ಸ್ವಿಚ್‌ ಬೋರ್ಡ್‌ ನೋಡಿ ಕತ್ತು ಉಳುಕಿದ್ದು

Anantha Ramesh

ಚಿಕ್ಕದೊಂದು ಫೋಟೊ ಹಳೆ ಆಲ್ಬಂಗಳ ನಡುವೆ ಕಾಣಿಸಿದ್ದೇ, ನೆನಪಿನ ಹಕ್ಕಿ ಭೂತಕಾಲಕ್ಕೆ ಹಾರುತ್ತಾ, ತನ್ನದೊಂದು ಗರಿಯನ್ನೆಳೆದು ಅಕ್ಷರಗಳ ಕೊರೆಯತೊಡಗಿತು.

ಒಂದು ಭಾನುವಾರದ ಬೆಳಿಗ್ಗೆ ಪ್ರಹ್ಲಾದ ರಾವ್‌ ಮತ್ತು ನಾನು ಗಾಂಧೀ ಬಜಾರಿನ ಡಿವಿಜಿ ರಸ್ತೆಯಲ್ಲಿ ಮಾತಾಡುತ್ತಾ, ಅಂಗಡಿ ಸಾಲುಗಳ ಕಡೆಗೆ ಕಣ್ಣು ಹಾಯಿಸುತ್ತಾ, ಆಗ ಮಹತ್ವವೆನಿಸುತ್ತಿದ್ದ, ಈಗ ಯೋಚಿಸಿದರೆ ನಗು ತರಿಸುವ ಸಂಭಾಷಣೆಯಲ್ಲಿ ತೊಡಗಿ ಸಾಗಿದ್ದೇವೆ.

“ಪ್ರಹ್ಲಾದ್‌, ಇಲ್ಲಿ ನೋಡ್ರಿ ಸ್ಟುಡಿಯೋ. ಪಾಸ್‌ ಪೋರ್ಟ್‌ ಸೈಜ಼್ ಫೋಟೋ ಬೇಕಿತ್ತಲ್ಲ. ಬನ್ನಿ ಇಲ್ಲೇ ತೆಗೆಸೋಣ ” ಅಂದೆ. ಸಾಮಾನ್ಯವಾಗಿ ಆ ಹಳೆಯ ದಿನಗಳಲ್ಲಿ ಸ್ಟುಡಿಯೊಗಳು ಕಟ್ಟಡದ ಮೊದಲ ಅಥವಾ ಎರಡನೇ ಮಹಡಿಗಳಲ್ಲಿ ಇರುತ್ತಿದ್ದುವು. ಆದರೆ ಇದು ಗ್ರೌಂಡ್‌ ಫ್ಲೋರಲ್ಲೇ ಇದೆ. ಪ್ರಹ್ಲಾದ್‌ ಯಾಕೋ ಇಂಪ್ರೆಸ್‌ ಆದಂತೆ ಕಾಣಲಿಲ್ಲ.

“ರಮೇಶ್..‌.. ನಮ್ಮ ರೂಮಿನ ಹತ್ರವೇ ಫಸ್ಟ್ ಫ್ಲೋರಲ್ಲೇ ನಟರಾಜ್‌ ಸ್ಟುಡಿಯೋ ಅದೇರಿ. ನೀವೇ ನಿನ್ನೆ ಹೇಳಿದ್ರಲ್ಲಾ ಅಲ್ಲೇ ತೆಗ್ಸೋಣು ಅಂತ” ಅನ್ನುತ್ತಾ ಮುಂದೆ ಹೆಜ್ಜೆ ಇಟ್ಟರು. ನಾನು ಮುಂದಿನ ಹೆಜ್ಜೆ ಇಡುವುದರಲ್ಲಿ ಆ ಸ್ಟುಡಿಯೋದ ಒಳಗಿನ ಗೋಡೆಯ ಒಂದು ಫೋಟೋ ನನ್ನ ಕಣ್ಣುಗಳನ್ನು ಸೆಳೆಯಿತು. ನಿಂತು ಕಣ್ಣು ಕಿರಿದು ಮಾಡಿ ನೋಡಿದೆ. ಕಪ್ಪು ಬಿಳುಪಿನ ಆ ಫೋಟೊ ಒಬ್ಬ ಯುವಕನದು. ಕತ್ತು ಸ್ವಲ್ಪವೇ ತಿರುಗಿಸಿ ಎಲ್ಲೋ ದೃಷ್ಟಿ ನೆಟ್ಟ ಚಿತ್ರ. ಆಹಾ… ಕ್ಯಾಮರಾ ಮನ್‌ ಕೈಚಳಕವೆ! ಅನ್ನಿಸಿತು. ಒಂದು ಸಾಮಾನ್ಯ ಮುಖ ಇಷ್ಟು ಚೆಂದವಾಗಿ, ಕಲಾವಂತಿಕೆಯಲ್ಲಿ, ದೃಷ್ಟಿ ಸೆಳೆಯುವಂತೆ ಹಳೆ ಗೋಡೆಯ ಮೇಲೆ ರಾರಾಜಿಸುತ್ತಿದೆ.

ಅದೇ ಕ್ಷಣ ನನಗೆ ಏನನ್ನಿಸಿತೋ, “ಪ್ರಹ್ಲಾದ್‌, ಇಲ್ಲೇ ತೆಗೆಸೋಣರೀ. ಈ ಸ್ಟುಡಿಯೋದ ಫೋಟೋಗ್ರಫರು ಆರ್ಟಿಸ್ಟ್‌ ಥರಾ ಫೋಟೋ ತೆಗೀತಾರೆ ಅನ್ಸತ್ತೆ. ನೋಡೋಣ ಬನ್ನಿ” ಅಂತ ಒಳ ನುಗ್ಗಿದೆ. ಪ್ರಹ್ಲಾದ್‌ “ನಿಮ್ದು ಭಾಳ ಫಿಕ್ಲ್‌ ಮೈಂಡ್‌ ಅದಾ ನೋಡ್ರೀ” ಅಂತ ಮನಸ್ಸಿಲ್ಲದ ಮನಸ್ಸಿನಿಂದ ಸ್ಟುಡಿಯೊ ಒಳಗೆ ಅಡಿ ಇಟ್ಟರು.

ಸುಮಾರು ಐವತ್ತರ ಆಸು ಪಾಸಿನವರೊಬ್ಬರು ಅಲ್ಲಿ ಕುಳಿತಿದ್ದರು. ಬಿಳಿ ಶರ್ಟ್‌, ಪ್ಯಾಂಟ್‌, ತಲೆ ಕೆದರಿತ್ತು. “ಪಾಸ್‌ ಪೋರ್ಟ್‌ ಸೈಜ಼್ ಫೋಟೋಗಳ?” ಅಂತ ಅವರೇ ಕೇಳಿದರು! ನಾನು ಅದೇ ನನ್ನ ಮೆಚ್ಚಿನ ಫೋಟೋ ಇರುವ ಗೋಡೆಯನ್ನು ನೋಡುತ್ತಾ “ಹೌದು” ಅಂದೆ.

ಆಗ ನಾಲ್ಕು ಫೋಟೊಗಳಿಗೆ ಹತ್ತು ರೂಪಾಯಿ ಇದ್ದಿರಬಹುದು. ಮರೆತಿದ್ದೇನೆ. ಗೋಡೆಯ ಮೇಲಿನ ಆ ಫೋಟೋ ದೊಡ್ಡ ಸೈಜ಼್ ನದು. ಆ ಸೈಜ಼್ ಫೋಟೊ ಒಂದು ಕಾಪಿಗೆ ಕಡಿಮೆ ಅಂದರೂ ಐವತ್ತು ರೂಪಾಯಿ ಆಗಬಹುದು ಅಂತ ಮನಸ್ಸು ಲೆಕ್ಕ ಹೇಳಿತು. ಅಯ್ಯೋ. ಅಷ್ಟಾದರೆ ಜೇಬಲ್ಲಿರುವ ನೂರು ರೂಪಾಯಿಯಲ್ಲಿ ಅರ್ಧ ಖೋತಾ!

“ಇಬ್ಬರದೂ ಬೇಕಾ?” ಪ್ರಹ್ಲಾದರೂ ತಲೆಯಾಡಿಸಿದರು. ಪಾಪ! ಗೆಳೆಯನಿಗೆ ನನ್ನ ತಲೆಯಲ್ಲಿ ಏನು ನಡೆಯುತ್ತಿದೆ ಅನ್ನುವುದು ಗೊತ್ತಿಲ್ಲ.

ಫೋಟೋಗ್ರಾಫರ್, “ಒಬ್ಬರು ಬನ್ನಿ”ʼ ಅಂತ ಆರ್ಮ್‌ ರೆಸ್ಟ್‌ ಇಲ್ಲದ ಒಂದು ದುಂಡು ಮರದ ಕುರ್ಚಿ ತೋರಿಸಿದರು. ಪ್ರಹ್ಲಾದರು ಅಲ್ಲೇ ಮೂಲೆಯಲ್ಲಿದ್ದ ಕನ್ನಡಿ ನೋಡಿ ತಮ್ಮ ಸೊಂಪಾದ ತಲೆಯನ್ನು ಕೈಯಲ್ಲಿ ಸರಿ ಮಾಡಿಕೊಳ್ಳುವಾಗ, “ಅಲ್ಲೇ ಪೌಡರು, ಬಾಚಣಿಗೆ ಇದೆ” ಅಂದರು ಅವರು. ಗೆಳೆಯ ಕ್ಯಾಮರಾಗೆ ಸಿದ್ಧತೆ ನಡೆಸುವಾಗ ನಾನು ಕ್ಯಾಮರಾಮನ್‌ ಗೆ ಕೇಳಿದೆ “ಈ ದೊಡ್ಡ ಸೈಜ಼್ ಪ್ರತಿಗೆ ಎಷ್ಟಾಗುತ್ತೆ?” ಅಂತ ಗೋಡೆಯ ಆ ಚಿತ್ರ ತೋರಿಸಿದೆ. ” ಆ ಸೈಜ಼್ ಆದರೆ ಎಪ್ಪತ್ತೈದು ರೂಪಾಯಿ ಆಗುತ್ತೆ ಎರಡು ಪ್ರಿಂಟ್‌ ಸಿಗುತ್ತೆ” ಅಂದರು. ನನಗೆ ಗೊತ್ತಿಲ್ಲದೇ “ಅಯ್ಯಬ್ಬಾ!ʼ ಅಂತ ಉದ್ಗಾರ ತೆಗೆದೆ.

ಪ್ರಹ್ಲಾದರು ಕುಳಿತರು. ಕ್ಯಾಮರಾಮನ್‌ ಅಲ್ಲೇ ಮೂಲೆಯ ಕ್ಯಾಮರ ಸ್ಟ್ಯಾಂಡ್ ಹತ್ತಿರ ಹೋಗಿ, ತಲೆಯ ಮೇಲೆ ಕಪ್ಪು ಬಟ್ಟೆ ಹಾಕಿಕೊಂಡು, “ಸ್ಟೆಡಿ.. ಆಂ.. ಇಲ್ಲಿ ನೋಡಿ. ಸ್ವಲ್ಪ ತಲೆ ಕೆಳಗೆ.. ಇಲ್ಲೆ ನೋಡಿ. ಕಣ್ಣು ಮಿಟುಕಿಸಬಾರದು. ಎಸ್.‌ ಎಸ್‌.” ಅನ್ನುತ್ತಾ ಕ್ಯಾಮರಾ ಕ್ಲಿಕ್ಕಿಸಿದರು. ಆ ಕಪ್ಪು ಗೌನಿನಿಂದ ಹೊರಬಂದ ಕ್ಯಾಮರಾಮನ್‌ ತಲೆ ಕೂದಲು ಇನ್ನಷ್ಟು ಕೆದರಿತ್ತು!

ಅದಾದಮೇಲೆ, ನಾನು ತಲೆಬಾಚಿ, ಸ್ವಲ್ಪ ಪೌಡುರು ಬೆವೆತ ಮೂಗಿಗೆ ಹಚ್ಚಿ ಆ ಕುರ್ಚಿಮೇಲೆ ಕುಳಿತೆ. ಸುಮ್ಮನಾಗದೆ, ” ಆ ಫೋಟೋ ಆರ್ಟಿಸ್ಟಿಕ್‌ ಆಗಿ ತೆಗೆದಿದ್ದೀರಿ” ಅಂತ ನನ್ನ ಮೆಚ್ಚಿನ ಫೋಟೋ ತೋರಿಸಿ ಅಂದೆ. “ನಿಮ್ಮದೂ ಹಾಗೇ ಒಂದು ತೆಗೀಲೇನು ?” ತಕ್ಷಣ ಪ್ರಶ್ನೆ ಬಂತು!

“ಆದ್ರೆ ನನ್ನ ಹತ್ರ ಆ ಬಜೆಟ್‌ ಇಲ್ವಲ್ಲ” ಅಂದೆ. “ಚಿಕ್ಕದೇ ತೆಗೀಲಾ…ಪಾಸ್‌ ಪೋರ್ಟ್‌ ಸೈಜ಼್ ರೇಟಲ್ಲಿ?” ನನಗೆ ಪರಮಾಶ್ಚರ್ಯ!

ಪ್ರಹ್ಲಾದರಿಗೆ ನನ್ನ ಮನಸ್ಸಿನ ಇಂಗಿತ ಗೊತ್ತಾಗಿಬಿಟ್ಟಿತ್ತು. ನಾನು ಉತ್ತರ ಕೊಡೋ ಮೊದಲೇ “ಆಯ್ತು ಬಿಡ್ರಿ.. ಪಾಸ್‌ ಪೋರ್ಟ್‌ ಮೂರು ಕಾಪಿ, ಈ ಥರ ಸ್ಟೈಲ್‌ ದು ಎರಡು ಕಾಪಿ ತೆಗೆದು ಕೊಡ್ರಿ. ಮತ್ತೆ ನಾವಿಬ್ರೂ ಒಟ್ಟಿಗೆ ಇರೋದು ಎರಡು ಕಾಪಿ. ಸ್ವಲ್ಪ ದೊಡ್ಡ ಸೈಜ಼್ ಇರ್ಲಿ, ಆಯ್ತೇನ್ರೀ” ಅಂದರು!

ಅಂತೂ ನಮ್ಮ ಫೋಟೋ ಬಜೆಟ್‌ ಲೆಕ್ಕ ತಪ್ಪಿತ್ತು. ನನಗೆ ಮಾತ್ರ ಒಳಗೊಳಗೆ ಖುಷಿ. ನನ್ನದು ಗೋಡೆಯಲ್ಲಿ ಅಲಂಕರಿಸಿರುವ‌ ಥರದ ಫೋಟೋ ಜೊತೆಗೆ ಪ್ರಹ್ಲಾದರೊಂದಿಗೆ ಜೋಡಿ ಚಿತ್ರ!

ಮೊದಲು ನನ್ನ ಪಾಸ್‌ ಪೋರ್ಟ್‌ ಕ್ಲಿಕ್ಕಿಸಿದ್ದಾಯ್ತು. ನಂತರ, ಕ್ಯಾಮರಾಮನ್‌ “ಹಾಗೇ ಕುಳಿತು ಕತ್ತು ಸ್ವಲ್ಪ ಓರೆ ಮಾಡಿ, ಅದೇ ಈ ಫೋಟೋದಲ್ಲಿದ್ದ ಹಾಗೆ” ಅಂದರು. ನಾನು ಸ್ವಲ್ಪ ಕತ್ತು ಓರೆ ಮಾಡಿ ಕ್ಯಾಮರಾ ಕಡೆ ನೋಡುತ್ತಾ ಕುಳಿತೆ. ಅವರು ಸ್ಟ್ಯಾಂಡ್ ಬಳಿಗೆ ಹೋಗಿ ಕಪ್ಪು ಮುಸುಕಿನೊಳಗೆ ಒಮ್ಮೆ ನನ್ನ ಕಡೆ ಫೋಕಸ್‌ ಮಾಡಿ, ಹೊರ ಬಂದು, ” ಕ್ಯಾಮರಾ ಕಡೆ ನೋಡಬೇಡಿ, ಕತ್ತು ಸ್ವಲ್ಪ ಬಲಕ್ಕೆ ತಿರುಗಿಸಿ”. ನಾನು ಹಾಗೇ ಮಾಡಿದೆ. “ಇಲ್ಲ ಸರಿಯಾಗಲಿಲ್ಲ. ತಲೆ ಸ್ವಲ್ಪ ಮೇಲೆತ್ತಿ. ದೃಷ್ಟಿ ಬಲಕ್ಕಿರಲಿ”. ನಾನು ಮತ್ತೆ ಕತ್ತಿತ್ತಿ ಬಲಕ್ಕೆ ಸ್ವಲ್ಪ ನೋಡಿದೆ. “ಹಾಗಲ್ಲ.. ನಿಮಗೆ ಈ ಥರಾನೇ ಪೋಟೋ ಇರಬೇಕಲ್ವ? ಮತ್ತೆ ಹಾಗೇ ಕೂತ್ಕೊಬೇಕಲ್ವ?” ಮತ್ತೆ ಕತ್ತು ಓರೆ ಮಾಡಿದೆ. ಅವರಿಗೆ ಸಮಾಧಾನವಾಗಲಿಲ್ಲ. ಏನೋ ಹೊಳೆದಂತೆ, “ನೋಡಿ ಕತ್ತು ಹೀಗೇ ಓರೆ ಇರಲಿ, ಕಣ್ಣು ಮೂಲೇಲಿ ಇದ್ಯಲ್ಲ ಸ್ವಿಚ್ ಬೋರ್ಡ್..‌ ಅದರ ಮೇಲೇ ಇಡಿ. ನಾನು ಎಸ್..‌ ಎಸ್..‌ ಅಂತ ಎರಡು ಸರಿ ಅನ್ನೋವರೆಗೆ ಅಲ್ಲಾಡಬಾರದು”. ನಾನು ಅವರು ಹೇಳಿದಂತೆ ಆ ಕಪ್ಪಿಟ್ಟು ಹೋಗಿದ್ದ ಸ್ವಿಚ್‌ ಕಡೆ ನೋಡುತ್ತಾ ಕುಳಿತೆ.

“ಎಸ್..‌ ಎಸ್..‌ ” ಅನ್ನೋದು ಕೇಳೋವರೆಗೆ ಕುಳಿತೆ. ಕೆಲವು ನಿಮಿಷಗಳಾಯಿತು. ನನಗೆ ಹಾಗೆ ಓರೆ ಮಾಡಿ, ಸ್ವಿಚ್‌ ನೋಡುತ್ತಾ ಕುಳಿತುಕೊಳ್ಳುವುದು ಕಷ್ಟ ಅನ್ನಿಸತೊಡಗಿತು. ಕುತ್ತಿಗೆಯಲ್ಲಿ ಸ್ವಲ್ಪ ನೋವು ಕೂಡಾ ಕಾಣಿಸಿಕೊಂಡಿತು! “ಅಯ್ಯೋ ರಾಮ.. ಇನ್ನೆಷ್ಟು ಹೊತ್ತಪ್ಪ?” ಅಂತ ಮನಸ್ಸಲ್ಲಿ ಗೊಣಗುವುದಕ್ಕೂ “ಎಸ್.. ಎಸ್”‌ ಅವರು ಕೂಗುವುದಕ್ಕೂ ತಾಳೆಯಾಗಿ, ಮೆಲ್ಲಗೆ ಎದ್ದೆ.

ಕತ್ತು ಮಾತ್ರ ಸ್ವಲ್ಪ ಉಳುಕಿ, ನನ್ನ ದೃಷ್ಟಿಯೂ ಸ್ವಲ್ಪವೇ ಓರೆಯಾಗಿತ್ತು! ಕ್ಯಾಮರಾಮನ್‌ ತಲೆಕೂದಲು ಭಯಂಕರ ಕೆದರಿತ್ತು!

ಮತ್ತೆ ನಮ್ಮಿಬ್ಬರ ಜಂಟಿ ಫೋಟೋಗೆ ತಯಾರಾದೆ. ಪ್ರಹ್ಲಾದರು ಹೇಳುವುದಕ್ಕೆ ಮೊದಲೇ ಕತ್ತು ಓರೆ ಮಾಡಿ ಸ್ವಿಚ್‌ ನೋಡುತ್ತಾ ಕೂತರು. ನನಗೇನೂ ಕಷ್ಟವಾಗಲಿಲಲ್ಲ. ಮೊದಲೇ ಉಳುಕಿತ್ತಲ್ಲ! ತಡಮಾಡದೆ ಕ್ಯಾಮರಾ ಮನ್‌ ಆ ಫೋಟೋ ಎರಡೇ ನಿಮಿಷದಲ್ಲಿ ತೆಗೆದುಬಿಟ್ಟರು.

“ಎರಡು ದಿನ ಬಿಟ್ಟು ಬನ್ನಿ” ಅಂದರು. ಪ್ರಹ್ಲಾದ್‌ ಇಪ್ಪತ್ತು ಮತ್ತು ನಾನು ಮೂವತ್ತು ರೂಪಾಯಿ ಹಾಕಿ ಅಡ್ವಾನ್ಸ್‌ ಹಣ ಕೊಟ್ಟು ಎನ್‌ ಆರ್‌ ಕಾಲನಿಯ ರೂಮಿನತ್ತ ಪ್ರಹ್ಲಾದರೂ, ವಿವೇಕ ನಗರದ ರೂಮಿನತ್ತ ನಾನೂ ಹೊರಟೆವು.

ಎರಡು ದಿನಗಳನ್ನು ಹೇಗೆ ಕಳೆದೆನೋ ತಿಳಿಯದು. ನನಗೆ ನನ್ನ ಚಿತ್ರ ಹೇಗೆ ಬಂದಿರ ಬಹುದು? ಪ್ರಹ್ಲಾದ್‌ ಮತ್ತೆ ನಾನು ಒಟ್ಟಿಗೇ ಕುಳಿತು ತೆಗೆಸಿದ ಚಿತ್ರ ಹೇಗಿರಬಹುದು? ಇವೇ ಯೋಚನೆ!

“ಪ್ರಹ್ಲಾದ್‌ ಈವತ್ತು ಸಂಜೆ ಸ್ಟುಡಿಯೋಗೆ ಹೋಗಿ ನಮ್ಮ ಫೋಟೋ ಮರೀದೆ ತಗೋಬೇಕು” ಅಂದೆ.

“ಆ ಫೋಟೋಗ್ಯಾಕೆ ತಲೆ ಕೆಡ್ಸಿಕೋತೀರ. ನಾನು ಈವತ್ತು ಆಫೀಸ್‌ ಮುಗ್ಸಿ ಗಾಂಧೀ ಬಜಾರ್‌ ಹೋಗಿ ಎಲ್ಲ ಫೋಟೋ ತಗೊಂಡು ನಾಳೆ ಆಫೀಸ್ಗೆ ತರ್ತೀನಿ” ಅಂದರು.

ನಾನು ಆ ದಿನ ಪ್ರಹ್ಲಾದ್‌ ಜೊತೆಯೇ ಹೋಗಿ ಫೋಟೊ ತೆಗೆದುಕೊಂಡು, ಎನ್‌ ಆರ್‌ ಕಾಲನಿಯ ರೂಮಲ್ಲಿ ಇರಬೇಕೆನ್ನುವ ಪ್ಲಾನ್‌ ಮುರಿದುಬಿತ್ತು. “ಇನ್ನೂ ಒಂದು ದಿನ ಕಳೆಯಬೇಕಲ್ಲ.. ಅವೆಲ್ಲ ನೋಡಲು” ಅಂತ ಚಡಪಡಿಸಿದೆ, ನಿಟ್ಟುಸಿರು ಬಿಟ್ಟೆ.

ಮರುದಿನ ಆಫೀಸಲ್ಲಿ ಪ್ರಹ್ಲಾದ್‌ ಸಿಕ್ಕರು. ಫೋಟೋ ಸಿಕ್ಕಲಿಲ್ಲ! “ನಿನ್ನೆ ಏನಪಾ ಆಯ್ತಂದ್ರೆ, ಮಂಜಪ್ಪ (ಗೆಳೆಯ ಕರುಣಾಕರ ಮಂಜುನಾಥ್) ಮತ್ತೆ ನಾನು ಚಿಕ್ಕಪೇಟೆ ಕಡೆ ಹೋದ್ವಿ. ರೂಂಗೆ ವಾಪಸ್‌ ಆಗಿದ್ದೇ ರಾತ್ರಿ ಎಂಟರ ತಾಸಿಗೇರಿ. ಸ್ಟುಡಿಯೋ ಕಡೆ ಹೋಗ್ಲಿಕ್ಕಾಗ್ಲಿಲ್ರೀ” ಅನ್ನೋದೆ!

ನನಗಾದ ನಿರಾಸೆ ತೋರಿಸಲಿಲ್ಲ. ಆಫೀಸ್‌ ಮುಗಿದ ಮೇಲೆ, “ಪ್ರಹ್ಲಾದ್..‌ ನನಗೆ ಗಾಂಧೀಬಜಾರ್‌ ಹತ್ರನೇ ಸ್ವಲ್ಪ ಕೆಲಸ ಇದೆ. ನಿಮ್ಜೊತೆ ಬರ್ತೀನಿ. ಹಾಗೇ, ಸ್ಟುಡಿಯೋಗೆ ಹೋಗಿ ನಮ್ಮ ಫೋಟೋ ತೆಗೆದುಕೊಳ್ಳೋಣ” ಅಂದೆ. ಪ್ರಹ್ಲಾದ್‌ ಗೆ ಒಳಗೊಳಗೇ ನಗು!

ಅಂತೂ ಫೋಟೊ ಬಂತು. ಅದನ್ನು ನೋಡುತ್ತಾ ನನ್ನ ಕುತ್ತಿಗೆಯ ‘ಉಳುಕೂ’ ಮರೆಯಿತು! ನನ್ನ ‘ಹುಳುಕು’ ಮುಖಕ್ಕಿಂತ ಬಹಳ ಸುಂದರವಾಗಿ ಕಾಣುವ ಆ ಫೋಟೋ ಇಲ್ಲಿ ಹಾಕಿದ್ದೇನೆ. ಪ್ರಹ್ಲಾದರು ‘ಫಿಕಲ್‌ ಮೈಂಡ್‌’ ಜೊತೆ ಕುಳಿತು ತೆಗೆಸಿಕೊಂಡ ಚಿತ್ರ ಹುಡುಕುತ್ತಿದ್ದೇನೆ! ಅದನ್ನೂ ಹಾಕುತ್ತೇನೆ.

ನಾಲ್ಕು ದಶಕಗಳು ಉರುಳಿದರೂ ನೆನಪು ಇನ್ನೂ ಅರಳಿಯೇ ಇದೆ, ಈ ಚಿತ್ರದೊಂದಿಗೆ. ನನ್ನ ಕೃತಜ್ಞತೆ ಇಂದಿಗೂ ಇದೆ, ಆ ಕಲಾಕಾರ ಕ್ಯಾಮರಾಮನ್‌ಗೆ .

***

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s