ಕೆಸರು ಕಾಲುಗಳು

foot

ಈ ಕತೆಗೆ ಸಂದೀಪ ಹೀರೊ. ಹೀರೋಗೆ ಓದುವ ಆಸೆ ಇತ್ತೊ ಇಲ್ಲವೊ ಸ್ವತ: ಅವನಿಗೇ ಗೊತ್ತಿಲ್ಲ. ಹತ್ತನೆ ತರಗತಿ ಮುಗಿಸಿದ ಮೇಲೆ ಮನೆಯಲ್ಲಿ ಯಾರೂ ಹೆಚ್ಚು ಅವನ ಓದಿನ ಬಗೆಗೆ  ತಲೆ ಕೆಡಿಸಿಕೊಂಡಿರಲಿಲ್ಲ.   ಅವನು ಇವತ್ತಿಗೂ ತಾನು ಮತ್ತೆ ಓದಬೇಕಿತ್ತು ಅಂದುಕೊಂಡವನಲ್ಲ. ಏಕೆಂದರೆ, ಆ ಎರಡು ಎಕರೆ ಗದ್ದೆ ಸಾಗುವಳಿ ಮಾಡಲು ಸದ್ಯಕ್ಕೆ ಮನೆಯಲ್ಲಿ ಗಂಡಸು ಅಂತ ಇವನೊಬ್ಬನೆ.   ಇಬ್ಬರು ತಂಗಿಯರು.  ಉಸಾಬರಿಗೆ ಅವನ ತಾಯಿ. ತಂದೆ ಹೋಗಿ ಹತ್ತು ವರ್ಷಗಳಾಗಿವೆ.

ಇಬ್ಬರು ತಂಗಿಯರು ಓದಲು ಹೋಗುತ್ತಿದ್ದಾರೆ. ದೊಡ್ಡವಳು ಕೊನೆ ವರ್ಷದ ಬಿ.ಎ. ಡಿಗ್ರಿ. ಸಣ್ಣವಳು ಮೊದಲ ವರ್ಷದ ಪಿ.ಯು. ಸದ್ಯ ಅವರ ಊರಿನಲ್ಲಿ ಕಾಲೇಜ್ ಇರುವುದು ದೊಡ್ಡ ಸಮಾಧಾನ.

ನಮ್ಮ ಸಂದೀಪ ಮನೆ ಜವಾಬ್ದಾರಿ ಹೊತ್ತಿದ್ದಾನೆ. ಗದ್ದೆ ಕೆಲಸ, ಮನೆ ಹತ್ತಿರ ಸ್ವಲ್ಪ ತರಕಾರಿ ಬೆಳೆಯೋದು ಮತ್ತೆ ವಾರದಲ್ಲಿ ಎರಡು ದಿನ ಬೇರೆಯವರ ಮನೆಗಳಲ್ಲಿ ಕೂಲಿ ಮಾಡಿ  ಹಣ ಸಂಪಾದಿಸೋದು,  ಹೀಗೆ ಬಡತನಕ್ಕೆ ಸೆಡ್ಡು ಹೊಡೆದು, ಅವರ ಜೀವನ ಹೆಚ್ಚಿನ ಏರುಪೇರಿಲ್ಲದೆ ಹೇಗೋ ನಡೆಯುತ್ತಿದೆ. ತಾಯಿಗೆ ಒಂದೆ ಯೋಚನೆ, ಮೊದಲು  ಮದುವೆ  ಮಾಡುವುದು  ಮಗನಿಗ  ಅಥವ  ಇಬ್ಬರು ಹೆಣ್ಣುಗಳಿಗ ಅಂತ.   ಬಗೆಹರಿಯದ ಅಳಲು. ಮದುವೆ ಅಂತಾದ್ರೆ ಹಣದ ಜಮಾವಣೆ ಹೇಗೆ ಮಾಡುವುದು. ಈ ವಿಷಯದಲ್ಲಿ ಮಗ ದಡ್ಡ. ಅದರ ಬಗೆಗೆ ಏನೂ ಯೋಚನೆಯೇ ಮಾಡುವವನಲ್ಲ.

ಕೆಲವು ಸಲ ಅದೃಷ್ಟ ಹೀಗೆ ಒಲಿದು ಬರುತ್ತೆ. ದೊಡ್ಡ ಮಗಳನ್ನು ತನ್ನ ಮಗನಿಗೆ ಕೊಡುತ್ತೀರ ಅಂತ ಆ ಊರಿನ ಸ್ಥಿತಿವಂತರೊಬ್ಬರು ಕೇಳಿಕೊಂಡು ಬಂದರು.   ಮಗ ಓದಿದ್ದಾನೆ, ಪಕ್ಕದೂರಿನಲ್ಲಿ ಸರಕಾರಿ ಕೆಲಸ. ಗೌರವವಾಗಿ ಇರುವಂಥ ಕುಟುಂಬ. ಅವರಿಗೆ ಮಗಳೊಬ್ಬಳು. ನಮ್ಮ ಹೀರೋನ ಡಿಗ್ರಿ ತಂಗಿಯ ಸಹಪಾಠಿ.

ಮದುವೆ ಮಾತುಕತೆ ಶುರುವಾದಮೇಲೆ ತಲೆಬಿಸಿ ಸಂದೀಪನಿಗೂ ಬಡಿಯಿತು. ಸರಿ,  ವಾರಕ್ಕೆ ಏಳೂ ದಿನ ಗದ್ದೆ ಕೆಲಸದ ಜೊತೆ  ಬೇರೆ ಸಾಹುಕಾರರ ಮನೆಗಳ ಕೂಲಿ ಕೆಲಸಕ್ಕೂ ಹಾಜರಾಗತೊಡಗಿದ.   ಅಲ್ಪ ಸ್ವಲ್ಪ ಹಣ ಶೇಖರಣೆಯಾಗತೊಡಗಿತು.

ಹೀಗೆ,  ಬಿಡುವಿಲ್ಲದ ಕೆಲಸದಲ್ಲಿ ತನ್ನ ಕಾಲುಗಳು ಯಾವಾಗಲೂ ಕೆಸರು ಮೆತ್ತಿಕೊಂಡಿರುತ್ತದೆಂದು ಅವನಿಗೆ ಗೊತ್ತಾಗದೆ ಹೋಯ್ತು. ಗದ್ದೆಯಿಂದ ಬರುವುದು, ಏನಾದರು ತಿಂದು ಬೇರೆ ಮನೆಗಳ ಗದ್ದೆ, ತೋಟಗಳ ಕೆಲಸಕ್ಕೆ ಓಡುವುದು. ಹೀಗಾಗಿ ಅವನ ಗದ್ದೆ ಕೆಸರಿನ ಕಾಲುಗಳು ಕಪ್ಪು ಕೆಂಪು ಮಣ್ಣ ಬಣ್ಣವಾಗಿಹೋದುವು.  ಪಾದಗಳ ಬದಿಗಳಲ್ಲಿ ಒಡೆದ ಸೀಳುಗಳು ಕಾಣಿಸಿಕೊಂಡವು.   ಸಂದೀಪನಿಗೆ  ಅತ್ತ ಗಮನವಿಲ್ಲ.    ತಂಗಿ  ಮದುವೆಯನ್ನು ಗಡದ್ದು ಮಾಡುವ ಬಗೆಗೇ ಯೋಚನೆ.

ಈ ಮಧ್ಯೆ ಹುಡುಗಿ ನೋಡುವ ಶಾಸ್ತ್ರ ಮುಗಿದು,  ಸಂದೀಪನ ಮನೆಗೆ  ಒಂದೆರಡು  ಬಾರಿ ಹುಡುಗ  ಬಂದು ಹೋದ. ಇನ್ನು ಹುಡುಗನ ತಂಗಿಯೆ ಕಾಲೇಜು ಸಹಪಾಠಿ ಅಲ್ಲವೆ. ಅವಳ ಸವಾರಿ ವಾರಕ್ಕೊಂದು ದಿನವಾದರೂ ಇರುತ್ತಿತ್ತು. ಇವೆಲ್ಲ ಸಂದೀಪನಿಗೆ ಹೇಗೆ ಗೊತ್ತಾಗಬೇಕು.

ಆದರೂ ಒಂದು ದಿನ ಅವನು ಗದ್ದೆಯಿಂದ ಬಂದಾಗ ಆ ಬಿಳಿಯ ಹುಡುಗಿ ತಂಗಿಯೊಂದಿಗೆ ಮನೆಯ ಮುಂದೆ ಮಾತಾಡುತ್ತಾ ನಿಂತಿದ್ದಾಳೆ. ಇವನು ಬಂದು ಆ ಹುಡುಗಿಯನ್ನು ನೋಡಿ ‘ಯಾರಿದು?’ ಅಂತ ತಂಗಿಯ ಕಡೆ ಸಂಜ್ಞೆಮಾಡಿದ.

“ಇವಳು ’ಅವರ’ ತಂಗಿ ದೀಪಾ, ನನ್ನ ಕ್ಲಾಸ್ ಮೇಟ್ ಅಂತ ಹೇಳಿದ್ನಲ್ಲ” ಅಂದಳು.

ಆಗಲೇ ಸಂದೀಪನಿಗೆ ತನ್ನ ಕೆಸರು ಕಾಲು ನೆನಪಾಗಿ ಹೊರ ಬಚ್ಚಲಿಗೆ ಓಡಿದ್ದು. ಅದಕ್ಕೆ ಕಾರಣವೂ ಇತ್ತು. ಹಾಗೆ ಪರಿಚಯ ಮಾಡಿಕೊಡುವಾಗ ಆ ಹುಡುಗಿ ಇವನ ಕಾಲನ್ನೆ ಕೆಕ್ಕರಿಸಿ ನೋಡುತ್ತಿದ್ದಳು ಅನ್ನುವ ಅನುಮಾನ.

ಕಾಲು ತೊಳೆದು ಬರುವಾಗ ಅವಳಿರಲಿಲ್ಲ. ತಂಗಿ ಹೇಳಿದಳು, “ಏನಣ್ಣ, ಅಷ್ಟು ಗಲೀಜು ಕಾಲು ಮಾಡ್ಕೊಂಡೆ ಬಂದೆ. ದೀಪ ಏನನ್ಕೊಂಡ್ಲೋ ಏನೋ”

ದೀಪಾ ಬಹಳ ಸಲ ಆ ಮನೆಗೆ ಬಂದಳು. ಆದರೆ ಸಂದೀಪ ಮಾತ್ರ ಅವಳಿಗೆ ಎರಡು ಮೂರು ಸಲ ಸಿಕ್ಕಿದ್ದ. ಗ್ರಹಚಾರ ಅಂದರೆ ಇದು. ಅವಳು ಎದುರು ಬಂದಾಗಲೆಲ್ಲ ಇವನದು ಕೆಸರು ಮೆತ್ತಿದ ಕಾಲುಗಳೆ. ಇವನು ಬಚ್ಚಲಿಗೆ ಓಡುವುದು. ಹಿಂತಿರುಗಿದಾಗ ಅವಳು ಮಾಯವಾಗುವುದು. ಅವನಿಗೆ ಮನಸ್ಸಿನಲ್ಲೆ ಕೀಳರಿಮೆ ಬೆಳೆಯತೊಡಗಿತು. ತಂಗಿ ಮದುವೆ ಆಗುವ ಮೊದಲೆ ಆದಷ್ಟು ಪುರುಸೊತ್ತು ಮಾಡಿಕೊಬೇಕು, ಹಾಗೆಯೆ ಈ ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು. ಮದುವೆ ಮನೆ ಓಡಾಟದಲ್ಲಾದರೂ ಪಾದಗಳ ಬಿರುಕು ಮುಚ್ಚಿಕೊಳ್ಳಬೇಕು. ಅದು ಹೇಗೆ ಅನ್ನುವುದು ಅವನಿಗೆ ಹೊಳೆಯುತ್ತಲೆ ಇಲ್ಲ.

ಮದುವೆ ದಿನ ಹತ್ತಿರ ಬಂದುಬಿಟ್ಟಿದೆ.  ಇನ್ನೊಂದೆ ತಿಂಗಳು.  ಹೆಚ್ಚು ಖರ್ಚು ಮಾಡುವುದು ಬೇಡ ಅಂತ ಹುಡುಗನ ಮನೆಯವರು ಹೇಳಿದ್ದಾರೆ. ಆದರೂ ಸಂದೀಪನಿಗೆ ಸಮಾಧಾನವಿಲ್ಲ. ೨೫ ಸಾವಿರ ದುಡಿತ ಮತ್ತೆ ೨೫ ಸಾವಿರ ಸಾಲ, ಹಾಗೆಯೆ ಮನೆಗೆ ಏನೂ ಉಳಿಸದೆ ಬೆಳೆದ ಭತ್ತ ಮಾರಿ ೫೦ ಸಾವಿರ ಮಾಡಿ, ಸ್ವಲ್ಪ ಒಡವೆ, ಸೀರೆ, ಮನೆಯವರಿಗೆಲ್ಲ ಬಟ್ಟೆ,  ಹುಡುಗನಿಗೆ ಉಂಗುರ,  ವಾಚ್,  ಪ್ಯಾಂಟ್,  ಶರಟು  ಇತ್ಯಾದಿ ತೆಗೆದ. ಸಂದೀಪನ ಮನೆಯಲ್ಲಿ ಸಂಭ್ರಮ. ದೀಪ ಒಂದು ದಿನ ಬಂದು ಅವನ್ನೆಲ್ಲ ನೋಡಿಕೊಂಡು ಹೋಗಿದ್ದಾಳೆ ಅಂತ ಅಮ್ಮ ಸಂದೀಪನಿಗೊಮ್ಮೆ ಹೇಳಿದಳು.

“ಅಮ್ಮ, ಯಾವುದಾದರು ಮುಲಾಮು ಇದ್ರೆ ಕೊಡು, ಕಾಲು ಒಡೆದು, ನಡೆಯೋದು ಕಷ್ಟವಾಗಿದೆ. ಮದುವೆ ಮನೆಯಲ್ಲಿ ನಾನು ಕುಂಟುತ್ತಿದ್ದರೆ ಎಲ್ಲರೂ ಏನನ್ಕೋಳ್ಳೋದಿಲ್ಲ”

ದೀಪ ಅಂದಾಗಲೆಲ್ಲ ಅವನಿಗೆ ತನ್ನ ಕೆಸರು ಕಾಲುಗಳ ನೆನಪು. ಎರಡು ದಿನ ಎಲ್ಲಿಗೂ ಹೋಗದೆ, ಬಿಸಿನೀರಲ್ಲಿ ಕಾಲು ತೊಳೆದು ಮುಲಾಮು ಹಚ್ಚಿಕೊಂಡರೆ ಎಲ್ಲ ಸರಿಹೋಗಬಹುದು ಅಂತ ಅವನ ಆಸೆ.

ಆದರೆ ಅವನಂದುಕೊಂಡದ್ದು ಆಗಲೆ ಇಲ್ಲ.   ಆ ದಿನ ಹುಡುಗನ  ಕಡೆಯವರು ಪೂಜೆಯೊಂದನ್ನು ಇಟ್ಟುಕೊಂಡಿದ್ದಾರೆ. ಸಂದೀಪನ ಮನೆಯವರಿಗೆಲ್ಲ ಆಹ್ವಾನವಿತ್ತು. ಎಲ್ಲರೂ ಬೆಳಿಗ್ಗೆ ಅಲ್ಲಿಗೆ ಹೊರಟರೆ, ಅವನು ಮಾತ್ರ ಹೊರಡಲೇ ಇಲ್ಲ!

“ಅಮ್ಮ, ನೀವೆಲ್ಲ ಹೋಗಿ, ಈ ಬಿರುಕು ಕಾಲು ಇಟ್ಟುಕೊಂಡು ಕುಂಟುತ್ತ ನಾನು ಬರಲ್ಲ. ನೀವು ಹೋದಮೇಲೆ ಮುಲಾಮು ಹಚ್ಚಿ ಸ್ವಲ್ಪ ಮಲಗ್ತೀನಿ” ಅಂದ. ಮನೆಯವರಿಗೆಲ್ಲ ಅದು ಸರಿ ಅನ್ನಿಸಿತು.

ಪೂಜೆಗೆ ಅಂತ ಹುಡುಗನ ಮನೆಗೆ ಬಂದಾಗ ದೀಪ ಎದುರುಗೊಂಡಳು. ಎಲ್ಲರನ್ನೂ ಒಳಗೆ ಕರೆದುಕೊಂಡು ಹೋಗುವಾಗ ಗೆಳತಿಗೆ ಕೇಳಿದಳು, ” ಎಲ್ಲೆ ನಿನ್ನ ಅಣ್ಣ, ಬರಲಿಲ್ವ?”

ಅವಳ ನಗುವಿನಲ್ಲಿ ವ್ಯಂಗ್ಯವಿತ್ತ ಅಂತ ಸಂದೀಪನ ತಂಗಿಗೆ ಅನುಮಾನ ಬಂತು. ಇವಳು ಹೀಗೆ ಮಾತಾಡಲು ಅಣ್ಣನ ಕೆಸರಿನ ಕಾಲೇ ಕಾರಣ ಅಂತ ಮನಸ್ಸಿನಲ್ಲಿ ಮುನಿಸು ಬಂತು.

“ಅವನಿಗೆ ಸ್ವಲ್ಪ ಕಾಲಿಗೆ ಏಟಾಗಿದೆ ಕಣೆ, ಬರಲ್ಲ” ಅಂದಳು.

ಇತ್ತ ಸಂದೀಪ ನಿರಾಳ ವರಾಂಡದಲ್ಲಿ ಮಲಗಿದ. ಆಯಾಸಕ್ಕೊ, ಮನೆಯಲ್ಲಿ ಸದ್ದಿಲ್ಲದ್ದಕ್ಕೊ, ಒಳ್ಳೆ ಗಾಳಿ ಬೀಸುತ್ತಿರುವುದಕ್ಕೊ, ಅವನಿಗೆ ನಿದ್ರೆ ಹತ್ತಿಬಿಟ್ಟಿತು. ಮುಲಾಮನ್ನು ಕಾಲಿನ ಬದಿ ಹಚ್ಚಿಕೊಳ್ಳದೇನೆ ಮಲಗಿಬಿಟ್ಟ.

ಅವನಿಗೆ ಕನಸು. ಯಾರೊ ಸುಂದರ ಹುಡುಗಿಯೊಬ್ಬಳು ತನ್ನ ಪಾದಗಳಿಗೆ ನವಿರಾಗಿ ಮುಲಾಮು ಹಚ್ಚುತ್ತ ಕುಳಿತಿದ್ದಾಳೆ. ಪಾದಗಳ ಉರಿ ಕಡಿಮೆಯಾಗಿದೆ. ತಂಪಾದ ಗಾಳಿ ಬೀಸಿ ಹಾಯೆನಿಸಿದೆ. ಗಾಯವೆಲ್ಲ ಮಾಯವಾಗಿ ಮದುವೆ ದಿನವೂ ಬಂದುಬಿಟ್ಟಿದೆ!    ಮದುವೆ ಮನೆಯಲ್ಲಿ  ಅವನು ಚಿಕ್ಕ ಹೋರಿಯಂತೆ  ಅತ್ತ ಇತ್ತ ಓಡಾಡುತ್ತಿದ್ದಾನೆ. ಅವನ ಕಾಲುಗಳ ಓಟಕ್ಕೆ ಎಲ್ಲ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆ ಮೂಲೆಯಲ್ಲಿ ದೀಪ ಕೂಡ ಇದ್ದಾಳೆ. ಅವನ ಪಾದಗಳ ಸೌಂದರ್ಯಕ್ಕೆ ಮೆಚ್ಚುಗೆಯನ್ನು ತನ್ನ ಕಣ್ಣುಗಳಿಂದಲೆ ಸೂಚಿಸುತ್ತಿದ್ದಾಳೆ!

ಎಷ್ಟುಹೊತ್ತು ಹಾಗೆ ಮಲಗಿದ್ದನೊ ಏನೊ.   ಎಚ್ಚರಾದಾಗ ಅವನ ಹೊಟ್ಟೆ ತಾಳ ಹಾಕುತ್ತಿತ್ತು.  ಏಳಲು ಪ್ರಯತ್ನಿಸಿದ. ಅವನ ಪಾದಗಳಿಗೆ ಮುಲಾಮು ಹಚ್ಚಿ ತೆಳು ಬಟ್ಟೆಯಿಂದ ಸುತ್ತಲಾಗಿದೆ.   ಅರೆ! ಇದೇನು. ಮನೆಯಲ್ಲಿ ಯಾರೂ ಇಲ್ಲ. ತಾನೂ ಹಚ್ಚಿಕೊಂಡಿಲ್ಲದ ಮುಲಾಮು ಪಾದ ಸೇರಿ ಮೃದುವಾಗಿ ಹಾಯಾಗಿದೆ. ಇವೆಲ್ಲ ಹೇಗಾಯ್ತು. ಅವನಿಗೆ ಅಯೋಮಯ ಅನ್ನಿಸಿ ಹಸಿವನ್ನೂ ಮರೆತು ಕುಳಿತ.

ಹುಡುಗನ ಮನೆಯ ಪೂಜೆ ಮುಗಿಸಿ ಮನೆಯವರೆಲ್ಲ ಬಂದಮೇಲೆ ಸಂದೀಪ ಊಟ ಮಾಡಿದ. ಹಾಗೇ ತನ್ನ ಕಾಲಿಗೆ ಯಾರು ಮುಲಾಮು ಹಚ್ಚಿ ಬಟ್ಟೆ ಸುತ್ತಿದವರು ಅಂತಲೂ ಕೇಳಿದ.

ಸಂದೀಪನ ತಂಗಿ, “ಅರೆ! ಅಣ್ಣಾ ನೆನಪಾಯಿತು. ಇಲ್ಲಿ ನೋಡು ಮುಲಾಮಿನ ಹೊಸ ಡಬ್ಬಿ. ನಾವು ಬರುವಾಗ ನಿನ್ನ ಅಣ್ಣನ ಕಾಲಿಗೆ ಹಚ್ಚು ಅಂತ ದೀಪ ನನಗೆ ಕೊಟ್ಟಳು!    ನಿನ್ನ ಕೆಸರ ಕಾಲು ಅವಳು ನಮ್ಮ ಮನೆಗೆ ಬಂದಾಗಲೆಲ್ಲ ಕಣ್ಣಿಗೆ ಬಿದ್ದಿದೆ ?!” ಸಂದೀಪ ಮತ್ತೆ ಸಂಕೋಚದಲ್ಲಿ ಮುದುರಿಕೊಂಡ.

ಸಂದೀಪನ ಅಮ್ಮ ಸಡಗರದಿಂದ ಓಡಿಬಂದು ಸಂದೀಪನ ಬಳಿ ಕುಳಿತು ಹೇಳಿದಳು, “ಸಂದೀಪ, ಅವಳು ಬಹಳ ಲಕ್ಷಣವಂತೆ ಕಣೊ…ನಮ್ಮ ಮನೆಗೆ ತರೋ ಅದೃಷ್ಟ ದೇವರು ಕೊಟ್ಟರೂ ಕೊಡಬಹುದು. ನಿನಗೆ ಹೇಗೆ ಅನ್ಸುತ್ತೆ ಹುಡುಗಿ?”

ಸಂದೀಪನ ತಂಗಿಗೆ ಏನೋ ಯೋಚನೆ ಹೊಳೆಯಿತು. ಪೂಜೆಗೆ ಅಂತ ಅವರ ಮನೆಗೆ ಹೋದಾಗ ಸುಮಾರು ಒಂದು ಗಂಟೆ ದೀಪಾ ಯಾರಿಗೂ ಕಾಣಿಸಿಕೊಡಿರಲಿಲ್ಲ! ಅಷ್ಟು ಹೊತ್ತು ಎಲ್ಲಿಗೆ ಹೋಗಿರಬಹುದು?!

ರೂಮಿನಿಂದ ಓಡಿ ಬಂದು ಅಣ್ಣನನ್ನು ಆಶ್ಚರ್ಯದಿಂದ ಅವಳು ನೋಡಿಯೇ ನೋಡಿದಳು!

“ಅಣ್ಣ, ನೀನು ಅಂಗಳದಲ್ಲಿ ಬಾಗಿಲು ಹಾಕಿಕೊಳ್ಳದೆ ಮಲಗಿದ್ದು ಒಳ್ಳೆದೇ ಆಯ್ತು ಬಿಡು!” ಅಂತ ಗಲಗಲ ನಕ್ಕಳು.

***

(ಚಿತ್ರ: ಅಂತರ್ಜಾಲದ ಕೃಪೆ)

(ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟ Link: http://kannada.pratilipi.com/anantha-ramesh/kesaru-kalugalu)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s