ಬಡಕಲ ಸಿದ್ದನ ದೆವ್ವ ವೃತ್ತಾಂತ

devil

ಆಗತಾನೆ ಹೈಸ್ಕೂಲು ಮೆಟ್ಟಿಲು ಹತ್ತಿದ ದಿನಗಳವು. ಕೆಲವು ಸಬ್ಜೆಕ್ಟುಗಳು ಕಷ್ಟವಾಗುತ್ತಿದ್ದುವು. ಅವಕ್ಕೆಲ್ಲ ನಮ್ಮ ಮೇಷ್ಟ್ರು ಕೆಜಿಜಿ ಪಾಠದ ಮನೆ ಧೈರ್ಯ ತುಂಬಿಸಿ ಓದನ್ನು ಸುಲಭವಾಗಿಸುತ್ತಿದ್ದ ಸ್ಥಳವಾಗಿತ್ತು. ಒಂದಲ್ಲ ಒಂದು ಸಬ್ಜೆಕ್ಟ್ ಗೆ ನನ್ನ ಎಲ್ಲ ಕ್ಲಾಸ್ಮೇಟ್ಸ್ ಬರುವ ಮನೆ ಅದಾಗಿತ್ತು. ಹಾಗಾಗಿ, ಕ್ಲಾಸಿನ ಎಲ್ಲಾ ಹುಡುಗ, ಹುಡುಗಿಯರು ಕೆಜಿಜಿ ಮನೆಯಲ್ಲಿ ಸಂಜೆ 6:30 ರ ನಂತರ ತುಂಬಿರುತ್ತಿದ್ದೆವು.

ನಮಗೆಲ್ಲ ಆಗಾಗ ತಮಾಷೆ ಮಾಡಲು ಒಬ್ಬ ಮಾಡೆಲ್ಲು ಅಂದರೆ ಬಡಕ್ಲ ಸಿದ್ದ. ನಾವು ಅವನ ಕರೆಯುತ್ತಿದ್ದದ್ದೇ ಬಡಕ್ಲ. ಯಾಕೆಂದರೆ ನಮ್ಮ ಕ್ಲಾಸಲ್ಲಿ ಸುಮಾರು ನಾಲ್ಕು ಜನ ಸಿದ್ದಣ್ಣರಿದ್ದರು. ’ಯಾವ ಸಿದ್ದ?’ ಅನ್ನೋದನ್ನ ತಿಳಿಯೊ ಸುಲಭ ಉಪಾಯ ಅಂತ ಎಲ್ಲ ಸಿದ್ದರಿಗೂ ಒಂದೊಂದು ಅಡ್ಡ ಹೆಸರಿಟ್ಟಿದ್ದೆವು.

’ಹಾಗೆಲ್ಲ ಕರೆಯಬಾರದು’ ಅಂತ ಒಮ್ಮೆ ನಮ್ಮ ಪಿಟಿ ಟೀಚರ್ ಹೇಳಿದ್ದಕ್ಕೆ, ನಮ್ಮ ಸಹಪಾಠಿ ಕೇಳಿದ್ದ, ’ಸಾ.. ನಾಲ್ಕ್ ಜನ ಸಿದ್ರು ಒಂದೇ ಕ್ಲಾಸಲ್ಲಿದ್ದಾರೆ. ಹೆಂಗ್ ಸಾ ಗುರುತು ಹೇಳೋದು. ಬಡ್ಕ್ಲನ್ನ ನೋಡಿ ಸಾ.. ಅವನ ಮಕ, ಕೈ ಕಾಲು ಎಲ್ಲ ಎಂಗಿದ್ದಾವೆ.. ಕಡ್ಡಿಥರ.. ಕಡ್ಡಿ ಪೈಲ್ವಾನ್ ಅಂತ್ಲೂ ಕರಿಬೋದು ಸಾ..’ ಪಿಟಿ ಟೀಚರ್ ತುಟಿ ಪಿಟಿಪಿಟಿಸಿ ನಕ್ಕು ಸುಮ್ಮನಾದ್ರು.

ಸಿದ್ದನಿಗೆ ಬಡಕ್ಲ ಅಂದ್ರೆ ಬೇಜಾರಿಲ್ಲ. ಆದ್ರೆ ಹಾಗೆ ಕರೀವಾಗ ನಗಬಾರ್ದು. ನಕ್ಕರೆ ತನ್ನ ನಕ್ರಾ ಮಾಡ್ತಿದ್ದಾರೆ ಅಂತ ಕೋಪ ಬರ್ತಿತ್ತು. ಸಿದ್ದ ಮಾತಾಡಕ್ಕೆ ಶುರು ಮಾಡಿದ್ರೆ ತುಂಬಾ ಮಾತು. ಎಲ್ಲವನ್ನೂ ತುಂಬಾ ಇಂಟರೆಸ್ಟಿಂಗ್ ಆಗಿ ಹೇಳ್ತ ಇದ್ದ. ಒಂದು ವಿಷ್ಯ ಅಂತೂ ನಮಗೆ ಯಾವಾಗ್ಲೂ ಹೇಳೋನು, ತಾನು ದೆವ್ವ ನೋಡಿದ್ದೀನಿ ಅಂತ. ಆಗೆಲ್ಲ ನಮ್ಮ ಪ್ರಶ್ನೆಗಳು ಹೀಗಿರುತ್ತಿದ್ದುವು.

’ಅದು ಹೆಂಗೆ ಇರುತ್ತೋ’
’ನೋಡಿದ್ದು ಹಗಲಾ ರಾತ್ರೀನ?’
’ಎಲ್ಲಿ ನೋಡಿದ್ಯೋ?’
’ಕಪ್ಪಗಾ ಬೆಳ್ಳಗಾ?’
’ಕಣ್ಣು ಹೆಂಗಿದ್ವು?’
’ಕಾಲು ನೋಡಿದ್ಯಾ.. ತಿರುಗಾಮುರುಗಾ ಇದ್ವಾ?’
’ನಿಂಗೆ ಹೆದ್ರಿಕೆ ಆಗ್ಲಿಲ್ವಾ?’

ಸಿದ್ದ ಎಲ್ಲರ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನಿಗೂಢ ಮನುಷ್ಯನ ಥರ ಪೋಸ್ ಕೊಡ್ತಿದ್ದ. ತಾನು ತುಂಬ ಧೈರ್ಯವಂತ ಅನ್ನೋದನ್ನ ತನ್ನ ಕಡ್ಡಿ ದೇಹ ಸೆಟಿಸಿ ತೋರುತ್ತಿದ್ದ. ಆಗೆಲ್ಲ ನಾವು ಅವನನ್ನ”ಸಿದ್ದು” ಅಂತಲೆ ಕರೆಯುತ್ತಿದ್ವಿ. ಬಡಕ್ಲ ಅಂದ್ರೆ ಸಿಟ್ಟು ಬಂದ್ರೆ ಅಂತ ಸ್ವಲ್ಪ ಹೆದ್ರಿಕೆ!

ಒಂದು ದಿನ ಕೆಜಿಜಿ, ಮನೆ ಪಾಠ ಮಾಡ್ತ ಹೇಳಿದ್ರು. ‘ನಾಳೆಯಿಂದ ಎರಡು ದಿನ ಪಾಠ ಇರಲ್ರಯ್ಯ. ನಾನು ಸಂಸಾರ ಸಮೇತ ಬೆಂಗ್ಳೂರಿಗೆ ಹೋಗ್ತಾ ಇದೀನಿ.’

ನಾವೆಲ್ಲ ಒಕ್ಕೊರಲಿಂದ ಕೂಗಿದ್ವಿ, ‘ಹೌದಾ..ಸಾ..?!’

‘ಹೌದ್ರಯ್ಯ.. ನೀವೀಗ ಒಂದು ಕೆಲ್ಸ ಮಾಡ್ಬೇಕಲ್ಲ? ನಿಮ್ಮಲ್ಲಿ ಇಬ್ರು ಎರಡು ರಾತ್ರಿ ನಮ್ಮ ಮನೇಲಿ ಮಲಕ್ಕೊ ಬೇಕು.. ಆಗತ್ತಾ?’

ಯಾರೂ ಮಾತಾಡಲಿಲ್ಲ. ಕೆಜಿಜಿ ಹೇಳಿದ್ರು, ‘ಲಕ್ಕಣ್ಣ.. ನೀನು ಯಾರ್ನಾದ್ರು ಜೊತೆ ಮಾಡ್ಕೊಂಡು ಎರಡು ದಿನ ನಮ್ಮ ಮನೇಲಿರು.. ನಾನು ನಿಮ್ಮ ಅಪ್ಪನ ಹತ್ರ ನಿನ್ನ ಕಳ್ಸಕ್ಕೆ ಹೇಳ್ತೀನಿ’

ಲಕ್ಕಣ್ಣ ಸ್ವಲ್ಪ ಎತ್ರ ಮತ್ತು ದಪ್ಪಕ್ಕೆ ಕಾಲೇಜ್ ಹುಡುಗನ ಥರ ಕಾಣಿಸ್ತಿದ್ದ. ಅದಕ್ಕೆ ಮೇಷ್ಟ್ರು ಅವನ್ನ ಸೆಲೆಕ್ಟ್ ಮಾಡಿದ್ದು.

ಲಕ್ಕಣ್ಣ ’ಸರಿ” ಅಂತ ತಲೆಯಾಡಿಸಿ, ‘ನಂ ಜೊತೆ ಯಾರ್ ಸಾ..?’ ಕೇಳಿದ.

ಯಾರೂ ಮಾತಾಡ್ಲಿಲ್ಲ. ಸರಿ, ಲಕ್ಕಣ್ಣನೇ ಹೇಳಿದ, ‘ಸಾ.. ಈ ಸಿದ್ದ ನಂ ಜೊತೆ ಇರ್ಲಿ’

‘ಯಾರು…ಈ ಕಡ್ಡಿ ಪೈಲ್ವಾನ?’ ಅಂದ್ರು ಮೇಷ್ಟ್ರು.

ಎಲ್ಲ ಮುಸಿ ಮುಸಿ ನಕ್ಕರು. ಸಿದ್ದ ಯಾಕೊ ಸ್ವಲ್ಪ ಗರಂ ಆಗಿದ್ದಂತೆ ಕಾಣಿಸ್ತು. ಆದ್ರೆ ಏನೂ ಮಾತಡಲಿಲ್ಲ. ಅವನಿಗೆ ಲಕ್ಕಣ್ಣ ತನ್ನ ಹೆಸರು ಹೇಳಿದ್ದು ಕೋಪ. ಕೆಜಿಜಿ ಬೆಂಗಳೂರಿಗೆ ಹೊರಟು ಬಿಟ್ರು. ಆದಿನ ರಾತ್ರಿಗೆ ಲಕ್ಕಣ್ಣ ಸಿದ್ದನ ಜೊತೆಯಾಗಿ ಮೇಷ್ಟ್ರ ಮನೆಗೆ ಬಂದ. ಸಿದ್ದ ಹೆಚ್ಚು ಮಾತಾಡ್ಲಿಲ್ಲ. ಮಾತೆಲ್ಲ ಲಕ್ಕನದೇ. ಇಬ್ರೂ ಊಟ ಮಾಡಿಯೆ ಬಂದಿದ್ರು.

‘ಬಡಕ್ಲ… ಮಲಗೋಣ್ವ… ಗಂಟೆ ಹತ್ತಾಯ್ತು’ ಅಂದ.
‘ಹುಂ… ಎಲ್ಲಿ ಈ ಹಾಲಲ್ಲೇ ಮಲ್ಗೋಣ’ ಸಿದ್ದ ಹೇಳಿದ.
ಇಬ್ರೂ ಎರಡು ಹಾಸಿಗೆಗಳನ್ನು ರೂಂನಿಂದ ತಂದು ಹಾಲಿನ ಮಧ್ಯೆ ಹಾಕ್ಕೊಂಡ್ರು.

‘ಲೈಟ್ ಆಫ್ ಮಾಡೊ’ ಅಂದ ಲಕ್ಕ. ಹೋಗಿ ಲೈಟ್ ಆರಿಸಿ ಬಂದ ಸಿದ್ದ.

ಒಂದು ಐದು ನಿಮಿಷ ಕಳೆದಿರಬೇಕು. ಮೆಲ್ಲಗೆ ಸಿದ್ದ ಕೇಳಿದ.
’ನಿನಗೆ ರಾತ್ರೀಲಿ ಭಯ ಆಗೋದಿಲ್ವ?’
’ಇಲ್ಲಪ್ಪ.. ನಂಗ್ಯಾವ ಭಯನೂ ಇಲ್ಲ’
’ಅಂಗಾದ್ರೆ, ದೆವ್ವಕ್ಕೂ ನೀ ಹೆದ್ರಲ್ವ?’
’ಲೋ ಸಿದ್ದ, ದೆಯ್ಯ, ಭೂತ ಎಲ್ಲ ಸುಳ್ಳು.. ನಿಂಗ್ಯಾವನು ಅವೆಲ್ಲ ಹೇಳಿದ್ದು. ನಂಬೇಡ’
’ನಾನೇ ನೋಡಿದ್ದೀನೊ.. ನಂ ತೋಟದ್ ತಾವ.. ಅದ್ಕೇ ಹೇಳ್ದೆ’
’ಮಂಗಾ.. ನೀ ನೋಡಿದ್ದೇನೊ.. ಅನ್ಕೊಂಡಿದ್ದೇನೊ.. ’
’ಇಲ್ಲಕಣೋ ಲಕ್ಕ.. ನಂಗೆ ನಿಜವಾಗ್ಲು ಗೊತ್ತು.. ದೆವ್ವ ಇದೆ ಅಂತ’
’ನಾ ನಂಬಲ್ಲ.. ’

ಸ್ವಲ್ಪ ಹೊತ್ತು ಕಳೆಯಿತು. ಇಬ್ಬರೂ ನಿದ್ರೆಗೆ ಜಾರಿದರು. ರಾತ್ರಿ ಹನ್ನೆರಡಾಗಿರಬೇಕು. ಲಕ್ಕನಿಗೆ ಪಕ್ಕನೆ ಎಚ್ಚರ. ಅವನ ಎದೆ ಮೇಲೆ ಎಂಥದೊ ಭಾರ ಕೂತಿದೆ. ಕಣ್ಣು ಬಿಡಬೇಕು ಅನ್ನೋದ್ರಲ್ಲಿ, ಕುತ್ತಿಗೆ ಹಿಸುಕಿದಂತೆ ಅನ್ನಿಸಿತು. ಮತ್ತೆ ಅವನ ಕೆನ್ನೆಗೆ ’ಛಟೀರ್’ ಎಂದು ಎರಡೇಟು ಬಾರಿಸಿದ ಶಬ್ಧ. ’ಹೋ.. ’ಅಂತ ಲಕ್ಕ ಚೀರಿ ಎದ್ದ.

’ಸಿದ್ದ.. ಲೈಟ್ ಹಾಕು.. ಲೈಟ್ ಹಾಕು’ ಅಂತ ಕೂಗಿದ. ಸಿದ್ದ ಘಾಬರಿಬಿದ್ದು ಎದ್ದು ತಡಕಾಡುತ್ತಾ ಲೈಟ್ ಹಾಕಿ ನೋಡುತ್ತಾನೆ, ಲಕ್ಕ ಹೆದರಿಬಿಟ್ಟಿದ್ದಾನೆ. ಉಸಿರು ಜೋರಾಗಿ ಬಿಡುತ್ತಾ, ’ನೀರು ಕೊಡೊ’ ಅಂದ.

ಸಿದ್ದ ಮತ್ತೆ ಓಡಿ, ಅಡುಗೆ ಮನೆಯಿಂದ ಒಂದು ಲೋಟ ನೀರು ತಂದು ಕುಡಿಸಿ, ‘ಏನಾಯ್ತು ಲಕ್ಕ?’ ಕೇಳಿದ.

ಸುಧಾರಿಸಿಕೊಳ್ಳುತ್ತ ಲಕ್ಕ, ‘ಗೊತ್ತಿಲ್ಲ ನನ್ ಮೇಲೆ ಯಾರೊ ಕೂತಾಗಾಯ್ತು. ಕುತ್ತಿಗೆ ಹಿಚಿಕ್ದಾಗಾಯ್ತು.. ಮತ್ತೆ ಕೆನ್ನೆಗೆ ಹೊಡೆದಾಗಾಯ್ತುಕಣೊ’ ಅಂದ.

ಸಿದ್ದನಂತೂ ಗಾಬರಿಬಿದ್ದು ಹೇಳಿದ, ‘ಇವೆಲ್ಲ ದೆವ್ವದ ಆಟ ಕಣೊ.. ನಾ ಹೇಳಿಲ್ವ ದೆವ್ವ ಇದೆ ಅಂತ.. ಈವಾಗ ಗೊತ್ತಾಯ್ತ? ಅದಕ್ಕೆ ಹೇಳಿದ್ದು.. ದೆವ್ವ ಇಲ್ಲ ಅನ್ಬಾರ್ದು.. ಹಂಗಂದ್ರೆ ಅದು ಹೆಂಗಾದ್ರು ಬಂದು ನಮ್ಗೆ ತೊಂದ್ರೆ ಕೊಟ್ಟು ನಂಬಂಗೇ ಮಾಡತ್ತೆ, ಹಿಂಗೆ ಆಟ ಆಡ್ಸತ್ತೆ’

ಲಕ್ಕ ಸುಧಾರಿಸಿಕೊಂಡಿದ್ದ. ಮತ್ತೆ ತನ್ನ ಧೈರ್ಯಾನ ಸಿದ್ದ ಪ್ರಶ್ನೆ ಮಾಡ್ತಿದ್ದಾನೆ ಅನ್ನಿಸ್ತು. ‘ಇಲ್ಲ…ಇಲ್ಲ.. ದೆವ್ವ ಎಲ್ಲ ಸುಳ್ಳು.. ನನಗೆ ಕನಸಾಗಿರ್ಬೇಕು. ತಿಂದಿದ್ದು ಸ್ವಲ್ಪ ಜಾಸ್ತಿ ಆಗಿತ್ತು. ಮೈಭಾರಕ್ಕೆ ಹಂಗೆಲ್ಲ ಆಗಿದೆ ಅಷ್ಟೆ.. ನೀ ಮಲಕ್ಕೊ.. ನಾನೆ ಲೈಟ್ ಆರಿಸ್ತೀನಿ’ ಅಂತ ಲೈಟ್ ಆರಿಸಿಬಿಟ್ಟ.

ಸುಮಾರು ಅರ್ಧ ಮುಕ್ಕಾಲು ಗಂಟೆ ಇಬ್ರಿಗು ನಿದ್ರೆ ಇಲ್ಲ. ಯಾವಾಗ ನಿದ್ರೆಗೆ ಜಾರಿದ್ರೊ ಗೊತ್ತಾಗಲೇ ಇಲ್ಲ. ರಾತ್ರಿ ಎರಡು ಗಂಟೆ ಆಗಿರಬಹುದು. ಮತ್ತೆ ‘ಛಟೀರ್.. ಛಟೀರ್ ..’ ಶಬ್ಧ, ‘ಅಯ್ಯೊ.. ಅಯ್ಯೊ.. ‘ ಕೂಗು. ‘ಬಿಡು.. ಬಿಡು ನನ್ನ’ ಈಗ ಕೂಗುತ್ತಿದ್ದದ್ದು ಸಿದ್ದ!

ಧಡ ಧಡ ಎದ್ದು ಲಕ್ಕ ತಡಕಾಡಿ ಲೈಟ್ ಹಾಕಿದ. ನೋಡ್ತಾನೆ, ಸಿದ್ದ ಹಾಸಿಗೆ ಮೇಲೆ ಕಾಲು ಮಡಚಿ ನಡುಗ್ತಾ ಕೂತಿದಾನೆ. ತನ್ನೆರಡು ಕೆನ್ನೆ ಸವರಿಕೊಳ್ತಾ ‘ನೋವು’ ಅಂತ ಕಣ್ಣು ಮುಚ್ಚಿಕೊಂಡಿದಾನೆ.

ಲಕ್ಕ ಈಗ ಹೆದರಿಬಿಟ್ಟಿದ್ದ.

‘ಸಿದ್ದ.. ಏನಾಯ್ತು.. ಅದೇನು ಶಬ್ಧ.. ನಿನ್ ಕೆನ್ನೆಗೆ ಹೊಡ್ದದ್ದು ನಂಗೂ ಕೇಳಿಸ್ತು..! ಏನು ನಿಂಗು ಕುತ್ಗೆ ಹಿಚುಕಿದ್ದಾಗಾಯ್ತ?’ ಅಂತ ಹತ್ರ ಕುಳಿತು ಕೇಳಿದ.

ಸಿದ್ದ ಹಾಂ.. ಹೂಂ.. ಅನ್ನದೆ ತನ್ನ ತಲೆಯನ್ನು ತನ್ನ ಬಡಕಲ ಕಾಲಿನ ನಡುವೆ ಹುದುಗಿಸಿ ಕೂತೇ ಇದ್ದ.

ಸಮಾಧಾನ ಮಾಡುವ ಸರದಿ ಈಗ ಲಕ್ಕನದು. ‘ನೀ ಹೇಳಿದ್ದು ನಿಜ ಕಣೋ… ದೆವ್ವ ಭೂತಗಳು ಇವೆ. ನಾನು ಅವೆಲ್ಲ ಇಲ್ಲ ಅಂತ ಧಿಮಾಕು ಮಾಡಿದ್ದು ತಪ್ಪಾಯ್ತು. ನಮ್ಮವ್ವ ಕೂಡ ನಂಗೆ ನೆಟ್ಕೆ ತೆಗ್ದು ಹೇಳ್ತಿರ್ತಾಳೆ.. ದೆಯ್ಯದ ಕಣ್ಣ್ ಬೀಳ್ದಿರಲ್ಲಪ್ಪ’

ರಾತ್ರಿಯೆಲ್ಲ ಹೀಗೆ ಇಬ್ಬರೂ ಮಾತಾಡ್ತಾನೆ ಜಾಗರಣೆ ಮಾಡಿದ್ರು. ಬೆಳಿಗ್ಗೆ ಹೊರಡುವಾಗ ಸಿದ್ದ ಹೇಳಿದ. ‘ಹೋಗ್ಲಿ ಬಿಡು ಲಕ್ಕ… ನಿಂಗೆ ದೆವ್ವದ ಮೇಲೆ ನಂಬಿಕೆ ಬಂತಲ್ಲ… ಇನ್ಮೇಲೆ ಅವೆಲ್ಲ ಇಲ್ಲ.. ಎಲ್ಲ ಮೂಢ ನಂಬಿಕೆ ಅಂತ ಯಾರಿಗೂ ಹೇಳ್ಬೇಡ’

ಲಕ್ಕ ತಲೆಯಾಡಿಸಿದ. ಸಿದ್ದನಿಗೆ ಈಗ ಒಂಥರ ಜಂಭ. ಲಕ್ಕನಿಗೆ ಸಿದ್ದನ ಮೇಲೆ ಒಂಥರ ಗೌರವ!

ಸ್ಕೂಲಿನಲ್ಲಿ ಈ ಎಲ್ಲ ಅನುಭವ ನಮ್ಮೊಂದಿಗೆ ಪಿಸಿಪಿಸಿ ಧ್ವನಿಯಲ್ಲಿ ಸಿದ್ದ ಲಕ್ಕರು ಹಂಚಿಕೊಂಡರು. ಆದ್ರೆ ಪುಣ್ಯಕ್ಕೆ ಕೆಜಿಜಿ ಕಿವಿಗೆ ಇವೆಲ್ಲ ಬೀಳಲಿಲ್ಲ ಅಷ್ಟೆ.
2

ಇವೆಲ್ಲ ಆಗಿ ಆಗ್ಲೆ ಹದಿನೈದು ವರ್ಷ ಆಗಿಹೋಗಿದೆ. ಸಿದ್ದ ಈವಾಗ ಸರ್ಕಾರಿ ಹುದ್ದೆಯೊಂದರಲ್ಲಿದ್ದಾನೆ. ಲಕ್ಕ ತನ್ನ ಹತ್ತು ಎಕರೆ ಜಮೀನು ನೋಡ್ಕೊಳ್ತಾ ಊರಲ್ಲೇ ಆರಾಮ ಇದ್ದಾನೆ.

ಇತ್ತೀಚೆಗೆ ವಿರಾಮವಾಗೆ ನನಗೆ ಸಿದ್ದ ಸಿಕ್ಕಿದ್ದ. ಹೋಟೆಲ್ನಲ್ಲಿ ಕಾಫಿ ಕುಡಿಯುತ್ತ ಅದೂ ಇದೂ ಮಾತಾಡ್ತಾ ಅಚಾನಕ ಈ ದೆವ್ವದ ವಿಷ್ಯ ನೆನಪಿಗೆ ಬಂತು. ಸಿದ್ದನಿಗೆ ಆದಿನ ಆದದ್ದೇನು ಅಂತ ಕೇಳಿದೆ. ಸಿದ್ದ ಭಯಂಕರ ನಕ್ಕ.

‘ಆ ಲಕ್ಕ ಒಬ್ಬ ಫೂಲ್’ ಅಂದ.
‘ಹಾಗಾದ್ರೆ ಅವನ ಕುತ್ತಿಗೆ ಹಿಡ್ದು ಹೊಡೆದಿದ್ದು?’
‘ನಾನೆ ಕಣೊ!’
‘ಅದ್ಸರಿ… ಆಮೇಲೆ ನಿನ್ನ ಎರಡೂ ಕೆನ್ನೆಗೆ ಹೊಡ್ದಿದ್ದು?!’
‘ಏನ್ ಮಾಡೋದೋ… ಲಕ್ಕನ್ನ ನಂಬಿಸ್ಬೇಕಲ್ಲ… ಅದ್ಕೇ ನನ್ನ ಕೆನ್ನೆಗೆ ನಾನೆ ಸರಿಯಾಗಿ ಹೊಡ್ಕೊಂಡೆ’ ಅಂದ!!

ಒಂದು ದಿನ ಲಕ್ಕನೂ ಸಿಕ್ಕಿದ್ದ ಅನ್ನಿ. ಭರ್ಜರಿ ದೇಹಿ. ಮಾತಾಡಿಸಿದೆ. ಕುತ್ತಿಗೆಗೆ, ತೋಳಿಗೆ ಕರಿದಾರದಲ್ಲಿ ಬೆಳ್ಳಿಯ ಭಾರೀ ತಾಯಿತ ಕಟ್ಟಿಸಿಕೊಂಡಿದ್ದ. ಹಣೆ ಮೇಲೆ ದೊಡ್ಡದಾಗೆ ಕುಂಕುಮ ಮತ್ತು ಅದರ ಮೇಲೆ ಚಿಕ್ಕದಾಗಿ ನಾಮ ಇಟ್ಟುಕೊಂಡಿದ್ದ.

ಯಾಕೊ ಆ ಚಿಕ್ಕ ಕೆಂಪು ನಾಮ ನನಗೆ ದೊಡ್ಡದಾಗೆ ಕಾಣಿಸ್ತಿತ್ತು!
*******

(ಚಿತ್ರಕೃಪೆ: ಅಂತರ್ಜಾಲ)

(Published in Kannada.Pratilipi E magazine, Link address:http://kannada.pratilipi.com/anantha-ramesh/badakala-siddhana-devva-vruttanta)

6 thoughts on “ಬಡಕಲ ಸಿದ್ದನ ದೆವ್ವ ವೃತ್ತಾಂತ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s