ವೈಷ್ಣವ ಜನತೋ…

ಗಾಂಧೀಜಿಯವರ ಅತಿ ಮೆಚ್ಚಿನ ಭಜನೆ ಗುಜರಾತಿ ಭಾಷೆಯಲ್ಲಿ ಬರೆದಿರುವ ಒಂದು ಭಕ್ತಿ ಗೀತೆ, ವೈಷ್ಣವ ಜನತೋ ತೇಣೆ ಕಹಿಯೆ…

ಹದಿನೈದನೇ ಶತಮಾನದಲ್ಲಿದ್ದ ಸಂತ ನರಸೀ ಭಗತರು ನಿಜವಾದ ವೈಷ್ಣವ (ಭಕ್ತ) ಹೇಗಿರಬೇಕೆನ್ನುವುದನ್ನು ಬಹಳ ಸುಂದರ, ಸರಳ ಶಬ್ಧಗಳಲ್ಲಿ ಹಾಡಿನ ರೂಪದಲ್ಲಿ ಬರೆದಿದ್ದಾರೆ.

ಈ ಭಜನೆ ಸಬರಮತಿ ಆಶ್ರಮದ ನಿತ್ಯ ಪ್ರಾರ್ಥನಾ ಗೀತೆಯಾಗಿತ್ತು.  ಅದು ಗಾಂಧೀಜಿಯ ಉಸಿರೇ ಆಗಿದ್ದ ಗೀತೆ. ಪುಟ್ಟ ಶಬ್ಧಗಳಲ್ಲಿ ಗಹನ ವಿಚಾರಗಳನ್ನು ಅದು ತಿಳಿಸುತ್ತದೆ.

ಒಬ್ಬ ಮನುಷ್ಯ ನಿಜವಾಗಿಯೂ ಸಜ್ಜನಿ, ದೈವ ಭಕ್ತ ಆಗಬೇಕಿದ್ದರೆ ಅವನು ಹೇಗಿರಬೇಕು ಅನ್ನುವುದನ್ನು ಗೀತೆ ತಿಳಿಸುವ ಸೊಬಗು ಚೆಂದದಲ್ಲಿ ಬಂದಿದೆ.  

“ಯಾರು ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುತ್ತಾನೊ
ಯಾರು ಅಹಂಕಾರ ತೊರೆದು ಉಪಕಾರ ಮಾಡುತ್ತಾನೊ,
ಯಾರು ವಿಶ್ವವನ್ನು ಆದರಿಸಿ, ಗೌರವಿಸುತ್ತಾನೊ
ಯಾರು ಮಾತು, ಕೃತಿ, ವಿಚಾರಗಳಲ್ಲಿ ಗಟ್ಟಿಯಾಗಿರುತ್ತಾನೊ,
ಯಾರು ಎಲ್ಲರನ್ನೂ ಸಮಭಾವದಲ್ಲಿ ಕಂಡು,  ಪರಸ್ತ್ರೀಯನ್ನು ತನ್ನ ತಾಯಿಯಂತೆಯೇ ಕಾಣುತ್ತಾನೊ

ಯಾರು ಅನೃತ ತೊರೆದು, ಪರ ಧನಕ್ಕೆ ಆಸೆಪಡದೆ, ರಾಗ, ದ್ವೇಷ ಕೋಪ ತೊರೆದು ವೈರಾಗ್ಯ ಭಾವದಲ್ಲಿರುತ್ತಾನೋ ಅವನು ನಿಜದ ಸಜ್ಜನ (ವೈಷ್ಣವ); ಅವನೇ ನಿಜ ಭಕ್ತ.
ಅಂಥವನಿಗೆ ಸಕಲ ತೀರ್ಥಕ್ಷೇತ್ರಗಳ ದರ್ಶನ ಮಾಡಿದ ಫಲ ಒಲಿದುಬರುತ್ತದೆ”

ಹೀಗೆ ತಿಳಿಸುವ ಈ ಭಜನೆಯ ತಿರುಳನ್ನು ಗಾಂಧೀಜಿ ತಮಗೆ ಆವಾಹಿಸಿಕೊಂಡರು ಅಂದರೆ ಉತ್ಪ್ರೇಕ್ಷೆಯಲ್ಲ.  ಅಲ್ಲಿಯ ನುಡಿಗಳ ಅಂತರಾರ್ಥವನ್ನು ಸಹಜವಾಗಿ ತನ್ನ ಜೀವನ ಶೈಲಿಗೆ ಅಳವಡಿಸಿಕೊಂಡರು. ಅದರಂತೆಯೇ ಅಕ್ಷರಶಃ ನಡೆದರು ಸಹಾ.

ಡಾ.ಎಂ.ಎಸ್ ಸುಬ್ಬಲಕ್ಷ್ಮಿ ಈ ಭಜನೆಯನ್ನು ಗಾಂಧೀಜಿಯವರಿಗೋಸ್ಕರವೆ ಕಲಿತು, ಅದನ್ನು ತಮ್ಮ ಸಿರಿ ಕಂಠದಲ್ಲಿ ಮನಮುಟ್ಟುವಂತೆ ಹಾಡಿ, ಗಾಂಧೀಜಿಗೆ ಕೇಳಿಸಿ ಕೃತಕೃತ್ಯತೆ ಅನುಭವಿಸಿದ್ದಾರೆ. 

ಇಂದು ಗಾಂಧೀಜಿಯವರ ಜನ್ಮದಿನ. ಅವರೆಂದಿಗೂ ನೆನೆಯುತ್ತಿದ್ದ ಆ ಸುಂದರ ಸಾಲುಗಳನ್ನು ಮೆಲುಕು ಹಾಕೋಣ. ಅದು ಗಾಂಧೀ ಜಯಂತಿ ದಿನದ ನಮ್ಮ ಸಾರ್ಥಕತೆಯ ಭಾವವೂ ಹೌದು.

(Pic courtesy:Google)

“ಅಮ್ಮಚ್ಚಿ…” ಎಂಬ ನೆನಪಿನಲ್ಲುಳಿಯುವ ಚಿತ್ರ

ʼಅಮ್ಮಚ್ಚಿ ಎಂಬ ನೆನಪುʼ 2018ರಲ್ಲಿ ಬಹಳ ಸದ್ದು ಮಾಡಬೇಕಿತ್ತು. ಹೌದು, ಕಲಾತ್ಮಕ ಚಿತ್ರಗಳ ನಡುವೆ ಅದರ ಸದ್ದು ಕರ್ನಾಟಕದಾಚೆಗೂ ಕೇಳಬೇಕಿತ್ತು. ಅದೇನೂ ನನಗೆ ತಿಳಿಯದು.

ಡಾ. ವೈದೇಹಿಯವರ ಕತೆಗಳ ಗೊಂಚಲಿನಿಂದ ʼಅಮ್ಮಚ್ಚಿʼ ಚಿತ್ರ ಅರಳಿದೆ. ಚಲನಚಿತ್ರ ವೀಕ್ಷಣೆ ಇತ್ತೀಚೆ ಕಡಿಮೆಯಾದ ಕಾರಣ, ಈ ಚಿತ್ರ ಇತ್ತೀಚೆಗೆ ʼನೆಟ್‌ ಫ್ಲಿಕ್ಸ್‌ʼ ಅಲ್ಲಿ ನೋಡಬೇಕಾಯಿತು. ಚಿತ್ರ ಬಿಡುಗಡೆಯಾದಾಗ ಹೆಚ್ಚು ಸುದ್ದಿಯಾಗಿದ್ದರೆ ಈ ಹಿಂದೆಯೇ ನೋಡಿರುತ್ತಿದ್ದೆನೋ ಏನೋ.

ಅಬ್ಬಾ! ʼನೇಟಿವ್‌ ಟಚ್ʼ ಅಂದರೆ ಇದು. ಕುಂದಾಪುರದ ಹಳ್ಳಿ, ಜನರ ನಡೆ, ಅಲ್ಲಿಯ ಅಚ್ಚ ಹಳಗನ್ನಡಕ್ಕೆ ಹತ್ತಿರದ ಭಾಷೆ, ಉಡುಗೆ ಹಾಗೇ ಮುಗ್ಧತೆ ಎಲ್ಲವೂ ಚಿತ್ರದೊಳಗಿಳಿದು ನೋಡುಗನನ್ನು ಮೈ ಮರೆಸುತ್ತದೆ. ಸ್ತ್ರೀ ಶೊಷಣೆಯ ಹಲವಾರು ಮುಖಗಳು ಕಥೆಯ ಭಾಗವಾಗಿದ್ದರೂ ಅವನ್ನೆಲ್ಲ ತುರುಕಿದಂತೆ ಅನಿಸುವುದಿಲ್ಲ. ಎಲ್ಲೂ ಭಾವಾತಿರೇಕಗಳಿಲ್ಲ. ಹಾಗಾಗಿ ನೋಡುಗನ ಮನಸ್ಸು ಕರಗಿಸಿಬಿಡುತ್ತದೆ. ಅಮ್ಮಚ್ಚಿ ಎಂಬ ಹದಿಹರೆಯದ ಹುಡುಗಿಯ ಕನಸಿನೊಂದಿಗೆ, ನಿಜ ಜೀವನದ ಕಠುರತೆಗಳನ್ನು ನಿರ್ಲಿಪ್ತದಲ್ಲಿ ಹೇಳುವ ಕಲಾವಂತಿಕೆ ಚಿತ್ರದಲ್ಲಿದೆ.

ಕಥೆಯ ಹಂದರಕ್ಕೆ ಪಾತ್ರಗಳ ಆಯ್ಕೆ ಅತ್ಯುತ್ತಮ. ಇಲ್ಲಿ ಯಾರೂ ಅಭಿನಯಿಸಿಲ್ಲ. ಪಾತ್ರಗಳ ಜೀವವೇ ಆಗಿಬಿಟ್ಟಿದ್ದಾರೆ. ಹೀಗೆ ಪ್ರತಿ ಪಾತ್ರವೂ ನಮಗೊಂದು ವಿಸ್ಮಯ. ಮಿತಿ ಇಲ್ಲದಷ್ಟು ಸಹಜತೆ! ಈ ಉದ್ಗಾರವೇ ನನಗೆ ತೋಚಿದ ಶ್ಲಾಘಿಸುವ ರೀತಿ!

ಛಾಯಾಗ್ರಹಣ, ಸಂಗೀತ ಮತ್ತು ಹಾಡುಗಳು ಹದ ಮಿಳಿತ, ಸುಂದರ.

ʼಕೆಲ ಹೂವ ಹಣೆ ಬರಹ ಅರಳಿದೊಡೆ ಬಾಡಲು…ʼ
ʼಸರಪಳಿ ಇಲ್ಲದೆ ಬಂಧಿ ಇವಳೀ ಹುಡುಗಿ ….ʼ,
ʼಏಳು ಸುತ್ತಿನ ಕೋಟೆ ಸುತ್ತಿ ಕೊಲ್ಲುವ ಕೋಟೆ…ʼ,

ಎಲ್ಲ ಆರು ಹಾಡುಗಳು ಇಂಪು. ನನಗೆ ಹೆಚ್ಚು ಇಷ್ಟವಾದವು ಈ ಮೂರು.

ನಿರ್ದೇಶಕಿ ಚಂಪಾ ಪಿ ಶೆಟ್ಟಿ ಕನ್ನಡದ ಶ್ರೇಷ್ಠ ನಿರ್ದೇಶಕರ ಸಾಲಿಗೆ ಸಲೀಸಾಗಿ, ಸದ್ದು ಮಾಡದೇ ಸೇರಿಬಿಟ್ಟಿದ್ದಾರೆ.

ʼಅಮ್ಮಚ್ಚಿʼ ಈಗಾಗಲೇ ಪ್ರಶಸ್ತಿಗಳನ್ನು ಬಾಚಿಕೊಳ್ಳಬೇಕಿತ್ತು. ಅದರ ʼರೇಟಿಂಗ್ʼ ಅತ್ಯುತ್ತಮವಿರಬೇಕಿತ್ತು. ದೊಡ್ಡ ಸಂಖೈಯಲ್ಲಿ ಜನ ಚಿತ್ರ ನೋಡಬೇಕಿತ್ತು. ವಿಮರ್ಶಕರಿಂದ ಪ್ರಶಂಸೆಯ ಸುರಿಮಳೆಯಾಗಬೇಕಿತ್ತು. ಅವೆಲ್ಲ ಆಯಿತೋ ಇಲ್ಲವೋ ತಿಳಿಯುತ್ತಿಲ್ಲ.

ಎಲ್ಲರ ಅದ್ಭುತ ಅಭಿನಯಗಳ ನಡುವೆ ನನಗೆ ನೆನಪಲ್ಲಿ ಅಚ್ಚೊತ್ತಿರುವುದು ಶ್ರೀ ರಾಧಾಕೃಷ್ಣ ಉರಾಳರ “ಪುಟ್ಟಮ್ಮತ್ತೆ” ಪಾತ್ರ! ಶ್ರೀ ರಾಜ್‌ ಬಿ ಶೆಟ್ಟಿ ಅಭಿನಯದಲ್ಲಿಇಲ್ಲೂ ಅಸಾಮಾನ್ಯತೆ ಮೆರೆದಿದ್ದಾರೆ!

ಇಷ್ಟೆಲ್ಲ ಬರೆದದ್ದು ಯಾಕೆಂದರೆ ನೀವೂ ನೋಡಬಾರದೇಕೆ ಅನ್ನುವ ಪ್ರಕಟಿತ ಆಸೆ!

ಇನ್ನು ನನ್ನ ʼಸ್ಟಾರ್‌ ರೇಟಿಂಗ್‌ʼ ಎಷ್ಟು ಕೇಳಿದರೆ, ʼಐದಕ್ಕೆ ಪೂರಾ ಐದುʼ.

(Pic from Google)

ಅನುಶ್ರೀ

dprathnammaandmanjamma-1581328982

ಅನುಶ್ರೀ – ಕನ್ನಡ ವಾಹಿನಿ ಸಿರಿ

ಜಿ಼ೀ ಕನ್ನಡ ವಾಹಿನಿಯಲ್ಲಿ ʼಸರಿಗಮʼ ಸಂಗೀತ ಕಾರ್ಯಕ್ರಮ ಪ್ರತಿ ಶನಿವಾರ, ಭಾನುವಾರ ಕೆಲವು ವಾರಗಳಿಂದ ನಡೆಯತೊಡಗಿದೆ.

ಆಡಿಷನ್‌ ಪ್ರಕ್ರಿಯೆಯ ಸಂಚಿಕೆಗಳಂತೂ ನನಗೆ ಬಹಳವೇ ಇಷ್ಟವಾಗಿ ಎಲ್ಲ ಸಂಚಿಕೆಗಳನ್ನೂ ಬಿಡದೆ ನೋಡಿದ್ದಾಯ್ತು.  ಬಂದ ಎಲ್ಲ ಗಾಯಕ ಸ್ಪರ್ಧಿಗಳು ಮಂದಿಯ ಮನಸೆಳೆಯುವಂತೆಯೇ, ಮಾತುಗಳಲ್ಲಿ ಮನ ಸೆಳೆದವರು ವಿಜಯ ಪ್ರಕಾಶ್‌  ಹಾಗೆಯೇ ಹಂಸಲೇಖ.  ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಸರಿ ಗಮ ನಿರ್ವಾಹಕಿ ಅನುಶ್ರೀ.   ಕುಳಿತು ಕಾರ್ಯಕ್ರಮ ನೋಡುವ ಮನೆಮಂದಿಗೆ ಈಕೆ ಆ ಮನೆಯ ಮಗಳು, ಅಕ್ಕ ಅಥವಾ ತುಂಟ ತಂಗಿ ಅಥವಾ ಮೊಮ್ಮಗಳೂ ಅಗಿಬಿಟ್ಟರು!

ಅನುಶ್ರೀ ನಡೆಸಿಕೊಟ್ಟ ಅನೇಕ ಸಂಚಿಕೆಗಳನ್ನು ನೋಡಿದ ನನಗೆ ಒಂದನ್ನು ಮರೆಯಲೇ ಅಗುತ್ತಿಲ್ಲ. ಅದು ಮಧುಗಿರಿಯಿಂದ ಬಂದ ಇಬ್ಬರು ಅಂಧ ಸೋದರಿಯರು (ರತ್ನಮ್ಮ ಮತ್ತು ಮಂಜಮ್ಮ) ಆಡಿಷನ್‌ಗಾಗಿ ಹಾಡುವಾಗಿನ ದೃಶ್ಯಗಳು. ಆ ಸೋದರಿಯರು ಸಂಕೋಚ, ಭಯವಿದ್ದರೂ ಯಾವುದೋ ಬೆಳಕಿನ ಕಿರಣಗಳತ್ತ ಕೈಚಾಚುವಂತೆ ಹಾಡತೊಡಗಿದ್ದಾರೆ.   ಪಕ್ಕದ ಕೊಠಡಿಯಲ್ಲಿ ಅವರ ಅಜ್ಜಿ ಕುಳಿತಿದ್ದಾಳೆ. ಅಜ್ಜಿಯ ಮನಸ್ಸು ದುಗುಡಗೊಂಡಿದೆ.   ತನ್ನ ಮೊಮ್ಮಕ್ಕಳು ಹಾಡು ಚಂದದಲ್ಲಿ ಹಾಡಬಲ್ಲರೇ?  ಅಲ್ಲಿ ಕುಳಿತು ಕೇಳುವ ಜಡ್ಜ್‌ಗಳಿಗೆ, ಕೇಳುಗರಿಗೆ ಇಷ್ಟವಾಗಬಹುದೇ?  ಇವೆಲ್ಲ ಮುಗಿದ ನಂತರ ಮೊಮ್ಮಕ್ಕಳೊಂದಿಗೆ ತನ್ನೂರಿಗೆ ಹಿಂತಿರುಬೇಕಿದೆಯಲ್ಲ… ತನ್ನಲ್ಲಿ ಬಸ್ಸಿಗಾಗುವಷ್ಟು ಹಣ ಉಳಿದಿರಬಹುದಲ್ಲ?     ತನ್ನ ಮೊಮ್ಮಕ್ಕಳು ಏನು ಮಾಡಿಯಾರು?   ಇತ್ಯಾದಿ  ಚಿಂತೆಯಲ್ಲಿ ಮುಳುಗಿದಂತಿರುವ ಅಜ್ಜಿ ಎತ್ತಲೋ ನೋಡುತ್ತಾ ಆ ಮಕ್ಕಳ ಹಾಡನ್ನು ಕೇಳುವ ಅಥವಾ ಎದುರಿನ ಟಿವಿ ಪರದೆಯನ್ನು ನೋಡುವುದನ್ನು ಮರೆತುಬಿಟ್ಟದ್ದಾಳೆ!

ಆ ಕ್ಷಣ ಅನುಶ್ರೀ ಅಜ್ಜಿಯ ಗಲ್ಲ ಹಿಡಿದು ಅವಳ ಮುಖ ಟಿವಿ ಕಡೆಗೆ ತಿರುಗಿಸಿಟ್ಟು, ʼಅಜ್ಜೀ… ನಿಮ್ಮ ಮೊಮ್ಮಕ್ಕಳ ನೋಡಿ… ಅವರ ಹಾಡು ಕೇಳಿʼ ಅನ್ನುತ್ತಿದ್ದಾಳೆ!   ಅಜ್ಜಿ ಎಚ್ಚರಗೊಂಡಂತೆ ಅವರ ಹಾಡು ಕೇಳತೊಡಗಿದ್ದಾಳೆ.   ಕಣ್ತೆರುದು ನೋಡತೊಡಗಿದ್ದಾಳೆ. ಕೆಲವೇ ಕ್ಷಣಗಳು, ನಂತರ ಮತ್ತೊಂದು ದೃಶ್ಯ ಹಾದುಬರುತ್ತದೆ. ಅಲ್ಲಿ ಅನುಶ್ರೀ ಸಣ್ಣ ಬಾಲಕಿಯಾಗಿದ್ದಾಳೆ. ನೆಲದಮೇಲೆ ಕುಳಿತು ಆಸೆಗಣ್ಣಿನಿಂದ ಆ ಅಂಧಸೋದರಿಯರು ತನ್ನ ಅಕ್ಕಂದಿರೇ ಹಾಡುತ್ತಿರುವಂತೆ, ಅವರು ಖಂಡಿತಾ ಆಯ್ಕೆಗೊಳ್ಳುತ್ತಾರೆನ್ನುವ ಭರವಸೆಯ ಮುಖಹೊತ್ತು ಕುಳಿತಿದ್ದಾಳೆ!   ʼದೇವರೇ ಈ ಇಬ್ಬರೂ ಆಯ್ಕೆಯಾಗಲಿʼ ಅನ್ನುವ ಪ್ರಾರ್ಥನೆಯಲ್ಲಿ ಕುಳಿತಂತೆ, ಆಸೆಗೋಪುರದ ತುದಿಹಿಡಿದಿರುವ ಮುಗ್ಧ ಮಗುವಿನಂತೆ ಆ ‘ತಾರೆ’ ಕಾಣಿಸುತ್ತಾಳೆ. ಆ ದೃಶ್ಯ ನನಗೆ ಕಾವ್ಯಮಯವಾಗಿಬಿಟ್ಟಿದೆ. ಹಾಗೆಯೇ ನನ್ನ ಮಂತ್ರಮುಗ್ಧವಾಗಿಸಿಬಿಟ್ಟಿದೆ. ಎತ್ತಲಿಂದಲೋ ಬಂದ ಆ ಬಡ ಕುಟುಂಬದವರಿಗೆ ಅನುಶ್ರೀ ಅನ್ನುವ ತಾರೆ ಮನೆಯ ಮಗಳಾಗಿ ಕಾಣುತ್ತಿದ್ದಾಳೆ.   ಹೃದಯಸಂಪನ್ನೆಯಾಗಿದ್ದಾಳೆ.   ನೋಡುಗರ ಮನಹೊಕ್ಕು ಅಚಾನಕ ಅವರ ಕಣ್ಣಲ್ಲಿ ಹನಿ ಜಿನುಗುವಂತೆ ಮಾಡಿಬಿಟ್ಟಿದ್ದಾಳೆ!  ದೃಶ್ಯಲೋಕದ ಬಣ್ಣಬಣ್ಣಗಳಿಂದ ಹೊರಬಂದ ಗಟ್ಟಿನೆಲದ ವಾಸ್ತವ ರೂಪಿಯಾಗಿದ್ದಾಳೆ Anchor ಅನುಶ್ರೀ!    ಆ ಕಣ್ಣು ಕಾಣದ ಸೋದರಿಯರ ಕಣ್ಮಣಿಯಾಗಿಬಿಟ್ಟಿದ್ದಾಳೆ!

ಆ ದೃಶ್ಯ ಮತ್ತೆ ಮತ್ತೆ ನನ್ನೊಳಗೆ ರಿವೈಂಡ್‌(rewind) ಆಗಿ ಪ್ಲೇ (play) ಆಗುತ್ತಲೆ ಇದೆ!

ಈಗಾಗಲೇ ಸುದ್ದಿ ಹರಿದಾಡಿದೆ… ಅದರ ಶೀರ್ಷಿಕೆ ಇಂತಿದೆ – ʼಅನುಶ್ರೀಯ ನಿಜವಾದ ಮುಖ ಬಯಲು!ʼ

ಅರ್ಜುನ್‌ಜನ್ಯ, ಜಗ್ಗೇಶ್‌, ದರ್ಶನ್‌ಹೀಗೆ ರತ್ನಮ್ಮ ಸೋದರಿಯರ ಬಗೆಗೆ ಕರಗಿ, ತಮ್ಮ ಸಹಾಯ ಹಸ್ತ ಚಾಚಿದ್ದು ಈಗ ಮನೆ ಮಾತು ಕೂಡ.

(Pic courtesy:Google)

ಕನ್ನಡ ಓದುವ ಮಕ್ಕಳು

k

ನವೆಂಬರ್‌ 2019
“ಕನ್ನಡ” ಕೋಟ್ಯಧಿಪತಿ ಕಾರ್ಯಕ್ರಮ.
ಸರ್ಕಾರಿ ಕನ್ನಡ ಶಾಲೆಯಿಂದ ಬಂದ ಮಕ್ಕಳಿಗಾಗಿ ಕಾರ್ಯಕ್ರಮ…
ಅಲ್ಲಿ ತೇಜಸ್‌ ಆಯ್ಕೆಯಾಗಿ ಉತ್ತರಿಸಲು ಕುಳಿತಿದ್ದಾನೆ.
ಪ್ರಶ್ನೆಯೊಂದರ ಉತ್ತರಗಳ ಆಯ್ಕೆಯಲ್ಲಿ ಒಂದು ಉತ್ತರ “ಬೈನಾಕ್ಯುಲರ್”‌
ಈ ಇಂಗ್ಲೀಷಿನ ಪದ ತಿಳಿಯದು ಆ ಕನ್ನಡ ವಿದ್ಯಾರ್ಥಿಗೆ.
ಕನ್ನಡದಲ್ಲಿ “ದೂರದರ್ಶಕ”. ಅದು ಅವನಿಗೆ ತಿಳಿದಿತ್ತು.
ಕಾರ್ಯಕ್ರಮ ನಿರ್ವಾಹಕರಿಗೆ ಕನ್ನಡ ಪದ ತಿಳಿಯದಲ್ಲ!
ವೀಕ್ಷಕ ಮಕ್ಕಳ ಸಹಾಯದಿಂದ ಅವನು “ಬೈನಾಕ್ಯಲರ್”‌ ಅಂದ. ಮುಂದಿನ ಸುತ್ತಿಗೆ ಅರ್ಹತೆ ಪಡೆದ.
(ಇಷ್ಟು ಮಾತ್ರ ನಾನು ನೋಡಿದ್ದು)
ಖೇದವೇನೆಂದರೆ-ತಿಳಿದವರಿಂದಲೇ ಇಂಥಹ ತಪ್ಪು ಕನ್ನಡಮಕ್ಕಳಿಗಾಗುತ್ತಿರುವುದರ ಬಗೆಗೆ.

ತೇಜಸ್ ಕೊನೆಗೂ ೬‌,೪೦,೦೦೦ ಹಣ ಗೆದ್ದಿದ್ದಾನೆ!
ಶಾಲೆಯ ಬಳಿ ಮರ ಬೆಳೆಸುವ, ಅಪ್ಪ ಅಮ್ಮಂದಿರಿಗೆ ಸಹಾಯ ಮಾಡುವ,
ಒಂದು ಎಕರೆ ಜಮೀನು ಕೊಳ್ಳುವ, ಭೂಮಿ ಉಳುವ, ರೈತನಾಗುವ ಸುಂದರ ಕನಸು ಹೊತ್ತಿದ್ದಾನೆ.
(ಖುಷಿಯಾಯಿತು.)

 

ಧರ್ಮ ಸಂಭಾಷಣೆ

god

ನಾನು ಸ್ವತಂತ್ರ”

ಹೌದು ನೀನು ಸ್ವತಂತ್ರನೇ, ಅಲ್ಲ ಅಂದವರು ಯಾರು?

ನಾನಿರುವ ದೇಶವೂ ಸ್ವತಂತ್ರ ದೇಶ”

ಹೌದು.. ನಮ್ಮದು ಸ್ವತಂತ್ರ ದೇಶವೇ..

ನಾನು ಅನುಸರಿಸುತ್ತಿರುವುದು ಧರ್ಮ”

ಹೌದು.. ಅನುಮಾನವಿಲ್ಲ

ನನ್ನದು ಸ್ವತಂತ್ರ ಧರ್ಮ”

ನಿನ್ನ ಧರ್ಮ ಯಾರು ಕಟ್ಟಿಹಾಕಿದ್ದಾರೆ?

ನನ್ನ ಧರ್ಮ ಸ್ವತಂತ್ರವೆಂದು ಘೋಷಣೆ ಮಾಡಬೇಕು”

ನಿನ್ನ ಘೋಷಣೆ ಒಪ್ಪಿದ್ದೇವೆ.. ಇನ್ಯಾರು ಮಾಡಬೇಕು?

ಈ ದೇಶದ ಸಂವಿಧಾನ ಅನ್ನುವ ಕಟ್ಟಳೆಯಲ್ಲಿ”

ಅದರಿಂದ ಸಾಧಿಸುವುದೇನು?

ಅದು ನನ್ನನ್ನು ವಿಶೇಷನೆಂದೂ

ಇತರರಿಗಿಂತ ಭಿನ್ನನೆಂದೂ

ಶ್ರೇಷ್ಠನೆಂದೂ

ಉಳಿದವರು

ಅನ್ಯರೂ

ಅನ್ಯಾಯಗಾರರೂ

ಅಪದ್ಧರೂ

ಅರೆತಿಳಿವಳಿಕೆಯವರೂ

ಅಸಹನೆಯವರೂ

ಅಲ್ಪರೂ ಅಧಮರೂ

ಒಡೆದವರೂ ಒದ್ದವರೂ…………………”

ಸಾಕು ಸಾಕು ತಿಳಿಯಿತು.. ಉಪಯೋಗಗಳೇನು?

ಅಲ್ಪ ಮತಿಗಳಿಗೆ ಅದು ತಿಳಿಯದು ಬಿಡು”

ನಿನ್ನ ಧರ್ಮಕ್ಕೆ ಹೆಸರಿದೆಯೆ…?  ಇಡಬೇಕೆ?

 

(photo courtesy: Internet)

ಚಾಲಾಕಿತನ

ur

ಚಾರ್ವಾಕತನದಲ್ಲಿ ಬಹಳ ಚಾಲಾಕಿತನವಿದೆ.

ತಮ್ಮ ಮಾತಿನಲ್ಲಿ ಹಿಕಮತ್ತು ತುಂಬಿ ಒಬ್ಬರಿಗೊಬ್ಬರು ತಲೆ ತರಿದುಕೊಳ್ಳುವಂತೆಯೋ, ದೊಂಬಿಯಾಗುವಂತೆಯೋ ಮೂರ್ಖಾಸ್ತ್ರಗಳನ್ನು ಪತ್ರಿಕೆಗಳಲ್ಲಿ, ಟೀವಿ ಅಥವಾ ಸಭೆಗಳಲ್ಲಿ ಗುರಿಯಿಲ್ಲದೆ ಹರಿಯಬಿಡುವ ಈ ಮಂದಿ, ದೂರ ದಡದಿಂದ ಒಂದೇ ಕಣ್ಣಿನಿಂದ ಮುಖ ಪುಟಗಳಲ್ಲಿ, ಜನರ ತುಟಿಗಳಲ್ಲಿ ಹಾಗೇ ರದ್ದಿಯಲ್ಲಾದರೂ ಸರಿ, ತಮ್ಮ ಸುದ್ದಿಯಾಯಿತೇ ಎಂದು ಹಪಹಪಿಸುತ್ತಾರೆ.

ಇವರುಗಳ ಕೃತಿ ಕಡಿಮೆ ಇದ್ದರೂ, ನುಡಿದ ವಿಕೃತಿ ಮಾತುಗಳು ಉಳಿಯುವಂತೆ ನೋಡಿಕೊಳ್ಳುತ್ತಾರೆ. ಅಭಿನವ ಪ್ರಕಾಂಡ ಚಾರ್ವಾಕರುಗಳ ಮಹತ್ ಕೃತಿಗಳೆಲ್ಲವೂ ಧ್ವಂಸವಾಯಿತೆಂದು ಮತ್ತು ದೇವರ ಅಸ್ತಿತ್ವದ ಬಗೆಗೆ ಇವರು ಮಾಡಿದ ಅನೇಕಾನೇಕ ಪ್ರಯೋಗ, ಪರೀಕ್ಷೆಗಳೆಲ್ಲವೂ ಮೂಲಭೂತವಾದಿಗಳಿಂದ ಹತವಾಯಿತೆಂದೊ / ಮುಚ್ಚಿಡಲಾಗಿದೆಯೆಂದೊ ಮುಂದೊಂದು ದಿನಗಳಲ್ಲಿ ಎದೆ ಬಡಿದುಕೊಳ್ಳುತ್ತಾರೆ.

ಹಾಗೆಯೇ ಕಲಬುರ್ಗಿಯವರ ’ಮೂರ್ತಿ ಮೂತ್ರೋಪಖ್ಯಾನ” ವೊಂದೇ ಉಪದೇಶವಾಗಿ ಉಳಿದುಕೊಂಡಿದೆಯೆಂದು ಸಾರುತ್ತಾರೆ. ಇದರಿಂದ ಜನರ ಉದ್ಧರಿಸಬೇಕೆನ್ನುವ ಮಹತ್ ಯೋಚನೆ ಇತ್ತೀಚಿನ ಚಾಲಾಕಿ ಚಾರ್ವಾಕ ಮಂದಿ ಎದೆಯೊಳಗೆ ಹೊಗಿಸಿಕೊಂಡಿದ್ದಾರೆ.

ಮೇಲಿನ ಉಪಖ್ಯಾನದಿಂದ ಮೌಢ್ಯರು ಸನ್ಮಾರ್ಗ ಹಿಡಿಯುವ ದಿನ ದೂರವಿಲ್ಲ. ಏಕೆಂದರೆ, ಕರ್ನಾಟಕದ ಮು.ಮಂ.ಳು ಪ್ರಯೋಗಾಲಯಗಳನ್ನು ಈ ಮಂದಿಗೆ ರಾಜ್ಯದ ತುಂಬಾ ಕಟ್ಟಿಕೊಡಬಹುದು ಮತ್ತು ’ಮೂರ್ತಿಭಾಗ್ಯ’ ಅಥವಾ ’ಮೂತ್ರಿಭಾಗ್ಯ’ ಎನ್ನುವ ಯೋಜನೆ ಸದ್ಯದಲ್ಲೇ ಚಾಲು ಆಗಬಹುದು.

(ಶ್ರೀಯುತ ಎಂ.ಎಂ.ಕಲ್ಬುರ್ಗಿಯವರ ಕನ್ನಡ ಪ್ರಭದಲ್ಲಿ ತಾ.೧೦.೦೬.೧೪ರ ಹೇಳಿಕೆಯ ಪ್ರತಿಕ್ರಿಯೆ)

ಬ್ಲಾಗ್ ಬಗೆಗೆ…

Anantharamesh

ಈ ಸೃಷ್ಟಿ ವಿಸ್ಮಯಗಳ ಸಂತೆ. ಯಾವುದಕ್ಕೆ ಅಚ್ಚರಿ ಪಡಬೇಕೆನ್ನುವುದು ಅವರವರ ಬುದ್ಧಿಮಟ್ಟಕ್ಕೆ ಬಿಟ್ಟದ್ದು.

ಒಬ್ಬನಿಗೆ ಹಾರುವ ವಿಮಾನ ವಿಸ್ಮಯತೆಯಾದರೆ, ಮತ್ತೊಬ್ಬನಿಗೆ ನೀರಿನಲ್ಲಿ ಈಜುವ ಮೀನು.
ನಕ್ಷತ್ರಗಳ ಪುಂಜಕ್ಕೆ ಗೋಣು ಮೇಲೆತ್ತಿದರೆ, ಇನ್ನೊಬ್ಬ ಮಿಣುಕು ಹುಳುಗಳ ಕುತೂಹಲಿ,
ಈ ಎಲ್ಲ ಅಚ್ಚರಿಗಳ ಗೋಪುರದ ಮೇಲೆ ಮನುಷ್ಯ ತನಗೆ ತಾನೇ ಅಚ್ಚರಿಯ ಒಂದು ಮಾಂಸ ದೇಹದೊಂದಿಗೆ ನಿಂತಿದ್ದಾನೆ.

ಅವನು ತನ್ನ ವಿಕಾಸ ವಾದವನ್ನು ತಾನೇ ಮಂಡಿಸಿಕೊಂಡಿದ್ದಾನೆ.
ಕಳೆದುಹೋದ ರಸ್ತೆಯಲ್ಲಿ ತಾನೆಷ್ಟು ಉಪಕ್ರಮಿಸಿದ್ದೇನೆ ಮತ್ತು ಉಳಿದ ದಾರಿ ಎಷ್ಟು ಇರಬಹುದೆನ್ನುವ ಲೆಕ್ಕವಿಟ್ಟಿದ್ದಾನೆ. ಅವಕ್ಕೆ ಪುರಾವೆಗಳನ್ನೂ ಕೊಡುತ್ತಾನೆ.

ಗೊಂದಲಿಗರಿಗೆ ಆಧ್ಯಾತ್ಮದ ಆವಿಷ್ಕಾರವನ್ನೂ ಮಾಡಿದ್ದಾನೆ.

ತನ್ನದೇ ಸೃಷ್ಟಿಯ ಭಾಷೆ, ಲಿಪಿಗಳನ್ನು ಬಳಸುತ್ತಾನೆ. ಶ್ರವಣದಿಂದ ಉಳಿಸಿಕೊಳ್ಳುವ ಸಾಹಸದಿಂದ. ಹೊರಬಂದು ಮುದ್ರಣದ ಮೊರೆಹೊಕ್ಕಿದ್ದಾನೆ. ಈಗ, ಅದರಾಚೆಗೂ ಬಂದು ಅಂತರ್ಜಾಲ ಜಾಲದಲ್ಲಿ ಈಜುತ್ತಾ ಬಲೆ ಹೆಣೆದು; ಬೆರಳುಗಳಲ್ಲಿ ಬುದ್ಧಿ ಕೀಲಿಸಿ ವಿಸ್ಮಯಗಳನ್ನು ಹೊರತೆಗೆಯುತ್ತಿದ್ದಾನೆ.

ಈ ಬ್ಲಾಗ್ ಕೂಡ ಅದರದ್ದೊಂದು ಅತಿ ಸಣ್ಣ ಅಂಗ. ಸಂವಹನಕ್ಕೆ ಮತ್ತೊಂದು ರಂಗ

ಹೀಗೇ ಬರೆದದ್ದು….

 tmp

ಅನೇಕ ಹಂಬಲಗಳಲ್ಲಿ ಬದುಕು ಸಾಗುತ್ತದೆ. ಒಳಗಿನ ಲಹರಿಗಳು ಒಂದಷ್ಟು ಮಂದಿಯನ್ನು ತಲುಪಬೇಕೆನ್ನುವುದು,  ಹಾಗೇ ನಮ್ಮ ಲಹರಿಗಳು ದಾಖಲಾಗಬೇಕೆನ್ನುವುದು ಹಂಬಲಗಳ ಪಟ್ಟಿಯಲ್ಲೊಂದು.

ಹರಿದು ಹೋದದ್ದೆಲ್ಲಾ ಹೋಗಿ, ಭೂತದಲ್ಲಿ ಸೋರದೇ ಹೋದದ್ದು ಮತ್ತು ವರ್ತಮಾನದಲ್ಲಿ ಹರಿಯುವುದನ್ನು ಸ್ವಲ್ಪವಾದರೂ ಉಳಿಸಿಕೊಳ್ಳಲು ಈ ಬ್ಲಾಗ್ ಸಹಾಯ ಹಸ್ತದಂತಿದೆ.

ಕೆಲವೊಮ್ಮೆ ನಿರ್ಲಿಪ್ತತೆ ಸರಿ.  ಹಾಗೆಯೇ, ಈ ಅಸಾಮಾನ್ಯ ಅಖಂಡತೆಯಲ್ಲಿ ಮ್ಲಾನತೆ ಸರಿಯೆಂದೂ ಅನ್ನಿಸುವುದಿಲ್ಲ. ಕಂಡದ್ದು, ವಿವೇಚನೆಗೆ ಸಿಲುಕಿದ್ಡು ಇಲ್ಲಿ ತೋಚಿದಂತೆ ಕೀಲಿಸೋಣ.

ಯಾವತ್ತೂ ಕಾಡುವುದೆಲ್ಲ ದಾಖಲಾಗುತ್ತವೆ.

‘ನಿನ್ನೆ’ ಯಿಂದಲೇ ಪ್ರಾರಂಭಿಸೋಣ.