ಬಚ್ಚಿಟ್ಟ ಮಕ್ಕಳ ಪದ್ಯಗಳು

20200219_210352_2

ಹಳೆಯ ನೋಟ್ ಪುಸ್ತಕದಲ್ಲಿ ಬಚ್ಚಿಟ್ಟ ಎಳೆಯ ಪದ್ಯಗಳ ಕಥೆ.

ಸುಮಾರು ೪ ದಶಕಗಳಿಂದ ಹಳೆಯ ಮೂರು-ನಾಲ್ಕು ಸೂಟ್ಕೇಸುಗಳು ನನ್ನ ಅಂಟಿಕೊಂಡಿದ್ದುವು. ನಾನು ಹೋದ ಊರುಗಳಿಗೆಲ್ಲ ಅವುಗಳದೂ ಪ್ರಯಾಣ. ವಿಚಿತ್ರವೆಂದರೆ ಅವನ್ನು ಯಾವತ್ತೂ ತೆರೆದು ನೋಡದಿರುವುದು. ಮನೆಯಲ್ಲಿ ಯಾರಾದರೊಬ್ಬರು ಒಮ್ಮೊಮ್ಮೆ ಅವನ್ನು ತೆರೆದದ್ದಿದೆ. ಒಂದಷ್ಟು ಹಳೆಯ ನೋಟ್ ಪುಸ್ತಕಗಳು ಅವು. ಅದರಲ್ಲಿದ್ದುದೆಲ್ಲ ಯಾವುದೋ ಗತಕಾಲದ ಕುರುಹುಗಳಂತೆ ಕಾಣುತ್ತಿದ್ದ ಕಾರಣ ಅವನ್ನೆಲ್ಲ ತೆರೆದು ನೋಡುವ ಮನಸ್ಸು ಮನೆಯವರಾರೂ ಮಾಡಿರಲಿಲ್ಲ.

ಮೊನ್ನೆ ಹಳೆಯ ಕೊಳೆಯ ಸೂಟ್ಕೇಸುಗಳನ್ನು ಬಿಬಿಎಂಪಿಯವರ ಕಸ ಸಂಗ್ರಹಕ್ಕೆ ಹಾಕಿಬಿಡುವ ಆಲೋಚನೆ ಬಂದಿದ್ದೇ ಮೇಲಿದ್ದದ್ದನ್ನೆಲ್ಲ ತೆಗೆದೆ. ಧೂಳು ಝಾಡಿಸಿ ಸೂಟ್ಕೇಸ್ ತೆರೆದೆ. ನೋಟ್ ಪುಸ್ತಕಗಳು ವಿಚಿತ್ರ ಬಣ್ಣಗಳಲ್ಲಿ ಕಾಣಿಸದವು. ಪುಟಗಳನ್ನು ತೆರೆದಂತೆ ನನ್ನ ಬಾಲಿಶ ಬರಹಗಳು ಗೀಚು ರೂಪದಲ್ಲಿ ಅಣಕಿಸಿದವು. ಸಧ್ಯ, ಮನೆಯವರು ಯಾರೂ ಇವನ್ನು ನೋಡದೆ ಮರ್ಯಾದೆ ಉಳಿಯಿತು ಅಂದುಕೊಂಡೆ. ಆಗ ಸಿಕ್ಕಿದ್ದು ನಾಲ್ಕು ಪತ್ರಿಕೆಯ ತುಣುಕುಗಳು. ನನ್ನ ೬ ಮತ್ತು ೭ ನೇ ತರಗತಿಯ ದಿನಗಳಲ್ಲಿ ಧೈರ್ಯ ಮಾಡಿ ಬರೆದು, ಪ್ರಜಾವಾಣಿ, ಸಂಯುಕ್ತ ಕರ್ನಾಟಕಕ್ಕೆ ಕಳುಹಿಸಿದ್ದ ಎಳೆಯ(ರ) ಪದ್ಯಗಳು ಅವು! ೪೫ ವರ್ಷಗಳಿಗೂ ಮೊದಲು ಪತ್ರಿಕೆಗಳಲ್ಲಿ ಪ್ರಕಟವಾದ ಕೆಲ ಪದ್ಯ ಈ ಬ್ಲಾಗಲ್ಲಿ ಹಾಕುವ ಆಸೆಯಾಯಿತು. (ಮಕ್ಕಳ ದೇವರು ಪದ್ಯ ಈಗ ಸ್ವಲ್ಪ ತಿದ್ದಿದ್ದೇನೆ) ನನ್ನ ಹೆಸರಿನಡಿ ’ಗುಬ್ಬಿ’ ಅನ್ನುವುದನ್ನು ಓದಿ, ಗುಬ್ಬಿಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದ ಸಾಹಿತಿ ದಿ.ಕಡೂರು ರಾಮಸ್ವಾಮಿ ಯಾರನ್ನೋ ವಿಚಾರಿಸಿ ಮಿಡಲ್ ಸ್ಕೂಲಿನಲ್ಲಿದ್ದ ನನ್ನನ್ನು ’ಯಾರಿವನು?’ ಅಂತ ಕುತೂಹಲದಿಂದ ನೋಡಲು ಬಯಸಿ ಯಾರಮೂಲಕವೊ ಕರೆಸಿದ್ದು ನೆನಪಾಯಿತು!

ಅವರು ಅಭಿಮಾನದಿಂದ ನನ್ನನ್ನು ನೋಡಿದ್ದು, ನಾನು ಸಂಕೋಚದ ಮುದ್ದೆಯಾಗಿ ಅವರಿಗೆ ನಮಸ್ಕಾರವನ್ನೂ ಮಾಡದಿದ್ದದ್ದ್ರು ನೆನಪಾಗುತ್ತಿದೆ!

ಅಚ್ಚರಿಯೆಂದರೆ, ಇತ್ತೀಚೆಗೆ ಮಕ್ಕಳ ಕವನ ಮತ್ತು ಕತೆಗಳನ್ನು ಬರೆಯುವ ಹಳೆ ಚಾಳಿ ಮರುಕಳಿಸಿದೆ!

ಹಳೆಯ ನೆನಪನ್ನು ಇಂದು ಬ್ಲಾಗಿನಲ್ಲಿ ಹಾಕಿ ಮತ್ತೆ ಎಳೆಯನಾಗುವ ತವಕ!

ಜೈ ಭಾರತಾಂಬೆ

ಪಡೆದಿಹೆವು ಸ್ವಾತಂತ್ರ್ಯ
ತೊಡೆದಿಹೆವು ಪರತಂತ್ರ
ನಾವಿಂದು ಸ್ವತಂತ್ರ
ಜೈ ಭಾರತಾಂಬೆ//

ನಾಡಿನಾ ಪ್ರಜೆಗಳು
ನಾವೆಲ್ಲ ಮುಂದೆ
ನಾಡಿನಾ ರಕ್ಷಕರು
ನಾವೆಲ್ಲ ಒಂದೆ
ಜೈ ಭಾರತಾಂಬೆ//

ಗಾಂಧಿ ಬುದ್ಧರ ನಾಡು
ಅತಿ ಪವಿತ್ರ
ದೇಶ ಸೇವೆಗೆ ನಾವು
ಪೂರ್ಣ ಸ್ವತಂತ್ರ
ಜೈ ಭಾರತಾಂಬೆ//

(ಪ್ರ.ವಾ)
ಭರತ ಕಲಿಗಳು

ಭಾರತ ಮಾತೆಯ ಪುತ್ರರು ನಾವು
ಎಂತಹ ಪುಣ್ಯ ಶಾಲಿಗಳು//

ಪವಿತ್ರ ಭೂಮಿಲಿ ಜನಿಸಿಹ ನಾವು
ದೇಹವ ದಣಿಸಿ ದುಡಿಯುವೆವು
ಹೆಮ್ಮೆಯ ನಾಡಲಿ ಪುಟ್ಟಿಹ ನಾವು
ಧನ್ಯತೆ ಪಡೆಯಲು ಶ್ರಮಿಸುವೆವು //೧//

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ
ಮರೆಯದೆ ಮನಸಲಿ ನಮಿಸುವೆವು
ಸ್ವಾತಂತ್ರ್ಯ ಕಲಿಗಳ ನೆನಪಿನ ಸ್ಪೂರ್ತಿಲಿ
ನವ ಭಾರತವನು ರಕ್ಷಿಪೆವು //೨//

ದೇಹದ ಹಂಗನು ದೂರ ತೊರೆದು
ದೇಶದುನ್ನತಿಗೆ ದುಡಿಯುವೆವು
ಸ್ವತಂತ್ರ ನಾಡಲಿ ಜೀವಿಸಿ ನಾವು
ಸ್ವಾರ್ಥ ವಂಚನೆಯ ತೊರೆಯುವೆವು //೩//

ಶಾಂತಿ ಅಹಿಂಸೆಯ ದೇಶವಿದೆನ್ನುವ
ಅರಿವನು ಜಗಕೆ ತೋರುವೆವು
ವೀರ ಹುತಾತ್ಮರು ನಡೆದ ದಾರಿಯಲಿ
ಹೆಜ್ಜೆಯನಿಕ್ಕುತ ನಡೆಯುವೆವು //೪//

(ಸಂ.ಕ)
ಮಕ್ಕಳ ಮನದಲಿ ನೆಹರೂ

ಚಾಚಾ ನೆಹರು ಎಲ್ಲಿಹರು?
ಮಕ್ಕಳ ಮನದಲಿ ನೆಲೆಸಿಹರು/

ಮಕ್ಕಳ ಮೆಚ್ಚಿನ ಚಾಚಾ ನೆಹರು
ಎಳೆಯರ ಬಳಗದ ಮುದ್ದಿನ ನೆಹರು
ಬಾಲರ ಗುಂಪಿನ ಪ್ರೀತಿಯ ನೆಹರು

ಮಕ್ಕಳ ಬಿಟ್ಟು ಅವರೆಲ್ಲಿಹರು
ಮಕ್ಕಳ ಮನದಲಿ ನೆಲೆಸಿಹರು//೧//

ಶಾಂತಿದೂತನೆನಿಸಿದ ನೆಹರು
ಭಾರತ ಮಾತೆಯ ಹೆಮ್ಮೆಯ ನೆಹರು
ಗಾಂಧೀಜಿ ಮೆಚ್ಚಿದ ಆ ನೆಹರು

ಮಕ್ಕಳಿಗೆಲ್ಲ ಅವರೆಲ್ಲಿಹರು
ಮಕ್ಕಳ ಮನದಲಿ ನೆಲೆಸಿಹರು//೨//

ಮಕ್ಕಳೆ ಮುಂದೆ ಪ್ರಭು ಎಂದವರು
ಮಕ್ಕಳೊಡನೆ ನಲಿದಾಡಿದ ನೆಹರು
ಮಕ್ಕಳ ಒಳಿತಿಗೆ ದುಡಿದಂಥವರು

ಮಕ್ಕಳ ಬಿಟ್ಟು ಅವರೆಲ್ಲಿಹರು
ಮಕ್ಕಳ ಮನದಲಿ ನೆಲೆಸಿಹರು//೩//

(ಪ್ರ.ವಾ)

 

ಉದಯ ರವಿ

ಮೂಡಣ ದಿಕ್ಕಲಿ
ಹೊಂಬಣ್ಣವ ಚೆಲ್ಲಿ
ಮೆಲ್ಲನೆ ಮೇಲೇರುತಿಹ
ಉದಯ ರವಿ//

ಹಕ್ಕಿಗಳ ನಾದದಲಿ
ಮೈಮರೆತು ನಿದ್ರೆಯಲಿ
ವಿಶ್ವವನು ನೋಡಲೆಂದು
ಮೆಲ್ಲನೆ ಮೇಲೇರುತಿಹ
ಉದಯ ರವಿ//೧//

ಪೂರ್ವ ಬೆಟ್ಟದ ಸಾಲಲಿ
ಕೆಂಪು ಕಿರಣ ಬೀರುತಲಿ
ಜಗದ ಕಾರ್ಯವ ನೋಡಲೆಂದು
ಮೆಲ್ಲನೆ ಮೇಲೇರುತಿಹ
ಉದಯ ರವಿ//೨//

ಬಾಳ ಬೆಳಗಿಸಲು
ಭುವಿಯ ಪ್ರಕಾಶಿಸಲು
ಕತ್ತಲೆಯು ಓಡುವುದ ನೋಡಲೆಂದು
ಮೆಲ್ಲನೆ ಮೇಲೇರುತಿಹ
ಉದಯ ರವಿ//೩//

(ಪ್ರ.ವಾ)

 

ಮಗುವಿನ ದೇವರು

“ಅಮ್ಮಾ… ಅಮ್ಮ…”

“ಏನು ಮಗು?”

“ಒಂದೇ ಪ್ರಶ್ನೆ”

“ಕೇಳು ಮಗು”

“ದೇವರು ಎಂದರೆ ಯಾರಮ್ಮ?”

“ದೇವರೆಂದರೆ ದೊಡ್ಡವನು
ಒಳ್ಳೆಯ ಬುದ್ಧಿಯ ಕೊಡುವವನು
ಎಲ್ಲರ ರಕ್ಷಣೆ ಮಾಡುವನು”

“ದೇವರೆಲ್ಲಿ ಇರುವನು ಅಮ್ಮ?”

“ಮಂದಿರ ಮನೆ ಶಾಲೆಗಳಲ್ಲಿ
ಸತ್ಯ ಕರುಣೆ ಉಪಕಾರಿಗಳಲ್ಲಿ
ಎಲ್ಲ ಒಳ್ಳೆ ಮನಸುಗಳಲ್ಲಿ”

“ಅಮ್ಮಾ…ಅಮ್ಮ…”

“ಹೇಳು ಮಗು”

“ನನ್ನ ದೇವರು ಬೇರೆಯದಮ್ಮ”

“ಯಾರು ಮಗು?”

“ಆ ದೇವರ ನಾನು ಕಂಡಿಹೆನಮ್ಮ”

“ಹೌದೆ ಮಗು? ಎಲ್ಲಿ ಮಗು?”

“ಒಳ್ಳೆ ದಾರಿಲಿ ನಡೆಸುವ
ಸಕ್ಕರೆ ಮಾತನ್ನಾಡುವ
ಅಕ್ಕರೆಯಿಂದ ನೋಡುವ
ತೆಕ್ಕೆಯಲೆನ್ನ ಸಲಹುವ
ದೇವರೆಂದರೆ ನೀನಮ್ಮ
ನನ್ನ ದೇವರು ನೀನಮ್ಮ!”

(ಪ್ರ.ವಾ) ತಿದ್ದಿದ್ದೇನೆ!
ಪತ್ರಿಕೆಯ ತುಣುಕುಗಳಂತೆ, ಚದುರಿಹೋಗದಂತೆ
ನೆನಪು ಆಗಾಗ ಮರುಕಳಿಸಲೆಂಬ ಆಸೆಯಿಂದೆ ಬ್ಲಾಗಿಸಿದ್ದೇನೆ.
ಎಳೆಯ ಪದ್ಯಗಳು ಬೆನ್ನ ಬಿಡದೆ ಬಾಲ್ಯ ಹೊಳೆಯಿಸುವಂಥವು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s