ಎರಡು ಘಟನೆಗಳ ಕಥೆ

b2

ನಾನೀಗ ಒಂದೆರಡು ಸತ್ಯ ಘಟನೆಗಳನ್ನು ಇಲ್ಲಿ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳ ಬೇಕೆನ್ನಿಸಿದೆ.

ಘಟನೆ ಒಂದು:

ಬೆಂಗಳೂರ peak hour. ಜನರಿಂದ ತುಂಬಿ ತುಳುಕುತ್ತಿರುವ ಸಿಟಿ ಬಸ್ಸು ಮೈಸೂರು ರಸ್ತೆಯಲ್ಲಿ ಹೋಗುತ್ತಿದೆ. ನಾನು ಹಿಂದಿನ ಕೊನೆಯ ಸೀಟಿನಲ್ಲಿ ಕುಳಿತಿದ್ದೇನೆ. ಗಲಾಟೆ ಶಬ್ಧ ಇದ್ದಕ್ಕಿದ್ದಂತೆ ಬಸ್ಸಿನ ಮಧ್ಯದಿಂದ ಕೇಳತೊಡಗಿತು. ಏನೂ ಕಾಣಿಸುತ್ತಿಲ್ಲ. “ಹೊಡೀರಿ ಆ ಮುಠ್ಠಾಳಂಗೆ, ಹಾಕ್ರಿ ಇನ್ನೂ ನಾಲ್ಕು.. ಮಗಂಗೆ” ಅಂತ ಒಬ್ಬರು, “ಬಿಡ್ಬ್ಯಾಡ್ರಿ. ತದುಕ್ರಿ ಅವ್ನ” ಅಂತ ಇನ್ನೊಬ್ರು. ಮತ್ತಷ್ಟು “@#‍‍‍**..&*$#!” ಹೀಗೆ ಕೋಪದ ಮಾತುಗಳು, ಬೈಗುಳಗಳು.  ಅಂತೂ, ಹಿಗ್ಗಾಮುಗ್ಗಾ ಜಗ್ಗಾಟ ಮತ್ತು ಯಾರಿಗೋ ಏಟು ಬೀಳುತ್ತಿದೆ.

ಸ್ವಲ್ಪ ದೂರಕ್ಕೆ ಬಸ್ ಸ್ಟಾಪಲ್ಲಿ ಬಸ್ ನಿಂತಿತು. ಹಾಗೆ ಹೊಡಿಯೊ ಶಬ್ಢ ಕೂಡ.  ಒಬ್ಬ ಯುವಕ ಸರಕ್ಕನೆ ಹಿಂಬಾಗಿಲಿಂದ ಇಳಿದು ಓಡಿದ.  ಅವನ ಅಂಗಿ ಹರಿದಿತ್ತು, ಕೂದಲು ಕೆದರಿ ಹೋಗಿದ್ದುವು. ಕಣ್ಣು, ಕೆನ್ನೆ ಊದಿಕೊಂಡಿದ್ದುವು.  ಅವನ ಚಪ್ಪಲಿ ರಸ್ತೆಯಲ್ಲಿ ಅನಾಥವಾದುವು. ತಿರುಗಿ ನೋಡದೆ ಓಡಿದ. ಅವನು ತಪ್ಪಿಸಿಕೊಂಡಿದ್ದ. ಬಸ್ಸಿನೊಳಗೆ ಕೂಗುತ್ತಿದ್ದರು. “ಬಿಡಬ್ಯಾಡ್ರಿ.. ಹಿಡೀರಿ.. ಹಿಡೀರಿ.. ಕಳ್ ನನ್ ಮಕ್ಳಿಗೆ ಕೊಂದ್ರೂ ಪಾಪ ಬರಲ್ಲ”

ಆಶ್ಚರ್ಯ ವಾದದ್ದು ಆ ಬಸ್ಸಿನಲ್ಲಿದ್ದ ಒಬ್ಬನೂ ಕೂಡ ಆ ಕಳ್ಳನ ಹಿಡಿದು ಪೊಲೀಸರಿಗೆ ಕೊಡಬೇಕೆನ್ನುವ ಆಲೋಚನೆ ಮಾಡದೆ ಇದ್ದುದಕ್ಕೆ.

ಮೆಲ್ಲಗೆ ಪಕ್ಕದವರನ್ನ ಕೇಳಿದೆ. “ಆ ಕಳ್ಳನ್ನ ಹೊಡಿಯೋ ಬದ್ಲು, ಪೊಲೀಸ್ಗೆ ಹಿಡ್ಕೊಟ್ಟು ಬಿಡಬಹುದಾಗಿತ್ತು”. ಪಕ್ಕದವರು ನನ್ನ ಪಾಪದ ಮನುಷ್ಯನ ನೋಡುವಂತೆ ನೋಟ ಬೀರಿದರು. ಕರುಣೆಯಿಂದ ತಿಳಿ ಹೇಳಿದರು. “ಯಾರ್ಗೆ ಹಿಡ್ಕೊಡ್ತೀರ. ಅವ್ರೆಲ್ಲ ಶಾಮೀಲು. ನೀವು ಸ್ಟೇಷನ್ ನೋಡಿಲ್ವ? ಎಲ್ಲ ಫ಼್ರೆಂಡ್ಸ್. ಏನೂ ಪ್ರಯೋಜ್ನ ಇಲ್ಲ!”

ಘಟನೆ ಎರಡು:

ಟೀವಿಯಲ್ಲಿ ಸುದ್ದಿ ನೋಡುತ್ತಿದ್ದೆ. ಚಾನೆಲ್ ಏನೊ ಒದರುತ್ತಿತ್ತು. ಕಾಮುಕ ಹುಡುಗನೊಬ್ಬನಿಗೆ ಹೆಂಗಸರಿಂದ ಥಳಿತ.  ವಿಡಿಯೊ play ಮಾಡಿದರು.  ಅಲ್ಲಿ ಹುಡುಗನೊಬ್ಬನನ್ನು ಬೆತ್ತಲೆ ಕಟ್ಟಿಹಾಕಿದ್ದರು.  ಒಂದಷ್ಟು ಹೆಂಗಸರು ಕೈಯಲ್ಲಿ ಪೊರಕೆ, ಚಪ್ಪಲಿ, ಕೋಲುಗಳನ್ನು ಹಿಡಿದು ಹಿಂದುಮುಂದು ಅವನಿಗೆ ಬಾರಿಸುತ್ತಿದ್ದರು. ಒಂದಿಷ್ಟು ಜನ ಕೈಕಟ್ಟಿ ನಗುತ್ತ ಈ ದೃಶ್ಯ ಕಾವ್ಯ ಸವಿಯುತ್ತಿದ್ದರು!  ಥಳಿಸಿಕೊಳ್ಳುತ್ತಿರುವ ವ್ಯಕ್ತಿ ಪ್ರಜ್ಞೆತಪ್ಪಿದ. ಅವನ ತಲೆ ಜೋತಾಡತೊಡಗಿತು.  ಬೈಗುಳದ ಶಬ್ಢ “##***@!&*” ಜೋರಾಗತೊಡಗಿತು. ಟೀವಿ volume ಕಡಿಮೆ ಮಾಡಿದೆ.

ನಿಜಕ್ಕೂ ದಿಗ್ಭ್ರಮೆಯಾದದ್ದು, ಟೀವಿ ಚಾನಲ್ನಲ್ಲಿ ಸುದ್ದಿ ಓದುವವನ ತೃಪ್ತ ಮುಖ ಕಂಡಾಗ.  ಆ ವ್ಯಕ್ತಿಯನ್ನು ಹೊಡೆಯುವ ಸ್ತ್ರೀ ಶಕ್ತಿಗೆ ಪ್ರಾಣ ತೆಗೆಯುವಂಥ ತಾಕತ್ತು!  ಹೊಡೆತಗಳನ್ನು ಕಣ್ಣು ತುಂಬಿಕೊಳ್ಳುತ್ತಿರುವ ಮತ್ತು ಸುತ್ತಲು ಸೇರಿದ್ದ ಗಂಡು ಜನಾಂಗದ ನಗೆ.  ಕಳಶವಿಟ್ಟಂತೆ, ಸುದ್ದಿಗಾರನಿಂದ ಟೀವಿ ವೀಕ್ಷಕರಿಗೆ ಎಚ್ಚರಿಕೆಯ ಧ್ವನಿ!  ಮತ್ತೆ ಆಶ್ಚರ್ಯವಾಯ್ತು.  ಪೊಲೀಸ್ ಇಲಾಖೆ ಅಂತ ಇದೆ ಅನ್ನುವುದು ಯಾರಿಗೂ ನೆನಪಾಗದಿದ್ದುದಕ್ಕೆ.

ಎಲ್ಲವೂ ವ್ಯವಸ್ಥಿತರೀತಿಯಲ್ಲಿ ಇರಬೇಕೆಂದು ಬಯಸುವ ನಾವು ವ್ಯವಸ್ಥೆಯೊಂದು ನಮ್ಮ ಸಮಾಜದ ಅಂಗವಾಗಿ ಕಾರ್ಯಮಾಡುತ್ತಿದೆ ಅನ್ನುವುದನ್ನು ಪೂರ್ಣ ಮರೆತಿರುವುದು. ಕ್ರೌರ್ಯದ ವಿರುದ್ಧ ಮಾತನಾಡುವ ನಾವು, ಅರಿವಿಲ್ಲದೇ ಕ್ರೂರಿಗಳಾಗಿ ಬದಲಾಗಿಬಿಟ್ಟಿರುವುದು. ಹಿಂಸೆಯನ್ನು ವಿರೋಧಿಸುತ್ತಲೆ ಹಿಂಸೆಯ ವಿವಿಧ ಪ್ರಕಾರಗಳ ಅಧ್ಯಯನ ಮನಸ್ಸಿನಲ್ಲಿ ಮಾಡತೊಡಗಿರುವುದು. ವಿಕೃತರನ್ನು ದ್ವೇಷಿಸುತ್ತಲೆ ವಿಕೃತವನ್ನು ದೃಶ್ಯದಲ್ಲಿ ನೋಡುವ ಮನಸ್ಸಿನವರಾಗುತ್ತಿರುವುದು.

ಎಲ್ಲಿ ಎಡವುತ್ತಿದ್ದೇವೆ. ಯಾರು ನಮ್ಮನ್ನು ಹಿಂದಿನಿಂದ ದೂಡಿ ಎಡವುವ ತಂತ್ರ ಹೂಡುತ್ತಿದ್ದಾರೆ. ಸ್ವಲ್ಪ ಯೋಚಿಸೋಣ. ಯೋಚಿಸುವ ಕೆಲಸ ನಮ್ಮಿಂದಾಗದು ಅನ್ನಿಸುತ್ತೆ!

ಹೋಗಲಿ ಬಿಡಿ, ಮುಂದಿನ ಜನಾಂಗವಾದರೂ ನಮ್ಮಂತಾಗದಿರಲಿ ಅನ್ನುವ ಪ್ರಾರ್ಥನೆ.

ನಿಜವಾಗಿ ನಡೆದದ್ದೇನು?

ಮೇಲೆ ಎರಡು ಘಟನೆಗಳಾಯ್ತು. “ಸರಿ, ದಿನ ನಿತ್ಯದ್ದೆ. ಕತೆ ಎಲ್ಲಿ”, ಅಂದಿರಾ?

ಮೊದಲ ಘಟನೆಯಾಯಿತಲ್ಲ ಅದರ ಮರುದಿನ ದಿನ ಪತ್ರಿಕೆ ಓದುತ್ತಿದ್ದೆ. ಅಪರಾಧ ಕಾಲಂನಲ್ಲಿ ಹೀಗಿತ್ತು. ಶ್ರಿಯುತ ರಾಮು ಎಂಬುವರನ್ನು ಬಸ್ಸೊಂದರಲ್ಲಿ ಐದಾರು ಜನರ ಕಳ್ಳರ ತಂಡ ಸುತ್ತುವರಿದು ಪಿಕ್ ಪಾಕೆಟ್ ಮಾಡಿದ್ದಾರೆ ಎಂದು ಬಸ್ಸೊಳಗೆ ಸುಳ್ಳು ಗಲಾಟೆ ಎಬ್ಬಿಸಿ ಅವರಲ್ಲಿದ್ದ ಹಣದ ಪರ್ಸು, ವಾಚು, ಚಿನ್ನದ ಉಂಗುರ ಲಪಟಾಯಿಸಿರುತ್ತಾರೆ. ಶ್ರೀ ರಾಮು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ದೂರು ದಾಖಲಾಗಿದೆ.

ಘಟನೆ ಎರಡರಲ್ಲಿ,  ಅಂದರೆ ಕಾಮುಕ ಹುಡುಗನ ಥಳಿತವಾದ ಒಂದು ವಾರದ ನಂತರ ಗೊತ್ತಾಯ್ತು, ಅದೇ ಟೀವಿ ಚಾನೆಲ್ಲಿನಿಂದ.  ಬೇರೆ ಊರಿನ ಯುವಕನೊಬ್ಬ ಈ ಊರಿನ ಹುಡುಗಿಯನ್ನು ಪ್ರೀತಿಸುತ್ತಿದ್ದು, ವಿಷಯ ತಿಳಿದ ಆ ಹುಡುಗಿಯ ’ಮತ್ತೊಬ್ಬ ಪ್ರೇಮಿ’ ಕೆಲ ಹುಡುಗರನ್ನು ಗುಂಪು ಕೂಡಿಸಿ, ಆ ಪರ ಊರಿನ ಹುಡುಗ ಅತ್ಯಾಚಾರಿ ಎಂದು ಬಿಂಬಿಸಿ, ನಂಬಿಸಿ ಹೊಡೆಸಿರುತ್ತಾನೆ.  ಏಟು ತಿಂದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಹುಡುಗ, ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ!

(Published in Pratilipi Kannada e magazine, Link:http://kannada.pratilipi.com/anantha-ramesh/eradu-ghatanegala-kathe)

******************

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s