ನಾಟಕಕಾರ

baby

ಲಾಕ್ಷೇತ್ರದ ಹಿಂದಿನ ಪಾರ್ಶ್ವ ಜಗುಲಿ. ಸ್ವಲ್ಪ ದೂರದಲ್ಲಿ ಕ್ಯಾಂಟೀನಿನಲ್ಲಿ ಸ್ವಲ್ಪ ಜನ. ಕೆಲವರು ಕಾಫ಼ಿ, ಚಾ ಕುಡಿಯುತ್ತ, ಕೆಲವರು ಉಪ್ಪಿಟ್ಟು, ಬಜ್ಜಿ ಇತ್ಯಾದಿ ಮೆಲ್ಲುತ್ತ, ಮಾತಾಡುತ್ತ ಆ ಸಂಜೆಯ ಪಾತ್ರಧಾರಿಗಳಂತೆ ಕಾಣುತ್ತಿದ್ದಾರೆ.

ಮಾಸಿದ ಜುಬ್ಬ, ಎಣ್ಣೆ ರಹಿತ ಕಪ್ಪು ಬಿಳಿ ಕೂದಲ, ಶೇವಾಗದ ಕೆನ್ನೆ ಕೆರೆಯುತ್ತಾ ಮತ್ತು ದಪ್ಪ ಮಸೂರದ ಸೂಕ್ಷ್ಮ ಕಣ್ಣ ಹಿಗ್ಗಿಸಿ ಹಿರಿದಾಗಿಸಿ ಒಳ ದೃಷ್ಟಿ ತೂರಿಸಿ ತನ್ನ ನಾಟಕದ ಪಾತ್ರ ತನಗೇ ಪರಿಚಯಿಸಿಕೊಳ್ಳುತ್ತ ನಿಂತಂತೆ ಸುಮಾರು ಐವತ್ತೈದು ವಸಂತಗಳನ್ನು ಕಳೆದ ಒಂದು ಆಕಾರ. ಅವನು ನಾಟಕಕಾರ ಶಂಕರ.

ಮೌನದಲ್ಲಿದ್ದಾನೆ. ಯೋಚನಾ ಲಹರಿಯಲ್ಲಿ ನಿಂತಿದ್ದಾನೆ. ಏನದು ಯೋಚನೆ ಅಂದರೆ, ಪಾತ್ರಗಳ ಮರು ಜೋಡಣೆಯಲ್ಲಿ  ಅಥವಾ  ವಿಮರ್ಶೆಯಲ್ಲಿ.    ತಾನು ಸೃಷ್ಟಿಸಿದ  ಪಾತ್ರಗಳ ಗತ್ತುಗಾರಿಕೆಯನ್ನು,  ಹೊಸ ದೃಷ್ಟಿಗಳನ್ನು, ಅವುಗಳ ಉದ್ದ ಆಳಗಳನ್ನು, ಪ್ರತಿ ಪದಗಳಲ್ಲು ಅವಿತಿಸಿಟ್ಟ ಗೂಢತೆಗಳನ್ನು, ಅಪರಿಮಿತ ಆಯಾಮಗಳನ್ನು  ಮತ್ತು  ನೋಟಕರ  ಎದೆ  ಎದೆಗಳಲ್ಲು  ಪಾತ್ರಗಳ  ಸಂಭಾಷಣೆಗಳು  ಉಕ್ಕಿಸುವ ಆರ್ದ್ರತೆಗಳನ್ನು ಅಥವಾ ವಿಸ್ಮಯತೆಗಳನ್ನು ಊಹಿಸುತ್ತಾ ಒಳಗೆ ಹೆಮ್ಮೆ ಪಡುತ್ತಿದ್ದಾನೆ.

ಮತ್ತೂ…. ಕೇಳುಗನಿಲ್ಲವೆಂದು,   ನೋಡುಗನಿಲ್ಲವೆಂದು    ಬೇಸರಿಸದ  ನಿರ್ಲಿಪ್ತನಂತೆ  ಕಾಣುತ್ತಾನೆ. ಖಂಡಿತಕ್ಕು ನಾಟಕದ ದಿನ ಕಿಕ್ಕಿರುದು ಜನ ಬರುತ್ತಾರೆ…. ಅವರೆಲ್ಲ ಕೌಂಟರುಗಳಲ್ಲಿ ಹಣಕ್ಕೆ ಪ್ರತಿಯಾಗಿ ತನ್ನ ಪಾತ್ರಗಳ  ಸಂಭಾಷಣೆಗಳನ್ನು ಕೇಳಿ ತಮ್ಮ  ಚಿಂತನೆಗಳ ಒಂದು ಭಾಗವನ್ನಾಗಿ ಮಾಡಿಕೊಂಡು ಹೋಗುತ್ತಾರೆ ಅನ್ನುವ ಭರವಸೆಯನ್ನು ಎದೆಯೊಳಗೆ ಹೊತ್ತಿಸಿಕೊಳ್ಳುತ್ತಿದ್ದಾನೆ.

ಇಂಥ ಯೋಚನೆಯ ಬೆನ್ನಲ್ಲೆ ಮನೆಯಲ್ಲಿ ತನ್ನವಳು ತಡಾಗಮನ ಸಹಿಸಳೆಂದು ನೆನಪು ಮಾಡಿಕೊಂಡು, ತಡವಾದರೆಷ್ಟು ನಾಟಕವಿದೆಯೋ; ತಾನೂ ಯಾವ ನಾಟಕವಾಡಬೇಕಿದೆಯೋ; ಗಡಿಬಿಡಿಸಿ ಮನೆಯತ್ತ ಹೆಜ್ಜೆ ಇಡುವಾಗಲೂ, ನಾಟಕದ ದಿನಗಳಲ್ಲಾದ ಘಟನೆಗಳನ್ನು ಮೆಲುಕುಹಾಕುತ್ತಿದ್ದಾನೆ. ಆ ದಿನಗಳಲ್ಲಿ ಬಿದ್ದ ಚಪ್ಪಾಳೆಗಳು ತನ್ನೆದೆಯೊಳಗೆಷ್ಟು ನಗಾರಿ ಬಾರಿಸಿತ್ತೆಂದು ವಿಸ್ಮಯಪಡುತ್ತಾ ಹೆಜ್ಜೆ ಹಾಕುತ್ತಿದ್ದಾನೆ.

ಆದರೂ, ಮನಸ್ಸಿನ ಮೂಲೆಯಲ್ಲಿ ಏನೋ ಭ್ರಮೆ ಹರಿದು ಶೂನ್ಯ ಮಡುವಾಗುತ್ತಿರುವ ವಿಚಿತ್ರ ನೋವು!

ಮತ್ತೆ ಹಿಂದಿನ ರಾತ್ರಿ ಈ ಕಲಾಕ್ಷೇತ್ರದಲ್ಲಿ ನಡೆದದ್ದೆಲ್ಲ ನೆನಪಾಗತೊಡಗಿವೆ. ಅವನೆ ಅಲ್ಲವೆ ತನ್ನ ನೋಡಿಯೂ ನೋಡಿಲ್ಲದ ಹಾಗೆ ದಾಟಿ ಹೊರಟು ಹೋದದ್ದು. ಸುತ್ತ ಅಭಿಮಾನಿಗಳಿದ್ದರಲ್ಲ! ಹಾಗಾಗಿಯೇ ಇರಬೇಕು. ಇಲ್ಲದಿದ್ದರೆ ಹಾಗೆ ಮಾಡುವವನಲ್ಲ ಅವನು. ಕೆಲವು ವರ್ಷಗಳೇ ಕಳೆದು ಹೋದುವು ಅವನನ್ನು ಮುಖತ: ನೋಡಿ. ಆಹಾ… ಅವನೆಷ್ಟು ಚೆಂದದ ಅಭಿನಯಗಾರ ಮತ್ತು ಸಂಭಾಷಣಾ ಚತುರ! ಚಿತ್ರರಂಗ ಸೇರಿ ನಾಟಕಕ್ಕೆ ದೊಡ್ಡ ನಷ್ಟ ಮಾಡಿಬಿಟ್ಟ.

ಆದರೂ ಏನೋ ಸಂಕಟ. ಒಳಗೆ ಒದೆಯುತ್ತಿದೆ. ತಾನು ನಕ್ಕು ಮಾತಾಡಿಸುವ ಹವಣಿಕೆಯನ್ನು ಅವನು ಏಕೆ ಝಾಡಿಸಿಬಿಟ್ಟ!? ಇವತ್ತಿನ ಚಿತ್ರರಂಗದಲ್ಲಿ ಹಣ ಕೊಳ್ಳೆ ಹೊಡೆಯುವ ಶಕ್ತನೆಂದರೆ ಅವನೆ! ಹೌದು…. ವಿಹಾರನೆ!!

ತಾನು ಹಿಂದೆ ಬರೆದ ನಾಟಕಗಳಲ್ಲಿ ವಿಹಾರನೆ ನಾಯಕ. ಅದೇನು ಮಮತೆಯೋ? ತನ್ನ ಸ್ನೇಹಿತನ ಮಗ ಅನ್ನುವ ಅಭಿಮಾನವೊ ಅಥವ ಮಮಕಾರವೊ ಅಥವ ಮೂಲೆಯಲ್ಲಿ ಸದಾ ಅವನ ಬಗೆಗೆ ಹರಿಯುವ ಕರುಣೆಯೊ!

ಮನೆಯ ಕದ ತಟ್ಟಿ ಒಳ ಬಂದಾಗಲೂ ಅವಳು ಮೌನಿ. ನಿಟ್ಟುಸಿರು ಬಿಟ್ಟು, ಕೋಣೆ ಸೇರಿ ಪಂಚೆ ಉಟ್ಟು, ಮುಖ ಕೈಕಾಲು ತೊಳೆದು ’ಅಡುಗೆ ಏನು?’ ಅಂದಿದ್ದಾನೆ. ಊಟಕ್ಕೆ ಕುಳಿತೂ ಅನ್ಯ ಮನಸ್ಕನಾಗಿದ್ದಾನೆ. ತಟ್ಟೆಗೆ ಬಡಿಸತೊಡಗಿದ್ದಾಳೆ.

ಯಾರದು ಬಾಗಿಲು ಬಡಿಯುತ್ತಿರುವವರು? ಅನ್ನ ಕಲಸುವಾಗ ಅವಸರದಲ್ಲಿ ಸಾರು ಸುರಿದು ಅತ್ತ ಹೋದಳು. ಬಾಗಿಲು ತೆರೆದು ಅವಳು ಸಂಭ್ರಮಿಸುತ್ತಿರುವ ಸದ್ದು.

“ಓಹ್.. ನೀನಾ… ಬಾಪ್ಪ.. ಬಾ.. ಎಷ್ಟು ವರ್ಷಗಳಾಯಿತಪ್ಪ ನಿನ್ನ ಹೀಗೆ ನೋಡದೆ! ಸದ್ಯ ನಮ್ಮ ಮನೆ ಮರೆತಿಲ್ಲ ಅಂತಾಯ್ತು. ಅವರು ಊಟಕ್ಕೆ ಕೂತಿದ್ದಾರೆ.. ತಡಿ ಬಂದರು’’

”ಅವರದು ಊಟ ಆಗಲಿ ಅಮ್ಮ, ನಾ ಕಾಯುತ್ತೇನೆ’’

ಕೇಳಿರುವ ಪರಿಚಿತ ಧ್ವನಿ. ಅರೆ, ಅವನೇ ಇರಬಹುದೆ! ನಿನ್ನೆ ಅವನಿಗೆ ತಾನು ಗುರುತಾಗದ ವಿಹಾರ!!

ಕುತೂಹಲ ಅದುಮಲಾಗದೆ ಊಟ ಅರ್ಧಕ್ಕೆ ಬಿಟ್ಟು ಹೊರಬಂದು ನೋಡಿದರೆ, ’’ಅರರೆ… ಏನ್ ಸಾರ್..” ಚಕಿತ ಧ್ವನಿಯೊಂದಿಗೆ, ’’ಬನ್ನಿ…ಬನ್ನಿ.. ಇಲ್ಲಿ ಕುಳಿತುಕೊಳ್ಳಿ”’ ಶಂಕರ ಉಪಚರಿಸಿದ.

ಬಂದವನು ವಿಹಾರ್! ದೀರ್ಘ ನಮಸ್ಕಾರ ಮಾಡಿದ ಇವನಿಗೆ; ಇವಳಿಗೂ.

’’ಇವೆಲ್ಲ ಏನಪ್ಪ…ಬೇಡ..ಬೇಡ.. ಹಾಂ…ದೇವರು ಒಳ್ಳೆಯದು ಮಾಡಲಿ.. ಏಳಿ.. ಏಳಿ”

’’ಏನ್ ಸರ್.. ಬಹುವಚನ.  ನಿಮ್ಮ ಹುಡುಗನೇ ಅಲ್ಲವೆ?  ನೀವು ಖಂಡಿತ ಕ್ಷಮಿಸಬೇಕು.  ತುಂಬಾ ಸೊರಗಿದ್ದೀರ.  ಅದಕ್ಕೆ ರಾತ್ರಿ ಗುರುತಾಗಲಿಲ್ಲ.  ಸ್ವಲ್ಪ ಬೆಳಕೂ ಕಡಿಮೆ ಇತ್ತಲ್ಲ ಅಲ್ಲಿ.   ಬೆಳಿಗ್ಗೆ ಹೊಳೆದುಬಿಟ್ಟಿತು, ನೀವು ನನ್ನ ಮಾತಾಡ್ಸಬೇಕು ಅಂತ ಬಂದಿದ್ರಿ ಅನ್ಸತ್ತೆ. ಭಾಳ ಸ್ಟ್ರೆಸ್ಸು ಸರ್..”

ಮೌನ ಮುರಿದು ಮತ್ತೆ ವಿಹಾರ ಮಾತಾಡತೊಡಗಿದ. ’’ಇವತ್ತಿಗೂ ನೆನಪಿದೆ ಸರ್.. ಬೈಹಾರ್ಟ್ ಆಗಿದೆ, ನಿಮ್ಮ ನಾಟಕ  ಕರುಣಾ ಕರ್ಣದಲ್ಲಿ ನನ್ನ ಪಾತ್ರದ ಡಯಲಾಗು…   ಅದೇ ಅಲ್ವ ಸರ್…   ನಾನು ಎಲ್ಲಿ ಹೋದ್ರು ಎಲ್ರೂ ಕೇಳೋದು ಶಂಕರರ ನಾಟಕದ ಸೆಂಟಿಮೆಂಟಲ್ ಡಯಲಾಗು.. ”

’’ಹೌದಾ!?’’

”ಬಹಳ  ವರ್ಷಗಳಾಗಿಹೋಯ್ತಲ್ವ  ಸರ್…   ಈ ಫ಼ಿಲ್ಮ್ ಇಂಡಸ್ಟ್ರೀ ಗೊತ್ತಲ್ಲ..   ಯಾವ್ದಕ್ಕೂ ಸಮಯ ಕೊಡಲ್ಲ. ಹೊಸ ನಾಟ್ಕ ಏನಾದ್ರೂ ಬರ್ದಿದೀರ ಸರ್. ನಿಮ್ಮ ಬಹಳ ನಾಟ್ಕಗಳಿಗೆ ನಾನೇ ಅಲ್ವ ಹೀರೊ. ಅವೆಲ್ಲ ನೀವು ನನಗೆ ಶಿಫ಼ಾರಸ್ ಮಾಡಿ ಬಂದದ್ದು. ನನ್ಗೆ ಮೊದ್ಲು ಹೆಸರು ತಂದು ಕೊಟ್ಟಿದ್ದೇ ನಿಮ್ಮ ನಾಟ್ಕಗಳು ಸರ್. ಏನೇ ಹೇಳಿ.. ನೀವ್ ಬರಿಯೋ ಹಾಗೆ ಯಾರೂ ಬರಿಯಲ್ಲ’’

ಟೀಪಾಯ್ ಮೇಲೆ ಹಣ್ಣು, ಸಿಹಿ ಪೊಟ್ಟಣ, ಬಿಸ್ಕತ್ತುಗಳು ಅವನು ತಂದಿಟ್ಟದ್ದು. ಕಾಫ಼ಿ ಇದೀಗ ತಂದೆ ಅಂತ ಗಡಿಬಿಡಿಸಿ, ಒಳಹೋದವಳು ಇಬ್ಬರಿಗೂ ಬಿಸಿ ಬಿಸಿ ತಂದಳು. ಅವನು, “ಬೇಡಮ್ಮ…… ಸುಮ್ಮನೆ ತೊಂದ್ರೆ ತಗೋಬೇಡಿ’’

ಎಷ್ಟು ಆತ್ಮೀಯತೆ! ಅದಕ್ಕಲ್ಲವೆ ಈ ಹುಡುಗ ದೊಡ್ಡ ಸ್ಟಾರ್ ಮತ್ತೆ ಅಭಿಮಾನಿಗಳ ತಂಡ ಬೆನ್ನ ಬಿಡದಿರುವುದು.

’’ನೀವು ನಮ್ಮನೇಗು ಬರಬೇಕು. ನಮ್ ಮನೆಯವರಿಗೆಲ್ಲ ನಿಮ್ಮ ಆಶೀರ್ವಾದ ಖಂಡಿತಾ ಬೇಕು. ನಮ್ಮ ಅಪ್ಪ ನಿಮ್ಮ ಹಳೆ ದೋಸ್ತ್ ಅಲ್ವ ಸರ್. ಅವರು ಕೇಳತಾ ಇರ್ತಾರೆ, ಶಂಕರ ಈಗ್ಲೂ ನಾಟ್ಕ ಬರೀತಿದಾನ ಅಂತ’’

’’ಹೌದಾ..? ಶಿವಪ್ಪ ನಾನು ಒಂದು ಕಾಲ್ದಲ್ಲಿ ಲಾಲ್ಬಾಗಲ್ಲಿ ಬೆಳಗಿನ ಜಾಗಿಂಗ್ ಮಾಡ್ತಿದ್ದೋರು. ಪಾಪ.. ಏನು ಮಾಡೋದು… ಅವರ್ದು ದೊಡ್ಡ ವ್ಯವಹಾರ. ಸಮಯ ಅನ್ನೋದು ಸಿಕ್ಕಬೇಕಲ್ಲ. ನಾ ಕೇಳ್ದೆ ಅಂತ ಹೇಳು. ಇನ್ನೊಂದು ವಿಷ್ಯ ವಿಹಾರ್, ನನ್ ಹೆಂಡ್ತಿಯಂತೂ ನಿನ್ನ ಎಲ್ಲ ಫ಼ಿಲ್ಮೂ ನೋಡಿದಾಳೆ. ಅವ್ಳು ನಿನ್ನ ಫ಼್ಯಾನು ಗೊತ್ತ?”

’’ಹೌದಾಮ್ಮ!? ನೀವಂತೂ ನಮ್ಮಮ್ಮನ ಥರವೇ. ಆವಾಗೆಲ್ಲ ನಿಮ್ಮ ಮನೇಗೆ ಬರ್ತಿದ್ದೆ. ನೆನಪಿದ್ಯಾ. ನೀವು ಮಾತಾಡಿದ್ರೆ ನಮ್ಮ್ ಅಮ್ಮ ಮಾತಾಡ್ದ್ ಥರಾನೆ ಅನ್ಸತ್ತೆ.”

ಇವಳು ಬಾಯಿತುಂಬಾ ನಗ್ತಾ, ಆಶ್ಚರ್ಯ ಸೂಚಿಸ್ತಾ ಇದ್ದಾಳೆ. ಕಣ್ಣಲ್ಲಿ ನೀರು ತುಂಬಿಕೊಂಡುಬಿಟ್ಟಿದ್ದಾಳೆ.

’’ಅಂದಹಾಗೆ, ನಿಮ್ ನಾಟ್ಕ ಇದ್ದಾಗ ಹೇಳಿ ಸರ್.. ನಾನು ಖಂಡಿತ ಬರ್ತೀನಿ. ಅಂಥ ಒಳ್ಳೆ ನಾಟ್ಕಗಳನ್ನ ಇನ್ಮೇಲಾದ್ರೂ ನಾನು ಮಿಸ್ಸ್ ಮಾಡ್ಕೋಬಾರ್ದು ಅಂದ್ಕೊಂಡಿದೀನಿ ”

’’ನಂದೇನಿದೆಯಪ್ಪ, ನಾಟ್ಕಗಳು ಹೆಸರು ಮಾಡೋದೆಲ್ಲ ಡೈರೆಕ್ಟ್ರು ಮೇಲೇ ಡಿಪೆಂಡಾಗಿರುತ್ತೆ’’

’’ಛೆ.. ಎಲ್ಲಾದ್ರೂ ಉಂಟಾ.. ನಿಮ್ ಸ್ಕ್ರಿಪ್ಟ್ ಇಲ್ಲದೆ ಡೈರೆಕ್ಟರ್ ಏನು ಮಹಾ ಮಾಡಕ್ಕಾಗತ್ತೆ…ಎಲ್ಲಕ್ಕೂ ಮೂಲ ನಿಮ್ಮ ಕತೆ ಮತ್ತೆ ನಿಮ್ಮ ಆ ಡಯಲಾಗುಗಳು.. ನಿಮಗೆ ಗೊತ್ತ ಸರ್… ಆ ಕರುಣಾ ಕರ್ಣ ನಾಟಕದ ನಿಮ್ಮ ಡಯಲಾಗೇ ನಾನು ನನ್ನ ಫ಼ರ್ಸ್ಟ್ ಫ಼ಿಲ್ಮಿನಲ್ಲಿ ಹಾಕ್ಕೊಂಡು ಮಿಂಚಿದ್ದು!’’

ಹೀಗೇ, ಎಷ್ಟು ಲೀಲಾಜಾಲ ಮಾತಾಡುತ್ತಾನೆ!

ಅವನು ಎದ್ದಾಗ ಶೋಕೇಸ್ ಕಡೆಗೆ ಗಮನಿಸಿದ.

’’ಸರ್.. ಅದ್ಯಾವ ಫೋಟೊ ಹಳೇದು…. ನಿಮ್ಮದ? ಅಬ್ಬ ಎಷ್ಟು ಚೆಂದವಿದ್ರಿ ..! ನೀವು ಫಿಲ್ಮ್ ಸ್ಟಾರ್ ಆಗ್ಬೋದಿತ್ತು… ಸುಮ್ನೆ ನಾಟಕ ಬರೆಯಕ್ಕೆ ಹೋದ್ರಿ’’ ಅಭಿಮಾನದಿಂದ ಹೇಳುತ್ತ ನಕ್ಕ. ಶಂಕರನೂ ನಕ್ಕ.

‘’ನಾಟ್ಕ ಬರೀತೀನಿ… ಆಡಕ್ಕೆ ಬರಲ್ವಲ್ಲ!’’

’’ಸ್ಟಾರ್ ಅನಿಸ್ಕೊಬೇಕಾದ್ರೆ ನಾಟ್ಕನೇ ಆಡ್ಬೇಕ ಸರ್?’’ ಜೋರಾಗಿ ನಕ್ಕ.

ತನ್ನ ನಾಲ್ಕೆಂಟು ನಾಟಕಗಳ ಪುಸ್ತಕ ವಿಹಾರನ ಕೈಗಿತ್ತು, ಬೀಳ್ಕೊಟ್ಟು ಮತ್ತೆ ಊಟಕ್ಕೆ ಕುಳಿತಾಯಿತು. ಅವಳು ಅಕ್ಕರೆಯಿಟ್ಟು ಬಡಿಸಿದಂತೆ. ಅನ್ನ, ಹುಳಿ, ಮಜ್ಜಿಗೆಗೆ ಅದ್ಭುತ ರುಚಿ ಬಂದಂತೆ…..

*******

ಲಗುವಾಗ ಪಿಸು ಧ್ವನಿಯಲ್ಲಿ ಕೇಳಿದಳು.

’’ವಿಹಾರು ನಿಜಕ್ಕೂ ಶಿವಪ್ಪನ ಸ್ವಂತ ಮಗನ?’’

’’ಯಾಕೆ.. ಏನು ನಿನ್ನ ಅನುಮಾನ?’’

’’ಶಿವಪ್ಪ ಸಾವ್ಕಾರನ್ನ ನಾ ಕಂಡಿಲ್ವ.. ಕುಳ್ಳಕ್ಕೆ ದಪ್ಪಕ್ಕೆ.. ಮತ್ತವರ ಹೆಂಡ್ತಿ ನನ್ಗೆ ಗೊತ್ತಿಲ್ವ? ಅವರ ಜೋಡಿಗೆ ಇಂಥಾ ಆರಡಿ ಮಗನ ಅಂತ ಯೋಚ್ನೆ ಮಾಡ್ತಿದ್ದೆ’’

ಅವಳು ಹೇಳ್ತಾ ಇರೋದು ನಿಜವೆ. ಶಿವಪ್ಪ ಸ್ನೇಹಿತನೆ. ಬಾಲ್ಯದಿಂದಲೂ ಒಬ್ಬರಿಗೊಬ್ಬರು ಬಲ್ಲವರೆ. ಅವನು ಶಂಕರನಿಗಿಂತ ಐದಾರು ವರ್ಷ ದೊಡ್ಡವನಿರಬಹುದು. ಆದರೂ ಇಬ್ಬರೂ ಲಾಲ್ ಬಾಗಿನಲ್ಲಿ ಬಹಳ ವರ್ಷ ವಾಕ್ ಮಾಡುತ್ತಿದ್ದವರೆ.

ಶಂಕರನ ನೆನಪುಗಳು ಇಪ್ಪತ್ತೇಳು ವರ್ಷಗಳಷ್ಟು ಹಿಂದಕ್ಕೆ ಸರಿಯಿತು. ’ಶಿವಪ್ಪ ತನ್ನ ಆತ್ಮೀಯರಲ್ಲೊಬ್ಬ. ಆ ಒಂದು ಬೆಳಗಿನ ದಿನದ ಗಾಳಿ ಸವಾರಿಯನ್ನು ಮಾತ್ರ ತಾನು ಎಂದಿಗೂ ಮರೆಯುವ ಹಾಗಿಲ್ಲ.

ಎಲ್ಲ ಕಣ್ಣಿಗೆ ಕಟ್ಟಿದಂತೆ ಆ ಘಟನೆಗಳು ನೆನಪಿನಲ್ಲಿ ಮತ್ತೆ ಬರತೊಡಗಿವೆ. ಶಿವಪ್ಪ ತನಗೆ ಆ ದಿನದ ಬೆಳಿಗ್ಗೆ ಹೇಳುತ್ತಿದ್ದ.

’’ಎಲ್ಲ ಇದ್ದೂ ಈ ಮಕ್ಕಳಿಲ್ಲದ ಕೊರಗು ಉಳಿದು ಹೋಗುತ್ತ ಅಂತ ಭಯ ಶಂಕರ”

“ಏಕೆ ಹಾಗೆ ಹೇಳ್ತ ಇದೀಯ? ನಿನ್ನ ಮದುವೆಯಾಗಿ ಇನ್ನೂ ಆರು ವರ್ಷ ಆಗಿದೆ ಅಷ್ಟೆ. ಹತ್ತು-ಹದಿನೈದು ವರ್ಷ ಆದಮೇಲೂ ಎಷ್ಟೋ ಜನಕ್ಕೆ ಮಕ್ಕಳಾಗಿಲ್ಲವ?’’

’’ಹಾಗಲ್ಲ.. ನಿನ್ನೆ ನಾನು ನನ್ನ ಹೆಂಡತಿ ಇದೇ ವಿಷ್ಯಕ್ಕೆ ಡಾಕ್ಟರ್ ಒಬ್ಬರನ್ನ ನೋಡಿದ್ದೆವು. ಅವರು ಅನುಮಾನ ಪಡೋದು ನೋಡಿದ್ರೆ, ನನ್ನಿಂದ ಮಕ್ಕಳು ಆಗೋ ಯೋಗ ಇದ್ ಹಾಗೆ ಕಾಣಿಸ್ತಿಲ್ಲ. ಅವಕ್ಕೆಲ್ಲ ಟ್ರೀಟ್ಮೆಂಟ್ ಇದೆ ಅಂತಾರೆ, ನೋಡೋಣ…’’ ನಿಟ್ಟುಸಿರಿಟ್ಟ.

ಸಮಾಧಾನ ಪಡಿಸುತ್ತಾ ಅವನೊಂದಿಗೆ ಆ ಶಿಶು ವಿಹಾರದ ಬಳಿ ಬಂದಿದ್ದಾನೆ. ಅಲ್ಲಿಯ ಜಗುಲಿಯ ಮೇಲೆ ಇಬ್ಬರೂ ಕುಳಿತುಕೊಳ್ಳುವುದು ರೂಢಿ. ಇಬ್ಬರೂ ಕೆಲವು ನಿಮಿಷ ಸುಧಾರಿಸಿಕೊಳ್ಳುವ ಸಮಯ. ಜನ ರಹಿತ ರಸ್ತೆಯ ಕಡೆ ನೋಡುತ್ತಿರುವ ಆ ಮೌನ ಒಡೆಯುತ್ತ ಹಿಂದಿನಿಂದ ಮರದ ಬಳಿಯಿಂದ ಮಗುವೊಂದು ಮೆಲ್ಲನೆ ಅಳುವ ಸದ್ದು! ಒಮ್ಮೆಲೆ ತಿರುಗಿ ನೋಡಿದರೆ ಸಣ್ಣ ಮಗುವೊಂದು ಬಟ್ಟೆಗಳ ಮಧ್ಯದಿಂದ ಕೈಕಾಲುಗಳನ್ನು ಆಡಿಸುತ್ತಿದೆ. ಸುತ್ತ ಕಣ್ಣಾಡಿಸಿದರೆ… ಯಾರ ಸುಳಿವೂ ಇಲ್ಲ!

ತಾನು ಅದರ ಬಳಿ ಹೋಗಿ ಬಗ್ಗಿ ನೋಡಿದ್ದು, ಮುದ್ದು ಮಗುವೊಂದು ಕಣ್ಣು ಮುಚ್ಚಿ ಕೊಸರುತ್ತಾ, ಕಸಿವಿಸಿಯಲ್ಲಿರುವಂತೆ, ಕೈಕಾಲು ಜೋರಿನಲ್ಲಿ ಆಡಿಸುತ್ತಾ ಕೇಳಿಯೂ ಕೇಳದಂತೆ ಸಣ್ಣ ಸ್ವರದಲ್ಲಿ ಅಳುತ್ತಿದೆ. ಶುಭ್ರಬಟ್ಟೆಯಲ್ಲಿ ಸುತ್ತಿದ್ದಾರೆ. ತಲೆಗೆ ಸ್ಕಾರ್ಫ಼್, ಕಾಲುಗಳಿಗೆ ಕಾಲುಚೀಲಗಳನ್ನು ಹಾಕಿದ್ದಾರೆ. ದಪ್ಪ ಸ್ವೆಟರ್ ಮೈ ಮುಚ್ಚಿದೆ. ಮಗು ಒಂದೆರಡು ತಿಂಗಳಿನದಿರಬೇಕು. ತಲೆಯಲ್ಲಿ ಹೆಚ್ಚು ಕೂದಲು ಬಂದಿಲ್ಲ. ಬೆಳ್ಳಗಿನ ಗೊಂಬೆಯಂತಿದೆ. ತಾನು ಅದರ ಬಳಿ ಕುಳಿತ. ತನ್ನ ಬೆರಳನ್ನು ಅದರ ಕೈಗಳಿಗೆ ತಾಕಿಸಿದ. ಅಳು ನಿಲ್ಲಿಸಿ ಅದು ಅವನ ಬೆರಳು ಹಿಡಿದು ತನ್ನ ಎದೆಗೆ, ಬಾಯಿಗೆ ಎಳೆಯ ತೊಡಗಿತು. ಯಾರೋ ತನ್ನಬಳಿ ಇದ್ದಾರೆ ಅನ್ನುವ ಸಮಾಧಾನದಲ್ಲಿ, ಮೆಲ್ಲನೆ ತನ್ನ ಪುಟ್ಟ ಕಣ್ಣುಗಳ ತೆರೆಯಿತು. ಒಂದೆರಡು ಮಾನವಾಕೃತಿ ಕಂಡಂತೆ, ಮೆಲು ನಗೆ ಅದರ ಮುಖದಲ್ಲಿ ಮೂಡಿತು.

’’ಶಂಕರ, ಇದೇನಯ್ಯಾ.. ಇಂಥ ಬೆಳಿಗ್ಗೆ ಇಲ್ಲಿ ಈ ಮಗು ಬಿಟ್ಟು ಅದ್ಯಾವ ಮಹಾತಾಯಿ ಎಲ್ಲಿಗೋ ಹೋಗಿರೋದು?’’

’’ಸ್ವಲ್ಪ ಟೈಮ್ ನೋಡೋಣ ತಾಳು. ಸದ್ಯಕ್ಕೆ ಮಗೂನ ನೀನು ಎತ್ಕೊ. ಇಲ್ದಿದ್ರೆ ಅಳೋಕ್ಕೆ ಶುರು ಮಾಡ್ಬಹುದು’’

ಶಿವು ಅದನ್ನೆತ್ತಿ ಮೆಲ್ಲನೆ ನಡೆದು ಹೋಗಿ ಆ ಜಗುಲಿಯ ಮೇಲೆ ಕೂತ. ಬಹಳ ಹೊತ್ತು ಅದನ್ನೆ ಅಶ್ಚರ್ಯ ಪಟ್ಟು ನೋಡುತ್ತಲೆ ಇದ್ದ. ಮಗು ಆಗಾಗ ಅವನ ಬೆರಳು ಹಿಡಿದು ಆಟ ಆಡತೊಡಗಿತು. ಯಾರ ಮಗುವೊ, ಆದರೆ ಶಿವಪ್ಪನೊಳಗೆ ಮೆಲ್ಲನೆ ಮಗುವನ್ನು ಲಲ್ಲೆ ಮಾಡುವ ಆಸೆ ಬೆಳೆಯಿತು. ಅದರ ಕಣ್ಣು, ಮೂಗು, ಕಿವಿ, ಪುಟ್ಟ ಬಾಯಿ, ಇನ್ನೂ ಮೂಡದ ಎಳೆ ಹುಬ್ಬು. ಗೊಂಬೆಯಂತಹ ಅದರ ಆಕಾರ. ಇಪ್ಪತ್ತು ನಿಮಿಷದಲ್ಲೆ ಮಮಕಾರ ಹೃದಯದೊಳಗೆ ತುಂಬತೊಡಗಿದೆ. ಅವನ ಮನಸ್ಸು ತನಗೆ ತಿಳಿಯತೊಡಗಿದೆ!

ಸುಮಾರು ಒಂದು ಗಂಟೆ ಕಳೆದಿದೆ. ಮುಂಜಾವು ಮರೆಯಾಗಿ ಏಳು ಗಂಟೆಯ ಸೂರ್ಯನ ಬಿಸಿಲು ಹಬ್ಬತೊಡಗಿತು. ಜನರ ಓಡಾಟ ಪ್ರಾರಂಭ ಆಗತೊಡಗಿದೆ. ಮಗುವನ್ನು ತೆಗೆದುಕೊಳ್ಳಲಾಗಲಿ, ಹುಡುಕತ್ತಲಾಗಲಿ ಯಾರೂ ಬರದೇ ಹೋದರು.

ಇಬ್ಬರಿಗೂ ಏನು ಮಾಡಲೂ ತೋಚುತ್ತಿಲ್ಲ. ಹತ್ತಿರದ ಪೊಲೀಸ್ ಸ್ಟೇಷನ್ನಿಗೆ ಹೋಗೋಣ ಅನ್ನಿಸಿತು. ಇಬ್ಬರೂ ಅದೇ ನಿರ್ಧಾರ ತೆಗೆದುಕೊಂಡು ಹೊರಟಿದ್ದೇವೆ. ತಮ್ಮ ಹೆಜ್ಜೆಗಳು ದುಗುಡದಲ್ಲಿವೆ. ಏನೋ ನೋವು ತಮ್ಮಿಬ್ಬರ ಮನಸ್ಸಿನಲ್ಲೂ ಹೊಕ್ಕಿವೆ.

’’ಪೊಲೀಸ್ಗೆ ಕೊಟ್ರೆ ಮಗು ಯಾವುದಾದ್ರೂ ಅನಾಥಾಶ್ರಮದಲ್ಲಿ ಸೇರುತ್ತೆ, ಪಾಪ ಹಾಗೆ ಮಾಡೋದು ಸರೀನ ಅನ್ಸುತ್ತೆ’’ ತಾನು ಅಂದಿದ್ದಕ್ಕೆ, ’’ಇದನ್ನು ಯಾರೋ ಬೇಕಂತಲೆ ಬಿಟ್ಟು ಹೋಗಿರೋದು ನಿಜ ಶಂಕರ. ಎಲ್ಲೋ ಅನಾಥವಾಗಿ ಬೆಳೆಯೋದಾದ್ರೆ ನಾನೇ ಸಾಕಬಹುದಲ್ವ?’’

ಶಿವಪ್ಪ ಏನೋ ನಿರ್ಧಾರ ಮಾಡಿ ಹೇಳುತ್ತಿದ್ದಾನೆ ಅನ್ನಿಸಿತು.

’’ಶಿವು, ನಿನ್ನ ಮನಸ್ಸು ದೊಡ್ಡದು. ಸದ್ಯಕ್ಕೆ ಸ್ಟೇಷನ್ನಿಗೆ ಕೊಡೋದಿಕ್ಕಿಂತ ಇದೇ ಒಳ್ಳೆ ಯೋಚನೆ. ನಿನಗೂ ಮಕ್ಕಳಾಗುತ್ತೆ. ಆದರೆ ಇದನ್ನ ಮೊದಲ ಮಗು ಅಂತನೇ ಬೆಳೆಸು. ಮೊದಲು ನಿನ್ನ ಹೆಂಡತಿಯ ಹತ್ರ ಮಾತಾಡಿ ನಿರ್ಧಾರಕ್ಕೆ ಬಾ. ಹೆಂಗಸರು ಮನಸ್ಸು ಮಾಡಿದರೆ ಮಾತ್ರ ಇವೆಲ್ಲ ಸಾಧ್ಯ’’

’’ಆದರೆ, ವಿಷ್ಯ ಬಹಳ ಗುಟ್ಟಾಗಿ ಇಡೋದು ಒಳ್ಳೆಯದಲ್ವ?’’

ತಾನು ಗೋಣು ಆಡಿಸಿದ್ದೆ.

‘’ನಮ್ಮಿಬ್ಬರಿಗೆ ಬಿಟ್ರೆ ಈ ವಿಷ್ಯ ಇನ್ಯಾರಿಗೂ ಗೊತ್ತಿಲ್ಲ ಬಿಡು. ನಾನು ಮಾತು ಕೊಡ್ತೀನಿ. ಯಾರಿಗೂ ಬಾಯಿ ಬಿಡೋಲ್ಲ. ಉಳಿದದ್ದೆಲ್ಲ ನಿಂದೇ ಜವಾಬ್ದಾರಿ ಶಿವು’’.

ಶಿವಪ್ಪನ ಜೊತೆಯೆ ಹೋಗಿ ಮಗುವನ್ನು ಅವನ ಮನೆಯಲ್ಲಿ ಒಪ್ಪಿಸಿದ್ದಾಯ್ತು. ಶಿವಪ್ಪನ ಹೆಂಡತಿ ಕುತೂಹಲದಿಂದ ಆ ಮಗುವನ್ನು ಎತ್ತಿಕೊಂಡಳು.

’’ಯಾರದ್ರೀ ಮಗು.. ಭಾಳ ಚಂದ ಇದೆ. ಗಂಡು ಮಗು!’’

ಆಗಲೆ ಇಬ್ಬರಿಗೂ ಹೊಳೆದದ್ದು. ಮಗು ಹೆಣ್ಣೊ ಗಂಡೊ ಅನ್ನುವುದನ್ನು ತಾನಾಗಲಿ , ಅವನಾಗಲಿ ಅದುವರೆಗೂ ಯೋಚಿಸಿಯೇ ಇರಲಿಲ್ಲ!

ಮರುದಿನ ಶಿವಪ್ಪ ಸಿಕ್ಕಿದಾಗ ಬಹಳವೇ ಸಂತಸದಲ್ಲಿದ್ದ. ’’ನನ್ನ ಹೆಂಡತಿ ಬಹಳ ಖುಷಿಯಲ್ಲಿದ್ದಾಳೆ ಶಂಕರ. ಮಗನಂತೆಯೆ ಬೆಳೆಸುತ್ತೇನೆ ಅಂತ ಮಾತು ಕೊಟ್ಟಳು. ಮಗು ನಿಜಕ್ಕೂ ಮುದ್ದಾಗಿದೆ”’

ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಹೋಗಿದ್ದು ನೆನಪಾಯಿತು. ತನ್ನ ಮದುವೆ ಆಗಿ ಆಗ ನಾಲ್ಕೋ ಐದೋ ತಿಂಗಳು ಅಂತ ಕಾಣತ್ತೆ. ಅವಳು ತನ್ನೊಂದಿಗೆ ಬರಲಿಲ್ಲ.

ಅವತ್ತು ಕೇಳಿದ್ದ, ’’ಏನು ಮಗನಿಗೆ ವಿಹಾರ ಅಂತ ಹೆಸರು ಇಟ್ಟಿದೀಯ? ಜನ ಸ್ವಲ್ಪ ವಿಚಿತ್ರ ಹೆಸರು ಅಂದುಕೊಳ್ಳೊದಿಲ್ವ?’’ ಅವನು ನಕ್ಕು, ’’ಅದಕ್ಕೆ ಕಾರಣ ನಿನಗೆ ಗೊತ್ತೆ ಇದೆ ಶಂಕರ. ಮಗು ಸಿಕ್ಕಿದ್ದು ಶಿಶು ವಿಹಾರದ ಹತ್ರ . ಅದು ನನ್ನ ಅದೃಷ್ಟದ ಜಾಗ. ಅದಕ್ಕೇ ಅದರ ನೆನಪಿಗೆ ವಿಹಾರ್ ಅಂತ ಇಟ್ಟಿದೀನಿ’’

ನಿಜಕ್ಕೂ ಶಿವಪ್ಪ ದೊಡ್ಡ ಮನುಷ್ಯ ಅನ್ನಿಸಿತು. ಸಮಯ ಸರಿಯುತ್ತಾ ವಿಹಾರ ಸಾಕುಮಗ ಅನ್ನುವುದು ಮರೆತೇ ಹೋಗಿದೆ. ವಿಹಾರನಿಗೆ ಆ ವಿಷಯ ಶಿವಪ್ಪ ಇವತ್ತಿಗೂ ಮುಚ್ಚಿಟ್ಟಿದ್ದಾನೆ.’

*******

ಹಾಗೆ ಶಂಕರ ಯೋಚನೆಯಲ್ಲಿ ಮುಳುಗಿದ್ದಾಗ, ಶಂಕರನ ಹೆಂಡತಿಯ ಲಹರಿ ಹಿಂದಿನ ದಿನಗಳ ಕಡೆಗೆ ಹರಿಯತೊಡಗಿತು.

ಅವಳೂ ಅಂದುಕೊಂಡಳು, ’ಹೌದು…. ವಿಹಾರ ಅನ್ನುವುದು ವಿಚಿತ್ರವಾದ ಹೆಸರು ಅಂತ ಬಹಳ ವರ್ಷಗಳ ಹಿಂದೆ ಯೋಚಿಸಿದ್ದು. ಆದರೆ ಜನ ಆ ಹೆಸರನ್ನು ಬಳಕೆ ಮಾಡಿದರು, ಚಿತ್ರ ನಟನಾದ ಮೇಲೆ ಮತ್ತಷ್ಟು ನಾಲಿಗೆಗಳಲ್ಲಿಆ ಹೆಸರು ಹರಿದಾಡಿ ಈಗ ಏನೂ ವಿಶೇಷತೆ ಅನ್ನಿಸುತ್ತಿಲ್ಲ.’

’ವಿಹಾರ!’ ’ಶಿಶುವಿಹಾರ!’ ಏನೋ ಗಲಿಬಿಲಿ, ತಳಮಳ ಮನಸ್ಸಿನಲ್ಲಿ ತೊಳಲಾಡತೊಡಗಿತು. ಅವಳು ಗಾಢ ಯೋಚನೆಯಲ್ಲಿ ಮುಳುಗಿಬಿಟ್ಟಳು……

’ಮದುವೆಯಾಗಿ ಇಪ್ಪತ್ತೈದು ವರ್ಷಗಳೆ ಕಳೆದಿವೆ. ಶಂಕರನಿಗಲ್ಲದಿದ್ದರೂ ಕಟ್ಟಿಕೊಂಡ ತನಗೆ ಆ ಕೊರತೆ ಕಾಡುತ್ತಲೆ ಇದೆ. ಕೂಸು ಇಲ್ಲದಿರುವ ಯೋಚನೆಯಲ್ಲಿ ನವೆದಿದ್ದೇನೆ.

ಶಂಕರ ಆ ದಿನಗಳ ಸುಂದರಾಂಗ. ಕಲಾಕ್ಷೇತ್ರದಲ್ಲಿ ಯಾವುದೊ ನಾಟಕ ನೋಡಲು ಹೋದಾಗ ಆದ ಪರಿಚಯ. ಆಗಾಗ ಅವನು ಸಿಕ್ಕುತ್ತಿದ್ದ. ಯೌವನದಲ್ಲಿ ಒಮ್ಮೆ ಒಲಿದ ತನ್ನ ಮನಸ್ಸು ಶಂಕರನನ್ನು ಎಷ್ಟು ಹಚ್ಚಿಕೊಂಡಿತು! ಅವನು ಏನು ಮಾಡಿದರೂ ಪ್ರೇಮದ ಒಂದು ರೂಪವಾಗಿಬಿಟ್ಟ ಕ್ಷಣಗಳು.

ಎಡವುವುದು ಕೂಡ ಪ್ರೇಮದ ಒಂದು ಹೆಜ್ಜೆ ಅಂದುಕೊಂಡೆ! ಇಬ್ಬರ ಹುಚ್ಚಾಟಗಳ ಆ ಒಂದು ದಿನ ಇಲ್ಲದಿದ್ದರೆ ಎಷ್ಟು ಚೆಂದವಿತ್ತು. ಇಲ್ಲ ಹಾಗಾಗಲಿಲ್ಲ. ಅವನು ದುಡುಕಿದ. ನಂತರದ ಪಶ್ಚಾತ್ತಾಪ ತನ್ನಲ್ಲಿದ್ದಂತೆ ಅವನಲ್ಲಿಯೂ ಇತ್ತು. ತಾನು ದುಡುಕದೆಯೂ ತಪ್ಪಾಗಿಹೋಗಿತ್ತು. ತಪ್ಪಿನ ಕುರುಹುಗಳು ತನ್ನಲ್ಲಿ ಕಾಣುತ್ತಿದ್ದಂತೆ, ಸುಮಾರು ಒಂದು ವರ್ಷ ಅವನಿಂದ ದೂರ ವಾದೆ. ಜನರ ಕಣ್ಣಿನಿಂದ ತಪ್ಪಿಸಿಕೊಳ್ಳಲೇಬೇಕಾದ ಆ ಕೆಲವು ತಿಂಗಳು, ಬೆಂಗಳೂರು ಬಿಟ್ಟು ದೂರದ ಹೈದರಾಬಾದಿನ ನೆಂಟರ ಮನೆಯಲ್ಲಿ ತಪ್ಪಿತಸ್ತಳಂತೆ ದಿನಗಳ ತಳ್ಳಿದೆ. ಅಪ್ಪನಿಲ್ಲದ ತನಗೆ ಅಮ್ಮ ಎಲ್ಲಕ್ಕೂ ಆಸರೆ. ನನ್ನ ತಪ್ಪು ಹೊಟ್ಟೆಗೆ ಹಾಕಿಕೊಂಡಳು. ಮಮ್ಮಲ ಮರುಗಿದಳು. ಶಂಕರನಿಗೆ ಈ ವಿಷಯ ತಿಳಿಸಬೇಡವೆಂದು ತಾಕೀತು ಮಾಡಿದಳು. ಗರ್ಭಿಣಿ ಅಂತ ಗೊತ್ತಾದರೆ, ಎಲ್ಲ ಗಂಡು ಜಾತಿಯ ಜಾಯಮಾನದಂತೆ ಎಲ್ಲಿ ಅವನೂ ತೊರೆದುಬಿಟ್ಟಾನು ಅನ್ನುವ ಭಯ ಅವಳಲ್ಲಿತ್ತು.

ಶಂಕರ ಆಗಾಗ ಮನೆಗೆ ಬಂದು ಅಮ್ಮನನ್ನು ತನ್ನ ಬಗೆಗೆ ವಿಚಾರಿಸುತ್ತಿದ್ದದ್ದು ಮತ್ತು ಅವಳು ಸಬೂಬುಗಳನ್ನು ಕೊಟ್ಟು ಸಾಗಹಾಕುತ್ತಿದ್ದದ್ದು ತನಗೆ ತಿಳಿಯುತ್ತಿತ್ತು.

ಗರ್ಭಧರಿಸಿ ಶಂಕರನಿಂದ, ಮನೆಯಿಂದ ದೂರ ಸರಿದೆ. ಆರು ತಿಂಗಳು ಹೈದರಾಬಾದಲ್ಲಿ ಕಳೆಯುವಷ್ಟರಲ್ಲಿ ಆ ಗಂಡು ಹುಟ್ಟಿತು. ಆ ನೆಂಟರು ರೈಲು ಹತ್ತಿಸಿ ಮತ್ತೆ ಬೆಂಗಳೂರಿಗೆ ಕಳುಹಿಸಿ ನಿಟ್ಟುಸಿರು ಬಿಟ್ಟರು. ತಾನು ಬೆಳಗಿನ ಝಾವ ಟ್ರೇನ್ ಇಂದ ಇಳಿದು ಮನೆಗೆ ಆಟೊ ಹಿಡಿದೆ. ಮನೆಯಲ್ಲಿ ಮಗುವನ್ನು ತರಬಾರದೆಂದು ತಾಕೀತು ಮಾಡಿದ್ದು ನೆನಪಾಯಿತು. ಇನ್ನೇನು ರಾದ್ಧಾಂತಗಳು ಕಾದಿವೆಯೊ. ಗಟ್ಟಿ ನಿರ್ಧಾರ ಮಾಡಿದ್ದೆ. ಇದನ್ನು ಕಳೆದುಕೊಳ್ಳಲೆ ಬೇಕು. ಇಲ್ಲವಾದರೆ ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಬೇಕು. ಆಟೋದವನನ್ನು ಯಾವುದೊ ಬಡಾವಣೆಯ ಸಮೀಪ ನಿಲ್ಲಿಸಲು ಹೇಳಿದೆ. ಅವನು ಹೊರಟು ಹೋದಮೇಲೆ ಸ್ವಲ್ಪ ದೂರ ಸಾಗಿದೆ. ಈ ಕಂದನನ್ನು ಎಲ್ಲಿ ಬಿಡುವುದು. ಕಣ್ಣಾಡಿಸಿದೆ. ಸಣ್ಣದೊಂದು ಬೋರ್ಡ್ ಕಾಣಿಸಿತು. ಶಿಶು ವಿಹಾರ. ಗೇಟ್ ಹಾಕಿದ್ದಾರೆ. ನಿರ್ಜನ. ಸಣ್ಣ ಮರವೊಂದು ಆ ಶಿಶುವಿಹಾರಕ್ಕೆ ತಾಗಿ ನಿಂತಿದೆ. ಕೆಟ್ಟ ಧೈರ್ಯ . ನಿದ್ರೆಯಲ್ಲಿದ್ದ ಮಗು, ಬೆಚ್ಚಗೆ ಹೊದಿಕೆ ಮುಚ್ಚಿ ಮರದ ಹಿಂಭಾಗ ಇಟ್ಟುಬಿಟ್ಟೆ. ಧಾರಾಕಾರ ಸುರಿಯುವ ಕಣ್ಣೀರು. ಸರಸರನೆ ಮುಖ್ಯ ರಸ್ತೆಗೆ ಬಂದೆ. ಅದೃಷ್ಟಕ್ಕೆ ಆಟೊವೊಂದು ಸಿಕ್ಕಿಬಿಟ್ಟಿತು. ಮನೆಗೆ ಬಂದೆ. ಒಂಟಿಯಾಗಿ ಬಂದವಳನ್ನು ಅಮ್ಮ ಸಮಾಧಾನಿಸಿದಳು. ಅವಳೂ ನನ್ನೊಡನೆ ಕಣ್ಣೀರು ಸುರಿಸಿಬಿಟ್ಟಳು.

ಶಂಕರನಿಗೆ ವಿಷಯವನ್ನು ಅಮ್ಮನ ತಾಕೀತಿನಂತೆ ಗುಟ್ಟು ಮಾಡಿದೆ. ತಾನು ಒಂದು ವರ್ಷದ ನಂತರ ಸಿಕ್ಕಿದ್ದು ಅವನಿಗೆ ಬಹಳ ಸಮಾಧಾನ ತಂದಿತ್ತು. ಆ ದಿನವಾದ ಉನ್ಮಾದದ ಕ್ಷಣಗಳಿಗೆ ತಾನು ಕಾರಣ ಎಂದು ಕ್ಷಮೆ ಕೇಳಿದ. ತಕ್ಷಣ ಮದುವೆಯಾಗೋಣ ಅಂದ. ಹಳೆಯದನ್ನೆಲ್ಲ ಮರೆಸುವಂತೆ ಮದುವೆಯ ಜೀವನಕ್ಕೆ ಕಾಲಿಟ್ಟಾಯಿತು.

ತನ್ನ ಈ ಗುಟ್ಟು ಅವನಿಗಿನ್ನು ಹೇಳಿದರೆ ಮತ್ತೇನು ರಾದ್ಧಾಂತವಾಗುತ್ತದೋ ಅನ್ನುವ ಭಯ. ಆದರೂ ತನ್ನ ಆ ಕುಡಿಯ ನೆನಪು ಕಾಡುತ್ತಲೆ ಇದೆ. ಅಮ್ಮ ತನ್ನ ತೊರೆದ ನಂತರ ಆ ಗುಟ್ಟು ಈಗ ಎದೆಯನ್ನು ದಹಿಸತೊಡಗಿದೆ. ಶಂಕರನೊಂದಿಗೆ ಮದುವೆಯಾದ ಮೇಲೆ ಆ ಶಿಶುವಿಹಾರಕ್ಕೆ ಒಮ್ಮೆ ಅಮ್ಮನನ್ನು ಒಬ್ಬಳೇ ಕರೆದುಕೊಂಡು ಹೋಗಿದ್ದೆ. ’ಹಿಂದೆ ಯಾರೋ ಮಗುವೊಂದನ್ನು ಅನಾಥ ಬಿಟ್ಟು ಹೋಗಿದ್ದಾರೆ ಅನ್ನುವ ಗಾಳಿ ಸುದ್ದಿ ಇದೆ. ಆ ಬಗೆಗೆ ನಿಮಗೆ ಏನಾದರೂ ಗೊತ್ತ?’ ಎಂದು. ಅಲ್ಲಿ ಆ ಬಗೆಗೆ ಯಾರಿಗೂ ತಿಳಿಯದು. ಮಗು ಏನಾಗಿರಬಹುದೆನ್ನುವುದು ಕತ್ತಲೆಯಲ್ಲೇ ಉಳಿದುಹೋಯ್ತು.

ತನ್ನ ಅಸಹನೆಯ ಮಾತುಗಳು ಶಂಕರನ ಬಗೆಗೆ ಓತಪ್ರೋತ ಹರಿಯುವುದು ಆ ಶೂನ್ಯದ ನೆನಪಾದಗಲಷ್ಟೆ!

*******

ಶಂಕರನಿಗೆ ಅಚಾನಕ ನಿನ್ನೆ ವಿಹಾರ ಹೇಳಿದ್ದು ನೆನಪಾಯಿತು. ತಾನು ವಯಸ್ಸಿನಲ್ಲಿ ಸುಂದರಾಂಗನಿದ್ದದ್ದು. ಅವನು ಫೋಟೊ ನೋಡಿ ಹೊಗಳಿದ್ದು. ಇವನ ಮೂಗು, ಕಣ್ಣು ಮತ್ತು ಹಣೆ ಸ್ವಲ್ಪ ಅವನಂತೆ ಇದೆ ಅನ್ನುವುದು ಒಂಥರ ಖುಷಿ ಕೊಟ್ಟಿತು. ‘ನಾನು ನಿಮ್ಮ ಮಗನ ಥರವೆ ಅಲ್ಲವ?’ ಅಂದದ್ದು ಆಪ್ಯಾಯವೆನಿಸಿತು.

ಶಂಕರ ಮಾತು ಕೊಟ್ಟಾಗಿದೆ. ಶಿವಪ್ಪನ ಮಗನ ಗುಟ್ಟು ರಟ್ಟು ಮಾಡುವುದಿಲ್ಲವೆಂದು.

ಅವಳನ್ನೇ ನೋಡುತ್ತಾ ಮೆಲ್ಲನೆ ಹೇಳಿದ. ’’ನೀನು ಯಾರಿಗೂ ಹೇಳೋದು ಬೇಡ. ವಿಹಾರ ಶಿವಪ್ಪನ ಸಾಕುಮಗ. ನಿನ್ನ ಅನುಮಾನ ನಿಜ. ಅವನು ಅವರ ನೆಂಟರ ಪೈಕಿ ಆ ಮಗು ದತ್ತು ತೆಗೊಂಡಿದ್ದಾನೆ. ಆದ್ರೆ ಆ ವಿಷಯ ಮುಚ್ಚಿಟ್ಟಿದ್ದಾನೆ ಅಷ್ಟ”’

ಅವಳು ಆಶ್ಚರ್ಯದಲ್ಲಿ ಮುಳುಗಿದಳು. ’’ದತ್ತು ಕೊಟ್ಟವರು ಯಾರು?’’

’’ಗೊತ್ತಿಲ್ಲ’’

’’ನಾನು ಹೇಳ್ತನೆ ಇದ್ದೆ. ನಂಗೆ ತುಂಬಾನೆ ಅನುಮಾನ ಇತ್ತು. ನೀವು ವಿಷ್ಯ ಈವತ್ತು ಬಾಯ್ಬಿಡ್ತಿದೀರ. ಆಗ್ಲಿ ಬಿಡಿ ನಾನೂ ಗುಟ್ಟಾಗಿಡ್ತೀನಿ.’’

*******

ಬೆಳಿಗ್ಗೆ ಎದ್ದಾದ ಮೇಲೆ ಹೇಳಿದಳು, ’’ಇವತ್ತು ಆಕಡೆ ಹೋಗಲ್ವ?’’ ಹೊರಟು ನಿಂತ. ಒಗೆದು ಇಸ್ತ್ರಿಯಾದ ಅಂಗಿ ಕೊಟ್ಟಳು. ಅವನು ಹೊರಗೆ ಕಾಲಿಡುವಾಗ ಅವಳ ಒಳಗೆ ವಿಷಾದ ಮರುಕಳಿಸಿತು, ’ಶಂಕರನಿಗೆ ಗುಟ್ಟುಮಾಡಿ ಇವತ್ತಿಗೂ ನಾಟಕವಾಡುತ್ತಿದ್ದೇನಲ್ಲ!’

“ವಿಹಾರುನ ಆಗಾಗ ಮನೇಗ್ ಕರೀರಿ. ಯಾಕೊ ನನಗೆ ಕರುಳು ಚುರುಕ್ ಅಂತಿದೆ. ಅವ್ನಿಗೆ ಒಂದಿನ ಊಟ ಹಾಕ್ಬೇಕು ಅನ್ನಿಸ್ತಿದೆ. ನೀವು ಸ್ವಲ್ಪ ಗತ್ತು ಕಡ್ಮೆ ಮಾಡಿ. ಅವಂದು ಶೂಟಿಂಗ್ ಇರೊ ಕಡೆ ಆಗಾಗ ಹೋಗಿ ಬಂದ್ರೆ ಸಿಕ್ತಾ ಇರ್ತಾನೆ. ಒಂದ್ಸರಿ ಅವನ ಮನೇಗೆ ಹೋಗೋಣ. ಶಿವಪ್ಪನ ಹೆಂಡ್ತಿ ನಂಗೂ ಪರಿಚಯನೆ’’

”ಆಗ್ಲಿ… ಅಗ್ಲಿ’’ ಹೇಳುತ್ತಾ ಹೊರಗೆ ಕಾಲಿಟ್ಟ.

ಅದು ಅವನ ನಡಿಗೆಯ ಹಳತು ಹಾದಿ. ಪ್ರತಿ ಹೆಜ್ಜೆಗೂ ಪುಟಿವ ಸಂಭಾಷಣೆಗಳು ಹೊಳೆಯುತ್ತಿವೆ ಮತ್ತು ಪುಟ ಪುಟಗಳಲ್ಲು ಅದು ಹೇಗೆ ಕಾಣುತ್ತದೆನ್ನುವ ಅಂದಾಜಿದೆ. ಈಗ ಹೊಳೆಯುತ್ತಿರುವುದೆಲ್ಲ ಹೊಸ ನಾಟಕ ಮತ್ತದರ ಶೀರ್ಷಿಕೆ! ಪ್ರತಿ ಪಾತ್ರಗಳೂ ಸರತಿಯಲ್ಲಿ ನಿಂತಿವೆ. ಅವನೊಟ್ಟಿಗೆ ಹೆಜ್ಜೆ ಹಾಕತೊಡಗಿವೆ. ಆ ಪಾತ್ರಗಳೋ ಆತ್ಮರತಿಯಲ್ಲಿ ತೊಡಗಿಕೊಂಡಿವೆ! ಅವನಿಗೀಗ ಗಲಿಬಿಲಿ. ಯಾರನ್ನು ಹತ್ತಿರವೆಳೆಯಲಿ, ಯಾರನ್ನು ದೂರ ತಳ್ಳಲಿ? ಯಾತಕ್ಕೊ ಅವೆಲ್ಲ ಪಾತ್ರಗಳನ್ನು ತಾನು ಬಾಚಿ ತಬ್ಬಿಕೊಳ್ಳಬೇಕೆನ್ನುವ ಆಸೆಯೊಡೆದಿದೆ!

ಕಲಾಕ್ಷೇತ್ರದ ಬಳಿ ಬಂದು ನಿಂತಾಗ ಏನೋ ತೃಪ್ತಿ. ಯಾಕೆಂದು ಗೊತ್ತಾಗಲಿಲ್ಲ. ಕಿವಿಗೆ ಯಾವುದೊ ನಾಟಕದ ತಾಲೀಮು ನಡೆಯುತ್ತಿರುವ ಸದ್ದು ಪಕ್ಕದ ರಂಗಶಾಲೆಯಿಂದ ಕೇಳುತ್ತಿದೆ.

ಏಕೆ ಈ ವಿಹಾರ ಇಷ್ಟು ಮನಸ್ಸು ಹೊಕ್ಕಿದ್ದಾನೆ? ಒಂದು ವಿಷಾದದ ನಾಟಕಕ್ಕೆ ಅವನೇ ಏಕೆ ನಾಯಕನ ರೂಪದಲ್ಲಿ ತನ್ನನ್ನು ಕಾಡುತ್ತಿದ್ದಾನೆ?   ನಿನ್ನೆ ಅವನು ಬಂದು ಹೋದಮೇಲಷ್ಟೆ ಈ  ಬದಲಾವಣೆಯ? ಅವನ ಮನಸ್ಸು ಮತ್ತೆ ಕೂಗಿ ಹೇಳುತ್ತಿದೆ. ’ಇಲ್ಲ…. ಅವನನ್ನು ನೋಡುವಾಗಲೆಲ್ಲ ತನಗೆ ಕಾಡುತ್ತಿರುವ ಒಂದೇ ವಿಷಾದ, ತಾನೇಕೆ ಆ ದಿನ ಆ ಮಗುವನ್ನು ನಿರಾಳ ಶಿವಪ್ಪನ ಕೈಯಲ್ಲಿಟ್ಟೆ.   ತಾನೆ ಹೊತ್ತು ತನ್ನ ಮನೆಗೇಕೆ ಒಯ್ಯಲಿಲ್ಲ. ತನ್ನ ಅಪ್ಪ ಅಮ್ಮ ಒಪ್ಪುತ್ತಿರಲಿಲ್ಲವೇನೊ. ಆದರೆ ಇವಳು ಒಪ್ಪುತ್ತಿದ್ದಳು. ಆದರೆ ಆಗ  ತಮ್ಮಿಬ್ಬರ  ಮದುವೆ  ಆಗಿರಲಿಲ್ಲವಲ್ಲ!     ಮತ್ತೆ ತಮಗೆ ಮಕ್ಕಳಾಗುವುದಿಲ್ಲ ಅನ್ನುವ  ಕ್ರೂರ ಸತ್ಯ ಗೊತ್ತಿಲ್ಲದೆ ಹೋಯಿತಲ್ಲ! ’

’ವಿಹಾರ್ ಮಕ್ಕಳಿಲ್ಲದ ಚಿಂತೆ ದೂರಮಾಡುವ ಭರವಸೆ ತನ್ನಲ್ಲಿ ಮೂಡಿಸುತ್ತಿದ್ದಾನೆ.’ ಶಂಕರನಿಗೆ ಹಾಗೇಕೆ ಅನ್ನಿಸುತ್ತಿದೆ ಗೊತ್ತಾಗುತ್ತಿಲ್ಲ.

ಅವನೀಗ ಆ ಕಲಾಕ್ಷೇತ್ರದ ಮುಂದೆ ಬಂದು ನಿಂತಿದ್ದಾನೆ. ಕಟ್ಟಡದ ಉದ್ದಗಲಗಳು, ಏರು ತಗ್ಗುಗಳು, ಒಳ ಹೊರಗುಗಳು,   ರಾತ್ರಿ  ಹಗಲುಗಳು  ಅವನ  ಹಿಂತಿರುಗುವಿಕೆಗೆ  ಕಾದಿದ್ದವೇನು!?       ಆ ಶಿಲಾಮಹಲು ಮೃದುವಾಗಿ, ಅವನ ಹೊಸಕೃತಿಯ ಬೀಜಾಂಕುರಕ್ಕೆ ಮೈ ಚಾಚಿ ಆಹ್ವಾನಿಸುತ್ತಿರಬಹುದೇನು !?

ಅದೃಶ್ಯ ನಾಟಕಕಾರನೊಬ್ಬ ಪೂರ್ಣಸತ್ಯ ಮರೆಮಾಚಿ ಶಂಕರನ ಹೊಸ ಕೃತಿಗೆ ಉತ್ತೇಜಿಸುತ್ತಿದ್ದಾನೆ!

– ಅನಂತ ರಮೇಶ್

(ಚಿತ್ರ-ಅಂತರ್ಜಾಲದಿಂದ)

( Published in Kannada.Pratilipi- Link: https://kannada.pratilipi.com/anantha-ramesh/naatakakaara?searchQuery=anantha)

*******

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s