ಮೂರನೆ ರೂಮು

boy

ಒಂದು

ಪುಟ್ಟ ದೇಹಿಗಳು ದೊಡ್ಡವರ ಕೈ ಹಿಡಿದು, ಪುಸ್ತಕಗಳ ಚೀಲ ಹೊತ್ತು ಸಾಗುತ್ತಿದ್ದ ಬೆಳಗಿನ ರಸ್ತೆ. ಮಕ್ಕಳು ಶಾಲೆಗೆ ತೆರಳುತ್ತಿರುವ ಸುಂದರ ದೃಶ್ಯ.

ನಾನು ಮುಂಜಾನೆಯ ವಾಯು ವಿಹಾರಕ್ಕೆ ಆ ಪಾರ್ಕ್ ಕಡೆಗೆ ಹೆಜ್ಜೆ ಇಟ್ಟೆ.

ನಾನು ನಡಿಗೆ ಮಾಡುವ ಆ ಪಾರ್ಕಿನ ಬಳಿ ಆ ಹುಡುಗನನ್ನು ನೋಡಿದೆ.  ಸಣ್ಣದೊಂದು ಚೀಲ ಹಿಡಿದು ಪಾರ್ಕಿನ ಮಧ್ಯದ ಜಗುಲಿಯ ಮೇಲೆ ಅವನು ಬಂದು ಕುಳಿತ.   ಮೆಲ್ಲಗೆ  ಹಾಡು ಗುನುಗುತ್ತಾ ಕಣ್ಣಿನಲ್ಲೆ ಏನೋ ಪರೀಕ್ಷೆ ಮಾಡುತ್ತ, ತಾನು ಎಲ್ಲಿ ಕುಳಿತು ಆಟ ಪ್ರಾರಂಭ ಮಾಡಬೇಕು ಅನ್ನುವಂತೆ. ಆಚೆ ಈಚೆ ನೋಡುತ್ತಾ ಆ ಚೀಲದಿಂದ ಒಂದೊಂದೆ ವಸ್ತುಗಳನ್ನು ಹೊರಕ್ಕೆ ತೆಗೆಯತೊಡಗಿದ.

ಪಾರ್ಕಿಗೆ ಪ್ರದಕ್ಷಿಣೆ ಮಾಡುತ್ತಲೆ ನಾನು ಅವನ ಚಟುವಟಿಕೆಗಳನ್ನೆಲ್ಲ ನೋಡುತ್ತಿದ್ದೆ.

ಒಬ್ಬನೇ ಹುಡುಗ.  ಜೊತೆಯವರಿಲ್ಲ.    ಆದರೆ ಒಂಟಿ ಅನ್ನಿಸಲಿಲ್ಲ.    ಅವನು ಆ ಆಟಿಕೆಗಳೊಂದಿಗೆ ಸಂಭಾಷಿಸುತ್ತ ಓರಣವಾಗಿ ಜೋಡಿಸುತ್ತಾ ಬಹಳ ಕೆಲಸಗಳ ನಡುವೆ ಕಳೆದುಹೋದಂತೆ ಕಾಣುತ್ತಿದ್ದ. ಪುಟ್ಟ ಪುಟ್ಟ  ಗೊಂಬೆಗಳು.   ಕೆಲವು ರಬ್ಬರಿನವು,  ಕೆಲವು ಮರದಲ್ಲಿ ಮಾಡಿದ ಬೊಂಬೆಗಳು.   ಪುಟ್ಟ ನಾಯಿಮರಿಯ ಗೊಂಬೆ. ಸಣ್ಣ ಮಂಗ, ಹಾವು, ಕರಡಿ, ಮೊಸಳೆ, ಮೀನು, ಹಕ್ಕಿಗಳು. ನುಣುಪು ಕಲ್ಲುಗಳು, ಬಣ್ಣದ ಎಲೆ, ಹೂಗಳು.  ಈ ಎಲ್ಲವೂ ಮೂಕ ಸಂಭ್ರಮದಲ್ಲಿ ಆ ಹುಡುಗನೊಂದಿಗೆ ಭಾಗಿಗಳಾಗಿದ್ದವು. ಹುಡುಗನ ಆಟ ಸಾಗುತ್ತಾ ಆ ಆಟಿಕೆಗಳಲ್ಲಿ ಜೀವ ಸಂಚರವಾದಂತೆ ಕಾಣುತ್ತಿತ್ತು. ಅಲ್ಲಿನ ಆಟಿಕೆಗಳೆಲ್ಲ ಅವನೊಡನೆ ಖುಷಿಯಲ್ಲಿ ಮಾತನಾಡುತ್ತಿರುವಂತೆ, ಅವನಿಗೆ ಸಂಜ್ಞೆಗಳನ್ನು ಕೊಡುತ್ತಿರುವಂತೆ.

ಆ ಹುಡುಗ ತನ್ನದೆ ಪ್ರಪಂಚದಲ್ಲಿ ತನ್ಮಯತೆಯ ರೂಪವಾಗಿದ್ದ.

ಅದರಲ್ಲೊಂದು ಪುಟ್ಟದಾದ ಗೊಂಬೆಗೆ ತಟ್ಟುತ್ತ ಮೆಲ್ಲನೆ ಹೇಳುತ್ತಿದ್ದ.  ’ ರಾಜೂ…  ಏಳು.  ಬೇಗ್ನೆ ಜಳಕ ಮಾಡು. ತಿಂಡಿ ತಿನ್ನು. ಸ್ಕೂಲಿಗೆ ಲೇಟ್ ಆಗಂಗಿಲ್ಲೇನ್?’ ಹಾಗೆ ಹೇಳುತ್ತಲೆ ಆ ಗೊಂಬೆಗೆ ಸ್ನಾನ ಮಾಡಿಸಿ, ತಿಂಡಿ ತಿನ್ನಿಸುವ ನಾಟಕವಾಡಿದ.

’ಈಗ್ಲಾದ್ರೂ ಹೊಂಟೀಯೇನ್? ಕೇಳಿಸ್ತದೇನು ಸ್ಕೂಲ್ ಬೆಲ್ ಆಯ್ತು’ ಅಂದ. ಗೊಂಬೆಯನ್ನು ಅಡ್ಡಡ್ಡ ಆಡಿಸಿ ಮತ್ತೆ ಕೇಳಿದ. ’ಏನು.. ಸ್ಕೂಲ್ಗೆ ಹೋಗೂದಿಲ್ಲ?. ದಡ್ಡ ಹುಡುಗ ಆಗ್ತೀಯ ಮತ್ತೆ?’

ಮತ್ತೆ ಗೊಂಬೆಯ ತಲೆಯನ್ನು ಅತ್ತಿತ್ತ ’ಇಲ್ಲ’ ಅನ್ನುವಂತೆ ಆಡಿಸಿದ. ’ರಾಜು.. ನೀನು ಛಲೋ ಹುಡುಗ ಹೌದಲ್ಲೊ. ಹಾಂಗೆಲ್ಲ ಹಠ ಮಾಡ್ಬಾರ್ದು.  ಜಾಣ.. ಬಾ ನಾ ಬಿಟ್ ಬರ್ತೇನಿ’  ಅಂತ ಗೊಂಬೆಯನ್ನು ಎತ್ತಿಕೊಂಡ. ಸ್ವಲ್ಪ ದೂರ ನಡೆಯುವಂತೆ ನಟಿಸಿ ಮತ್ತೆ ಗೊಂಬೆಯನ್ನು ಮೂಲೆಯಲ್ಲಿ ಕೂರಿಸಿದ.

ಇವೆಲ್ಲ ನೋಡುತ್ತ, ನೋಡುತ್ತ ನಾನು ಆ ಪುಟ್ಟ ಹುಡುಗನ ಬಳಿಗೇ ಬಂದೆ. ಅವನು ತಲೆ ಎತ್ತಿ ನೋಡಿದ. ನಕ್ಕೆ. ಅವನೂ ನಕ್ಕ.

’ಏನು ಮಗು ನಿನ್ನ ಹೆಸರು?’ ಕೇಳಿದೆ.
’ಶಿವು’
’ಏನಾಟ ಇದು?’
’ಮನೆ ಆಟ’
ಮತ್ತೆ ಅವನು ಆಟದಲ್ಲಿ ಮಗ್ನ.

ಒಂದು ಜೊತೆ ಮಾಸಲು ಬಟ್ಟೆಯನ್ನು ಅವನು ತೊಟ್ಟಿದ್ದ.            ಹೊರಗಿನ ಛಳಿ ಅವನನ್ನು ಬಾಧಿಸುತ್ತಿರಲಿಲ್ಲ. ಇನ್ನೂ ಅವನು ಹಾಡೊಂದನ್ನು ಗುನುಗುನಿಸುತ್ತಿದ್ದ. ಆಟದ ತಾದಾತ್ಮ್ಯತೆ.

ನನಗೆ ಹೊತ್ತಾಯಿತು. ಎದ್ದೆ. ಹಾಗೇ ಹೋಗುತ್ತ ಕೇಳಿದೆ. ’ಇವತ್ತು ಸ್ಕೂಲ್ ಇಲ್ಲವಾ ಶಿವು?’

ಥಟ್ಟನೆ ತಲೆ ಎತ್ತಿ ನನ್ನನ್ನೇ ನೋಡುತ್ತಾ ’ಇಲ್ಲ.. ಇಲ್ಲ’ ಅಂದ.

ಅವನ ಆಟದ ಉತ್ಸಾಹ ಭಗ್ನವಾದಂತೆ ಕಂಡಿತು. ಅವನ ಗುನುಗು ಹಾಡು ನಿಂತುಹೋಯಿತು. ನನ್ನನ್ನು ಮತ್ತೊಮ್ಮೆ ನೋಡಿದ. ನಗು ಅವನ ಮುಖದಿಂದ ಮರೆಯಾಯಿತು.

’ಯಾಕಪ್ಪಾ.. ಏನಾಯ್ತು?’ ಕೇಳಿದೆ. ಉತ್ತರವಿಲ್ಲ. ಲಗುಬಗೆಯಲ್ಲಿ ಆಟಿಕೆಗಳನ್ನು ತನ್ನ ಚೀಲಕ್ಕೆ ಹಾಕತೊಡಗಿದ ಮತ್ತು ಅಲ್ಲಿಂದ ಹೊರಟೇ ಬಿಟ್ಟ!

ಹೋಗುತ್ತಾ ನನ್ನ ಕಡೆಗೆ ಆಗಾಗ ತಿರುಗಿ ನೋಡುತ್ತಲೇ ಇದ್ದ. ಆ ಹುಡುಗನ ಕಣ್ಣಲ್ಲಿ ಭಯವೋ ಅಥವಾ ನಿರಾಸೆಯೋ?

ಪುಟ್ಟ  ಹುಡುಗನೊಬ್ಬನ  ಆಟದ  ಹಕ್ಕನ್ನು  ಕಸಿದುಕೊಂಡ  ಭಾರ  ನನ್ನೊಳಗೆ  ನಿಧಾನ  ಇಳಿಯಿತು. ಇದುವರೆಗೆ ಈ ಪಾರ್ಕಿನ ಆ ಜಗುಲಿಯಲ್ಲಿದ್ದ ಚೇತೋಹಾರಿ ಚಟುವಟಿಕೆಗಳು ಒಮ್ಮೆಲೆ ಸ್ತಬ್ಧವಾಯಿತು. ಮುಗ್ಧ ಗುನುಗು ಹಾಡುಗಳು;   ಸ್ವಗತದ ಮಾತುಗಳು;  ತ ನ್ಮಯತೆಯ ಆ ಮನೆಯ ಆಟ  ಎಲ್ಲ ತಟಸ್ಥ. ಇದುವರೆಗೆ ಇದ್ದ ನನ್ನೊಳಗಿನ ಕಲರವ ನಿಂತುಹೋಯಿತು. ತಂಪಾದ ಆ ಬೆಳಗು ಕಟು ಬಿಸಿಯನ್ನು ಅಪ್ಪಿದಂತೆನಿಸಿತು.    ’ಮಕ್ಕಳೆಂದರೆ ಶಾಲೆ’  ಅನ್ನುವ  ಹಳೆ ತಾರ್ಕಿಕ ಬುದ್ಧಿ  ನನ್ನನ್ನು  ಅಣಕಿಸಿತು. ದಶಮಾನಗಳಿಂದ ಅಪ್ಪಿಕೊಂಡ ಶಿಸ್ತಿನ ಸರಪಳಿ, ಓದಲ್ಲದೆ ಮಕ್ಕಳಿಗೆ ಮಾರ್ಗವಿಲ್ಲ ಅನ್ನುವ ಏಕಮಾತ್ರ ಮಂತ್ರ; ಅಗಾಧ ನಕ್ಷತ್ರ ಪುಂಜಗಳೂ ಪುಸ್ತಕಗಳಲ್ಲಿ ಹಿಡಿದಿಡಬಹುದೆನ್ನುವ ತ್ರಿಕಾಲ ಮೌಢ್ಯ ನನ್ನ ಬಿಟ್ಟು ಹೋಗುತ್ತಿಲ್ಲವೇಕೆ?    ಅದೋ ಆ ಹುಡುಗನ  ಊಹಾ ವಿಶ್ವ    ನನ್ನ ಪುಸ್ತಕದ  ಜಗತ್ತಿನಾಚೆಗೂ ಚಾಚಿರಬಾರದೇಕೆ? ನಿರ್ಮಲ ಯೋಚನೆಗಳ ಸ್ವತಂತ್ರ ಬದುಕಲ್ಲವೆ ಎಲ್ಲ ಜೀವಗಳ ಆಸೆ? ಸಮಯ ಉರುಳುತ್ತ ದೇಹ, ಮನಸ್ಸು ಮತ್ತು ಬುದ್ಧಿಗಳ ಬೆಳೆಸುತ್ತ ಆನಂದಿಸುವುದಲ್ಲವೆ ಉಸಿರುಗಳ ಧ್ಯೇಯ… ಯೋಚಿಸತೊಡಗಿದೆ.

ಮತ್ತೆ ಹುಡುಗ ಹೋದತ್ತ ನೋಡಿದೆ. ದೂರದಲ್ಲಿ ದೊಡ್ಡದೊಂದು ಅಪಾರ್ಟ್ಮೆಂಟಿನ ಕೆಲಸ ಪ್ರಾರಂಭವಾಗಿತ್ತು. ಅಲ್ಲಿ, ಆ ಕೂಲಿಗಳಿಗಾಗಿ ಕಟ್ಟಿದ ಶೆಡ್ಡುಗಳ ಮಧ್ಯೆ ಆ ಹುಡುಗ ಕರಗತೊಡಗಿದ.

ಪಾರ್ಕಿನ ಜಗುಲಿಯಲ್ಲಿ ಮತ್ತೆ ಆ ಹುಡುಗನ ಆಟ ನೋಡುವ ದಿನ ಬಂದೀತೇನು? ತಿಳಿಯದು.

 

ಎರಡು

ನನ್ನ ಮಗ ವರುಣ ಆ ಪ್ರಸಿದ್ಧ ಗ್ರೂಪಿನ ಅಪಾರ್ಟ್ಮೆಂಟ್ ಕೊಂಡುಕೊಳ್ಳುವವನಿದ್ದಾನೆ. ನನಗೆ ಅದನ್ನು ನೋಡಿ ಬರಲು ಹೇಳಿದ್ದಾನೆ.

ಈ ದಿನ ಆ ದೊಡ್ಡ ಅಪಾರ್ಟ್ಮೆಂಟಿನ ಹತ್ತನೇ ಅಂತಸ್ತಿನ ಮೂರು ಬೆಡ್ ರೂಂ ಫ಼್ಲ್ಯಾಟ್ ನೋಡಲು ಹೋದೆ. ಆ ಫ಼್ಲ್ಯಾಟ್ ತೋರಲು ಮೆನೇಜರ್ ನನ್ನ ಕರದೆಕೊಂಡು ಹೊರಟ. ಆ ಮೂಲೆಯಲ್ಲೊಬ್ಬ ಹುಡುಗ ಆಟದಲ್ಲಿ ತೊಡಗಿದ್ದ. ನೋಡಿದೆ. ಅದೇ ಆ ದಿನ ಪಾರ್ಕಿನಲ್ಲಿ ಆಡುತ್ತಿದ್ದ ಹುಡುಗ! ಒಂದು ಕ್ಷಣ ಅಚಾನಕ್ ನಿಂತೆ. ಅವನೇ ಹೌದಲ್ಲವೆ!

ನಾನತ್ತ ಗಮನಿಸಿದ್ದನ್ನು ನೋಡಿ ಮೆನೇಜರ್ ಹೇಳಿದ. “ಆ ಹುಡುಗ ನಿಮಗೆ ಗೊತ್ತ ಸರ್. ಅವನ ಕತೆ ಹೇಳೋಕ್ಕೆ ಬೇಜಾರಾಗುತ್ತೆ. ಕಳೆದ ತಿಂಗಳು ನೀವಿರುವ ಏರಿಯಾದಲ್ಲಿ ಕಟ್ಟುತ್ತಿರುವ ಒಂದು ಕಟ್ಟಡ ಕುಸಿದು ಬಿತ್ತಲ್ಲ, ಅದರಲ್ಲಿ ಈ ಹುಡುಗನ ಅಪ್ಪ ಅಮ್ಮ ಇಬ್ರೂ ಸಿಕ್ಕಿ ತೀರಿಹೋಗ್ಬಿಟ್ರು. ಅವನ ಚಿಕ್ಕಪ್ಪ ನಮ್ಮ ಅಪಾರ್ಟ್ಮೆಂಟಿನ ಕೆಲಸ ಮಾಡುತ್ತಿದ್ದಾನೆ. ಅವನೇ ಈಗ ಇವನನ್ನ ಸಾಕ್ತಿದಾನೆ ಸರ್. ಇನ್ನೊಂದು ನಾಲ್ಕೆಂಟು ವರ್ಷ ಕಾದರೆ ಇವನೂ ದುಡಿಯುತ್ತಾನೆ. ಕೂಲಿಗೀಲಿ ಮಾಡಿ ಬದುಕ್ಕೊಳ್ತಾನೆ. ಇಂಥ ಕೆಲಸ ಮಾಡುವವರಿಗಷ್ಟೆ ಒಳ್ಳೆ ಬೇಡಿಕೆ. ಏನಂತೀರಾ ಸರ್..?”

ಇದ್ದಕ್ಕಿದ್ದಂತೆ ನನಗೆ ಸ್ವಲ್ಪ ಆಘಾತ. “ಛೆ..ಛೇ..” ಅಂದೆ.

ಮೆನೇಜರ್ ಮಾತು ಮುಂದುವರಿಸಿದ. “ಸರ್.. ನಾನು ಹೇಳ್ತಿರೋದರಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲ. ನನ್ನ ಮಗ ಡಿಗ್ರಿ ಮುಗಿಸಿ ಎರಡು ವರ್ಷ ಆಯ್ತು. ಮನೇಲಿದ್ದಾನೆ. ಕೆಲಸ ಇಲ್ಲ. ಯಾವಾಗ ನೋಡಿದ್ರು ಕಂಪ್ಯೂಟರಲ್ಲಿ ಎಂಥದೊ ಗೇಮ್ಸ್ ಆಡ್ತಾ ಇರ್ತಾನೆ. ಈ ಹುಡುಗನಿಗೆ ಮಣ್ಣಲ್ಲಿ ಆಟ. ನನ್ನ ಮಗನಿಗೆ ಕಂಪ್ಯೂಟರಿನಲ್ಲಿ ಇನ್ನೊಂದು ಥರದ ಆಟ”

ಮೂರು ರೂಮಿನ ಆ ಫ಼್ಲ್ಯಾಟ್ ತೋರಿಸುತ್ತ ಮೆನೇಜರ್ ಹೇಳಿದ. ” ಸರ್.. ನೋಡಿ ಈ ಮೂರನೆ ರೂಮನ್ನು ನೀವು ಎಂಟರ್ಟ್ಯೇಂನ್ಮೆಂಟ್ ರೂಂ ಮಾಡಿಕೊಳ್ಳಿ. ಎಲ್ಲ ವಯಸ್ಸಿನವರಿಗೂ ಏನಾದರು ಆಟಗಳು ಬೇಕಾಗುತ್ತೆ. ವಿಡಿಯೊಗೇಮ್ಸ್, ಪ್ಲೇಸ್ಟೇಷನ್, ಎಕ್ಸ್ ಬಾಕ್ಸ್ ಹೀಗೆ ಇದೆಯಲ್ಲ ಸರ್… ಬರೀ ಆಟಗಳು ”

ಹೌದೆನ್ನಿಸಿತು. ನನಗೆ ಒಂದು ರೂಂ. ಮಗ ಸೊಸೆಗೆ ಇನ್ನೊಂದು. ಮೂರನೆಯದು ಮಗನ ಓದು, ಪುಸ್ತಕ ಅಥವ ಮಿನಿ ಥಿಯೇಟರ್ ಮಾಡಿಕೊಬಹುದೇನೊ. ಎಲ್ಲ ಮಗನಿಗೆ ಬಿಟ್ಟದ್ದು ಅಂದುಕೊಂಡೆ.

ನಾನು ಹಿಂತಿರುಗಿ ಹೋಗುವಾಗ ಆ ಹುಡುಗನ ಕಡೆ ನೋಡಿದೆ. ಆಟದಲ್ಲಿ ಮಗ್ನ. ಸದ್ಯ ಅವನು ನನ್ನ ನೋಡಲಿಲ್ಲವೊ ಮತ್ತೆ ನೋಡಿಯೂ ಗುರುತಾಗಲಿಲ್ಲವೊ.

ನಾನು ಆ ಹುಡುಗನ ಕಡೆ ಗಮನ ಕೊಟ್ಟದ್ದು ಮೆನೇಜರ್ ಮತ್ತೆ ಗಮನಿಸಿದ. “ಸರ್.. ಸ್ಕೂಲಿಗೆ ಹೋಗುವ ಮಕ್ಕಳು ಇಲ್ಲಿ ಬಹಳ ಇದ್ದಾರೆ. ನೋಡಿ, ಅವರ ಜೊತೆ ಇವನು ಸೇರುವುದೇ ಇಲ್ಲ. ಚಿಕ್ಕಪ್ಪನಿಗೆ ಇವನನ್ನು ಸ್ಕೂಲಿಗೆ ಸೇರಿಸುವ ವ್ಯವಧಾನ,   ಆಸಕ್ತಿ ಏನೂ ಇಲ್ಲ.     ನಿಮಗೆ ನಗು ಬರುತ್ತೆ.    ಈ ಹುಡುಗ ಇಲ್ಲಿ ಬಂದಮೇಲೆ ಏನು ಆಟ ಗೊತ್ತ? ಒಂದಷ್ಟು ಮಣ್ಣು, ಕಲ್ಲು, ಇಟ್ಟಿಗೆ ಸೇರಿಸಿ ಅಪಾರ್ಟ್ಮೆಂಟಿನ ಥರವೆ ಮನೆಗಳನ್ನು ಕಟ್ಟುವುದು. ಮತ್ತೆ ಅವನ್ನು ಕೆಡವುವುದು. ತುಂಬಾ ಚೂಟಿ. ದೂರದಿಂದ ಅವು ನೋಡಲು ಬಂಗಲೆಗಳ ಥರವೆ ಕಾಣುತ್ತೆ. ಕೆಲವು ಸಣ್ಣ ಪುಟ್ಟ ಕೆಲಸಗಳನ್ನು ನಮಗೆ ಮಾಡಿ ಕೊಡುತ್ತಾನೆ… ಅದೇ ಸರ್.. ಕಾಫ಼ಿ, ಟಿ, ಸಿಗರೇಟ್ ತರೋದು ಇಂಥ ಕೆಲಸ. ಟಿಪ್ಸುಗಿಪ್ಸು ಅಂತ ಅವನ ಚಾಕೊಲೇಟು, ಬಿಸ್ಕತ್ತುಗಳಿಗೆ ಆಗುತ್ತೆ”

ಹೊರಡುವಾಗ ಮೆನೇಜರ್ ಹೇಳಿದ, “ಎಲ್ಲಾ ಒಂದು ತಿಂಗಳಲ್ಲಿ ಸೆಟ್ಲ್ ಆಗಿಬಿಡುತ್ತೆ. ನೀವು ಒಳ್ಳೆ ದಿನ ಗೊತ್ತು ಮಾಡಿ ಬಂದುಬಿಡಿ”.

ಏನೂ ಅರಿಯದ ಮಕ್ಕಳ ಭವಿಷ್ಯ ಕಸಿಯುವ ವಿಧಿ ಕೂಡ ಆಟದ ಹುಚ್ಚಿನಲ್ಲಿದೆ!

 

ಮೂರು

ವರುಣನೊಡನೆ ಫ್ಲ್ಯಾಟ್ ಬೇಗ ಸಿದ್ಧವಾಗುವುದರ ಬಗೆಗೆ ಹೇಳಿದೆ. ಆ ಹುಡುಗನ ಬಗೆಗೂ ರಾತ್ರಿ ಊಟ ಮಾಡುತ್ತ ಹೇಳಿದೆ.

“ಓದಬೇಕಾದ ವಯಸ್ಸು. ಅಪ್ಪ ಅಮ್ಮ ಇಲ್ಲದವನು” ಅಂದೆ. ಆ ಹುಡುಗನ ಒಂದು ದಿನದ ಆಟದ ಖುಷಿಯನ್ನು ಭಗ್ನ ಮಾಡಿದ ವಿಷಾದ ನನ್ನಲ್ಲಿ ಇನ್ನೂ ಇರಬಹುದೇ ಅನ್ನಿಸಿತು.

“ಈ ದೇಶದಲ್ಲಿ ಎಷ್ಟು ಲಕ್ಷ ಇಂಥ ಮಕ್ಕಳಿದ್ದಾರೋ ಏನೋ… ಯೋಚಿಸಿ ಪ್ರಯೋಜನವಾದರೂ ಇದೆಯ ಅಪ್ಪ?” ಮಗನ ಮಾತಿಗೆ ಮೌನ ವಹಿಸಿದೆ.

ಗೃಹ ಪ್ರವೇಶದ ದಿನ ನಿಶ್ಚಯವಾಗಿ, ಸರಳ ಸಮಾರಂಭವೂ ಮುಗಿಯಿತು. ಅಂದುಕೊಂಡಂತೆ ನಲವತ್ತು ದಿನಗಳಲ್ಲೆ ನಾನು ನನ್ನ ಮಗ, ಸೊಸೆ ಅಪಾರ್ಟ್ಮೆಂಟಿನಲ್ಲಿ ತಳವೂರಿದೆವು.

ಮೆನೇಜರ್ ಬಹಳ ಮುತುವರ್ಜಿವಹಿಸಿ ನಮ್ಮ ಸಮಾರಂಭ ಯಶಸ್ವಿಯಾಗುವಂತೆ ನೋಡಿಕೊಂಡ. ನನ್ನ ಮಗನನ್ನಂತೂ ತುಂಬಾ ಹಚ್ಚಿಕೊಂಡು ಮಾತಾಡುತ್ತಿದ್ದ.

ಎಲ್ಲ ಕಳೆದಮೇಲೆ ಒಮ್ಮೆಲೆ ಆ ಹುಡುಗನ ನೆನಪಾಯಿತು. ಅರೆ… ನಾವು ಗೃಹಪ್ರವೇಶ ಮಾಡಿದಾಗ, ಆ ಹುಡುಗ ಊಟಕ್ಕೆ ಬರಬಹುದಿತ್ತಲ್ಲ. ಅವನೇಕೆ ಕಾಣಲಿಲ್ಲ! ಅವನ ಚಿಕ್ಕಪ್ಪ ಹೊರಟು ಹೋಗಿರಬಹುದೆ?

ನಾವು ಇಲ್ಲಿಗೆ ಬಂದು ಹದಿನೈದು ದಿನಗಳು ಕಳೆದಿವೆ. ವರುಣನ್ನ ಕೇಳಿದೆ. “ಮೂರನೆ ರೂಮು ನಿನ್ನ ರುಚಿಗೆ ತಕ್ಕಂತೆ ಬದಲಾಯಿಸಿಕೊ. ನನಗೆ ಹೇಳು. ಯಾವ ರೀತಿ ಇರಬೇಕು ಎಂದು. ಸಣ್ಣ ಲೈಬ್ರರಿಯೊ, ಪುಟ್ಟ ಥಿಯಟರೊ ಮಾಡಿಕೊ ಬಹುದೇನೊ”.

“ಅವೆಲ್ಲ ಬೇಡ ಅಪ್ಪ. ಸದ್ಯಕ್ಕೆ ಒಬ್ಬ ಗೆಸ್ಟ್ ಬರುವಂತಿದೆ. ಅದಕ್ಕಾಗಿ ಆ ರೂಮು ಹಾಗೇ ಇರಲಿ”. ನಾನು ತಲೆಯಾಡಿಸಿದೆ.

ಒಂದು ಸೋಮವಾರ ಸಂಜೆ ಬಾಗಿಲು ತಟ್ಟಿದ ಸದ್ದಾಯಿತು. ಡೋರ್ ಬೆಲ್ ಮಾಡದೆ ತಟ್ಟಿದ್ದು ಯಾರು ಎಂದು ಬಾಗಿಲು ತೆರೆದೆ. ಎದುರಿಗೆ ಒಬ್ಬ ಪುಟ್ಟ ಹುಡುಗ ಶಾಲೆಯ ಸಮವಸ್ತ್ರದಲ್ಲಿ, ಚೀಲವೊಂದನ್ನು ಬೆನ್ನಿಗೆ ಹೇರಿ ನಿಂತಿದ್ದಾನೆ.

“ಯಾರು ಬೇಕಪ್ಪ?” ಅಂದೆ.
“ವರುಣ್ ಅಂಕಲ್” ಅಂದ.

ತಲೆಯಲ್ಲಿ ಏನೋ ಓಡಿತು. ಆ ಹುಡುಗನ ಮತ್ತೆ ನೋಡಿದೆ. ಅರೆ! ಅದೇ ಆ ಪಾರ್ಕಿನ ಆಟದ ಹುಡುಗ. ಇಲ್ಲಿ ಅಪಾರ್ಟ್ಮಂಟಿನಲ್ಲಿ ಆಟವಾಡುತ್ತಿದ್ದ ಹುಡುಗ! ಇದೇನು ಇಂಥ ಸೋಜಿಗ! ಶಾಲೆಯ ಸಮವಸ್ತ್ರದಲ್ಲಿ!!

ಹುಡುಗ ಮತ್ತೇನೊ ಹೇಳುವುದರಲ್ಲಿ, ಮೆನೇಜರ್ ಕಾಣಿಸಿಕೊಂಡ. ಅವನ ಹಿಂದೆ ಗಂಡಹೆಂಡತಿಯರಿಬ್ಬರು!

“ನಿಮ್ಮ ಮಗ ಬಂದ್ರ ಸರ್”

“ಬನ್ನಿ ಒಳಗೆ.. ಮಗ, ಸೊಸೆ ಇನ್ನೂ ಆಫೀಸಿನಿಂದ ಬಂದಿಲ್ಲ” ಅಂದೆ.

ಮೆನೇಜರ್ ಎಲ್ಲರೊಂದಿಗೆ ಒಳ ಬರುತ್ತಾ ಹೇಳಿದ. “ಸರ್.. ಇವನು ಬಸಣ್ಣ, ಅವನ ಹೆಂಡತಿ. ಇವರಿಬ್ಬರೂ ನಮ್ಮ ಅಪಾರ್ಟ್ಮೆಂಟ್ ಕೆಲಸ ಮಾಡುತ್ತಿದ್ದವರು. ಈಗ ಕೆಲಸ ಮುಗಿದಿದೆ. ಒಂದು ತಿಂಗಳು ಅವರ ಊರಿಗೆ ಹೋಗ್ತ ಇದಾರೆ. ಈ ಹುಡುಗ ಬಸಣ್ಣನ ಅಣ್ಣನ ಮಗ. ಆವತ್ತು ಒಂದು ದಿನ ಇವನ್ನ ಇಲ್ಲಿ ನೀವು ನೋಡಿದ್ರಿ. ಅಣ್ಣ ಅತ್ತಿಗೆ ತೀರ್ಕೊಂಡಿದಾರೆ. ಹಾಗಾಗಿ ಹುಡುಗನ್ನ ಇವರೇ ನೋಡ್ಕೊಳ್ತ ಇದಾರೆ. ನಿಮಗೆ ಗೊತ್ತಲ್ಲ…   ನಿಮ್ಮ ಮಗ ವರುಣ್ ಈ ಹುಡುಗನನ್ನ  ಶಾಲೆಗೆ ಸೇರಿಸಿ ಆ ಖರ್ಚನ್ನೆಲ್ಲ  ನಿಭಾಯಿಸಿದ್ದು. ಇವನನ್ನ ನಿಮ್ಮ ಮನೇಲೆ ಒಂದು ತಿಂಗಳು ಬಿಡೋಕೆ ನಿಮ್ಮ ಮಗನೆ ಹೇಳಿದ್ರು. ಸ್ಕೂಲು ತಪ್ಪಬಾರದು ಅಂತ.”

ದಂಪತಿಗಳು ಕೈಮುಗಿದರು. “ಊರಿಗ್ ಹೋಗಿ ಭಾಳ ದಿನಗಳಾದುವ್ರಿ. ನಾವ್ ವಾಪಸ್ ಬರೋತನ್ಕ ಅಷ್ಟೆ. ಶಿವು ಭಾಳ ಚೂಟಿ ಇದಾನ್ರಿ. ನೀವ್ ಹೇಳಿದ್ದ್ ಸಣ್ಣ್ ಪುಟ್ಟ್ ಕೆಲ್ಸ ಮಾಡ್ತಾನ್ರಿ. ಓದೋದ್ರಾಗೂ ಅವ ಛಲೋ ಇದಾನ್ರಿ. ಅವಂಗೆ ನಮ್ಮ ಸಲುವಿಂದ ಸಾಲಿ ತಪ್ಪಬಾರ್ದು ಅಷ್ಟೆ.    ಅವನ ಕಡೆಯಿಂದ ಏನಾದ್ರೂ ಕೆಲ್ಸ ಮಾಡಿಸಿಕೊಳ್ರಿ. ಎರಡ್ ಹೊತ್ತು ಊಟ ಹಾಕಿದ್ರೆ ಸಾಕು. ಓದೋದಿಕ್ ನೀವು ಮಾಡಿರೊ ಸಹಾಯ ಭಾಳ ಆತ್ರಿ. ನಿಮ್ ಉಪ್ಕಾರ ಮರೆಯೊಹಂಗಿಲ್ಲ ಸಾಹೇಬ್ರೆ”

ನಾನು ಹುಡುಗನ್ನ ನೋಡಿ ನಕ್ಕೆ.

“ಏನು ನಿನ್ನ ಹೆಸರು?”

“ಶಿವು…. ಶಿವರಾಜ್”

ಅವನಿಗೆ ಖಂಡಿತ ನನ್ನ ಗುರುತು ಹತ್ತಲಿಲ್ಲ ಅನ್ನುವುದು ಖಾತ್ರಿಯಾಯ್ತು.

“ಬಾ.. ಬಾ.. ನೋಡು ಈ ರೂಮು, ನಿನ್ನ ಬ್ಯಾಗು ಎಲ್ಲಾ ಅಲ್ಲಿಡು”

ಶಿವು ಖುಷಿಯಲ್ಲಿ ಆ ಹೊಸ ರೂಮನ್ನು ನೋಡತೊಡಗಿದ. ಅವನ ಕಣ್ಣಿನಲ್ಲಿ ಹೊಳಪು ಮತ್ತು ಚಿಕ್ಕದಾಗಿ ಅರಳುತ್ತಿರುವ ಸಂಕೋಚ.

ಮಗನಿಗೆ ಫೋನ್ ಮಾಡಿದೆ. “ವರುಣ… ನಿನ್ನ ದೊಡ್ಡ ಗೆಸ್ಟ್ ಬಂದಿದ್ದಾರೆ. ಮೂರನೆ ರೂಮಿನಲ್ಲಿದ್ದಾರೆ!”

ಅತ್ತಕಡೆಯಿಂದ ವರುಣ ಜೋರಾಗಿ ನಗುತ್ತಿರುವುದು ಕೇಳುತ್ತಿದೆ.

“ಏನಪ್ಪ ನಿಮ್ಮ ಹಳೆ ಫ಼್ರೆಂಡ್ ನೋಡಿ ಖುಷಿಯಾಗಿರೊ ಹಾಗಿದೆ!” ವರುಣನ ಧ್ವನಿಯ ಆಪ್ಯಾಯತೆ ನನಗೆ ಇಷ್ಟವಾಯಿತು.

’ವರುಣ್ ಅಂಕಲ್ ಇನ್ನು ಸ್ವಲ್ಪ ಹೊತ್ತಲ್ಲೆ ಬರುತ್ತಾರೆ’ ಎಂದು ಶಿವೂನ ಕರೆದು ಹೇಳಬೇಕೆನ್ನಿಸಿತು. ಅಷ್ಟರಲ್ಲಾಗಲೆ ಶಿವು ತನ್ನ ಚಿಕ್ಕದೊಂದು ಚೀಲದಿಂದ ಪುಟ್ಟ ಆಟಿಕೆಗಳನ್ನು ಹೊರ ತೆಗೆದು, ಅವುಗಳನ್ನೆಲ್ಲ ಎಲ್ಲಿ ಜೋಡಿಸುವುದೆಂದು ಆ ರೂಮಿನಲ್ಲಿ ಕುಳಿತು ಗಂಭೀರ ಚಿಂತನೆಯಲ್ಲಿ ಮುಳುಗಿದ್ದು ಕಾಣಿಸಿತು.

*****

                                                            (ಚಿತ್ರ ಅಂತರ್ಜಾಲದಿಂದ)
ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟಿತ : https://kannada.pratilipi.com/anantha-ramesh/mooraneya-roomu

Advertisements

6 thoughts on “ಮೂರನೆ ರೂಮು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s