ರಿಪೇರಿ

repair

ರಿಪೇರಿ ಬುಡಾನ್ ಬಾಗಿಲಿಗೇ ಕೂಗು,
’ಪ್ಲಾಸ್ಟಿಕ್ ಸಾಮಾನ್ರಿಪ್ಪೇ…ರಿ’
ಒಳಗೆ ದಂಡಿ ಬಿದ್ದಿದ್ದಾವೆ
ಸೊಟ್ಟ ಮಗ್ಗು ಬಿರುಕು ಬಿಂದಿಗೆ ಬಕೆಟ್ಟು

ಮಡದಿಗೆ ಮಾಮೂಲು ಗಂಡ
ನ ಮೇಲ್ಕೋಪ
ಒಂದು ವಾರದಿಂದ ಝಳ ಝಳ ತಾಪ
ಕಾಲ್ಚಾಚಿ ಸೋಫ಼ಾದಲ್ಲಿ ಗಂಡ ಉದ್ದಂಡ

ದಢಾರನೆ ಬಾಗಿಲಾಚೆಗೆ
ದಢ ದಢನೆ ಸೇರಿಸಿಟ್ಟಳು
ಒಡೆದು ಸೀಳಿದ ವಿಚಿತ್ರ ವಿಕಾರ
ಮುಗ್ಗು ತರಹೇವಾರಿ ಸರಂಜಾಮು
ಅವಳ ಹಾವ ಭಾವ ಮುಖ
ಧುಸುಮುಸು ಅಸಡ್ಡೆ
ಗಂಡನೊ ಪಡ್ಡೆ

ರಸ್ತೆ ಬದಿಯಲ್ಲೆ ಬುಡಾನ್ ಹೊತ್ತಿಸಿ
ಸಣ್ಣ ಗ್ಯಾಸ್ ಬುಸುಬುಸನೆ ಶಬ್ಧಿಸಿ
ಕಪ್ಪು ತೀಡಿದ ಕಣ್ಣಿಂದ
ತಿರು ತಿರುವಿ ಪರೀಕ್ಷಿಸಿದ
ಅವನ, ಅವಳ ಮತ್ತೆ ಪ್ಲಾಸ್ಟಿಕ್ಕುಗಳ
ಹರವಿ ಪಟ್ಟಿಗಳ ಅಂಟಿಸಿ ಗಂಟಿಸಿ
ಬಿರುಕಿ ತೂತಾದ ಒಸರುವ ಸೋರುವ
ಸಾರಾಸಗಟು ಅರೆತಾಸಲ್ಲೆ ರಿಪೇರಿಸಿ
ಬಾಗಿಲ ಮುಂದೆ ಪೇರಿಸಿದ

ಅವಳೆಣಿಸಿದಳು ಒಳಗಿದ್ದವನು
ಬರಬಹುದು ಅವುಗಳನೆಣಿಸಲು
ಅವನೊ ಬಾಗಿಲ ಬದಿ ಸೋಫ಼ಾದಲ್ಲೆ
ನಿರುಕಿಸುತ್ತ ನಿರಾಸಕ್ತ…

ಬಿಗಿದ ಮುಖದಲ್ಲೆ ಕೇಳಿದಳೆಷ್ಟಾಯ್ತು
ತಲೆ ಕೆರೆದ ಬುಡಾನ್ ಬೆರಳಲ್ಲೆ ಲೆಕ್ಕಿಸಿ,
’ಒಂದಕ್ಕೆ ನಲವತ್ತು ಒಟ್ಟ್ಗೆ ಸೇರಿಸಿ
ಆಯ್ತು ನಾನೂರ ಅರವತ್ತು’’

ಹೌ… ಹಾರಿದಳು
ಅವನೂ ಸೋಫ಼ಾದಿಂದ ಹಾರಿ
ಒಬ್ಬರಿಗೊಬ್ಬರು ಸೇರಿ ಉದುರಿಸಿದರು
ಕಂದ ಪದ್ಯ ಪುಂಖಾನು ಪುಂಖ
ರೋಷಾವೇಶ ಪದ ಪಲುಕು
ಯಕ್ಷಗಾನ ಚೆಂಡೆ ಝಾಡಿಸಿದ್ದೇ
ನಿರುಕಿಸಿದ ಬುಡಾನ್, ನಕ್ಕ
’ನಿಮ್ದು ಬೇಗಮ್ಗೆ ಜೊತೆ
ಮಾತಾಡಿ ಒಂದಿಷ್ಟು ಕೊಟ್ಟುಬಿಡಿ
ಬಿಲ್ಕುಲ್ ನಾ ಚೌಕಶಿ ಮಾಡಂಗಿಲ್ಲರಿ ’

ಇಬ್ಬರೂ ಒಳಸೇರಿ
ಅವಳು ಎಷ್ಟೆಂದು ಚಂದ ಮುಖಮಾಡಿ
ಅಗಲ ಕಂಗಳಲ್ಲಿ ಮೆಲ್ಲುಸಿರಲ್ಲಿ ಕೇಳಿದ್ದೆ,
ಪಡ್ಡೆ ಸಂಭ್ರಮಿಸಿ ’ಒಪ್ಪಿಸಿಬಿಟ್ಟೇನು
ನೂರರ ಮೇಲೆ ಹತ್ತು’
’ನಿಜಕ್ಕೂ..!’ ಮತ್ತಳರಳಿದವು ಕಣ್ಣು

ಬೀಗಿ ಬಂದವನು ಕೊಟ್ಟದ್ದೇ ನೋಟು
ಎಣಿಸದೆ ಜೇಬಿಗಿಟ್ಟು ಹೇಳಿದ ಬುಡಾನ್  ,
’ನಿಮ್ ಪಕ್ಕದ ಮನೇವ್ರುದ್ದು ಹಿಂಗೇ
ರಿಪೇರಿಗೆ ಮಾಡ್ಬಿಟ್ಟೆ ಭಾಯಿಜಾನ್ !’

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s