಿ, ನಿಮ್ಮಲ್ಲಿ ಫ಼ೋಬಿಯದ ಯಾವ ಲಕ್ಷಣಗಳೂ ಇಲ್ಲ. ನಾರ್ಮಲ್ ಆಗೆ ಇದೀರ. ನಿಮ್ಮಬ್ಬರಲ್ಲೂ ಮಾತಿನ ಹಿಂಜರಿಕೆ ಇದೆ. ಏನು ಮಾತಾಡಿದರೆ ತಪ್ಪು ಅರ್ಥಗಳಾಗುತ್ತವೊ ಅನ್ನುವ ಭಯ. ಒಬ್ಬರಿಗೊಬ್ಬರು ಪರಿಚಯಿಸಿಕೊಳ್ಳುವುದರಲ್ಲಿ ನಿಮ್ಮಿಬ್ಬರಲ್ಲಿರುವ ಸಣ್ಣ ’ಇಗೊ’ ಅಡ್ಡ ಬಂದಿದೆ. ದಂಪತಿಗಳಲ್ಲಿ ಇವಕ್ಕೆಲ್ಲ ಅವಕಾಶವೆ ಇಲ್ಲ. ಪ್ರೇಮ ನಿವೇದನೆಯ ವಿಷಯದಲ್ಲಿ ಇಬ್ಬರೂ ಹಿಂಜರಿಯಬೇಡಿ. ಮೊದಲೆ ಹೇಳಿದ್ದೆ. ನಿಮ್ಮದು ಯರಾದರೂ ಮೆಚ್ಚುವ ಜೋಡಿ. ಈ ದಿನದಿಂದಲೆ ಒಬ್ಬರಿಗೊಬ್ಬರು ಮಾತಾಡಿ, ಹೆಚ್ಚೇ ಅನ್ನಿಸುವಷ್ಟು ಮಾತಾಡಿ. ನಾವಾಡುವ ಮಾತುಗಳು ನಮ್ಮ ಮನಸ್ಸಿನ ಕನ್ನಡಿ. ಒಬ್ಬರಿಗೊಬ್ಬರು ಕೇಳುವುದು, ಹೇಳುವುದು, ಚರ್ಚಿಸುವುದು ಅಥವ ಚಿಕ್ಕ ಜಗಳವಾಡುವುದು, ಇವೆಲ್ಲ ಕನ್ನಡಿಯನ್ನು ಸ್ವಚ್ಛವಿಟ್ಟಂತೆ. ಸ್ಪಷ್ಟವಾಗಿ ಒಬ್ಬರಿಗೊಬ್ಬರು ಕಾಣಿಸುತ್ತೀರ. ಹಾಗೆ ಕಾಣಿಸಿಕೊಳ್ಳಿ. ಹೃದಯ ತೆರೆದಿಡಿಟ್ಟರೆ ಬೆಳಕು ಹರಿಯುತ್ತದೆ. ಕತ್ತಲ ಮೂಲೆಗಳು ಮಾಯವಾಗುತ್ತವೆ. ಅಲ್ವ?”

ಇವನು, ನಾನು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಇಬ್ಬರ ಮುಖದಲ್ಲೂ ಮೌನದ ಮೊಟ್ಟೆ ಒಡೆಯುವ ಬಯಕೆ!

“ನಿಮ್ಮಿಬ್ಬರಿಗೂ ಈಗಲೆ ಒಂದು ಸಣ್ಣ ಪರೀಕ್ಷೆ ಕೊಡುತ್ತೇನೆ. ಎರಡೇ ನಿಮಿಷದ ಪೇಪರ್. ಓಕೆನ?” ಕೇಳಿದರು.

ಇಬ್ಬರಿಗೂ ಬಿಳಿ ಹಾಳೆಗಳನ್ನು ಕೊಟ್ಟರು. ಪೆನ್ನು ಕೊಡುತ್ತಾ, “ನಿಮಗನಿಸಿದ್ದನ್ನು ಈ ಕಾಗದದಲ್ಲಿ ಬರೆಯಿರಿ. ವಿಷಯ ಯಾವುದಾದರೂ ಆಗಬಹುದು. ಇಬ್ಬರೂ ಬೇರೆ ರೂಮಿಗೆ ಹೋಗಿ ಬರೆದುಕೊಂಡು ಬನ್ನಿ. ಏನೂ ಅಂದುಕೊಳ್ಳಬೇಡಿ. ಇದು ನನ್ನ ಮಾತುಗಳು ನಿಮಗೆ ಎಷ್ಟು ಮನದಟ್ಟಾಗಿದೆ ಅಂತ ತಿಳಿದುಕೊಳ್ಳಲು ಅಷ್ಟೆ!” ಅಂದರು.

ರೂಂನಲ್ಲಿ ಕುಳಿತಾಗ ನನ್ನ ತಲೆಯಲ್ಲಿ ಓಡುತ್ತಿದ್ದುದನ್ನು ತಕ್ಷಣ ಬರೆದೆ.

’ಐ ಲವ್ ಯು ಡಾರ್ಲಿಂಗ್. ನನ್ನ ತಪ್ಪು ಮನ್ನಿಸುತ್ತೀಯಲ್ಲ? – ನಿನ್ನ ಸಿರಿ’ ತಲೆಗೆ ಮತ್ತೇನು ಬರೆಯುವುದು ಗೊತ್ತಾಗಲಿಲ್ಲ.

ಡಾಕ್ಟರ್ ರೂಮಿನಲ್ಲಿ ಅವನು ಬಂದು ತನ್ನ ಟೆಸ್ಟ್ ಪೇಪರ್ ಕೊಟ್ಟಾಗಿತ್ತು! ಇಬ್ಬರ ಪೇಪರ್ ತೆಗೆದುಕೊಂಡವರು ಒಂದು ನಿಮಿಷ ಅವೆರಡನ್ನು ನೋಡಿ, “ಸಿರಿ, ಇದೊ ತಗೊಳ್ಳಿ. ನಿಮ್ಮ ಮನು ಬರೆದೆ ಟೆಸ್ಟ್ ಪೇಪರ್ ನೀವೇ ನೋಡಿ.

ಅ ಬಿಳಿಯ ಹಾಳೆಯ ಮಧ್ಯೆ ಮನು ಬರೆದಿದ್ದ, ” ಓ ಮುಗ್ಧ ಸಿರಿ… ನನ್ನ ಪ್ರೀತಿ! ಐ ಲವ್ ಯು !- ನಿನ್ನ ಮನು” ಕೆಳಗೆ ಒಂದು ಸುಂದರ ಹೂವಿನ ಸರಳ ಚಿತ್ರ ಬಿಡಿಸಿದ್ದ!

ಮನು ನನ್ನ ಟೆಸ್ಟ್ ಪೇಪರ್ ನೋಡುವುದರಲ್ಲಿ ಮುಳುಗಿ ಹೋಗಿದ್ದಾನೆ! ಏಕೊ ನನ್ನೊಳಗೆ ಸ್ವಲ್ಪ ನಾಚಿಕೆ ಆವರಿಸತೊಡಗಿದಂತಿದೆ!!

ಡಾ. ಪ್ರತೀಕ್ಶಾ ನಮ್ಮಿಬ್ಬರನ್ನು ಆಪ್ಯಾಯತೆಯಿಂದ ನೋಡುತ್ತ ಹೇಳಿದರು. “ನನ್ನ ವೃತ್ತಿ ಜೀವನದಲ್ಲಿ ಅತಿ ಶೀಘ್ರವಾಗಿ ಮುಗಿದ ಟ್ರೀಟ್ಮೆಂಟ್ ಇದೇ ಇರಬೇಕು!”

ಎಲ್ಲರೂ ಮನಸಾ ನಕ್ಕೆವು. ಡಾಕ್ಟರ್ ಇಬ್ಬರಿಗೂ ಹಸ್ತಲಾಘವ ಕೊಟ್ಟು ಕಳುಹಿಸಿದರು.

“ಸಂಜೆ ಮತ್ತೆ ಆ ಕೊಳದ ಬಳಿ ಹೋಗೋಣ” ದಾರಿಯಲ್ಲಿ ಹೇಳಿದ.

ಸಂಜೆ ಆಟೋ ಹಿಡಿದು ಮತ್ತೆ ನಡೆದು, ಕೊಳದ ಬಳಿ ಇಬ್ಬರೂ ಬಂದೆವು. ಕುಳಿತೆವು. ಅವನು ಮೊದಲು ಕುಳಿತ. ಪಕ್ಕದಲ್ಲಿ ಅಂಟಿ ನಾನು ಕುಳಿತೆ!

ಹೀಗೆ ಎಷ್ಟು ಹೊತ್ತು ಕುಳಿತಿದ್ದೆವೊ ಮಾತಿಲ್ಲದೆ! ಇದೀಗ ಕೆಂಪಡಿರಿದ್ದ ಸೂರ್ಯ ದಿಢೀರನೆ ಮುಳುಗಿದ್ದಾನೆ. ಇದ್ದಕ್ಕಿದ್ದಂತೆ ಗಾಬರಿ ಆವರಿಸುತ್ತಿದೆ ಒಳಗೆ! ನನ್ನವನು ಸರ್ಪವಾಗುವ ಸಮಯ ಇದೇನ? ತಾಳೆ ಮರಗಳು ಕೆದರಿ ಕೂದಲು, ಕತ್ತಲನ್ನು ಆವಾಹಿಸಲು ನಿಂತಿರುವಂತೆ,…ನನ್ನವನ ಪಿಸುಮಾತು ಬುಸುಗುಟ್ಟಿದಂತೆ…ಮತ್ತೆ ಅಡರುತ್ತಿದೆ ಹಳೆಯ ನೆನಪಿನ ಪರಿಮಳ! ನನ್ನ ಯೋಚನೆ ಹರಿಯುವ ರೀತಿ ನನ್ನೊಳಗೆ ಚಿಕ್ಕ ಗಾಬರಿ ಹುಟ್ಟಿಸಿತು. ಇಲ್ಲ.. ಇಲ್ಲ.. ನನ್ನಲ್ಲಿ ಯಾವ ಫ಼ೋಬಿಯಾದ ಲಕ್ಷಣಗಳಿಲ್ಲ. ಸಾವರಿಸಿಕೊಂಡೆ.

ಕುತೂಹಲದ ಪೊರೆ ಕಳಚಿ ಬೀಳುವ ಸಂ-ಭ್ರಮದ ಕ್ಷಣಗಳಲ್ಲೂ ಯಾವುದೀ ತಳಮಳ ಕಳೆಯಲಾದೀತೆ ತಿಳಿಸಲಾಗದೀ ಕಳವಳ. ಅವನ ತೋಳು ನನ್ನ ಬಳಸುತ್ತಿದೆ. ಉಸಿರು ಕೆನ್ನೆಗಳಿಗೆ ತಾಕುತ್ತಿದೆ. ವಿಲಕ್ಷಣ ಭಯ ಮಾಯವಾಗಿ, ಕುತೂಹಲದ ಮೊಗ್ಗೆ ಒಡೆಯುತ್ತಿದೆ. ಉಕ್ಕುವ ಈ ಖುಷಿಯ ಘಳಿಗೆಗಳಲ್ಲಿ ಪೊರೆಯೊಂದು ಕಳಚಿಕೊಳ್ಳುತ್ತಿದೆ!

ಒಬ್ಬರ ಕಿವಿಯಲ್ಲಿ ಮತ್ತೊಬ್ಬರು “ಸಾರಿ.. ಸಾರಿ” ಪಿಸುಗುಟ್ಟಿದ್ದೇವೆ.

ಒಟ್ಟಿಗೆ ” ಐ ಲವ್ ಯೂ ” ಗಾನ ರಾಗಿಸಿದ್ದೇವೆ! .

’ಛೆ… ಇಂಥ ಹುಡುಗ ಬಗೆಗೆ ಏನೆಲ್ಲ ಊಹಿಸಿಬಿಟ್ಟೆ!’ ಹಾಗೆಯೆ ಅವನೂ ಅಂದುಕೊಳ್ಳುತ್ತಿರಬಹುದೆ ’ ಈ ಹೆಣ್ಣಿನ ಮನಸ್ಸನ್ನು ಅರ್ಥಮಾಡಿಕೊಳ್ಳಲು ಇಷ್ಟು ಸಮಯ ವ್ಯರ್ಥ ಮಾಡಿದೆನೆ!’

ಎದುರಿನ ಆ ಕೊಳದ ತಿಳಿನೀರ ಮೇಲಿಂದ ತೇಲಿ ಬಂದ ತಂಗಾಳಿ ಹೊಸ ಕನಸುಗಳ ಲೋಕವನ್ನು ನನ್ನೆದೆಯೊಳಗೆ ಅರಳಿಸತೊಡದೆ. ಅವನ ಗಟ್ಟಿ ಬಾಹುಗಳಲ್ಲಿ ಆ ಕನಸ ಬಳ್ಳಿ ಹಬ್ಬತೊಡಗಿದೆ.

***

‘ಕಹಳೆ’ ಇತ್ತೀಚೆಗೆ ನಡೆಸಿದ ಕಥಾಸ್ಪರ್ಧೆಯಲ್ಲಿ ನನ್ನ ಸಣ್ಣಕತೆ ‘ಪೊರೆ’ ಎರಡನೆ ಸ್ಥಾನ ಗಳಿಸಿದೆ. https://kannadakahale.wordpress.com/2017/05/04/%E0%B2%95%E0%B2%B9%E0%B2%B3%E0%B3%86-%E0%B2%95%E0%B2%A5%E0%B2%BE-%E0%B2%B8%E0%B3%8D%E0%B2%AA%E0%B2%B0%E0%B3%8D%E0%B2%A7%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%8E%E0%B2%B0/

ಮೂರ್ಖ

depressed

ಸಾಗರದಿಂದ ಬಂದ ಆ ಪತ್ರ ಓದಿದೆ. ಕೊನೆಯ ವಾಕ್ಯ ಹೀಗಿತ್ತು. ’ನಿಮ್ಮ ಸ್ನೇಹಿತ ಒಬ್ಬ ಈಡಿಯಟ್. ಇದಕ್ಕಿಂತ ಹೆಚ್ಚೇನೂ ಹೇಳಲಾರೆ. ನೀವು ಮತ್ತು ನಿಮ್ಮ ಸ್ನೇಹಿತರು ಮಾಡಿದ ಉಪಕಾರಕ್ಕೆ ಆಭಾರಿ. ನಿಮಗೆಲ್ಲ ಶುಭ ಕೋರುವ… ’

ಆ ಪತ್ರ ಹಿಡಿದು ಹಾಗೇ ಸೋಫ಼ಾದಲ್ಲಿ ಕುಳಿತೆ…. ಯೋಚನೆಗಳು ಹಿಂದಿನ ದಿನಗಳೆಡೆಗೆ ಸರಿದವು.

ಗೆಳೆಯ ಮನೋಜ್ ಈ ಊರಿಗೆ ಎರಡು ವರ್ಷಗಳ ಹಿಂದೆ ವರ್ಗವಾಗಿ ಬಂದವನು. ತಾಲೂಕು ಕಛೇರಿಯಲ್ಲಿ ಮೊದಲ ದರ್ಜೆ ಗುಮಾಸ್ತನಾಗಿ ಎಂಟು ವರ್ಷಗಳ ಸರ್ವೀಸ್ ಮಾಡಿದ್ದವನು. ನೋಡಲು ಸ್ಫುರದ್ರೂಪಿ, ಹೆಚ್ಚು ಎತ್ತರವಿಲ್ಲಆದರೆ ಒಳ್ಳೆ ಮೈಕಟ್ಟು. ಸ್ನೇಹ ಜೀವಿ. ಗೆಳೆಯರ ಬಳಗವನ್ನೆ ಹೊಂದಿದ್ದ. ಎಲ್ಲರೊಂದಿಗೆ ನಗೆ, ಮಾತುಕತೆ. ಯಾರಿಗೂ ಕಿರಿಕಿರಿಯೆನಿಸದ ಒಡನಾಟದವನು.

ಮದುವೆಯಾಗಿ ಮೂರು ವರ್ಷಗಳಾಗಿದ್ದವು. ಸುಂದರ ಹೆಂಡತಿ. ಮಕ್ಕಳಿನ್ನೂ ಇಲ್ಲ. ಅಪರೂಪಕ್ಕೆ ಮನೋಜ್ ಹೆಂಡತಿಯೊಂದಿಗೆ ಪೇಟೆ ಬೀದಿಯಲ್ಲಿ ಮುಖ ತೋರಿಸುತ್ತಿದ್ದ. ಹೆಚ್ಚು ಅವನು ಓಡಾಡುಡುತ್ತಿದ್ದುದು ಗೆಳೆಯರೊಟ್ಟಿಗೆ. ಅದರಲ್ಲೂ ಮದುವೆ ಇನ್ನೂ ಆಗದ ಬ್ರಹ್ಮಚಾರಿಗಳೊಟ್ಟಿಗೆ!

ಆಗಾಗ ಮನೋಜ್ ತನ್ನ ವಿಷಯ ಹೇಳುತ್ತಿದ್ದ. ನಾವೆಲ್ಲ ಗುಂಪು ಕುಳಿತು ತಮ್ಮ ತಮ್ಮ ಊರು, ಅಪ್ಪ ಅಮ್ಮ, ನೆಂಟರು, ಮನೆ ವಿಷಯ ಬಂದಾಗ ಅವನು ಹೇಳುತ್ತಿದ್ದ, ‘ನೀವೆಲ್ಲ ಅದೃಷ್ಟವಂತರು. ನನಗೆ ಬುದ್ಧಿ ಬರುವುದಕ್ಕೆ ಮುಂಚೆಯೆ ಅಪ್ಪನನ್ನು ಕಳೆದುಕೊಂಡವನು.. ನನ್ನ ಅಮ್ಮ ಅವರ ಅಣ್ಣನ ಮನೆಯಲ್ಲಿ ಅಂದರೆ ನನ್ನ ಸೋದರ ಮಾವನ ಮನೆಯಲ್ಲಿ ಉಳಿದುಕೊಂಡಳು. ಸೋದರ ಮಾವ ನನ್ನ ಜೀವನ ರೂಪಿಸಿದವರು. ನಾನು ಇಷ್ಟು ಓದಿ, ಕೆಲಸ ಅಂತ ಸಿಕ್ಕಬೇಕಾದರೆ ಆ ಮಾವನೆ ಕಾರಣ.’ ಅವನ ಮಾತಿನಲ್ಲಿ ಬಹಳ ಕೃತಜ್ಞ ಭಾವ ತುಂಬಿ ತುಳುಕುತ್ತಿತ್ತು.

‘ನಾನು ಎಂದೂ ಮಾವನ ಮಾತು ಮೀರಿದವನಲ್ಲ. ಅವರು ಹಾಕಿದೆ ಗೆರೆ ದಾಟಿದವನಲ್ಲ. ನನ್ನ ಜೀವನದಲ್ಲಿ ಅವರಿಗೊಂದು ವಿಶೇಷ ಸ್ಥಾನ ಕೊಟ್ಟಿದ್ದೇನೆ.’

ನಾವೆಲ್ಲ ಅವನ ಆ ಕೃತಜ್ಞ ಮನಸ್ಸಿಗೆ ಖುಷಿಯಾಗಿದ್ದೆವು. ಯಾರ ಬಗೆಗೂ ಒಳ್ಳೆಯ ಅಭಿಪ್ರಾಯ ಹೊಂದಿರದ ಇಂದಿನ ಯುವಕರ ನಡುವೆ ಹೀಗೆ ಉಪಕರಿಸಿದ ಸೋದರ ಮಾವನ ಬಗೆಗೆ ಹೊಗಳುವುದು ಅಪರೂಪ.

ಮನೋಜ್ ಮನೋಜ್ಞವಾಗಿ ಹಾಡಬಲ್ಲ ಗಾಯಕ ಕೂಡ. ಹೆಚ್ಚು ಹೆಚ್ಚು ಮುಖೇಶ್ ಹಾಡುಗಳನ್ನು, ಅದರಲ್ಲೂ ದು:ಖ ಭರಿತ ವಿರಹ ಗೀತೆಗಳನ್ನು ನಾವೆಲ್ಲ ಕುಳಿತು ವಿರಾಮದಲ್ಲಿರುವಾಗ ಹಾಡುತ್ತಿದ್ದ.

’ಸುಂದರ ಹೆಂಡತಿ ಜೊತೆಗಿರುವಾಗ, ಕಿಶೋರನ ಹಾಡು ಬಿಟ್ಟು, ಇದೇನು ವಿರಹ ಗೀತೆ?’ ಅಂತ ನಾವು ತಮಾಷೆ ಮಾಡುತ್ತಿದ್ದೆವು. ಅವನು ಆಗೆಲ್ಲ ವಿಷಾದದ ನಗೆ ಅವನ ಮುಖದಲ್ಲಿ!

ನನಗೆ ಇವನ ಈ ರೀತಿಗೆ ಸ್ವಲ್ಪ ಕುತೂಹಲವಿತ್ತು. ಏನೋ ಅನುಮಾನ. ಒಮ್ಮೆ ಕೇಳಿಬಿಟ್ಟೆ. ’ಮನೋಜ್, ಏನೂ ಅಂದುಕೊಳ್ಳದಿದ್ದರೆ ಒಂದು ಪ್ರಶ್ನೆ. ನಿನ್ನ ಮದುವೆ ಯಾರು ಮಾಡಿದ್ದು?’

’ನನ್ನ ಸೋದರ ಮಾವ’

’ವಾವ್… ಎಂಥ ಒಳ್ಳೆಯ ಜನ! ಹುಡುಗಿಯನ್ನು ಹುಡುಕಿ ಮದುವೆವರೆಗೂ ಜವಾಬ್ದಾರಿ ತೆಗೆದುಕೊಂಡಿದ್ದಾರೆ!’

ಮನೋಜ್ ವಿಷಣ್ಣ ನಗೆ ನಕ್ಕ. ’ಹೌದು, ಅವರ ಮಗಳನ್ನೆ ಅಲ್ಲವೆ ನನಗೆ ಕಟ್ಟಿದ್ದು…’

ನಾನು ಅವಾಕ್ಕಾಗಿ ಕೇಳಿದೆ. ’ಓ, ಈ ವಿಷಯ ಹೇಳಿರಲೆ ಇಲ್ಲ. ಒಂಥರ ಲವ್ ಕಮ್ ಅರೇಂಜ್ಡ್ ಮದುವೆ!’

’ಅಲ್ಲ.. ಬರೀ ಅರೇಂಜ್ಡ್ ಮದುವೆ!’

’ಆಗ್ಲಿ… ಈಗ ಲವ್ ಜೀವನ ನಡೀತಿದೆಯಲ್ಲ. ನೀನು ಲಕ್ಕಿ!’

ಅವನ ಬಾಯಿಂದ ಕಟು ವಾಕ್ಯ ಬಂತು. ’ ನಾನು ಲವ್ ಮಾಡಿದವಳು ಬೇರೆ…. ಆಗಿದ್ದೇ ಬೇರೆ. ಈಗ ಯಾಕೆ ಈ ವಿಷಯ, ಬಿಡು’. ಅವನು ಅಷ್ಟು ಒರಟಾಗಿ ಮೊದಲ ಬಾರಿ ಮಾತಾಡಿದ್ದ.

ಇದಾದ ನಂತರ ನನ್ನ ಕುತೂಹಲ ಹೆಚ್ಚಾಯಿತು. ಸೂಕ್ಷ್ಮವಾಗಿ ಅವನನ್ನು ಗಮನಿಸತೊಡಗಿದೆ. ಅವನು ಹೆಚ್ಚು ನಮ್ಮ ಒಡನಾಟದಲ್ಲಿರುವುದು, ಮನೆಗೆ ರಾತ್ರಿ ತಡವಾಗಿ ಹೋಗುವುದು, ಹೆಂಡತಿಯನ್ನು ಎಲ್ಲಿಗೂ ಹೆಚ್ಚು ಕರೆದುಕೊಂಡು ಹೋಗದಿರುವುದು ಮತ್ತು ತವರು ಮನೆಗೆ ಈ ಊರಿಗೆ ಬಂದ ದಿನದಿಂದ ಕಳುಹಿಸದಿರುವುದು.

ಮನೋಜ್ ಅಂತರ್ಮುಖಿಯಾಗುತ್ತಿದ್ದಾನೆ ಅನ್ನಿಸಿತು. ಅವನಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದೆ. ಅವನಿಗೆ ಹೆಚ್ಚು ಸಿಕ್ಕದ ಹಾಗೆ ನಾವು ತಪ್ಪಿಸಿಕೊಳ್ಳತೊಡಗಿದೆವು. ಅವನಿಗೆ ಅದರ ಅರಿವಾಗಿರಬೇಕು. ಆಫ಼ೀಸ್ ಮುಗಿದ ಮೇಲೆ ಅವನು ಒಂಟಿಯಾಗಿ ಬಹಳ ದೂರ ನಡೆದುಹೋಗಿ ಬಿಡುತ್ತಿದ್ದ. ಒಂದು ದಿನ ಊರಾಚೆಯ ಕೆರೆಯ ಏರಿ ಹತ್ತಿ ಪಕ್ಕದ ಹಳ್ಳಿಯವರೆಗೆ; ಇನ್ನೊಮ್ಮೆ ದೂರದ ರೇಲ್ವೆ ಸ್ಟೇಷನ್ ಕಡೆಗೆ; ಮತ್ತೊಮ್ಮೆ ರೈಲ್ವೆ ಹಳಿಗಳ ಮೇಲೆ ನಡೆಯುತ್ತಾ ಬಹಳ ದೂರ ಸಾಗಿ, ತಡ ರಾತ್ರಿ ಮನೆ ಸೇರುತ್ತಿದ್ದ.

ಒಮ್ಮೆ ನನ್ನ ಬಳಿ ಎರಡು ಸಾವಿರ ಸಾಲ ಕೇಳಿದ. ಕೊಟ್ಟೆ. ಸಂಕೋಚ ಮಾಡಿಕೊಳ್ಳುತ್ತ ತೆಗೆದುಕೊಂಡ.

’ಏನೂ ಅಂದ್ಕೊಬೇಡ ಮಾರಾಯ. ಕೆಲವು ತಿಂಗಳ ಹಿಂದೆ ಒಂದು ಲೈಫ಼್ ಇನ್ಷೂರೆನ್ಸ್ ಪಾಲಿಸಿ ತೆಗೆದೆ. ಸ್ವಲ್ಪ ದೊಡ್ಡ ಪ್ರೀಮಿಯಮ್. ಅದೇ ಹೊರೆ. ಇನ್ನು ಸ್ವಲ್ಪ ತಿಂಗಳು ಮಾತ್ರ ಈ ತಾಪತ್ರಯ’ ಅಂದ. ನಾನೇನು ಆ ಬಗೆಗೆ ಕೇಳಲಿಲ್ಲ.

ಇದಾಗಿ ಎರಡು ತಿಂಗಳಲ್ಲಿ ಮತ್ತೆ ಮೂರು ಸಾವಿರ ಕೇಳಿದ. ಸಂಕೋಚಿಸುತ್ತ ಹೇಳಿದ. ’ನಿನ್ನ ಲೆಕ್ಕ ಮನೆಯಲ್ಲಿ ಬರೆದಿಟ್ಟಿದ್ದೇನೆ. ನಾನು ಅಥವ ನನ್ನ ಹೆಂಡತಿ ಖಂಡಿತ ವಾಪಸ್ ಕೊಡುತ್ತೇವೆ. ನನಗೆ ವಿಚಿತ್ರ ಅನ್ನಿಸಿತು ಅವನ ಮಾತು.

’ಪರವಾಯಿಲ್ಲ ಮನೋಜ್. ನನಗೇನೂ ತೊಂದರೆಯಿಲ್ಲ. ಆದಾಗ ಕೊಡು.’ ಅಂದೆ.

ಮತ್ತೆ ಒಂದು ವಾರದಲ್ಲೆ ’ಮೂರು ಸಾವಿರ ಬೇಕು’ ಅಂದ.

ಆ ಹಣ ತೆಗೆದುಕೊಂಡವನಿಗೆ ಏನನ್ನಿಸಿತೋ ಏನೊ, ’ನಿನ್ನ ಜೊತೆ ಅರ್ಧಗಂಟೆ ಮಾತಾಡೋದಿದೆ. ಬಾ’ ಎನ್ನುತ್ತ ದೂರದ ಜನರಿಲ್ಲದ ರಸ್ತೆಗೆ ಕರೆದುಕೊಂಡು ಹೊರಟ.

ನಾನು ಕೇಳದಿದ್ದರೂ ನಿಧಾನಕ್ಕೆ ಮಾತಾಡತೊಡಗಿದ.

’ನಿನಗೆ ಗೊತ್ತಿದೆಯಲ್ಲ ನನ್ನ ಮಾವನ ಹೊರೆ ನನ್ನ ಮೇಲೆ ಎಷ್ಟಿದೆ ಎಂದು. ಅವರಿಗೆ ನಾನು ಎಂದಿಗೂ ಋಣಿ. ಆದರೆ ಅವರು ಒಂದು ತಪ್ಪು ಮಾಡಿಬಿಟ್ಟರು. ಮಗಳನ್ನು ನನಗೆ ಗಂಟುಹಾಕಿ. ಸಣ್ಣ ವಯಸ್ಸಿನಿಂದ ಅವಳನ್ನು ನೋಡಿರುವ ಕಾರಣಕ್ಕೊ ಏನೊ ಮದುವೆಯಾಗುವ ಯೋಚನೆ ಅವಳ ಬಗೆಗೆ ಬಂದಿರಲಿಲ್ಲ. ಈ ಋಣದ ಕಾರಣದಿಂದ ಮದುವೆ ಬೇಡ ಅಂತಲೂ ಅನ್ನಲಿಲ್ಲ. ಈಗ ಮತ್ತೊಂದು ಋಣಭಾರ ಮಾವ ಹೊರಿಸಿದ್ದಾರೆ. ಅವಳಿಗೆ ಯಾವ ಕಷ್ಟವೂ ಬರದ ಹಾಗೆ ನೋಡಿಕೊಳ್ಳುವುದು. ಅದು ನನ್ನ ಜವಾಬ್ದಾರಿ ಕೂಡ. ಅದಕ್ಕೇ, ಹತ್ತು ಲಕ್ಷದ ವಿಮೆ ಮಾಡಿದ್ದೇನೆ. ಅದು ಅವಳಿಗೆ. ಮತ್ತೆ, ನನ್ನ ಇಷ್ಟು ವರ್ಷಗಳ ಸರ್ವೀಸಿನಿಂದ ಏಳೆಂಟು ಲಕ್ಷ ಖಂಡಿತ ಬರುತ್ತೆ. ಸಾಕಲ್ಲವ. ಜೀವನ ಸಾಗಿಸಲು. ಮಕ್ಕಳೂ ಇಲ್ಲವಲ್ಲ. ಅವಳು ಬೇಕಿದ್ದರೆ ಮತ್ತೊಂದು ಮದುವೆ ಮಾಡಿಕೊಳ್ಳಲಿ.’

ಮನೋಜನ ಮಾತಿನ ಧಾಟಿ ನನಗೆ ಗಲಿಬಿಲಿ ಹುಟ್ಟಿಸಿತು. ’ಅಲ್ಲ ಮನು, ಕೆಲಸ ಬಿಟ್ಟು, ಊರೂ ಬಿಡುವ ಆಲೋಚನೆಯ?’ ಅಂದೆ. ಅವನು ಮೌನ ವಹಿಸಿದ. ’ಈಗ ಬೇಜಾರಲ್ಲಿದೀಯ. ನಿಧಾನ ಯೋಚಿಸು. ಎಲ್ಲಕ್ಕೂ ಪರಿಹಾರವಿರುತ್ತೆ. ಹೆಂಡತಿಗೆ ಅನ್ಯಾಯ ಮಾಡಬೇಡ. ಇಷ್ಟೆ ನಾನು ಹೇಳೋದು’. ಆ ಮಾತಿಗೆ ಅವನು ಏನೂ ಮಾತಾಡಲಿಲ್ಲ.

ಒಮ್ಮೆ ಯಾರದೊ ಆತ್ಮಹತ್ಯೆ ವಿಷಯ ನಾವೆಲ್ಲ ಮಾತಾಡತೊಡಗಿದಾಗ, ಮನೋಜ್ ಬಹಳ ಆಸಕ್ತಿ ವಹಿಸಿದ. ’ಆತ್ಮಹತ್ಯೆ ಸುಲಭವಾಗಿ ಮಾಡಿಕೊಳ್ಳುವುದು ಹೇಗೆ?’ ಅಂತ ಕೇಳಿ ನಕ್ಕ. ’ಸುಲಭ ಯಾವುದೂ ಅಲ್ಲ. ಅದಕ್ಕೂ ಎಂಟೆದೆ ಬೇಕು’ ಅಂದೆ.

ಇದಾಗಿ ಒಂದು ತಿಂಗಳು ಕಳೆದಿರಬೇಕು.       ಒಂದು  ಬೆಳಿಗ್ಗೆ  ಕೆಟ್ಟ  ಸುದ್ದಿ  ಕಾದಿತ್ತು.     ಮನೋಜ್ ತನ್ನ ಕಛೇರಿಯ ಕಡತಗಳ ಕೋಣೆಯಲ್ಲಿ ನೇಣಿಗೆ ಶರಣಾಗಿಹೋದ! ನಾನು ನನ್ನ ಸ್ನೇಹಿತರು ದಿಗ್ಭ್ರಮೆಯಲ್ಲಿ ಮುಳುಗಿಬಿಟ್ಟೆವು.

ಕಛೇರಿಯಲ್ಲಿ ಅವನು ಕುಳಿತುಕೊಳ್ಳುವ ಟೇಬಲ್ ತಪಾಸಣೆ ಮಾಡಲಾಯಿತು. ಅದರಲ್ಲಿ ಮನೋಜನ ಹೆಸರಿಗೆ ಒಂದು ಪತ್ರವಿತ್ತು. ’ಮೀನಾ’ ಅನ್ನುವ ಹೆಣ್ಣಿನದು. ಅಲ್ಲಿ ಆ ದಿನದ ಪತ್ರಿಕೆ ಇತ್ತು. ಪೊಲೀಸರ ಕ್ಷಮಕ್ಷಮ ತಪಾಸಣೆ ಮಾಡಿದಾಗ ಐದನೆ ಪುಟದ ಮೂಲೆಯಲ್ಲಿ ಸಾಗರದ ಹೆಣ್ಣುಮಗಳೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಇತ್ತು. ಆ ಹೆಣ್ಣಿನ ಹೆಸರು ’ಮೀನಾ’.

ಮೀನಾಳ ಪತ್ರದಲ್ಲಿ ಇಷ್ಟೇ ಇತ್ತು. ’ ಮನೋಜ್, ನಿನ್ನಂಥ ಹೇಡಿಯನ್ನು ಪ್ರೀತಿಸಿದ್ದು ನನ್ನ ವಿಧಿ ಅಂದುಕೊಳ್ಳುತ್ತೇನೆ. ನನ್ನ ಮದುವೆಯಾದ ಮೇಲೆ ಅಂದುಕೊಂಡಂತೆ ಜೀವನ ಸಾಗಲಿಲ್ಲ. ಯಾರಿಗೋ ಮೋಸ ಮಾಡುತ್ತ ಜೀವನ ಸಾಗಿಸುವ ದುರ್ಭರತೆ ಸಹಿಸಿಕೊಳ್ಳುವಷ್ಟು ನಾನು ಗಟ್ಟಿಯಿಲ್ಲ. ಹಾಗಾಗಿ ಹೋಗುತ್ತಿದ್ದೇನೆ. ಮುಂದಿನ ಜನ್ಮದಲ್ಲಿ ಸಿಕ್ಕು. ಆದರೆ ಮೂರ್ಖನಾಗಿ ಸಿಕ್ಕಬೇಡ.’

ತಡರಾತ್ರಿ ಮನೋಜನ ತಾಯಿ ಮತ್ತು ಸೋದರ ಮಾವ ಬಂದರು. ಪೋಸ್ಟ್ ಮಾರ್ಟಂ, ಇತ್ಯಾದಿಗಳಿಗೆ ನಾವೆಲ್ಲ ಓಡಾಡಿದೆವು.    ಅವನ ದೇಹ ಇದೇ ಊರಲ್ಲಿ ಸುಡಲಾಯಿತು.    ಮುಂದಿನ   ಕಾರ್ಯಗಳನ್ನು  ಊರಲ್ಲಿ ಮಾಡುತ್ತೇವೆಂದು ಮನೋಜನ ಮಾವ ಹೇಳಿದರು.    ಮಗಳನ್ನು ಕರೆದುಕೊಂಡು ತನ್ನೂರಿಗೆ ಮರುದಿನ ಹೊರಟೂ ಬಿಟ್ಟರು. ಇದ್ದಷ್ಟೂ ಸಮಯ ಅವರು ಗಂಭೀರವಾಗೇ ಇದ್ದರು. ಅವರು ಮಗಳಿಗಾದ ಆಘಾತದ ಭಾಗವಾಗಿ ಕಂಡರು. ಮನೋಜನ ತಾಯಿಯ ದು:ಖ ಹೇಳತೀರದಾಗಿತ್ತು.

ಅವರು ಹೋಗುವಾಗ ನನ್ನ ವಿಳಾಸ, ಮೊಬೈಲ್ ನಂಬರು ಕೊಟ್ಟಿದ್ದೆ. ಏನೇ ವಿಷಯವಿದ್ದರೂ ಫ಼ೋನಿನಲ್ಲಿ ಮಾತಾಡಲು ಹೇಳಿದೆ. ಇಲ್ಲಿ ಆಗಬೇಕಾದ ಕೆಲಸ ಗೆಳೆಯರೆಲ್ಲ ನೋಡಿಕೊಳ್ಳುತ್ತೇವೆ ಅಂದಿದ್ದೆ.

ಆ ಪತ್ರದಲ್ಲಿ ಮನೋಜ್ ಈಡಿಯಟ್ ಅಂತ ಆ ಮಾವ ಬರೆದದ್ದು ದು:ಖವೆನಿಸಿತು. ನಾನೆ ಅವರಿಗೆ ಕಾಲ್ ಮಾಡಿದೆ.

’ಸರ್.. ನಿಮ್ಮ ಪತ್ರ ಬಂದಿದೆ. ಮನೆ ಅಡ್ವಾನ್ಸ್ ಹಣಕ್ಕೆ ಚೆಕ್ ಕೊಡುತ್ತಿದ್ದಾರೆ. ಅದನ್ನು ನಿಮ್ಮ ಮಗಳ ಖಾತೆಗೆ ಹಾಕುತ್ತೇನೆ. ಅಂದಹಾಗೆ, ಸರ್..ಎಲ್ಲಾ ತಪ್ಪು ಮನೋಜನದೇ ಅನ್ನುತ್ತೀರ. ಅವನ ಮದುವೆ ಕೇಳಿ ಮಾಡಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ ಅನ್ನಿಸುತ್ತೆ. ಹೋಗಲಿ ಬಿಡಿ, ಈಗ ಅವೆಲ್ಲ ಮುಗಿದ ವಿಷಯ. ನೀವು ಅವನಿಗೆ ಈಡಿಯಟ್ ಅಂತ ಅಂದಿರಲ್ಲ ಅದಕ್ಕೆ ಹೇಳಿದೆ’

ಅತ್ತ ಕಡೆಯಿಂದ ಅವರ ಧ್ವನಿ,   ‘ನೋಡಿ, ಅವನನ್ನು ಮಗನ ಥರ ನೋಡಿಕೊಂಡೆ.     ಅನಾಥ  ಪ್ರಜ್ಞೆ ಅವನನ್ನು ಕಾಡಬಾರದೆಂದು ಕಷ್ಟಗಳಿಲ್ಲದ ಹಾಗೆ ಬೆಳೆಸಿದೆ. ಅವನಿಗೆ ಸ್ವಾತಂತ್ರ್ಯ ಕೇಳದೆಯೆ ಕೊಟ್ಟೆ. ಮದುವೆ ನಿಶ್ಚಯಿಸಿದಾಗ ಅವನಿಗದು ಒಪ್ಪಿಗೆಯಿಲ್ಲ ಅಂತ ಹೇಳ ಬಹುದಿತ್ತು.     ಮುಖಹೇಡಿಯಾದ. ಇವತ್ತು ನಾನು ಮಾಡಿದ ಒಳ್ಳೆಯತನ ನನ್ನ ಮಗಳಿಗೆ ಮುಳುವಾಯಿತು, ಅಷ್ಟೆ.’ ನಿಡುಸುಯ್ದರು.

‘ಸರ್… ಅವನ ನಿಮ್ಮ ಬಗೆಗಿನ ಕೃತಜ್ಞತೆ ಏನನ್ನೂ ಹೇಳದಂತೆ ಮಾಡಿದೆ’

‘ಅದಕ್ಕೇ ಅವನನ್ನು ಈಡಿಯಟ್ ಅಂದದ್ದು. ಗೆಳೆಯನ ರೀತಿ ಬೆಳೆಸಿದರೂ.. ಅರ್ಥ ಮಾಡಿಕೊಳ್ಳದೆ ಹೋದ. ಅದು ಕೃತಜ್ಞತೆಯಲ್ಲ. ಅವನಲ್ಲಿದ್ದ ಹೇಡಿತನ. ಅವನು ಕೀಳರಿಮೆಯಲ್ಲಿ ತೊಳಲುತ್ತಿದ್ದ ಅನ್ನುವುದು ನನಗೆ ತಿಳಿಯಲೆ ಇಲ್ಲ. ನನ್ನ ಮಗಳಿಗೆ ಮತ್ತೆ ಇನ್ನೊಂದು ಹೆಣ್ಣಿಗೂ ಅನ್ಯಾಯ ಮಾಡಿದವನು. ಕೃತಜ್ಞ ಪದ ಅವನಿಗೆ ಒಪ್ಪುವುದಿಲ್ಲ.’ ಅಂದರು.

‘ಆಯ್ತು ಬಿಡಿ ಸರ್. ನಿಮಗೆ ಬೇಸರ ಮಾಡಲು ಇಷ್ಟವಿಲ್ಲ. ಅಂದಹಾಗೆ, ಇನ್ನೆರಡು ತಿಂಗಳಲ್ಲಿ, ಡಿಪಾರ್ಟ್ಮೆಂಟಿನಿಂದ ಹಣ ಬರುತ್ತೆ ಸರ್. ನಿಮಗೆ ಮತ್ತೊಂದು ವಿಷಯ ಗೊತ್ತಿರಲಿ ಸರ್.. ಅವನು ಹತ್ತು ಲಕ್ಷ ವಿಮೆ ಮಾಡಿಸಿದ್ದ. ಸದ್ಯಕ್ಕೆ ಅದೂ ಬರುತ್ತೆ’ ಅಂದೆ.

ಅತ್ತಕಡೆಯಿಂದ ವಿಷಾದದ ನಗು ಕೇಳಿಸಿತು. ‘ನೋಡಿ, ಅವನು ಈ ವಿಷಯದಲ್ಲೂ ಈಡಿಯಟ್. ತಾನು ಮಾಡಿದ ವಿಮೆಯ ಹಣ ಬರುವುದಿಲ್ಲ ಅನ್ನುವುದೂ ಅವನಿಗೆ ಗೊತ್ತಿರಲಿಲ್ಲ’

ನಾನು ಹತಾಷೆಯಲ್ಲಿ ಮಾತು ಮರೆತೆ. ಮನೋಜನ ಮಾವ ಮತ್ತೇನನ್ನೋ ಹೇಳುತ್ತಲೇ ಇದ್ದರು. ನಾನು ಗರಬಡಿದಂತೆ ಮೌನವಾದೆ.

ವಿಮಾ ಕಛೇರಿಯ ನನ್ನೊಬ್ಬ ಗೆಳೆಯನನ್ನು ಆ ದಿನವೆ ಸಂಪರ್ಕಿಸಿದೆ. ಮನೋಜ್ ಮಾಡಿರುವ ವಿಮಾ ಪಾಲಿಸಿಯ ಹಣ ಸಿಕ್ಕದಿರುವ ಬಗೆಗೆ ಕಾರಣ ಕೇಳಿದೆ. ವಿಚಾರಿಸಿ ಹೇಳುತ್ತೇನೆ ಅಂದ. ಮರುದಿನ ಕಾಲ್ ಮಾಡಿದ.

’ಮನೋಜ್, ಹತ್ತು ಲಕ್ಷದ ವಿಮೆ ತೆಗೆದುಕೊಂಡದ್ದು ಸರಿ. ವಿಮೆ ಒಂದು ನಿರ್ದಿಷ್ಟ ಅವಧಿಯವರೆಗೆ ಸರಿ ಕಂತುಗಳಲ್ಲಿ ಕಟ್ಟಿದ್ದರೆ ಮಾತ್ರ ಹಣ ದೊರಕುತ್ತೆ. ಇಲ್ಲಿ ಬಹಳ ಬೇಜಾರಿನ ವಿಷಯವೆಂದರೆ ಆ ನಿರ್ದಿಷ್ಟ ಅವಧಿ ಪೂರ್ಣವಾಗುವ ಎರಡು ದಿನ ಮೊದಲೆ ಮನೋಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ವಿಮೆ ಹಣ ಸಿಕ್ಕಿಲ್ಲ!!’

ಎಷ್ಟು ಸರಳನಿದ್ದ ಮನೋಜ್! ಕೃತಜ್ಞ ಮನಸ್ಸಿನವನು. ಹೀಗೇಕೆ ದುರಂತಗಳ ರೂವಾರಿಯಾದ? ವಿಮೆಯ ಹಣವೂ ಅವನ ಆಸೆಯಂತೆ ಹೆಂಡತಿಗೆ ಸಿಕ್ಕಲಿಲ್ಲ. ಇಲ್ಲಿ ಕೂಡ ಅವನು ಮೂರ್ಖನೇ ಆಗಿಬಿಟ್ಟ! ಆ ದಿನ ಮನೋಜನಿಗೆ ದಿನಪತ್ರಿಕೆ ಸಿಕ್ಕದಿರುತ್ತಿದ್ದರೆ…. ಅಥವ ’ಮೀನಾ’ ಸುದ್ದಿ ಅವನ ಕಣ್ಣಿಗೆ ಬೀಳದಿರುತ್ತಿದ್ದರೆ…., ಹೀಗೆ ಆಗಿಹೋದ ದುರಂತಕ್ಕೆ ’ರೆ…’ಗಳ ಊಹೆ ಭಾರವಾದ ತಲೆಯಲ್ಲಿ ಓಡತೊಡಗಿತು. ಅವನು ಎಲ್ಲರನ್ನೂ ತೊರೆದು ಆತ್ಮಹತ್ಯೆಯ ಸನ್ನಾಹದಲ್ಲಿದ್ದನೆಂಬುದು ನನಗೆ ಮತ್ತು ಗೆಳೆಯರಿಗೆ ಹೊಳೆಯಲೇ ಇಲ್ಲ. ಸ್ನೇಹಿತನ ಮನಸ್ಸು ಅರಿಯಲಾಗದ ನಾನೂ ಒಬ್ಬ ಮೂರ್ಖನೇ ಅಲ್ಲವೆ…? ಮನಸ್ಸು ಹೀಯಾಳಿಸುತ್ತಿತ್ತು.

******

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟ: ಓದುವ ಕೊಂಡಿ: http://kannada.pratilipi.com/anantha-ramesh/moorkha)

(ಚಿತ್ರ ಕೃಪೆ : ಅಂತರ್ಜಾಲ)

ನಿಯಮ ಮೀರಿದವನು

kid1

                                                                          

ಹೀಗೇ ಹಳೆ ದಿನಗಳನ್ನು ಕೆದುಕುತ್ತಾ ಕೂರುವುದು ಅಥವ ಒಂದೊಳ್ಳೆಯ  ಕಾದಂಬರಿ ಓದುವುದು, ಎರಡೂ ಸುಖವೇ. ಈ ದಿನ ಮನಸ್ಸು ಇಪ್ಪತ್ತು ವರ್ಷಗಳ ಹಿಂದು ಅಯಾಚಿತ ಓಡಿತು. ಆ ದಿನಗಳಲ್ಲಿ ನನ್ನ ಕಾಲುಗಳು ಪೆಡಲ್ಲುಗಳ ತುಳಿದು ಬೈಸಿಕಲ್ಲನ್ನು ಕಾಲೇಜುವರೆಗು ಸವೆಸಿ ಮುಟ್ಟಿಸುತ್ತಿದ್ದ ನೆನಪು.

ಹಾಗೆ ಹೋಗುವಾಗಲೆಲ್ಲ  ನಿತ್ಯವೂ   ದಾರಿ ಮಧ್ಯೆ   ಹತ್ತರ ಒಬ್ಬ ಹುಡುಗ  ನನಗೆ  ಎದುರಾಗುತ್ತಿದ್ದ.     ಮುಗ್ಧ ನಗುವಿನ, ಅಗಲ ಕಣ್ಣಿನ, ಮುರಿದ ಹಲ್ಲ, ಹಾಲುಗಲ್ಲದ, ಭುಜಕ್ಕಂಟಿದ ಭಾರ ಚೀಲದ, ನಡು ಬಗ್ಗಿ, ತಲೆ ಎತ್ತಿ ಕಾಯುತ್ತ, ನನ್ನ ನೋಡಿ ಮೋಡಿ ಧ್ವನಿಯಲ್ಲಿ ’ ಬಿಡು ನನ್ನ ಅಲ್ಲೀವರೆಗೆ ’ ಅನ್ನುತ್ತಾ, ಹುಸಿನಗುತ್ತ ಹಿಂದೆ ಕೂರುತ್ತಿದ್ದ!

ಒಂದು ಕಿಲೋಮೀಟರು; ತುಳಿದು ಆ ಹುಡುಗನ ಇಳಿಸುತ್ತಿದ್ದೆ.  ’ಬರ್ಲಾ ಅಣ್ಣ’ , ಪುಟಿವ ಹೆಜ್ಜೆ; ಕಣ್ಣ ಹೊಳಪು; ಸಣ್ಣ ನಗೆ. ಅವನು ಮರೆಯಾಗುವವರೆಗೆ ನೋಡುತ್ತಿದ್ದೆ.      ಆ ಪುಟ್ಟ ಕಾಯದ ಆಯಾಸ ಸ್ವಲ್ಪವಾದರೂ ಕಡಿಮೆ ಮಾಡಿದ ಖುಶಿ ನನ್ನೊಳಗೆ.    ಈ ರೀತಿ ಎಷ್ಟು ದಿನಗಳು ಕಳೆದುವೊ, ಅವನ ಆಯಾಸ ಎಷ್ಟು ಇಳಿದುವೊ, ನಮ್ಮಿಬ್ಬರಲ್ಲಿದ್ದದ್ದು ಮಾತ್ರ, ಮೌನ ಸಂಭಾಷಣೆ;   ಸಣ್ಣ ನಗು.

ನನಗೆ ಕೆಲಸವಾಗಿ ಬಹಳ  ಋತುಗಳು ಉರುಳಿದುವು  ಮತ್ತು  ನಾನು ಸವಾರಿಸಿದ  ಸೈಕಲ್ಲು ಗುಜರಿಯಾಗಿ ವರ್ಷಗಳು ಸರಿದುವು. ಈಗ ನನ್ನೂರು ಬಿಟ್ಟು ಕೆಲಸಕ್ಕೆ ದೊಡ್ಡ ಊರು ಸೇರಿದ್ದೇನೆ. ಬಿಡುವಿನಲ್ಲಿ ಊರಿಗೆ ಬರು; ಒಂದೆರಡು ದಿನವಿರು; ಪಟ್ಟಣಕ್ಕೆ ಮುಖವಿಡು; ಬಂದು ಹೋಗಲು ಬೈಕು ಬಂದಿದೆ. ಹಾಗೆಯೆ ನನ್ನ ಸವಾರಿ ಮಾಡುತ್ತಿರುವುದು ಈ ಬೆನ್ನ ನೋವು.

ಕಾಡುವ ಆ ಕಳೆದ ದಿನಗಳು. ಗೆಳೆಯರ ಗುಂಪು, ಗುಲ್ಲೆಬ್ಬಿಸುವ ಉತ್ಸಾಹದ ದಂಡು. ಏನನ್ನೊ ಸಾಧಿಸಲು ಹಂಬಲಿಸುವ ತುಡಿತಗಳು.   ಕಾಲೇಜಿನ ಕಾರಿಡಾರುಗಳಲ್ಲಿ ನನ್ನ ಮನಸ್ಸನ್ನು ಅರಳಿಸುತ್ತಿದ್ದ ಕೆಲವರು. ಒಳಗೆ ಆಗಾಗ ಬೆಚ್ಚಗಾಗಿಸುತ್ತಿದ್ದ ಅವೆಲ್ಲವೂ ಈಗ ನೆನಪುಗಳಲ್ಲಿ ಆಗಾಗ ಸವಾರಿ ಮಾಡಿ ಹೋಗುತ್ತವೆ.

ಕುಳಿತು ಯೋಚಿಸುವಾಗ ವಾಸ್ತವದ ಬರ ಕಾಡುತ್ತದೆ.    ಆ ಹಸಿರ ದಿನಗಳು ಸರಿದು ಹೋದುವೆಲ್ಲವು.   ಯೌವನ  ಮುದುಡಿ,  ದೇಹ  ಕಸುವು   ಕುಸಿದು,   ಪುಟಿಯದ  ಉತ್ಸಾಹ,   ಉಗ್ಗದ  ಉಲ್ಲಾಸ  ನನ್ನ ಆವರಿಸಿಬಿಟ್ಟಿದೆ! ಬಯಸುವ ಆ ಹಳೆಯದೆಲ್ಲ ಉಳಿಯಲೊಲ್ಲದು ಏಕೆ?  ಮತ್ತೆ ಬಾರದು ಏಕೆ?  ಹಾಗೆಯೆ ಈ ಬದಲಾವಣೆಗಳದೇಕೆ?   ಹೀಗೆ ಶಪಿಸುತ್ತ, ಪರಿತಪಿಸುತ್ತ ಇದ್ದೆ.

                                                                                   

ಈ ದಿನ ಇದ್ದಕ್ಕಿದ್ದಂತೆ ಹಳೆ ನೆನಪು ಕಾರಣವಿಲ್ಲದೆ ಮತ್ತೆ ಮರುಕಳಿಸಿದೆ.    ಆ ಕಲ್ಲು ಕಟ್ಟಡದ ಕಾಲೇಜು. ದೊಡ್ಡ ಕಿಟಕಿಗಳ, ಭದ್ರ ಸ್ತಂಭಗಳ, ಸಿಮೆಂಟಿನ ದೊಡ್ಡ ಕಪ್ಪು ಬೋರ್ಡುಗಳ, ಹರಡಿಕೊಂಡ ಡೆಸ್ಕುಗಳ, ಅದರಲ್ಲಿ ತುಂಬಿಕೊಂಡ  ಚಿತ್ರವಿಚಿತ್ರ  ಮನಸ್ಸಿನ ಗೀಚುಗಳ,  ಉಲ್ಲಾಸ  ತುಂಬಿಕೊಂಡಿರುತ್ತಿದ್ದ  ಅನೇಕ  ತರಗತಿಗಳ ನೆನಪುಗಳು ಜೋತುಬೀಳುತ್ತಿವೆ ನನ್ನೊಳಗೆ.        ಅವೆಲ್ಲ ಬದಲಾಗದ ಸ್ಥಾವರಗಳು ಅನ್ನುವ ಭರವಸೆ. ಅವನ್ನೆಲ್ಲ ಈದಿನ ಕಾಣಲೇ ಬೇಕು ಅನ್ನುವ ತುಡಿತ. ತಡಮಾಡದೆ ಹೊರಟೆ…

ಆಗಲೆ  ಥಟ್ಟನೆ  ಬಂದ  ಚಿತ್ತಕ್ಕೆ.   ದಾರಿ ಮಧ್ಯದಲ್ಲಿ ದಿನವೂ ಸಿಕ್ಕುತ್ತಿದ್ದ  ಆ ಮುಗ್ಧ ಬಾಲಕ. ದಶಕದ ಹತ್ತಿರದ ಹುಡುಗ. ಕೌಮಾರ್ಯದವನು; ಬೆಳೆಯಲಿದ್ದವನು;  ಬದಲಾವಣೆಯ ಹೊಸ್ತಿಲವನು ;  ವೇಗ ನಡಿಗೆಯಿದ್ದವನು, ಈಗ ಹೇಗಿದ್ದಾನು, ಗುರುತಾಗುವನೇನು?

ಎಷ್ಟು ಬದಲಾದನೊ! ಊಹಿಸುವಷ್ಟು ಎತ್ತರ ಬೆಳೆದಿದ್ದಾನು.    ದೇಹ ಪುಷ್ಟಗೊಂಡು,  ಬಾಹುಗಳು ಬಹಳಷ್ಟು ಸುತ್ತು ಹೆಚ್ಚಿಸಿಕೊಂಡಿದ್ದಾನು.    ಮುಖದಲ್ಲಿ ಮೊಡವೆಗಳು ಮೂಡಿ,   ಮಾಸಿ ಗುರುತು ಬಿಟ್ಟಿರಬಹುದೇನು. ರೋಮಗಳು  ಬೆಳೆದ  ಚಿನ್ಹೆಗಳೊಂದಿಗೆ  ಮತ್ತು  ಕಣ್ಣುಗಳಲ್ಲಿ  ಆ ಮುಗ್ಧತೆ ಕಳೆದು  ಏನನ್ನೊ  ಮೀರುವ  ಹವಣಿಕೆಯಲ್ಲಿರಬಹುದೇನು?    ಅಂದು  ಹತ್ತರವನು  ಈಗ  ಮೂವತ್ತರ ಆಸುಪಾಸಿನವನು.

ಹಾಗೆ ಯೋಚಿಸುತ್ತಿರುವಾಗಲೆ ಅದೇ ಜಾಗಕ್ಕೆ ಬಂದುಬಿಟ್ಟಿದ್ದೇನೆ. ಆ ಹುಡುಗ ಸಿಕ್ಕಬಹುದೆ, ನಾನವನ ಗುರುತು ಹಿಡಿಯಬಹುದೆ ಅಥವಾ ಅವನಿಗೆ ನನ್ನ ಪರಿಚಯವಾಗಬಹುದೆ?

ಅರೆ ! ಅಲ್ಲೆ ರಸ್ತೆ ಬದಿಯಲ್ಲೆ ನಿಂತು ನಿರೀಕ್ಷಿಸುತ್ತಿದ್ದಾನೆ.     ಅದೊ ಅದೇ ಹುಡುಗ!    ಅಷ್ಟೇ ಎತ್ತರ!! ಗರಬಡಿದಂತೆ ಬೈಕು ನಿಲ್ಲಿಸಿಬಿಟ್ಟೆ.

ಲಗುಬಗೆಯಲ್ಲಿ ಅವನು ಬಂದೇ ಬಂದ ಬಳಿಗೆ. ನಸು ನಕ್ಕು,   ’ ಅಲ್ಲೀವರೆಗೆ ಬಿಡು ಅಣ್ಣ’.   ಅದೇ ಹಳೆ ಧ್ವನಿ ಮತ್ತದೇ ನಗು! ಕುಳಿತೇ ಬಿಟ್ಟ ಬೆನ್ನಿಗವನು. ಹುಟ್ಟಿನೊಡನಾಡಿಯಂಥವನು !

ಏನಾಯಿತು?   ಹೀಗೇಕಾಯಿತು?   ಪ್ರಕೃತಿಗೆ  ಸೆಡ್ಡು  ಹೊಡೆದು  ಇದೀಗ  ನನ್ನ  ಬೈಕಿನ  ಹಿಂದೆ  ಪುಟ್ಟ ಸವಾರಿಯಲ್ಲಿರುವ  ’ಇವನು’ ಯಾರು?!

’ಬೀಸ್ ಸಾಲ್ ಬಾದ್’ ನ ಈ ಘಟನೆಗೆ ಭಯದಲ್ಲಿ ಬೆಚ್ಚಿದೆ. ಅಗಲ ಅಕ್ಷಿಯ ಹಾಲ್ಗೆನ್ನೆಯ ಮುರಿದ ಹಲ್ಲಿನ ಕಿರು ನಗೆಯ ಮತ್ತದೇ ಕಾಯ. ದನಿಯಲ್ಲೂ ಕೌಮಾರ್ಯ ಉಳಿಸಿಕೊಂಡವನು !?     ಯಾರು,    ಯಾರೀತ!

ನನ್ನದೀಗ ಬೆವರಿಡುವ ದೇಹ;  ಭೇರಿಸುತ್ತಿರುವ  ಸಪ್ಪಳದ  ಹೃದಯ!     ಇವನೆಲ್ಲಿಯವನು?     ಅಮರತ್ವದ ಮಗ್ಗುಲವನು.    ಇದುವರೆಗೂ   ಇವನಿದ್ದ  ಠಾವೇನು?   ಬದಲಾವಣೆ  ’ಬೇಡ’ದ   ನನ್ನೊಳಗೆ ವಿಹ್ವಲತೆಯ ಊರಿಬಿಟ್ಟವನು !

ಓಡಿಸಿ ಒಂದೇ ಕಿಲೋಮೀಟರು; ನಿಲ್ಲಿಸಿದ್ದೇ ಬೈಕು. ’ಬರ್ಲಾ ಅಣ್ಣ’ ಅನ್ನುತ್ತ, ಅದೇ ಸಣ್ಣ ನಗೆ ಬೀರುತ್ತ ನಿರಾಳ ಹೊರಟ.    ’ಹಿಡಿಯಲಾದೀತೆ ಇವನ ಈ ಚಿಣ್ಣನ !’

ಮನಸ್ಸು ಕೂಗತೊಡಗಿತು,  ’ಬೇಡ, ಹೋಗಲಿ..    ಹೊರಟು ಹೋಗಲಿ… ಬದಲಾಗದವನು,  ಜಗದ ನಿಯಮ ಮೀರಿದವನು .

ಮನಸ್ಸು ಬೇಡುತ್ತಿತ್ತು  ’ಅವನು ಹಿಂತಿರುಗದಿರಲಿ!’

                                                                                ***

(ಕನ್ನಡ ಪ್ರತಿಲಿಪಿ ಇ ಪತ್ರಿಕೆಯಲ್ಲೂ ಓದಬಹುದು, ಲಿಂಕ್: http://kannada.pratilipi.com/anantha-ramesh/niyama-meeridavanu)

ಕೃಷ್ಣ ಚೆಲುವೆಯ ಚಿತ್ರ

updated_pic

ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, ‘ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ ಕೊಡಲು ಸ್ವಲ್ಪ ತಡವಾಯಿತು’.

ಸುದೀಪ ಕೊಟ್ಟ ಆ ಫ಼ೋಟೊ ನೋಡುತ್ತ ರಾಜು ಕಣ್ಣುಗಳಲ್ಲಿ ನೀರು ತುಂಬಿಕೊಂಡ. ‘ನಿಮ್ಮಿಂದ ತುಂಬಾ ಉಪಕಾರವಾಯಿತು. ನನ್ನ ಹೆಂಡತಿಯ ನೆನಪಿಗೆ ಇದಕ್ಕಿಂತ ಒಳ್ಳೇದು ನಾನಿನ್ನೇನೂ ನಿರೀಕ್ಷೆ ಮಾಡ್ಲಿಲ್ಲ. ನಿಮ್ಮ ಕ್ಯಾಮರಾದಲ್ಲಿ ಆದಿನ ಫ಼ೋಟೊ ತೆಗೆಯದೆ ಹೋಗಿದ್ದರೆ ಅವಳ ನೆನಪಿಗೆ ಅಂತ ನನ್ನ ಹತ್ರ ಇನ್ನೇನೂ ಇರ್ಲಿಲ್ಲ’

ಸುದೀಪ ದೀರ್ಘ ನಿಟ್ಟುಸಿರು ಬಿಟ್ಟ. ಅವನ ಮುಖದಲ್ಲೀಗ ದಿವ್ಯ ಸಮಾಧಾನವಿತ್ತು.

ಸುದೀಪನ ಅಮ್ಮ ಅಪ್ಪ ದೆಹಲಿಯಲ್ಲಿ ವಾಸ್ತವ್ಯದಲ್ಲಿದ್ದಾರೆ. ಸುದೀಪ ಬೆಂಗಳೂರಿನಲ್ಲಿ ದೊಡ್ಡ ಕಂಪನಿಯಲ್ಲಿ ಉದ್ಯೋಗಿ ಮತ್ತು ಈಗಿರುವ ದೊಡ್ಡ ಬಂಗಲೆಯ ಒಡೆಯ. ರಾಜು ಇಲ್ಲಿ ಮನೆಯ ಕೆಲಸ ಸುಮಾರು ಎರಡು ವರ್ಷದಿಂದ ಮಾಡುತ್ತಿದ್ದಾನೆ.

ಸುದೀಪನಿಗೀಗ ಕಳೆದ ಎರಡು ತಿಂಗಳುಗಳಿಂದ ನಡೆದುಹೋದ ಘಟನೆಗಳು ನೆನಪಿನ ತೇರಾಗಿ ಉರುಳತೊಡಗಿದವು.

ಆಗಸ್ಟ್ ತಿಂಗಳಲ್ಲಿ ರಾಜು ತನ್ನ ಊರಿಗೆ ಒಂದು ವಾರದ ರಜಾ ಹಾಕಿ ಹೋಗಿದ್ದ. ಹೋಗುವಾಗ ತಲೆ ಕೆರೆಯುತ್ತಾ ಹೇಳಿದ್ದ. ‘ಅಣ್ಣ, ನನ್ ಮದ್ವೆ ಊರಲ್ಲಿದೆ. ನನ್ ಮಾವ್ನ ಮಗ್ಳೆ ಅವ್ಳು. ಅವ್ರೂ ಬಡವ್ರೇ. ಜಾಸ್ತಿ ಖರ್ಚು ಇಲ್ದೆ ಮದ್ವೆ. ಕರ್ದಿಲ್ಲ ಅಂತ ಅನ್ಕೊ ಬೇಡಿ. ನಾನು ಹೆಂಡ್ತಿ ಜೊತೆ ನಿಮ್ಮ್ ಔಟ್ ಹೌಸ್ನಲ್ಲಿರ್ತೀನಿ. ಅವ್ಳೂ ಈ ಮನೆ ಕೆಲ್ಸ ಮಾಡ್ಕೊಂಡಿರ್ತಾಳೆ. ಆಗ್ಬಹುದಾ?’

ಸುದೀಪ ಗೋಣುಹಾಕಿ, ‘ಆಯ್ತು ರಾಜು, ಮನೆ ಇಬ್ರು ಸೇರಿ ನೀಟಾಗಿಡಿ, ಸಂಬಳ ಎಲ್ಲ ಆಮೇಲೆ ಮಾತಾಡೋಣ’ ಅಂದಿದ್ದ.

ಅದಾಗಿ ಒಂದು ವಾರ ಕಳೆದು ರಾಜು ಪತ್ನಿ ಸಮೇತ ಹಾಜರು. ಇಬ್ಬರೂ ಸುದೀಪನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಅವನು ರಾಜುಗಿಂತ ಮೂರು ನಾಲ್ಕು ವರ್ಷ ದೊಡ್ಡವನಿರಬಹುದು. ಇಬ್ಬರೂ ‘ಅಣ್ಣಾ’ ಅಂತ ನಮಸ್ಕರಿಸುವಾಗ ಅವನಿಗೆ ಏನು ಹೇಳಲೂ ಗೊತ್ತಾಗಲಿಲ್ಲ. ಅವರಿಬ್ಬರಿಗು ಉಡುಗೊರೆಯಾಗಿ ಸ್ವಲ್ಪ ಹಣ ಕವರಿನಲ್ಲಿಟ್ಟು ಕೊಟ್ಟ.

ಸುದೀಪ ಆ ದಿನ ರಾಜೂನ ಹೆಂಡತಿಯನ್ನು ನೋಡಿದ್ದು. ಕೃಷ್ಣ ಸುಂದರಿ. ಸ್ವಲ್ಪ ಸಂಕೋಚ ಸ್ವಭಾವ. ಆದರೆ, ರಾಜೂನ ಜೊತೆ ಬಹಳ ಸಲಿಗೆ ಮತ್ತು ನಗು ಇತ್ತು. ಇಬ್ಬರೂ ಲವ್ ಬರ್ಡ್ಸ್ ಥರ ಕಾಣಿಸಿದ್ದರು! ರಾಜು ಅವಳನ್ನು ಕರೆಯುತ್ತಿದ್ದದ್ದು ’ಸುವ್ವಿ’ ಅಂತ. ಅವಳ ಪೂರ್ತಿ ಹೆಸರು ಏನೆಂದು ಸುದೀಪ ಕೇಳಲಿಲ್ಲ.

ಒಂದು ರಜಾ ದಿನ ಸುದೀಪ ಕ್ಯಾಮರಾ ಹೆಗಲಿಗೇರಿಸಿ ಯಾವುದೋ ಪಿಕ್ನಿಕ್ ಅಂತ ಹೊರಗೆ ಗಡಿಬಿಡಿಯಲ್ಲಿ ಹೊರಟಿದ್ದ. ‘ರಾಜು, ನಾನು ಬರೋದು ಇನ್ನು ರಾತ್ರಿ. ಮನೆ ಕಡೆ ಹುಷಾರು’ ಅಂದ. ರಾಜು ಲಗುಬಗೆಯಿಂದ ಹತ್ತಿರ ಬಂದು ತಲೆ ಕೆರೆದುಕೊಳ್ಳುತ್ತ ನಿಂತ. ಏನೋ ಕೇಳುವ ಹವಣಿಕೆ ಇತ್ತು.

’ಏನು ರಾಜೂ?’.

’ಅಣ್ಣ, ನಿಮ್ಗೆ ಗೊತ್ತಲ್ಲ. ನನ್ ಮದ್ವೆ ಬಹಳ ಸರಳವಾಗಿತ್ತು. ನಮ್ ಮದ್ವೆ ಫ಼ೋಟೊ ಒಂದೂ ಇಲ್ಲ. ಊರಲ್ಲಿ ಯಾರ ಹತ್ರನೂ ಕ್ಯಾಮರಾ ಇಲ್ಲ. ನಂಗೆ, ನನ್ ಹೆಂಡತಿ ಫ಼ೋಟೊ ಒಂದು ಚೆಂದಾಗಿ ತೆಗ್ದುಕೊಡ್ಬೇಕು’ ಅಂದ.

ತಲೆ ಆಡಿಸಿ, ’ಈಗ್ಲೆ ತೆಗೀಲಾ?’ ಎಂದು ಸುದೀಪ ಅವಸರಿಸಿದ. ’ಹಾಂ.. ’ ಅಂತ ರಾಜು ಓಡಿದ. ಎರಡೇ ನಿಮಿಷದಲ್ಲಿ ಸುವ್ವಿಯನ್ನು ಕರೆದು ಅವನೆದುರು ನಿಲ್ಲಿಸಿ ಬಿಟ್ಟ.

’ಇಬ್ರದೂ ತೆಗಿತೀನಿ ಬೇಗ ನಿಂತ್ಕೊಳಿ’ ಸುದೀಪ ಹೇಳಿದ.

’ಬೇಡಣ್ಣ, ಅವ್ಳದ್ದು ಸಾಕು, ಚೆನ್ನಾಗಿ ಮುಖ ಬರೋ ಹಾಗೆ ತೆಗೀರಿ. ನಂದು ಇನ್ನೊಂದು ಸರಿ ತೆಗೀರಿ. ಯಾಕಂದ್ರೆ, ಆಷಾಢ ಅಂತ ಅವ್ಳು ಊರಿಗ್ ನಾಳೆನೆ ಹೋಗ್ತಾ ಇದಾಳೆ’

’ಸರಿ, ಬಾಮ್ಮ, ಇಲ್ಲಿ ನಿಂತ್ಕೊ, ಎಲ್ಲಿ ಈ ಕಡೆ ನೋಡು’ ಅಂತ ಕ್ಯಾಮರ ಸರಿಪಡಿಸಿಕೊಂಡ ಸುದೀಪ. ರಾಜೂನ ಹೆಂಡತಿ ಸುಂದರಿಯೆ. ಹೊಳಪು ಕಣ್ಣುಗಳು, ತೆಳುವಾದರೂ ಮುಖದಲ್ಲಿ ಮುಗ್ಧ ಕಳೆ, ಅವಳ ಮಂದಹಾಸದಲ್ಲಿ ಮಕ್ಕಳ ನಗುವಿದ್ದಂತೆ ಅವನಿಗನಿಸಿತು. ಹಾಗೆಯೆ ಅವಸರದಲ್ಲಿಯೆ ಎರಡು ಚಿತ್ರ ಕ್ಲಿಕ್ಕಿಸಿದ. ಹಾಗೆ ಮಾಡುವಾಗ ಸರಿಯಾಗಿ ಫ಼ೋಕಸ್ ಮಾಡದೆ ಇರುವುದು ಅವನಿಗೆ ತಿಳಿಯಲೇ ಇಲ್ಲ!

ಸುದೀಪ ಲಗುಬಗೆಯಲ್ಲಿ ಹೊರ ಹೊರಡುವಾಗ ಗಕ್ಕನೆ ಬಗ್ಗಿ ’ಊರಿಗೆ ಹೋಗಿಬರ್ತೀನಿ ಅಣ್ಣ. ಆಶೀರ್ವಾದ ಮಾಡಿ’ ಅಂದಳು ಸುವ್ವಿ.

ಗೆಳೆಯರೊಡನೆ ಒಳ್ಳೆಯ ದಿನವೊಂದನ್ನು ಕಳೆದು ಸುದೀಪ ಮನೆಗೆ ರಾತ್ರಿ ಬಂದಾಗ ರಾಜು ಬಾಗಿಲು ತೆಗೆದ. ’ಹೆಂಡತೀನ ಊರಿಗೆ ಕಳಿಸಿದ್ಯಾ ರಾಜು’ ಅಂತ ಕೇಳಿ, ಮಲಗಲು ಹೋದ. ’ಹೂಂ.. ಅಣ್ಣಾ’ ಅಂದ ರಾಜು. ಹೆಂಡತಿ ಊರಿಗೆ ಹೋದ ಬೇಸರ ಅವನ ಮುಖದಲ್ಲಿತ್ತು.

ಇವೆಲ್ಲ ಆಗಿ ಹದಿನೈದು ದಿನಗಳಾಗಿರಬೇಕು. ರಾಜು ಒಂದು ಬೆಳಿಗ್ಗೆ ಸುದೀಪನ ರೂಂಗೆ ಬಂದು, ’ಅಣ್ಣಾ’ ಎಂದು ಕರೆದ.

ಅವನ ಧ್ವನಿಯಲ್ಲಿ ಘಾಬರಿ ಇತ್ತು. ’ಊರಲ್ಲಿ ಸುವ್ವಿ ತುಂಬಾ ಖಾಯಿಲೆ ಮಲಗಿದಾಳಂತೆ. ಈಗ ಊರಿಂದ ಫ಼ೋನ್ ಬಂದಿತ್ತು. ಈಗಲೇ ಊರಿಗೆ ಹೋಗ್ತೀನಿ. ಕರಕೊಂಡೇ ಬರ್ತಿನಿ. ಮನೆ ಎಲ್ಲ ಕ್ಲೀನ್ ಮಾಡಿದೀನಿ. ನೀವು ಎರಡು ದಿನ ಹೋಟೆಲ್ನಲ್ಲೆ ಊಟ ಮಾಡಿ ಅಣ್ಣ’ ಅಂದ.

ಅವನ ಕೈಗೆ ಖರ್ಚಿಗೆ ಅಂತ ಸ್ವಲ್ಪ ಹಣ ಕೊಟ್ಟ ಸುದೀಪ.

ರಾಜು ಹೋದ ಮರುದಿನ ಸುದೀಪನಿಗೆ ಫ಼ೋನ್ ಮಾಡಿದ. ಅವನ ಧ್ವನಿ ಅವನಿಗಾದ ಆಘಾತವನ್ನು ಹೇಳುತ್ತಿತ್ತು.

‘ಅಣ್ಣಾ.. ನನ್ ಹೆಂಡ್ತಿ ತೀರ್ಕೊಂಡ್ಬಿಟ್ಲು’ ಗದ್ಗದಿತನಾಗಿ ಹೇಳುತ್ತಿದ್ದ. ’ಏನಾಯ್ತು ಅಂತ ನೋಡೋದ್ರೊಳ್ಗೆ ಯಾವುದೋ ಮಾರಿ ಖಾಯಿಲೆಗೆ ತುತ್ತಾಗಿಬಿಟ್ಲು…..’

ಸುದೀಪ ಏನು ಹೇಳಲೂ ತೋಚದೆ, ‘ಸಮಾಧಾನ ಮಾಡ್ಕೊ ರಾಜು… ದುಡ್ಗಿಡ್ ಬೇಕಿದ್ರೆ ಹೇಳು ಕಳಿಸ್ತೀನಿ’ ಅಂದ.

ಹದಿನೈದು ದಿನ ಕಳೆದು ರಾಜು ಪ್ರೇತ ಕಳೆ ಹೊತ್ತು ಮನೆಯ ಕೆಲಸಕ್ಕೆ ಹಾಜರಾದ.

ಒಂದು ದಿನ ರಾಜು, ‘ಅವತ್ತು ನನ್ ಹೆಂಡ್ತಿ ಫ಼ೋಟೊ ತೆಗೆದಿದ್ರಿ ನೆನಪಿದ್ಯಾ. ಅದರದ್ದು ಒಂದು ಪ್ರಿಂಟ್ ಹಾಕಿ ಕೊಡಿ. ಅವಳ ನೆನಪಿಗೆ ಅಂತ ಅದೊಂದು ಬೇಕೇ ಬೇಕು ಅಣ್ಣ. ನೀವು ತೆಗೆದ ಫ಼ೋಟೊ ಬಿಟ್ರೆ ಅವಳ ನೆನಪಿಗೆ ಇನ್ಯಾವುದೂ ಇಲ್ಲ’

ಸುದೀಪನಿಗೆ ಈಗ ನೆನಪಾಯ್ತು ಆ ದಿನ ಸುವ್ವಿಯ ಫ಼ೋಟೋ ಅವಸರದಲ್ಲಿ ತೆಗೆದಿದ್ದು. ‘ಆಯ್ತು ರಾಜು.. ಅದನ್ನ ಪ್ರಿಂಟ್ ಹಾಕಿ, ಫ಼್ರೇಮ್ ಹಾಕಿ ಕೊಡ್ತೀನಿ’ ಅಂದ.

ತಕ್ಷಣ ರೂಮಿಗೆ ಹೋಗಿ ಕ್ಯಾಮರ ತೆಗೆದ. ಆ ದಿನ ತೆಗೆದ ಫ಼ೋಟೊಗಳನ್ನು ಒಂದೊಂದೆ ನೋಡುತ್ತಾ ಹೋದ. ಅವನು ಮತ್ತು ಗೆಳೆಯರ ಫ಼ೋಟೋಗಳು ಎಲ್ಲ ಸುಂದರವಾಗಿಯೆ ಬಂದಿದ್ದವು. ಹಾಗೆ ನೋಡುತ್ತಾ ಸುವ್ವಿಯ ಫ಼ೋಟೊಗಳನ್ನು ಹುಡುಕಾಡಿದ. ಅಲ್ಲಿ ಅವನಿಗೆ ದಿಗ್ಭ್ರಮೆ ಕಾದಿತ್ತು. ಅವನು ತೆಗೆದ ಎರಡು ಫ಼ೋಟೊ ಶೂಟ್ ಕೆಟ್ಟದಾಗಿ ಬಂದಿತ್ತು. ಸುವ್ವಿಯ ಚಿತ್ರ ಕಲಸಿಹೋಗಿದೆ. ಅದು ಯಾರ ಮುಖ ಅನ್ನುವುದು ಸ್ವಲ್ಪವೂ ಗುರುತಾಗುತ್ತಿಲ್ಲ! ಆ ದಿನ ಅವಸರದಲ್ಲಿ ಫ಼ೋಕಸ್ ಮಾಡದೆ ಸುವ್ವಿಯ ಚಿತ್ರ ಕ್ಲಿಕ್ ಮಾಡಿಬಿಟ್ಟಿದ್ದ!!

ಅವನಿಗೆ ತಕ್ಷಣಕ್ಕೆ ನೆನಪಾದದ್ದು ರಾಜುವಿನ ಆಸೆ ತುಂಬಿದ ಮುಖ. ಅವನಿಗೆ ಏನು ಸಮಾಧಾನ ಮಾಡಬೇಕೆನ್ನುವುದೇ ತಿಳಿಯುತ್ತಿಲ್ಲ. ಸುದೀಪನಿಗೆ ಒಂದು ವಿಷಯ ಮನಸ್ಸಿಗೆ ಹೊಕ್ಕಿದ್ದು, ತಾನು ‘ಫ಼ೋಟೊ ಸರಿಯಾಗಿ ತೆಗೆಯಲಾಗಿಲ್ಲ’ ಅಂದುಬಿಟ್ಟರೆ, ರಾಜು ಖಂಡಿತಕ್ಕೂ ಆಘಾತ ಪಡುತ್ತಾನೆನ್ನುವುದು. ಅವನು ಫ಼ೋಟೊ ಕೇಳಿದಾಗ ತಾನು ಕೊಡುತ್ತೇನೆ ಎಂದು ಬೇರೆ ಹೇಳಿಬಿಟ್ಟಿದ್ದಾನೆ. ಈಗ ಅವನನ್ನು ಮತ್ತು ಅವನ ನಿರಾಶೆಯನ್ನು ಎದುರಿಸುವುದಾದರೂ ಹೇಗೆ. ಏನು ಮಾಡಲೂ ತಿಳಿಯದೆ ಚಡಪಡಿಸಿದ.

ಮನಸ್ಸು ಹೇಳುತ್ತಿತ್ತು, ’ರಾಜು, ಸುವ್ವಿಯ ಫ಼ೋಟೊ ಕ್ಯಾಮರದಲ್ಲಿ ಇಲ್ಲ’ ಎಂದು ಹೇಳಿಬಿಡು. ಆದರೆ ಹಾಗೆ ಹೇಳುವ ಧೈರ್ಯವಾಗಲಿ, ಅಂಥ ನಿರ್ಲಿಪ್ತತನವಾಗಲಿ ಅವನಿಗೆ ಬರಲಿಲ್ಲ.

ದೀರ್ಘ ಯೋಚನೆಯಿಂದ ಸುದೀಪ ಹೊರಬಂದ. ಏನನ್ನೋ ಅವನು ನಿರ್ಧರಿಸಿದ್ದ. ೧೫ ದಿನಗಳ ರಜೆಯ ಪತ್ರ ಅವನು ತನ್ನ ಆಫ಼ೀಸಿಗೆ ಮೇಲ್ ಮಾಡಿದ.

ರಾಜೂನ ಕರೆದು ಹೇಳಿದ, ‘ರಾಜೂ. ಸ್ವಲ್ಪ ದಿನ ನಾನು ತಡವಾಗಿ ಬರುತ್ತೇನೆ. ನೀನು ನನಗಾಗಿ ಕಾಯುವುದು ಬೇಡ. ಊಟ ಟೇಬಲ್ ಮೇಲಿಟ್ಟು ಹೋಗಿಬಿಡು.’ ರಾಜು ‘ಹೂಂ’ ಅಂದ. ಅವನ ಮನಸ್ಸಿನಲ್ಲಿ ಏನು ಕೇಳಬೇಕೆನ್ನುವುದಿದೆ ಅನ್ನುವುದು ಸುದೀಪನಿಗೆ ತಿಳಿದಿತ್ತು.

ಆ ದಿನ ಸುದೀಪ ತನ್ನ ಕಾರಿನಲ್ಲಿ ಸುಮಾರು ಒಂದು ಘಂಟೆ ಪ್ರಯಾಣಿಸಿ ಆಚಾರ್ಯರ ಆ ಕಲಾ ಶಾಲೆಗೆ ಬಂದಿದ್ದ. ತಾನು ಆ ಕಲಾ ಶಾಲೆಗೆ ವಿದ್ಯಾರ್ಥಿಯಾಗಿ ಸೇರುವ ಬಗ್ಗೆ ಆಶಯ ವ್ಯಕ್ತಪಡಿಸಿದ. ಹಾಗೆಯೆ, ಕಲೆಯ ಗಂಧ ಗಾಳಿ ತನಗೆ ತಿಳಿಯದು ಅನ್ನುವುದನ್ನು ಆಚಾರ್ಯರಿಗೆ ತಿಳಿಸಿದ.

ಕಲೆಯ ಆ ಉದ್ಧಾಮರು ನಕ್ಕರು. ’ಕಲಿಯುವ ತುಡಿತವಿದೆಯಲ್ಲ. ಅಷ್ಟು ಸಾಕು. ಇವಿತ್ತಿನಿಂದಲೇ ಪ್ರಾರಂಭಿಸೋಣ’ ಅಂದರು. ಸುದೀಪನಲ್ಲಿ ಚೈತನ್ಯದ ಬುಗ್ಗೆ ಉಕ್ಕಿ ಹರಿಯಿತು.

ಒಂದು ವಾರ ಹೇಗೆ ಕಳೆಯಿತೊ ಸುದೀಪನಿಗೆ ಮತ್ತು ಆಚಾರ್ಯರಿಗೆ ತಿಳಿಯಲೇ ಇಲ್ಲ. ಅವನ ಅದಮ್ಯ ಉತ್ಸಾಹ, ಕಲಿಯುವ ಏಕಾಗ್ರತೆ, ಗುರುಗಳಿಗೆ ಆಶ್ಚರ್ಯ ಉಂಟುಮಾಡುತ್ತಿತ್ತು.

ತೈಲವರ್ಣದ ಅಪರಿಮಿತ ಆಯಾಮಗಳ ಪ್ರಯೋಗಗಳನ್ನು ಸುದೀಪ ಎರಡನೇ ವಾರದಲ್ಲೇ ತಿಳಿಯ ತೊಡಗಿದ. ನೆರಳು ಬೆಳಕುಗಳನ್ನು ಹದವಾಗಿಸಿ ತನ್ನ ಕುಂಚದಿಂದ ಚಿತ್ರಿಸಲು ಪ್ರಯತ್ನಿಸುತ್ತಿದ್ದ. ಅವನು ಆಲೋಚನಾ ಮಗ್ನನಾಗಿ ಚಿತ್ರಿಸುವ ಪರಿ ಗುರುಗಳನ್ನು ಕೂಡ ದಂಗುಬಡಿಸುತ್ತಿತ್ತು.

ಸುದೀಪನ ಕಲಿಕೆ ಮತ್ತೆ ಮುಂದುವರಿಯಿತು. ೧೫ ದಿನಗಳ ರಜೆ ಮುಗಿಯಿತು. ಮತ್ತೆ ಹದಿನೈದು ದಿನಗಳ ರಜೆ ಮಂಜೂರಿಗೆ ಮೇಲ್ ಮಾಡಿದ.

ದಿನದ ಎಲ್ಲ ಸಮಯ ಕಲೆಯ ಕಲಿಯುವಿಕೆಯಲ್ಲೆ ಕಳೆಯತೊಡಗಿದ. ಸರಿಯಾಗಿ ಊಟ ತಿಂಡಿ ತಿನ್ನುವುದನ್ನೇ ಅವನು ಮರೆತುಬಿಟ್ಟಿದ್ದ. ಮುಖದಲ್ಲಿ ಗಡ್ಡ ಮೀಸೆಗಳು ದಂಡಿಯಾದವು. ಅವನ ಶ್ರಮದ ಅಗಾಧತೆಯ ಬಗ್ಗೆ ಆಚಾರ್ಯರಿಗೆ ಗೌರವ ಮೂಡಿತು. ಈ ಎರಡು ದಿನಗಳಿಂದ ಸುದೀಪ ಭಾವ ಚಿತ್ರಗಳನ್ನು ಚಿತ್ರಿಸುವ ಬಗೆಗೆ ಬಹಳ ಆಸಕ್ತಗೊಂಡಿದ್ದ. ಚಿತ್ರಶಾಲೆಯ ಕೆಲವು ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಚಿತ್ರಿಸಿಯೂಬಿಟ್ಟ.

ಸುದೀಪನಲ್ಲಿನ ಅಗಾಧ ಬದಲಾವಣೆ, ಅವನ ಕಲೆಯ ಹಂಬಲ ನೋಡಿ ಆಚಾರ್ಯರಿಗೆ ಇವನೊಬ್ಬ ದೊಡ್ಡ ಕಲಾವಿದನಾಗುವುದರಲ್ಲಿ ಸಂದೇಹವಿಲ್ಲ ಅನ್ನಿಸತೊಡಗಿತು.

ಆ ದಿನ ಸುದೀಪ ಚಿತ್ರಶಾಲೆಯಲ್ಲೆ ರಾತ್ರಿ ಕಳೆಯುತ್ತೇನೆ ಅಂದ. ಅವನು ರಾತ್ರಿಯೆಲ್ಲ ಜಾಗರಣೆಯಲ್ಲಿ ಯಾವುದೋ ಚಿತ್ರ ಬಿಡಿಸುತ್ತಿದ್ದ. ಬೆಳಿಗ್ಗೆ ಆಚಾರ್ಯರು ಬಂದಾಗಲೂ ಅವನು ಅದೇ ಏಕಾಗ್ರತೆಯಲ್ಲಿ ಮುಳುಗಿದ್ದ. ಸುಮಾರು ಹೊತ್ತಾದ ಮೇಲೆ, ಅವನು ಆಚಾರ್ಯರನ್ನು ಕರೆದು, ‘ಸರ್, ಒಬ್ಬಳು ಯುವತಿಯ ಚಿತ್ರವೊಂದನ್ನು ಬಿಡಿಸಿದ್ದೇನೆ. ಇದು ನಾನು ನೋಡಿದ ವ್ಯಕ್ತಿಯನ್ನು ನೆನಪಿನಲ್ಲಿಟ್ಟು ಚಿತ್ರಣ ಮಾಡಿರುವುದು. ಸಹಜವಾಗಿ ಮೂಡಿದೆಯ, ದಯವಿಟ್ಟು ತಿಳಿಸಿ’ ಅಂದ.

ವಿಮರ್ಶಾಪೂರ್ಣವಾಗಿ ಆ ಚಿತ್ರವನ್ನು ತದೇಕ ಆಚಾರ್ಯರು ನೋಡುತ್ತಲೇ ಇದ್ದರು. ಬಹಳ ಹೊತ್ತು ನೋಡಿದ ಮೇಲೆ ಅವರ ಬಾಯಿಂದ ಒಂದು ಉದ್ಗಾರ ಹೊರಟಿತು. ‘ಸುದೀಪ್, ನೀವು ಪೂರ್ಣ ಕಲಾವಿದರಾಗಿಬಿಟ್ಟಿರಿ. ಈ ಚಿತ್ರ ನಿಮ್ಮ ಉತ್ಕ್ರುಷ್ಟ ಕೃತಿ. ಒಬ್ಬ ಯುವತಿಯ ಮುಖ ಎಷ್ಟು ಸಹಜವಾಗಿ ಮೂಡಿ ಬಂದಿದೆ! ಈ ಮುಖ ಜೀವಕಳೆಯಿಂದ ತುಂಬಿಬಿಟ್ಟಿದೆ. ನೆನಪಿನಲ್ಲಿ ಬಂದ ಮುಖವನ್ನು ಬಹಳ ಸುಂದರವಾಗಿ ಮೂಡಿಸಿದ್ದೀರ. ಈ ವರ್ಷದ ಜಾಗತಿಕ ಚಿತ್ರ ಸ್ಪರ್ಧೆಗೆ ಈ ಚಿತ್ರ ಖಂಡಿತಕ್ಕೂ ಕಳುಹಿಸಲೇ ಬೇಕು!’

ಚಿತ್ರಶಾಲೆಯಿಂದ ಹೊರಡುತ್ತಾ ಆ ಯುವತಿಯ ಭಾವಚಿತ್ರ ತೆಗೆದುಕೊಂಡ ಸುದೀಪ. ದಾರಿಯಲ್ಲಿ ಅಂಗಡಿಗಲ್ಲಿ ಅದಕ್ಕೊಂದು ಒಳ್ಳೆಯ ಫ಼್ರೇಮ್ ಹಾಕಿಸಿದ. ಅವನೊಳಗೆ ಆಶ್ಚರ್ಯ ತುಂಬಿಕೊಂಡಿತ್ತು. ಕೇವಲ ತಿಂಗಳ ಹಿಂದೆ ಅವನೊಬ್ಬ ಚಿತ್ರಕಲೆಯ ಸಾಮಾನ್ಯ ಜ್ಞಾನವೂ ಇಲ್ಲದವನಾಗಿದ್ದ. ಈ ದಿನ ಗುರುಗಳ ಭಾರಿ ಹೊಗಳಿಕೆಗೆ ಪಾತ್ರನಾಗಿದ್ದ! ಅವನೀಗ ಒಬ್ಬ ಕಲಾವಿದ.

ಸುದೀಪ ತನ್ನ ಮನೆ ಹೊಕ್ಕು ರಾಜುವನ್ನು ಕರೆದ. ಆ ವರ್ಣ ಚಿತ್ರವನ್ನು ಅವನ ಕೈಗೆ ಕೊಡುವಾಗ ರಾಜು ಗದ್ಗದಿತನಾದ. ಅವನ ಕಣ್ಣೀರು ತನ್ನ ಹೆಂಡತಿ ಸುವ್ವಿಯ ಸುಂದರ ಚಿತ್ರದ ಬಗೆಗಿನ ಸಂತೋಷ ಬಾಷ್ಪವಾಗಿತ್ತು, ಅವಳನ್ನು ಕಳೆದುಕೊಂಡ ದು:ಖದ ಧಾರೆಯೂ ಮತ್ತು ವಿಷಾದ ತುಂಬಿದ ಹೃದಯದ ಕಣ್ಣೀರೂ ಆಗಿತ್ತು.

ಔಟ್ ಹೌಸಿನಲ್ಲಿ ಗೋಡೆಯ ಮೇಲೆ ಕಾಣುವಂತೆ ರಾಜು ಸುವ್ವಿಯ ಚಿತ್ರವನ್ನು ಹಾಕಿ ಬಹಳ ಹೊತ್ತು ನೋಡುತ್ತಲೆ ನಿಂತ. ಅವನಿಗೆ ನಿಜಕ್ಕು ಆ ಪುಟ್ಟ ಹೆಂಡತಿ ಜೀವಂತ ನಗುತ್ತಿರುವಂತೆ ಭಾಸವಾಗತೊಡಗಿತು. ಮತ್ತೆ ಸುದೀಪನ ಬಳಿ ಬಂದು ಹೇಳಿದ, ‘ಎಂಥ ಫ಼ೋಟೊ ತೆಗೆದುಬಿಟ್ಟಿದೀರ! ಸಾಕ್ಷಾತ್ ಸುವ್ವಿಯೇ ಮತ್ತೆ ಮನೆಯಲ್ಲಿ ಬಂದು ನನ್ನ ನೋಡ್ತಿದಾಳೇನೊ ಅನ್ನುವ ಥರ ಕಾಣಿಸ್ತಿದೆ. ನಿಮ್ಮ ಋಣ ಈ ಜನ್ಮದಲ್ಲಿ ತೀರ್ಸೋಕ್ಕೆ ಸಾಧ್ಯವಿಲ್ಲ ಅಣ್ಣ?’

ರಾಜು ಮತ್ತು ಸುವ್ವಿ ತನ್ನನ್ನು ಒಬ್ಬ ಕಲಾವಿದನನ್ನಾಗಿ ಪ್ರೇರೇಪಿಸಿದ ಘಟನೆಗಳನ್ನು ಮತ್ತೆ ಮತ್ತೆ ಸುದೀಪ ನೆನೆಯುತ್ತಲೇ ಅಚ್ಚರಿಯ ಗೊಂಬೆಯಾಗಿ ಕುಳಿತುಬಿಟ್ಟ. ವಿಷಾದ ಛಾಯೆ ಅವನ ಮುಖದಲ್ಲಿ ಮಡುಗಟ್ಟಿತು. ರಾಜುವಿನ ಮಾತುಗಳು ಕಿವಿಗಳಿಗೆ ಬೀಳುತ್ತಲೆ ಅವ್ಯಕ್ತ ಭಾವನೆಗಳಲ್ಲಿ ಅವನ ಕಣ್ಣುಗಳು ತುಂಬಿಕೊಂಡವು.

***

(ಚಿತ್ರಕೃಪೆ: ಅಂತರ್ಜಾಲ)

(ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟ: http://kannada.pratilipi.com/anantha-ramesh/krishna-cheluveya-chitra)

ಬೆಳಕು ಕಂಡ ಕಣ್ಣು

teacher

ಉಪಗ್ರಹದಿಂದ ಬರುವ ಛಾಯಾ ಚಿತ್ರಗಳು ವಿನೀತನ ಮನಸ್ಸನ್ನು ತುಂಬಾ ಸೆಳೆಯುತ್ತವೆ. ಆಗಾಗ ಅಂತರ್ಜಾಲದಲ್ಲಿ ಭೂಮಿಯ ವೈವಿಧ್ಯದ ಚಿತ್ರಗಳನ್ನು ಅವನು ಅಪ್ಪನ ಜೊತೆ ಕುಳಿತು ನೊಡುತ್ತಿರುತ್ತಾನೆ. ಬಣ್ಣದ ಓಕುಳಿಯಲ್ಲಿ ಈಜುವಂತೆ ಕಾಣುವ ಭೂಮಿಯನ್ನು ನೋಡಲು ಅವನಿಗೆ ತುಂಬಾ ಇಷ್ಟ.

“ಅಪ್ಪಾ.. ನಮ್ಮ ದೇಶದ ಕಡೆ ಜೂಮ್ ಮಾಡು. ಎಷ್ಟೊಂದು ಹಸಿರು ಕಾಣುತ್ತೆ ಅಲ್ವ ! ಈ ಥರ ಹಸಿರು ನಾನು ನೋಡೆ ಇಲ್ಲ ”

“ನಾಗರಹೊಳೆ ಅಥವ ಅಗುಂಬೆ ಕಡೆಗೆ ಈ ರಜಾದಲ್ಲಿ ಹೋಗೋಣ…. ಹಸಿರು ಕಾಡಿಗೆ”

“ಹೋದ ವರ್ಷ ಊಟಿಗೆ ಹೋಗಿದ್ದು ತುಂಬಾ ಮಜಾ ಇತ್ತು. ಅಲ್ಲಿನ ಥರವೇನಾ?”

“ಹೌದು.. ನಿನ್ನ ಪಾಠದ ಪುಸ್ತಕಗಳಲ್ಲಿ ಕಾಡು ನಾಶ ಆಗ್ತಾ ಇರೊ ಬಗ್ಗೆ.. ಬಹಳ ಕಾಡು ಪ್ರಾಣಿಗಳು ನಶಿಸಿ ಹೋಗ್ತಿರೋದ್ರ ಬಗ್ಗೆ ಏನಾದ್ರು ವಿಷಯ ಇದೆಯ ?”

“ಪಾಠದ ಪುಸ್ತಕಕ್ಕಿಂತ ಹೆಚ್ಚು ವಿಷಯ ನಮ್ಮ ಟೀಚರ್ ಹೇಳ್ತಾರೆ. ಪ್ರಪಂಚದ ಕಾಡು ಕಡಿಮೆ ಆಗ್ತಾ ಇರೋದು.. ಹಾಗೆಯೇ ಕಾಡಿನ ಮೃಗ ಪಕ್ಷಿಗಳು ಕಡಿಮೆ ಆಗ್ತಾ ಇರೋದು. ಭೂಮಿ ತಾಪಮಾನ ಜಾಸ್ತಿ ಆಗ್ತಾ ಇರೋದು. ಒರಾಂಗುಟನ್ ಗೊತ್ತ? ಆಫ಼್ರಿಕದಲ್ಲಿ ಅವು ಕೂಡ ಕಡಿಮೆ ಆಗ್ತಾ ಇವೆ ” ವಿನೀತ ಹೇಳಿದ.

“ಒರಾಂಗುಟಾನ್ ಕಾಡಿನ ಮನುಷ್ಯನೆ. ಅದು ನಮ್ಮ ಪೂರ್ವಜ. ನಾವು ಮನುಷ್ಯರೇ ಒಂದಾಗಿ ಸಹಜೀವನ ನಡೆಸೊಲ್ಲ. ಇನ್ನು, ನಮ್ಮ ಪೂರ್ವಜನ ಸಂತಾನದ ಬಗ್ಗೆ ತಲೆ ಕೆಡ್ಸಿಕೊಳ್ತೀವ.. ” ಅಪ್ಪ ಹೇಳ್ತಾನೆ ಇದ್ದರು.

ವಿನೀತ ಹೇಳಿದ, “ಹೀಗೇ ಆದ್ರೆ.. ಭೂಮಿ ಬೋರ್ ಅನ್ಸತ್ತೆ ಅಲ್ವ ? ”

ಅಮ್ಮ ಕರೆದದ್ದು ಕೇಳಿಸಿತು. ಇಬ್ಬರೂ ಕೋಣೆಯಿಂದ ಹೊರಗೆ ಬಂದರು. “ತಿಂಡಿ ತಿನ್ನೋದು ಮರ್ತೇ ಹೋಗಿತ್ತಾ ನಿಮಗೆ ” ಅಂತ ನಕ್ಕಳು. ” ನಾಡಿದ್ದು ದೀಪಾವಳಿ ಬಂತಲ್ಲ. ಪಟಾಕಿ ತರೊ ಪ್ಲಾನ್ ಮಾಡ್ತಿದ್ರಾ?” ಕೇಳಿದಳು.

ವಿನೀತನಿಗೆ ಗೊತ್ತು. ಅಮ್ಮನಿಗೆ ಪಟಾಕಿ ಶಬ್ಧ ಅದರ ಹೊಗೆ ಆಗಲ್ಲ. ಕಳೆದ ವರ್ಷ ಅಕ್ಕಪಕ್ಕದ ಮನೆಯವರು ಹೆಚ್ಚು ಪಟಾಕಿ ಸುಟ್ಟಿದ್ದರಿಂದ ಅಮ್ಮನಿಗೆ ಆರೋಗ್ಯ ಕೆಟ್ಟಿತ್ತು.

“ಅಮ್ಮ.. ನಿನಗೇ ಏಕೆ ಈ ಥರ..?   ಅಪ್ಪ, ನಾನು, ನಮ್ಮ ಪಕ್ಕದ ಮನೆಯವೆರೆಲ್ಲ ದೀಪಾವಳಿಯಲ್ಲಿ ಆರೋಗ್ಯವಾಗೆ ಇರ್ತೀವಲ್ಲ ? ”

ವಿನೀತನ ಈ ಪ್ರಶ್ನೆಗೆ ಅಮ್ಮ ಹೇಳಿದ್ದಳು. “ಕೆಲವರಿಗೆ ತಕ್ಷಣ ಏನಾಗದಿದ್ದರೂ, ಪಟಾಕಿಯಿಂದ ನಿಧಾನಕ್ಕಾದರು ಆರೋಗ್ಯದ ಮೇಲೆ ಪರಿಣಾಮ ಇರುತ್ತೆ.   ವಿನೂ, ನಿನಗೆ ಮರೆತುಹೋಯ್ತಾ, ಹೋದವರ್ಷದ ದೀಪಾವಳಿಯಲ್ಲಿ ನಮ್ಮ ಮನೆ ಬೀದಿಯ ಮೂರು ನಾಯಿಗಳು, ಬೆಕ್ಕುಗಳು ಹದಿನೈದು ದಿನ ಓಡಿಹೋಗಿದ್ದು? ”

ವಿನೀತನಿಗೆ ಎಲ್ಲ ನೆನಪಾಯಿತು. ಈ ಬಾರಿ ಪಟಾಕಿ ಹೊಡೆದು ಶಬ್ಧ ಮಾಡಬಾರದು. ಬರಿಯ ಭೂಚಕ್ರ, ನಕ್ಷತ್ರಕಡ್ಡಿ ಮಾತ್ರ ಹಚ್ಚಬೇಕು. ಅಮ್ಮನಿಗೆ ಇವುಗಳ ಹೊಗೆಯೂ ಆಗುವುದಿಲ್ಲ. ಆದಷ್ಟು ಕಡಿಮೆ ತಂದರಾಯಿತು ಅಂದುಕೊಡ.

ಅವನ ಕ್ಲಾಸ್ ಮೇಟ್ ಶ್ರವಣ್ ಕಳೆದ ವರ್ಷದ ದೀಪಾವಳಿ ಮುಗಿಸಿ ತರಗತಿಗೆ ಬಂದಾಗ ಕೈಗೆ ದೊಡ್ಡ ಬ್ಯಾಂಡೇಜ್ ಹಾಕಿಕೊಂಡಿದ್ದ. ಹೂಕುಂಡ ಹಚ್ಚುವಾಗ ಆಗಿದ್ದಂತೆ. ಎರಡು ಮೂರು ಸಲ ಬೆಂಕಿ ತಾಕಿಸಿದರೂ ಹೂಕುಂಡ ಹತ್ತಲಿಲ್ಲವಂತೆ. ಏಕಿರಬಹುದು ಅಂತ ಅದನ್ನು ಕೈಯಲ್ಲಿ ಹಿಡಿದು ಪರೀಕ್ಷಿಸುವಾಗ ಭರ್ರನೆ ಅದು ಹೊತ್ತಿಬಿಟ್ಟು ಅವನ ಬಲಗೈ ಸುಟ್ಟುಬಿಟ್ಟಿದೆ.  ಸದ್ಯ.. ಕಣ್ಣಿಗೆ ಕಿಡಿ ಹೋಗಿದ್ದರೆ ಏನು ಗತಿ ಅನ್ನುತ್ತಿದ್ದ.

ಮೊನ್ನೆ ವಿನೀತನ ಕ್ಲಾಸಲ್ಲಿ ದೀಪಾವಳಿ ಹೇಗೆ ಆಚರಿಸಬೇಕು ಅನ್ನುವುದರ ಬಗೆಗೆ ಕನ್ನಡ ಟೀಚರ್ ಒಂದು ಚರ್ಚೆ ಇಟ್ಟುಬಿಟ್ಟಿದ್ದರು. ಅವರು ಹೊಸ ಕನ್ನಡ ಟೀಚರ್. ಈ ವರ್ಷವಷ್ಟೇ ನಮ್ಮ ಶಾಲೆಗೆ ಸೇರಿದ್ದು. ಈ ಹೊಸ ಟೀಚರ್ ತಮ್ಮ ಕಣ್ಣುಗಳಲ್ಲಿ ಏನೋ ಹೊಳಪು ಇಟ್ಟುಕೊಂಡು ಮಾತಾಡುತ್ತಾರೆ. ಕ್ಲಾಸಲ್ಲಿ ಯಾರಾದರು ಹಾಡಿದರೆ, ಕತೆಗಳನ್ನು ಹೇಳಿದರೆ, ಕೇಳಿದ ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟರೆ, ಅವರ ಕಣ್ಣು ಮತ್ತಷ್ಟು ಹೊಳೆಯುತ್ತವೆ, ಹಾಗೆಯೆ ನಗುತ್ತವೆ ಅಂತ ವಿನೀತನಿಗೆ ಅನ್ನಿಸುತ್ತಿರುತ್ತೆ.

ಅವನ ಬಹಳ ಜನ ಗೆಳೆಯರು ಎರಡು ಮೂರು ವರ್ಷಗಳಿಂದ ಪಟಾಕಿ ಹಚ್ಚುತ್ತಿಲ್ಲವಂತೆ. ಮತ್ತೆ ಹಾಗಂತ ಪ್ರತಿಜ್ಞೆ ಮಾಡಿದ್ದೇವೆ ಅನ್ನುತ್ತಿದ್ದರು. ಇದನ್ನು ಕೇಳಿದಾಗ ಕನ್ನಡ ಟೀಚರಿನ ಕಣ್ಣುಗಳು ನಕ್ಷತ್ರಗಳಂತೆ ಹೊಳೆಯುತ್ತಿದ್ದವು. ಇನ್ನು ಮೂರು ನಾಲ್ಕು ಜನ ಸ್ನೇಹಿತರು ’ನಾವು ಕೂಡ ಪಟಾಕಿ ಹಚ್ಚಲ್ಲ, ಬರೀ ಚಿನಕುರುಳಿ ಹಚ್ತೀವಿ’ ಅಂದರು. ಅದಕ್ಕೆ ಎಲ್ಲರು ತುಂಬಾ ನಕ್ಕಿದ್ದರು.

ವಿನೀತ ಟೀಚರ್ ಗೆ ಹೇಳಿದ್ದ. ತಾನು ಬರೀ ನಕ್ಷತ್ರಕಡ್ಡಿ ಹಚ್ಚೋದು ಅಂತ. ಟೀಚರಿಗೆ ಏನೋ ಅಸಮಾಧಾನ. ಕೊನೆಯಲ್ಲಿ ಅವರು ಹೇಳಿದ್ದರು, ” ಹಬ್ಬದಲ್ಲಿ ಹೊಸ ಬಟ್ಟೆ ಹಾಕಿಕೊಳ್ಳಿ. ಹೋಳಿಗೆ ಊಟ ಮಾಡಿ. ರಾತ್ರಿ ಮನೆ ಮುಂದೆ, ಮನೆ ಒಳಗೆ ದೀಪ ಹಚ್ಚಿ ಅಥವ ಮೇಣದಬತ್ತಿಗಳನ್ನು ಹಚ್ಚಿ. ಪಟಾಕಿ ಶಬ್ಧ ಆದಷ್ಟು ಕಡಿಮೆ ಮಾಡಿ ದೀಪಾವಳಿ ಆಚರಿಸಿ. ಆವಾಗ ನೋಡಿ ಎಷ್ಟು ಖುಶಿಯಿರುತ್ತೆ” ಅಂತ.

ಎಲ್ಲರಿಗೂ ಬೇಜಾರು ಏನೆಂದರೆ ಈ ಕನ್ನಡ ಟೀಚರ್ ಮಕ್ಕಳಿಗೆ ಪಟಾಕಿ ಹಚ್ಚಬೇಡಿ ಅನ್ನೋದು.

ಮರುದಿನ ಬೆಳಿಗ್ಗೆ ವಿನೀತ ಬೇಗನೆ ಎದ್ದ. ತನ್ನ ಉಳಿತಾಯದ ಗೋಲಕವನ್ನು ಮೆಲ್ಲನೆ ತೆರೆದ. ಅದರಲ್ಲಿ ಸುಮಾರು ದಿನಗಳಿಂದ ಉಳಿಸಿಟ್ಟ ಹಣವನ್ನು ಎಣಿಸತೊಡಗಿದ. ಸುಮಾರು ಒಂಭತ್ತುನೂರು ರೂಪಾಯಿ! ಅವನಿಗೊಂದು ಹೊಸ ಯೋಚನೆ ಬಂತು. ಅಪ್ಪನ ಬಳಿ ಓಡಿದ.

“ನೂರು ರೂಪಾಯಿ ಇವತ್ತು ನನಗೆ ಕೊಡಬೇಕು ” ಕೇಳಿದ.
“ಬರಿಯ ನೂರು ರುಪಾಯಿ .. ಅಷ್ಟೇ ಪಟಾಕಿಯಾ ಈ ವರ್ಷ? ” ತಂದೆ ಕೇಳಿದರು.
“ಈ ವರ್ಷದಿಂದ ಪಟಾಕಿ ಬೇಡಪ್ಪ. ನೀವು ನೂರು ಕೊಟ್ಟರೆ, ನನ್ನ ಹಣವೂಸೇರಿಸಿದರೆ ಒಟ್ಟು ಒಂದು ಸಾವಿರ ಆಗುತ್ತೆ. ನಾವು ಬೆಳಕ ಹಬ್ಬ ಬೇರೆ ರೀತಿ ಆಚರಿಸೋಣ”
“ಏನು ವಿನೂ.. ಹೊಸ ಯೋಚನೆ..?”
“ನಾನು, ನೀವು, ಅಮ್ಮ ಎಲ್ಲ ನಾಡಿದ್ದು ಭಾನುವಾರ ಅನಾಥಶ್ರಮವಿದೆಯಲ್ಲ ಅಲ್ಲಿ ಹೋಗೋಣ, ಹಣ್ಣು, ಸಿಹಿ ಮತ್ತು ಮತ್ತೇನಾದರು ಉಪಯೋಗವಾಗುವ ಉಡುಗೊರೆ ಅಲ್ಲಿ ಕೊಡೋಣ”

ಅಪ್ಪನಿಗೆ ಖುಷಿ. “ಅಮ್ಮ ಮತ್ತು ನಾನು ಎರಡು ಸಾವಿರ ಕೊಡ್ತೀವಿ. ನೀನು ಹೇಳಿದ ಹಾಗೇ ಅಲ್ಲಿಗೆ ಹೋಗೋಣ” ಅಂದರು.

ವಿನೀತ ಶಾಲೆಗೆ ಎಂದಿನಂತೆ ಹೊರಟ. ಆ ದಿನ ಪ್ರಾರ್ಥನೆ ಸಮಯದಲ್ಲಿ ಹೆಡ್ ಮಿಸ್ ಹೇಳಿದರು, ” ಮಕ್ಕಳೇ, ಈ ದಿನ ನಮ್ಮ ಕನ್ನಡದ ಹೊಸ ಟೀಚರ್ ದೀಪಾವಳಿ ಬಗೆಗೆ ಒಂದು ಪುಟ್ಟ ಭಾಷಣ ಕೊಡುತ್ತಿದ್ದಾರೆ. ಅವರ ಮಾತನ್ನು ಈಗ ನಾವೆಲ್ಲ ಕೇಳೋಣವ? “.

ವಿನೀತ ಮನಸ್ಸಿನಲ್ಲೆ ಅಂದುಕೊಂಡ, ’ಮತ್ತೆ ಪಟಾಕಿ ಸುಡಬೇಡಿ ಅಂತ ಉಪದೇಶ ಕೊಡುತ್ತಾರೊ ಏನೊ..’

ಕನ್ನಡದ ಟೀಚರ್ ಮುಂದೆ ಬಂದರು. ನಗುತ್ತಾ ತಮ್ಮ ಮಾತು ಪ್ರಾರಂಬಿಸಿದರು.

“ಮಕ್ಕಳಿಗೆಲ್ಲ ದೀಪಾವಳಿಯ ಶುಭಾಶಯ ಇವತ್ತೇ ಹೇಳುತ್ತೀನಿ. ದೀಪಾವಳಿಯ ದಿನ ದೀಪ ಹಚ್ಚಿ, ಆದರೆ ಪಟಾಕಿ ಸುಡಬೇಡಿ ಅಂತ ನಾನು ಈಗಾಗಲೆ ಎಲ್ಲ ಕ್ಲಾಸಿನಲ್ಲಿ ನಿಮಗೆಲ್ಲ ಹೇಳಿದ್ದೀನಿ ಅಲ್ವ? ಆದರೂ ಬಹಳ ಮಕ್ಕಳಿಗೆ ನಾನು ಹೇಳಿದ್ದು ಇಷ್ಟ ಆಗಿಲ್ಲ ಅಂತ ಗೊತ್ತು. ಆದರೆ ಮಕ್ಕಳೆ.. ನಾನು ಹೀಗೆ ಹೇಳಲು ಕಾರಣವಿದೆ. ನೀವೆಲ್ಲ ನನ್ನ ಥರ ಪಟಾಕಿ ಹುಚ್ಚಿನಿಂದ ಮಾಡಿಕೊಂಡ ಅನಾಹುತ ನೀವು ಮಾಡಿಕೊಬಾರದು ಅನ್ನೋದು ನನ್ನ ಆಸೆ. ಅದಕ್ಕೆ ಕಾರಣ ಇದೆ. ಆ ವಿಷಯ ಈಗ ನಿಮಗೆಲ್ಲೆ ಹೇಳ್ತೀನಿ.

ಆರನೇ ಕ್ಲಾಸಿನಲ್ಲಿ ಓದುವಾಗ ನನಗೆ ತುಂಬಾ ಪಟಾಕಿ ಹುಚ್ಚಿತ್ತು. ಮೂರು ನಾಲ್ಕು ದಿನವೂ ಪಟಾಕಿಯ ಸಂಭ್ರಮದಲ್ಲಿ ಇರುತ್ತಿದ್ದೆ. ಹೆಚ್ಚು ಶಬ್ಧ ಮಾಡುವ ಪಟಾಕಿ ಅಂದ್ರೆ ನನಗೆ ತುಂಬಾ ಇಷ್ಟ. ಆದರೆ, ಮಕ್ಕಳೇ, ಆ ವರ್ಷದ ದೀಪಾವಳಿಯ ಒಂದು ದಿನ ಒಂದೇ ಒಂದು ದೊಡ್ಡ ಪಟಾಕಿ ನನ್ನ ಜೀವನ ಹಾಳು ಮಾಡಿತು. ಆ ಪಟಾಕಿ ಭಾರಿ ಶಬ್ಧಮಾಡುತ್ತ ನನ್ನ ಮುಖಕ್ಕೆ ಬಡಿದು ಬಿಟ್ಟಿತು. ನನ್ನ ಎರಡೂ ಕಣ್ಣುಗಳನ್ನು ಸುಟ್ಟುಬಿಟ್ಟಿತು! ”

ಇದ್ದಕ್ಕಿದ್ದಂತೆ ಎಲ್ಲ ಮಕ್ಕಳೂ ಒಂದು ನಿಮಿಷ ಗರಬಡಿದಂತೆ ಆ ಟೀಚರನ್ನೇ ನೋಡತೊಡಗಿದರು. ಕನ್ನಡ ಟೀಚರ್ ಮಾತು ಮುಂದುವರಿಸಿದರು. ” ನನಗೆ ಗೊತ್ತು.. ನೀವೆಲ್ಲ ಏನು ಯೋಚನೆ ಮಾಡ್ತಾ ಇದೀರ ಅಂತ. ನನಗೆ ಕಣ್ಣು ಇವೆಯಲ್ಲ. ಮತ್ತೆ ಸುಟ್ಟು ಹೋಗಿದ್ದು ಹೇಗೆ ಅಂತ ಅಲ್ವಾ..? ಅದು ಕೂಡ ಒಂದು ದೊಡ್ಡ ಕಥೆಯೆ. ನಾನು ಎರಡು ವರ್ಷ ಕಣ್ಣು ಕಳೆದುಕೊಂಡು ಕತ್ತಲಿನ ಪ್ರಪಂಚದಲ್ಲಿದ್ದೆ. ಕುರುಡಿಯಾಗಿದ್ದೆ. ನನ್ನ ಬಣ್ಣದ ಲೋಕ ಮರೆಯಾಗಿಹೋಗಿತ್ತು. ಎಲ್ಲ ಕೆಲಸಗಳಿಗೂ ಬೇರೆಯವರ ಸಹಾಯ ಪಡೆಯತೊಡಗಿದೆ. ನನ್ನ ಶಾಲೆ, ಸ್ನೇಹಿತರು, ಆಟಗಳು ಎಲ್ಲ ನನ್ನಿಂದ ದೂರವಾದುವು. ಕಣ್ಣುಗಳ ಮಹತ್ವ ಆಗಲಷ್ಟೆ ನನಗೆ ತಿಳಿಯಿತು.”

ಈಗ ಮಕ್ಕಳೆಲ್ಲ ಕನ್ನಡ ಟೀಚರಿನ ಕಣ್ಣುಗಳನ್ನೆ ಎವೆಯಿಕ್ಕದೆ ನೋಡತೊಡಗಿದರು. ಅವರ ಕುತೂಹಲ ಹೆಚ್ಚಾಗತೊಡಗಿತು.

ಟೀಚರ್ ತಮ್ಮ ಮುಗುಳ್ನಗೆಯ ಮುಖದಲ್ಲಿ ಮಾತು ಮುಂದುವರಿಸಿದರು.

“ಆದರೆ ಮಕ್ಕಳೇ, ನನ್ನ ಭಾಗ್ಯ ಚೆನ್ನಾಗಿತ್ತು. ದೇವರು ನನ್ನ ಪಶ್ಚಾತ್ತಾಪವನ್ನು ನೋಡಿದರು ಅನ್ನಿಸುತ್ತೆ. ಒಂದು ದಿನ ನನಗೆ ಒಳ್ಳೆಯ ಸುದ್ದಿ ಕಾದಿತ್ತು. ಒಬ್ಬ ಮಹಾನುಭಾವರು ತಾವು ನಿಧನರಾದಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಬೇಕೆಂದು ಹೇಳಿದ್ದರು. ಡಾಕ್ಟರುಗಳು ಆ ದಾನದ ಕಣ್ಣುಗಳನ್ನು ನನಗೆ ಇಟ್ಟು ಆಪರೇಷನ್ ಮಾಡಿದರು. ನೇತ್ರ ದಾನ ಮಾಡಿದ ಆ ಮಹಾನುಭಾವರ ಕಣ್ಣುಗಳೇ ಈಗ ನೀವು ನೋಡುತ್ತಿರುವುದು. ಅವರು ಕಣ್ಣುಗಳನ್ನು ಕೊಟ್ಟು ನನ್ನ ಜೀವನದ ಬೆಳಕಾದರು. ಮತ್ತೆ ನಾನು ಬೆಳಕನ್ನು ಕಾಣುವಂತೆ ಮಾಡಿದರು..! ”

ಟೀಚರ್ ಭಾಷಣ ಮುಗಿಸುವಾಗ ಪಟಾಕಿ ಸುಡಬೇಡಿ ಎಂದು ಮತ್ತೆ ಹೇಳಲಿಲ್ಲ. ಹಾಗೆ ಹೇಳುವ ಅಗತ್ಯವೂ ಇರಲಿಲ್ಲ.

ಸ್ವಲ್ಪ ಹೊತ್ತು ಎಲ್ಲ ಕಡೆ ಮೌನ. ಎಲ್ಲ ಮಕ್ಕಳೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ವಿನೀತ ತಲೆ ಕೆಳಗಿಟ್ಟು ಯೋಚಿಸತೊಡಗಿದ.

ಮೌನ ಮುರಿಯುತ್ತಾ ಹೆಡ್ ಮಿಸ್ ಚಪ್ಪಾಳೆ ತಟ್ಟಿದರು. ಇದ್ದಕ್ಕಿದ್ದಂತೆ ಎಲ್ಲ ಕಡೆಯೂ ಚಪ್ಪಾಳೆಯ ಶಬ್ಧ ಮೊಳಗಿತು.

ಮಕ್ಕಳಲ್ಲಿ ಹೊಸ ನಿರ್ಧಾರಗಳು ಚಿಗುರೊಡೆದವು. ಕನ್ನಡ ಟೀಚರ್ ಕಣ್ಣುಗಳು ನಕ್ಷತ್ರಗಳಂತೆ ಬೆಳಗಿದವು.

ವಿನೀತ ಈ ದೀಪಾವಳಿಗೆ ದೀಪವಷ್ಟೇ ಹಚ್ಚಿ ಟೀಚರಿಗೆ ಈ ವಿಷಯ ಹೇಳಬೇಕು ಅಂದುಕೊಂಡ. ಹಾಗೆ ತಾನು ಹೇಳುವಾಗ ಅವರ ಕಣ್ಣುಗಳಲ್ಲಿ ಬೆಳಕು ಮಿಂಚುವ ಬಗೆಯನ್ನು ಊಹಿಸುತ್ತಾ ಖುಷಿಯಾದ.

***

ಚಿತ್ರ ಕೃಪೆ: ಅಂತರ್ಜಾಲ

(ಪಂಜು ಇ ಪತ್ರಿಕೆಯಲ್ಲಿ ಪ್ರಕಟ. ಲಿಂಕ್: http://www.panjumagazine.com/?p=13403)