ಇಲಿ ಮತ್ತು ಅಳಿಲು

vv1

ನೆಲದ ಬಿಲವು
ಇಲಿಯ ಮನೆ
ಮರದ ಪೊಟರೆ
ಅಳಿಲ ಕೋಣೆ

ಇಲಿಯ ಓಟ
ನೆಲದ ಮೇಲೆ
ಅಳಿಲ ಆಟ
ಮರದ ಮೇಲೆ

ಇಲಿಯ ಬಾಲ
ಬಹಳ ಸಪೂರ
ಅಳಿಲ ಬಾಲ
ಸ್ವಲ್ಪ ತೋರ

ಇಲಿಯ ಬೆನ್ನು
ಬರಿದೆ ನುಣುಪು
ಅಳಿಲಿಗೆ ಮೂರು
ಗೆರೆಗಳ ಹೊಳಪು

ಇಲಿ ಹಲ್ಲಲ್ಲಿ
ಸಿಕ್ಕಿದ್ದು ಕಚ್ಚುವ
ಅಳಿಲು ಮರದ
ಹಣ್ಣು ಮೆಲ್ಲುವ

ಇಲಿಗು ಅಳಿಲಿಗು
ಹಲ್ಲುಗಳು ಚೂಪು
ಎರಡರ ಓಟವೂ
ಬಹಳವೆ ಚುರುಕು

(ವಿಶ್ವವಾಣಿ – ವಿರಾಮದ ಮಕ್ಕಳ ಪುಟದಲ್ಲಿ ಪ್ರಕಟ ತಾ.೧೩.೦೫.೨೦೧೮)

Advertisements

ನೆಡು ಸಸಿ ಗಿಡ

ಪುಟ್ಟನ ಪ್ರಶ್ನೆ:

ಹೊರಗಡೆ ಏತಕ್ಕೆ ಅಷ್ಟೊಂದು ಬಿಸಿಲು?
ಸುಡುತಿದೆ ನಮ್ಮಯ ತಲೆ ಕೈ ಕಾಲು

ಸೂರ್ಯನಿಗೇತಕೆ ಬಂದಿದೆ ಕೋಪ?
ಕೊಡುವನು ನಮಗೆ ಬಹಳವೆ ತಾಪ

ಏನು ತಪ್ಪನು ಮಾಡಿದೆವೆಂದು
ಬೆವರಲ್ಲಿ ಎಲ್ಲರ ತೋಯಿಸುತಿರುವನು?

ಅಪ್ಪನ ಉತ್ತರ:

ಬೆಟ್ಟ ಗುಡ್ಡ ನದಿ ಕಾಡುಗಳನ್ನು
ಮಾನವ ಸುಮ್ಮನೆ ಬಿಟ್ಟಿಹನೇನು ?

ತನ್ನ ಸ್ವಾರ್ಥಕೆ ಅವೆಲ್ಲವುಗಳನ್ನು
ಹಾಳು ಮಾಡಿ ಮೆರೆಯುತಲಿರುವನು

ಸಸಿ ಗಿಡ ನೆಡದೆ ಮರ ಟಿಸಿಲೊಡೆಯದೆ
ಹಸಿರಿಲ್ಲದೆ ಭೂಮಿ ಒಣಗುವುದಿನ್ನೂ

ತಂಪಿಲ್ಲದ ಕಡೆ ಮೋಡ ಬಾರದು ಬಳಿ
ಒಣ ಭೂಮಿಗೆ ಮಳೆ ಸುರಿಯದು ತಿಳಿ

ನೀರನು ಉಳಿಸಿ ಸಸಿಗಳ ಬೆಳೆಸುವ
ಸ್ವಾರ್ಥವ ಸರಿಸಿ ಭೂಮಿಯ ಉಳಿಸುವ

(ವಿಶ್ವವಾಣಿ – ವಿರಾಮ ೨೧.೦೫.೨೦೧೭ ಸಂಚಿಕೆ)

ಬೇಸಿಗೆ ಹುಷಾರು

vvani

ಹಕ್ಕಿಗಳೆ
ಸ್ವಲ್ಪ ಹುಷಾರು
ಸೂರ್ಯನ ತಾಪ ಜೋರು

ಇರುವೆ
ಬರದಿರು ಹೊರಗೆ
ಬಿಸಿಲಿಗೆ ಸುಮ್ಮನೆ ಒಣಗುವೆ

ಅಳಿಲೆ
ಸುಮ್ಮನೆ ಓಡದಿರು
ಮರಗಳ ಬಿಟ್ಟು ಆಡದಿರು

ಬೆಕ್ಕೆ
ನಿನಗೇತಕೆ ಸೊಕ್ಕೆ
ಬಿಸಿಲಿಗೆ ಬಾರದೆ ಬೊಕ್ಕೆ

ನಾಯಿಮರಿ
ತುಂಬಾ ಬೊಗಳಿ
ಬಾಯಾರಿ ಮಾಡಿಕೊಬೇಡ ಕಿರಿಕಿರಿ

ಕರಿಮೋಡಗಳೆ
ಮಳೆ ಹನಿಗಳೆ
ಬನ್ನಿರಿ ಹೊರಗೆ ತಣಿಸಿರಿ ಎಲ್ಲರ ಬೇಗೆ

(Vishwavani – Virama post -Lollypop dt 09.04.2017)

ತಂಗಿಯ ಕಾರುಬಾರು

IMG_6695

ಅತ್ತ ಇತ್ತ ಹೊರಳಿಸಿ ಕಣ್ಣು
ಎಡ ಬಲಕೆ ಆಡಿಸಿ ತಲೆಯನು
ಮೇಲೆ ಕೆಳಗೆ ಬೀಸುತ ಕಾಲನು
ಎತ್ತಿಕೊಳ್ಳಿ ಬನ್ನಿರಿ ಎಂದು
ಲಲ್ಲೆಗರೆದು ಹಾರುತ್ತಾಳೆ
ಬೆನ್ನ ಏರಿ ನಗುತ್ತಾಳೆ
ನನ್ನ ತಂಗಿ ಚತುರೆ!

ಊಟವೆಂದರೆ ದೂರಕೆ ಓಡಿ
ಆಟಿಕೆಗಳನು ಆಚೆಗೆ ದೂಡಿ
ಕಣ್ಣು ತಪ್ಪಿಸಿ ಹೊರಕ್ಕೆ ತೆವಳಿ
ನಾಯಿ ಬೆಕ್ಕು ಹಸುಗಳನೆಲ್ಲ
ಕೈಯನು ತಟ್ಟಿ ಕರೆಯುತ್ತಾಳೆ
ಹಾರಿ ಹಾರಿ ನಲಿಯುತ್ತಾಳೆ
ತಂಗಿ ಸ್ವಲ್ಪವೆ ತರಲೆ!

ಬೇಡ ಬೇಡ ಅಂದರೆ
ಬೇಕೇ ಬೇಕು ಎನ್ನುವ ಹಠವೆ
ಆಡಲು ಬರುವೆಯ ಕೇಳಿದರೆ
ಬಂದಿತು ಮೆಲ್ಲಗೆ ನಿದಿರೆ
ಎಚ್ಚರಾಗಿ ಅಳುವಳು ಹಸಿವಿಗೆ
ಹಾಲು ಕುಡಿದಾದರೆ ಹೂನಗೆ
ಆಟಕೆ ಸ್ಪೂರ್ತಿ ನಮಗದುವೆ !

ಮೊಗ್ಗು ಮೂಗು ಕಪ್ಪು ಹುಬ್ಬು
ಚೂಪು ಕಿವಿ ಕೆಂಪು ಕೆನ್ನೆ
ಮುದ್ದು ಮುಖದವಳೆಂದರೆ
ಬೊಚ್ಚು ಬಾಯಿ ತೆರೆದು
ನಗುವಳು ಅವಳು ಜೋರು
ನನ್ನ ಅಜ್ಜಿಯ ರೀತಿಯೆಲೆ
ತಂಗಿಯ ಕಾರುಬಾರು!

(ವಿಶ್ವವಾಣಿ, ಲಾಲಿ ಪಾಪು ೧೨.೩.೨೦೧೭)

ಲಡ್ಡು ಮತ್ತು ಛೋಟ ಭೀಮ್

bheem-png

ಪುಟ್ಟ ನೋಡೋದು ಒಂದೆ ಕಾರ್ಟೂನು
ಛೋಟಾ ಭೀಮ್ ಗೆ ಇವ ದೊಡ್ಡ ಫ಼್ಯಾನು
ಟೀವಿ ಮುಂದೆ ಕುಳಿತು ರಿಮೋಟು ಹಿಡಿದ್ರೆ
ನಗು ಚಪ್ಪಾಳೆ ಮತ್ತೆ ಬರೋಲ್ಲ ನಿದ್ರೆ

ಕಣ್ಬಿಟ್ಟು ನೋಡ್ತಾನೆ ಭೀಮ್ ನ ಆಟ
ತುಂಬಾನೆ ಮೆಚ್ತಾನೆ ಅವನೋಡೊ ಓಟ
ಗೆಳೆಯರ ಜೊತೆಗೆ ಭೀಮ್ ನ ಒಡನಾಟ
ಶತ್ರು ಮೇಲೆ ಮಾತ್ರ ಭಾರಿ ಹೊಡೆದಾಟ

ಆದ್ರೂನು ಪುಟ್ಟಂಗೆ ಆಶ್ಚರ್ಯ ಒಂದೆ
ಭೀಮ್ ತುಂಬಾನೆ ಲಡ್ಡು ತಿಂತಾನೆ
ಲಡ್ಡುನಿಂದ ಹೇಗೆ ಶಕ್ತಿ ಬರ್ಬಹುದು
ಅನುಮಾನ ಅವ್ನಿಗೆ ಹೇಗೆ ನಂಬೋದು

ಹೊಟ್ಟೆಗೆ ಈ ಲಡ್ಡು ಅಪಾಯ ಗೊತ್ತ
ಹಲ್ಲು ಕೂಡ ಹಾಳು ತಿನ್ಬಾರ್ದು ನಿತ್ಯ
ಡಾಕ್ಟರ್ ಪುಟ್ಟಂಗೆ ಹೇಳಿದ್ದು ಸತ್ಯ
ತಿಳಿಸ್ಬೇಕು ಬೇಗನೆ ಭೀಮಂಗೆ ವಿಷ್ಯ

ಸಿಕ್ಕಿದ್ರೆ ಒಂದ್ಸಲ ಆ ಛೋಟ ಭೀಮು
ಡಾಕ್ಟರ್ ಹತ್ರ ಬುದ್ಧಿ ಹೇಳಿಸ್ಲೆ ಬೇಕು
ಲಡ್ಡು ಬಿಟ್ಟು ಬರಿ ಹಣ್ಣುತರಕಾರಿ
ತಿಂದ್ರೆ ಬೆಳೀತಿದ್ದ ಅವನು ಎತ್ರಕ್ಕೆ ಭಾರಿ

(ವಿಶ್ವವಾಣಿ-ವಿರಾಮ-ಲಾಲಿ ಪಾಪು ದಿ.೦೫.೦೨.೨೦೧೭)

ಮಿಸ್ಟರ್ ಬೀನ್

vv-png

 

ಮಿಸ್ಟರ್ ಬೀನನ್ನು
ನೋಡಿದ್ದೀರೇನು
ಕೈ ಕಾಲು ಸಣ್ಣ
ದೊಡ್ಡ ಮೂಗಣ್ಣ
ಪಿಳಿ ಪಿಳಿ ಕಣ್ಣಲ್ಲೆ
ನಗಿಸುವ ಜಾಣ

ಬಿಡೋಲ್ಲ ಬಾಯಿ
ಬಿಟ್ರೆ ಬೊಂಬಾಯಿ
ನೋಡಿದ್ದೆಲ್ಲ ಬೇಕು
ಹಣ ಉಳಿಯ ಬೇಕು
ಶಿಸ್ತಲ್ಲಿ ಸಿಪಾಯಿ
ಪೆದ್ದು ಬಡಪಾಯಿ

ಜಿಪುಣಾಂದ್ರೆ ಜಿಪುಣ
ಉಳಿಸುತ್ತಾನೆ ಹಣ
ಎಲ್ಲರಿಗಿಂತ ತಾನೆ
ದೊಡ್ಡವನಂತಾನೆ
ಚಿಕ್ಕವರ ಹತ್ರಾನೆ
ಸೋತುಹೋಗ್ತಾನೆ

ಆದ್ರೂನು ಬೀನು
ನಮ್ಗೆಲ್ಲ ಇಷ್ಟ
ಅವನಲ್ಲ ದುಷ್ಟ
ಪಡ್ತಾನೆ ಕಷ್ಟ
ನಗಿಸೋದ್ರಲ್ಲಿ  ಎಂದೂ
ಅವ್ನು ಸದಾ ಮುಂದು

(ವಿಶ್ವವಾಣಿ ಲಾಲಿಪಾಪು ದಿ.೨೫.೧೨.೧೬)