
ಸಂಜೆಯತ್ತಲ ತನು
ಲವಲವಿಕೆಯಲಿ ಮನ
ದೂರವೆನಿಸದ
ಆಯಾಸವೆನಿಸದ ನಡಿಗೆ
ಅಲ್ಲಲ್ಲಿ ಬಿರುಕು
ಸಿಮೆಂಟುದುರಿದ
ಕೆಂಬಣ್ಣದಿಟ್ಟಿಗೆಯ
ಕಾಲಿಳಿಬಿಟ್ಟು ಹರಟೆ
ಗೆ ಪಕ್ಕಾದ ಪಟ್ಟಾಂಗ ಕಟ್ಟೆ
ದಿವಸಗಳ ದವಸ
ಹೊತ್ತ ಬಂಡಿಯವರು
ಸುದ್ದಿಗಳ ಕೊಡಕೊಳ್ಳುವವರು
ಬದಲಾದ ಸಂತೆ ಬೀದಿಗೆ
ದೂರುತ್ತಾ ಆಗಾಗ ನಿಟ್ಟುಸಿರು
ಪುಕ್ಕಟೆ ಪುರಾಣದವರು
ಲಲನೆಯರ ನಗೆಯಿಂದ
ಅಜ್ಜಿಅಳುವರೆಗೆ
ಉಂಡೆಗಟ್ಟಿದ ನೂಲ
ಗೋಜಲಿಲ್ಲದ ಬ್ರಹ್ಮಗಂಟು
ಬಿಡಿಸಿ ನೋಡುವ ತರಲೆ
ರಹಸ್ಯ ಜಾಲ ಭೇದಿಸಿದ
ಗಟ್ಟಿ ಟೊಳ್ಳು ಡೊಳ್ಳು ಹೊಟ್ಟೆ
ಕಾಯದವರ ಲೀಲೆ!
ಮಡದಿ ಹಂಗಿಸಿದ ಮುಖ
ಮಕ್ಕಳಾಡಿದ ವ್ಯಂಗ್ಯ
ಎದುರು ಮನೆ ಮಾನವರ
ನಿರ್ಭಾವ ಮುಖ ಮರೆತು
ಮಿಕ್ಕಿರುವ ಇವರಲ್ಲೆ ಮೆರೆವ
ಅಟ್ಟಹಾಸದ ತವಕ
ಆಗುಹೋಗುಗಳ ಗೊಡವೆ
ಹಾದುಹೋಗುವವರ ನಡುವೆ
ಕೆದಕು ಕುತೂಹಲ
ಅರ್ಧ ಲೋಟದ ಕಾಫಿ
ಸುರುಳಿ ಸಿಗರೇಟು ಹೊಗೆಗೆ
ಸಹಸ್ರಾರಕ್ಕೆ ಚಿಟಿಕೆ ನಶ್ಯ
ದ ಘಾಟು, ಕಟ್ಟೆ ಪಕ್ಕದ ಖುಲ್ಲ
ಹೋಟೆಲ್ಲು ಗಲ್ಲದ ಮೇಲೋಬ್ಬರು
ತಂಬಾಕು ಮೆಲ್ಲುತ್ತಾ
ನೋಟಿಗೆ ಚಿಲ್ಲರೆ ಕೊಡುವವರು
ನಿರಾಶೆ ಮಳೆಗೆ ಕೊಡೆಹಿಡಿದು
ಹೆಜ್ಜೆ ಹಗುರಾಗಿಸುವ
ರಾಡಿ ತಿಳಿಯಾಗಿಸುವ
ಮೆಟ್ಟಲಿರುವ ವೈರಾಗ್ಯ ಅಟ್ಟುವ
ರಾತ್ರಿ ನಿದ್ರೆಗೆ ಉಪಾಯಗಳ
ಆವಿಷ್ಕಾರದ ಮಗ್ಗುಲು ಬದಲಿಸುವ
ಕಳೆವ ಲೆಕ್ಕದವರು ಕಲೆವ
ಬೀಳ್ಕೊಡುಗೆಯಲಿ ನಾಳೆಯ
ಆಸೆ ಹೊತ್ತಿಸುವ ಸೋಮಾರಿ ಕಟ್ಟೆ
(Published in:https://panjumagazine.com/?p=17629}