ಹೊಸ ಸ್ನೇಹ

bb2

ಬೆಳಿಗ್ಗೆ ಬೆಡ್ ಕಾಫ಼ಿ ಕುಡಿಯುವ ಅಭ್ಯಾಸ ಅಪ್ಪನ ರಗಳೆಯ ಮಾತುಗಳಿಂದ ನೆನ್ನೆಯಿಂದಲೆ ವಿನೀತ ನಿಲ್ಲಿಸಿದ್ದಾನೆ. ಹಲ್ಲುಜ್ಜಿ, ಕೈಕಾಲು ಮುಖ ತೊಳೆದು ದೇವರ ಮನೆ ಎದುರು ನಿಂತು ಕೈ ಮುಗಿದ ನಂತರವೆ ಅಮ್ಮ ಅವನಿಗೆ ಹಾಲು ತರುತ್ತಾಳೆ. ಕೈಗೆ ಸಿಕ್ಕಿದ ಪುಸ್ತಕ ನೋಡುತ್ತ ಕುಳಿತ ಸ್ವಲ್ಪ ಹೊತ್ತಿಗೆ, ” ವಿನೂ, ಬೇಲಾನನ್ನು ಹೊರಗೆ ಕರೆದುಕೊಂಡು ಹೋಗು” ಅನ್ನುತ್ತಾಳೆ ಅಮ್ಮ.

ಬೇಲಾನ ಕೊರಳಿಗೆ ಸರಪಳಿ ಹಾಕಿ ಹವಾಯಿ ಮೆಟ್ಟಿ ವಿನೀತ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ನಡೆಯುತ್ತಾ ಇವತ್ತು ಕ್ಲಾಸಲ್ಲಿ ಯಾವ ಪಾಠ ಪ್ರಾರಂಭ, ಹೋಮ್ ವರ್ಕ್ ಯಾವುದು ಪೂರ್ತಿಯಾಗಿಲ್ಲ ಇತ್ಯಾದಿ ಯೋಚಿಸುತ್ತಿದ್ದಾನೆ.

ಬೇಲಾನ ಎಳೆದಾಟ ರೈಲು ಹಳಿಗಳ ಪಕ್ಕದ ಕಾಲು ದಾರಿಯಲ್ಲೇ ಸಾಗುತ್ತಿದೆ. ಟ್ರೇನ್ ಶಬ್ಧ ಮೆಲ್ಲಗೆ ಕೇಳಿಸುತ್ತಿದೆ ಮತ್ತು ನಿಧಾನಕ್ಕೆ ಜೋರಾಗುತ್ತಾ ವಿನೀತನ ದಾಟಿ ಹೊರಟು ಹೋಗುತ್ತಿದೆ. ದಿನವೂ ಬರುವ ಪ್ಯಾಸೆಂಜರ್ ಟ್ರೇನ್ ಇರಬೇಕು.

ಕರ್ಕಶವಾಗಿ ಕೂಗುತ್ತಿದ್ದ ಟ್ರೇನ್ ಇದ್ದಕ್ಕಿದ್ದಂತೆ ತನ್ನ ಓಟವನ್ನು ಕಡಿಮೆ ಮಾಡುತ್ತಾ, ಸೈರನ್ ಶಬ್ಧ ಹೆಚ್ಚಿಸುತ್ತಾ ಮೆಲ್ಲಗೆ ನಿಂತು ಬಿಟ್ಟಿದೆ. ಅಲ್ಲಲ್ಲಿ ಓಡಾಡುತ್ತಿದ್ದ ಜನ ಈಗ ದುಗುಡದಲ್ಲೊ, ಗಡಿಬಿಡಿಯಲ್ಲೊ ಅಥವಾ ಕುತೂಹಲದಲ್ಲೊ ಟ್ರೇನಿನ ಕೊನೆಯ ಬೋಗಿಯತ್ತ ಹೋಗುತ್ತಿದ್ದಾರೆ ಅಥವಾ ಓಡತೊಡಗಿದ್ದಾರೆ. ಎಂಜಿನ್ನಿನ ಗಾರ್ಡ್ ಏನನ್ನೋ ತನ್ನ ಸಹಾಯಕನಿಗೆ ಹೇಳುತ್ತಾ ಇಳಿದು ಬರುತ್ತಿದ್ದಾನೆ. ಮತ್ತೊಬ್ಬ ಗಾರ್ಡ್ ಹಸಿರು, ಕೆಂಪು ಬಾವುಟಗಳನ್ನು ಬಗಲಿನಲ್ಲಿಟ್ಟು ಇತ್ತಲೇ ಹೆಜ್ಜೆ ಹಾಕಿದ್ದಾನೆ. ಏನೋ ಅನಾಹುತವಾಗಿದೆಯೆಂದು ವಿನೀತ ಅತ್ತ ಕಡೆಗೇ ಸಾಗುತ್ತಿದ್ದಾನೆ.

ಜನ ಘೇರಾಯಿಸಿದ್ದಾರೆ. ಗುಂಪಿನಲ್ಲಿ ವಿನೀತನಿಗೇನೂ ಕಾಣಿಸುತ್ತಿಲ್ಲ. ಹೆಚ್ಚು ಹತ್ತಿರ ಹೋಗಲು ಬೇಲಾ ಬಿಡುತ್ತಿಲ್ಲ. ಕೆಲವರು ಕಸಿವಿಸಿಯ ಮುಖದಿಂದ ಗುಂಪಿನಿಂದ ಹೊರಬರುತ್ತಿದ್ದಾರೆ. ಕೆಲವರು “ಛೆ ಛೆ”, “ಪಾಪ ಪಾಪ”, ಇತ್ಯಾದಿ ಗೊಣಗುತ್ತಾ ಹೊರಟುಹೋಗುತ್ತಿದ್ದಾರೆ. ಮತ್ತಷ್ಟು ಜನರ ಜಮಾವಣೆಯಾಗುತ್ತಿದೆ.

“ಏನಾಯ್ತು ? ಏನದು ?” ಕೇಳಿದ. ಕೆಲವರು ಏನೂ ಉತ್ತರಿಸದೆ ಹೋಗುತ್ತಿದ್ದಾರೆ. ಒಬ್ಬ ಹುಡುಗ ಆ ಗುಂಪಿನಿಂದ ಆಚೆಗೆ ಬಂದ. ವಿನೀತ ನೋಡುತ್ತಾನೆ, ’ ಅರೆ! ಅವನು ತನ್ನ ಕ್ಲಾಸ್ ಮೇಟ್ ಕಿಶು !’

“ಏನೋ ಅದು ಕಿಶು.. ಏನಾಗಿದೆಯೊ?” ಕೂಗಿದ. ಕಿಶು ದುಗುಡದಲ್ಲಿ
” ಯಾರೋ ಟ್ರೇನಿಗೆ ಸಿಕ್ಕಿ ಸತ್ತಿದ್ದಾರೊ. ಅಬ್ಬಾ.. ನೋಡಕ್ಕೆ ಆಗಲ್ಲಪ್ಪ”
“ಕಿಶು, ಬೇಲಾನ ಹಿಡ್ಕೊಳ್ಳೊ, ನಾನೂ ನೋಡ್ಕೊಂಡು ಬರ್ತೀನಿ”
“ಬೇಡ ವಿನು, ನೀನು ಹೆದರ್ಕೊಳ್ತೀಯ”
“ಇಲ್ವೊ, ಒಂದೇ ನಿಮಿಷ ನೋಡಿ ಬಂದುಬಿಡ್ತೀನಿ”
ಓಡಿದ. ಕರಗುವ ಜನಗಳಲ್ಲಿ, ವಿನೀತ ಕಷ್ಟವಿಲ್ಲದೆ ಗುಂಪನ್ನು ಭೇದಿಸಿ ಒಳಹೊಕ್ಕು ನೋಡತೊಡಗಿದ.

ಹಳಿಗಳ ಮಧ್ಯೆ ಏನೊ ಬಿದ್ದಿದೆ. ತಕ್ಷಣ ಅದೇನೆಂದು ಗೊತ್ತಾಗುತ್ತಿಲ್ಲ. ಕೆಂಪು ಕಪ್ಪು ಮಿಶ್ರಣದ ಒಂದು ಮಾಂಸದ ಮುದ್ದೆ. ಮುಂಡವಿರಬೇಕು. ಕಸಿವಿಸಿಯಾಗುತ್ತಿದೆ. ಕಾಲು ಅಥವ ಕೈ ಯಾವುದೊ ಕತ್ತರಿಸಿ ಬಿದ್ದಿದೆ. ಅರೆ! ತಲೆ ಕಾಣುತ್ತಿಲ್ಲವಲ್ಲ? ಯಾರಿರಬಹುದು? ಆಚೆ ಈಚೆ ಕಣ್ಣು ಹಾಯಿಸಿದ. ಹತ್ತು ಹೆಜ್ಜೆಗಳಾಚೆ ದುಂಡನೆ ವಸ್ತುವೊಂದು ಬಿದ್ದಿದೆ. ಓ.. ಅದು ತಲೆ. ಹುಡುಗನೊಬ್ಬನ ತಲೆಯಂತೆ ತೋರುತ್ತಿದೆ. ಬುಡದಲ್ಲಿ ಕಪ್ಪು ಮಿಶ್ರಿತ ರಕ್ತ ಹೆಪ್ಪುಗಟ್ಟತೊಡಗಿದೆ. ಮಣ್ಣಿನಲ್ಲಿ ಮಾಡಿರುವ ಗೊಂಬೆಯ ಥರ ಕಾಣುತ್ತಿದೆ. ಹಳಿಗಳ ಮಧ್ಯೆ ಉರುಳಿ ಬಿದ್ದದ್ದಕ್ಕಿರಬಹುದು, ಕಪ್ಪಾಗಿದೆ ಅಥವ ಕಪ್ಪಾಗುತ್ತಿದೆ. ಮುಖ ಮೇಲಾಗಿ ಬಿದ್ದು ಕಣ್ಣು ಮುಚ್ಚಿದಂತಿದೆ. ಅದು ಜೀವಿಸಿದ್ದ ಒಬ್ಬ ವ್ಯಕ್ತಿಯದು ಅಂತ ಅವನಿಗೆ ಅನಿಸುತ್ತಿಲ್ಲ.

ವಿನೀತ ಆ ತಲೆಯನ್ನು ಸ್ವಲ್ಪ ಸಮಯ ದಿಟ್ಟಿಸುತ್ತಲೇ ಇದ್ದ. ಸುತ್ತಲಿದ್ದವರ ಮಾತುಗಳು ಕಿವಿಗೆ ಬೀಳುತ್ತಿವೆ.
’ಇನ್ನೂ ಹುಡುಗ, ೨೦ – ೨೨ ವರ್ಷ ಇರಬೇಕು ಅಷ್ಟೆ’
’ಏನಾಯ್ತಪ್ಪ ಈ ಹುಡುಗನಿಗೆ, ಈ ವಯಸ್ಸಿಗೇ ರೈಲಿಗೆ ತಲೆ ಕೊಟ್ಟುಬಿಟ್ಟನಲ್ಲಪ್ಪ’
’ಟ್ರೇನಿಗೆ ತಲೆ ಕೊಡಬೇಕಾದರೆ ಎಷ್ಟು ಧೈರ್ಯ ಬೇಕಪ್ಪ’
’ಈ ವಯಸ್ಸಿಗೇ ಹುಡುಗರು ಮನಸ್ಸು ಹಾಳುಮಾಡಿಕೊಳ್ಳುತ್ತಿದ್ದಾರೆ’

ಯಾರೊ ತನ್ನನ್ನು ಕರೆದಂತಾಗಿ ವಿನೀತ ಗುಂಪಿನಿಂದ ಹೊರಗೆ ಬಂದ. ಕಿಶು ಅವನನ್ನು ಬಹಳ ಸರಿ ಕೂಗಿ ಕರೆದನಂತೆ. ” ಸ್ಸಾರಿ ಕಿಶು, ತುಂಬಾ ಹೊತ್ತು ಕಾಯ್ಸಿಬಿಟ್ಟೆ.” “ಸ್ಕೂಲಲ್ಲಿ ಸಿಕ್ಕೊಣ್ವ” ಅನ್ನುತ್ತಾ ಬೇಲಾನ ಸರಪಳಿ ಅವನಿಗೆ ಕೊಟ್ಟು ಕಿಶು ಓಡಿದ.

ಬೇಲಾನಿಗೆ ಬೇಸರವಾಗಿರಬೇಕು, ದರದರ ಸರಪಳಿ ಎಳೆಯುತ್ತಾ ಮನೆಗೆ ಹೊರಟ. ಅವನ ಎಳೆದಾಟಕ್ಕೆ ವಿನೀತ ಓಡುತ್ತಾ ಮನೆ ಸೇರಿದ.

” ಅಮ್ಮ, ಈಗ ತಾನೆ ಒಬ್ಬ ಟ್ರೇನಿಗೆ ಸಿಕ್ಕಿ ಸತ್ತುಹೋದ. ನಾನು ಅದನ್ನು ನೋಡಿದೆ”
“ಏನಾಯ್ತೋ?”
“ಗೊತ್ತಿಲ್ಲಮ್ಮ. ಟ್ರೇನ್ ಫ಼ಾಸ್ಟ್ ಆಗಿ ಬರುತ್ತಿತ್ತು. ಆ ಹುಡುಗ ಗೊತ್ತಿಲ್ಲದೆ ಸಿಕ್ಕಿಹಾಕಿಕೊಂಡ ಅನ್ಸುತ್ತೆ. ಆದ್ರೆ, ಜನ ಅವನೇ ಹೋಗಿ ತಲೆ ಕೊಟ್ಟ ಅಂತಾರೆ. ಅವನ ತಲೆ ದೂರ ಬಿದ್ದಿತ್ತು. ನಾನು ನೋಡಿದೆ”
“ಅಯ್ಯೋ… ವಿನಿ .. ನೀನ್ಯಾಕೆ ಅಲ್ಲೆಲ್ಲ ಹೋಗಿದ್ದೆ. ಅಂಥವೆಲ್ಲ ನೋಡಬಾರದು.. ಗೊತ್ತಾಯ್ತ..”
ವಿನೀತ ಏನೂ ಉತ್ತರ ಕೊಡಲಿಲ್ಲ. ಸ್ನಾನಕ್ಕೆ ಹೋದ.

“ಇವತ್ತು ಏನೂ ಓದಿಕೊಂಡಿಲ್ಲ ನೀನು.. ಈ ವರ್ಷದ ಪರೀಕ್ಷೆ ಹೋದ ವರ್ಷದಂತೆ ಅಲ್ಲ ಅಂತ ಎಷ್ಟು ಹೇಳಿದರು ನಿನಗೆ ಗೊತ್ತಾಗಲ್ಲ” ಎನ್ನುತ್ತಾ ಅಪ್ಪ ಆಫ಼ೀಸಿಗೆ ಹೊರಟರು. ವಿನೀತ ಏನೂ ಮಾತಾಡಲಿಲ್ಲ.

ತಿಂಡಿ ತಿಂದು ಸ್ಕೂಲಿಗೆ ಹೊರಟ. ಹೋಗುವಾಗಲೂ ಹಳಿಗಳ ಮಧ್ಯೆ ಬಿದ್ದಿದ್ದ ತಲೆ ನೆನಪಾಗುತ್ತಲೇ ಇತ್ತು. ಆತ್ಮಹತ್ಯೆ, ಸಾಯುವುದು, ಯಾಕೆ ಸಾಯಬೇಕು ..ಹೀಗೆ ಯೋಚಿಸುತ್ತ ಹೆಜ್ಜೆ ಹಾಕತೊಡಗಿದ.

ಆ ದಿನ ಸ್ಕೂಲಲ್ಲಿ ಅವನ ಚಟುವಟಿಕೆ ಕಡಿಮೆ ಇತ್ತು. ಯಾರೊಡನೆಯೂ ಹೆಚ್ಚು ಮಾತಾಡಲಿಲ್ಲ. ಕಿಶು ಹತ್ತಿರ ಹೋದರೂ ಇಬ್ಬರೂ ಬೆಳಿಗ್ಗೆ ತಾವು ನೋಡಿದ ಟ್ರೇನ್ ವಿಷಯ ಮತಾಡಲಿಲ್ಲ. ಮಧ್ಯಾಹ್ನ ಊಟದ ಬಾಕ್ಸ್ ತೆಗೆದ. ಆದರೆ ಪೂರ್ತಿ ತಿನ್ನದೆ ನೀರು ಕುಡಿದ. ಆ ದಿನದ ಪಾಠಗಳು ತಲೆಯಲ್ಲಿ ಕೂರಲೇ ಇಲ್ಲ. ಬೆಳಿಗ್ಗೆ ಅಂದುಕೊಂಡಿದ್ದ. ಕ್ಲಾಸಲ್ಲಿ ಎಲ್ಲ ಸ್ನೇಹಿತರಿಗೂ ತಾನು ನೋಡಿದ ಸಾವಿನ ವಿಷಯ ಕಿಶುಗಿಂತ ಮೊದಲೇ ಹೇಳಬೇಕು. ಆದರೆ ಯಾರಿಗು ಏನೂ ಹೇಳುವ ಮನಸ್ಸು ಆಗಲಿಲ್ಲ.

ನಾಳೆ ಬುದ್ಧನ ಪಾಠ ವಿದೆ. ವಿಜ್ಞಾನದಲ್ಲಿ ಏನೋ ಪ್ರಯೋಗವಂತೆ. ಚರಿತ್ರೆ ಎಷ್ಟು ಓದಿದಿದರೂ ಅರ್ಥವಾಗುತ್ತಿಲ್ಲ. ಚರಿತ್ರೆಕೂಡ ಕಥೆ ತರ ಬರೆದರೆ ಓದುವುದಕ್ಕೆ ಚೆನ್ನ ಅಂದುಕೊಂಡ.

ರಾತ್ರಿ ಬುದ್ಧನ ಪಾಠ ಓದತೊಡಗಿದ. ಅರಮನೆಯಲ್ಲಿ ಆಟವಾಡುತ್ತಿರುವ, ಕಿರೀಟ ಇಟ್ಟುಕೊಂಡಿರುವ ಹುಡುಗನ ಕಲ್ಪನೆಯಾಯಿತು. ಚಿನ್ನದಂತೆ ಬಣ್ಣವಿರುವ ಬಟ್ಟೆ, ಹೊಳೆಯುತ್ತಿರುವ ಸಿಂಹಾಸನದಲ್ಲಿ ಪಾಠ ಓದುವ ಸಿದ್ಧಾರ್ಥ ಮೆಲ್ಲಗೆ ತಲೆಯಲ್ಲಿ ಮೂಡಿದ. ನಮ್ಮ ವಿಧಾನ ಸೌಧಕ್ಕಿಂತ ಅರಮನೆ ಚೆನ್ನಾಗಿದ್ದಿರಬೇಕು ಅನ್ನಿಸಿತು. ಅಲ್ಲಿಯ ರಾಜಕುಮಾರ. ದಿನಾ ಬರೀ ಸಿಹಿ ತಿಂಡಿಯೆ ತಿನ್ನುತ್ತದ್ದನೇನೊ. ತುಂಬಾ ಸುಖವಾಗಿದ್ದನೊ ಏನೊ. ಓದುವುದು, ಬರಿಯುವುದು ಯಾವಾಗ ಮಾಡುತ್ತಿದ್ದ? ಆಗ ನಮ್ಮತರದ ಸ್ಕೂಲ್ ಇರಲಿಲ್ಲವಲ್ಲ. ಸ್ನೇಹಿತರು ಹೇಗೆ ಸಿಗುತ್ತಿದ್ದರೋ ಗೊತ್ತಾಗಲಿಲ್ಲ. ಹಾಗೇ ನಿದ್ರೆ ಹತ್ತಿತು.

ಕ್ಲಾಸಿನಲ್ಲಿ ಪಾಠದಲ್ಲಿ ಇರುವುದಕ್ಕಿಂತ ಟೀಚರ್ ಹೆಚ್ಚು ಸಿದ್ಧಾರ್ಥನ ಬಗೆಗೆ ತಿಳಿಸಿದರು. ಅವನು ಮುದುಕಿಯನ್ನು, ರೋಗಿಯನ್ನು, ಸತ್ತುಹೋದವನನ್ನು ನೋಡಿದ ವಿಷಯ. ಜನ ತುಂಬಾ ದುಃಖ ಪಡುವ ಬಗೆಗೆ ಇತ್ಯಾದಿ. ಆ ಕಾಲದಲ್ಲಿ ಜನ ತುಂಬಾ ಕಷ್ಟ ಮತ್ತು ದು:ಖಪಡುತ್ತಿರಬೇಕು ಎಂದು ಊಹಿಸಿದ. ಹೆಣ ನೋಡಿದ ಬಗೆಗೆ ಹೇಳುವಾಗ, ವಿನೀತ ತಾನು ನೆನ್ನೆ ಹಳಿಗಳ ಮಧ್ಯೆ ನೋಡಿದ ದೇಹ ನೆನಪಾಯಿತು. ಪಾಠವನ್ನು ಮತ್ತೆ ಮೊದಲಿನಿಂದ ಓದಬೇಕು ಅಂದುಕೊಂಡ.

ಸುಖವಾಗಿದ್ದವನು, ಆ ಅರಮನೆ ಬಿಟ್ಟು ಹೊರಟುಹೋಗುತ್ತಿದ್ದಾನೆ. ಹೆಂಡತಿ, ಮಗು ಇತ್ಯಾದಿ ಅವನ ಮನಸ್ಸಿನಲ್ಲಿ ಹೊಳೆಯಲಿಲ್ಲ. ಅರಮನೆ ಬಿಟ್ಟದ್ದು, ಬಹಳ ಜನ ಅವನಿಗಿದ್ದ ಸೇವಕರು, ಸೈನ್ಯದವರು ಬಿಟ್ಟು ಹೋದದ್ದು ಅವನಿಗೆ ಸರಿ ಬರಲಿಲ್ಲ. ಕಥೆ ಮಜವಾಗಿತ್ತು. ಏನೇನೊ ಆಯ್ತು ಅಂದುಕೊಂಡ. ರಾತ್ರಿ ಪುಸ್ತಕ ಹಿಡಿದ. ಮತ್ತೆ ಬುದ್ಧನ ಕತೆಗೆ ಬಂದ. ಓದುತ್ತಾ ನಿದ್ರೆ ಆವರಿಸಿತು.

ಈ ಮುಂಜಾನೆ ಎಂದಿನಂತಿಲ್ಲ. ಅಮ್ಮ ಅತ್ತಿರುವಂತೆ ಕಾಣುತ್ತಿದೆ. ಅಪ್ಪ ಕೋಪದಲ್ಲಿರುವಂತಿದೆ. ತನ್ನ ಕಡೆಗೆ ನೋಡಲೂ ಇಲ್ಲ. ಹಾಲು ಚೆನ್ನಾಗಿಲ್ಲ ಅನ್ನಿಸಿತು. ಅಪ್ಪ ಆಫ಼ೀಸಿಗೆ ಹೊರಟು ಹೋಗಿದ್ದಾರೆ ಬೇಗ. ಅಮ್ಮ ಹೇಳದಿದ್ದರೂ ಬೇಲಾನನ್ನು ಹೊರಗೆ ಕರೆದುಕೊಂಡು ಹೊರಟ.

ಕ್ಲಾಸಿನಲ್ಲಿ ಕಸಿವಿಸಿ. ಏಕೋ ಖುಶಿಯಲ್ಲಿರಲು ಆಗುತ್ತಿಲ್ಲ. ಸ್ನೇಹಿತರು ಕೇಳಿದ್ದಕ್ಕೆ ಮಾತ್ರ ಉತ್ತರ. ಈ ದಿನವೂ ಬುದ್ಧನ ಪಾಠ ಮುಂದುವರಿದಿದೆ. ಈ ಕಥೆ ಚೆನ್ನಾಗಿಲ್ಲ ಅನ್ನಿಸಿಬಿಟ್ಟಿತು.

ಆಟವಿಲ್ಲದೆ ವಿನೀತ ಸಂಜೆ ಬೇಗ ಮನೆ ಸೇರಿದ. ಅಪ್ಪ ಇನ್ನೂ ಬಂದಿಲ್ಲ. ಅಮ್ಮನ ಅತ್ತಂತ ಮುಖ ಬದಲಾಗಿಲ್ಲ. ಟಿ ವಿ ನೋಡಬೇಕು ಅನ್ನಿಸಲಿಲ್ಲ. ಬೇಲಾನೊಡನೆ ಸ್ವಲ್ಪ ಆಡಿದ. ಈ ಬೇಲಾ ಎಷ್ಟು ಖುಶಿಯಲ್ಲಿ ಆಡ್ತಾನೆ. ಆಟಕ್ಕೇ ಕಾಯುತ್ತಿರುತ್ತಾನೆ ಅನ್ನಿಸಿತು. ಬುದ್ಧ ನಾಯಿ ಸಾಕಿದ್ದನಾ ಪ್ರಶ್ನೆ ತಲೆಗೆ ಬಂದು ಹೋಯಿತು.

ಈ ಅಪ್ಪ ಅಮ್ಮ ಜಗಳವಾಡುವುದು ತನಗೆ ಗೊತ್ತಾಗಿಬಿಡುತ್ತೆ. ’ತಥ್.. ಇಬ್ಬರೂ ತನಗೆ ಬೇಜಾರು ಮಾಡುತ್ತಾರೆ’.

ಅಪ್ಪ ಮನೆಗೆ ತಡವಾಗಿ ಬಂದಿದ್ದಾರೆ. ಮಾತಿಲ್ಲ. ರೂಮಿಗೆ ಹೋದರು. ಅಮ್ಮನೂ ರೂಮಿಗೆ ಹೋಗಿ ಏನೋ ಗೊಣಗಿದಂತೆ ಕೇಳಿಸಿತು. ’ಫ಼ಟ್..’ ಕೆನ್ನೆಗೆ ಹೊಡೆದ ಶಬ್ದ. ಅಮ್ಮ ಸಣ್ಣದಾಗಿ ಅಳುತ್ತಿರಬಹುದು. ಮತ್ತೇನೋ ಮಾತು.
” ಉಸಿರೆತ್ತಿದರೆ.. ಕೊಂದುಬಿಟ್ಟೇನು..” ಘರ್ಜನೆ.
“ನಾನು ಸಾಯುವುದು ಖಂಡಿತ. ನನ್ನ ಹೆಣ ನೋಡಿ ಸಂತೋಷ ಪಡಿ” ಅಮ್ಮನ ಧ್ವನಿ.
“ಅಯ್ತು..ಅವನು ನಿನ್ನ ಜೊತೆಯೆ ಬೆಳೆಯಲಿ” ಅಪ್ಪನ ಹತಾಷೆಯ ಮಾತು.

ಜಗಳ ಏತಕ್ಕೆನ್ನುವುದು ವಿನೀತನಿಗೆ ಗೊತ್ತಾಗಲೇ ಇಲ್ಲ. ಆದರೆ ಮನಸ್ಸು ಬೇಸರದಲ್ಲಿ ಮುಳುಗುವುದನ್ನು ನಿಲ್ಲಿಸಲಾಗಲಿಲ್ಲ. ಅಪ್ಪನಿಗೆ ಮನಸ್ಸಿನಲ್ಲಿ ಬೈದುಕೊಳ್ಳುತ್ತಾ ಊಟ ಮಾಡದೆ ಮಲಗಿಕೊಂಡ. ಯಾರೂ ಊಟಕ್ಕೆ ಎಬ್ಬಿಸಲೂ ಇಲ್ಲ.

” ವಿನೂ..ನೆನ್ನೆ ಊಟ ಮಾಡದೆ ಮಲಗಿಬಿಟ್ಟಯಲ್ಲ. ಏಳು. ಮುಖ ತೊಳೆದುಕೊ. ತಿಂಡಿ ಮಾಡಿದ್ದೇನೆ. ” ಅಮ್ಮನ ಧ್ವನಿ ಬದಲಾಗಿಲ್ಲ. ಅತ್ತಂತ ಮುಖ ಬದಲಾಗಿಲ್ಲ. ಅವಳು ಗುಟ್ಟನ್ನು ಮುಚ್ಚಿಟ್ಟಿದ್ದಾಳೆ.

ಇವತ್ತೂ ಹಾಲು ಚೆನ್ನಾಗಿಲ್ಲ. ಉಪ್ಪಿಟ್ಟು ಸೇರುತ್ತಿಲ್ಲ. ಉರುಳಿ ಬಿದ್ದ ತಲೆ ಮತ್ತೆ ಅಮ್ಮ ನೆನಪಾಗಿ ಉಪ್ಪಿಟ್ಟು ತಿನ್ನಲೇ ಇಲ್ಲ. ಎಲ್ಲೊ ದುಃಖ ಒತ್ತುತ್ತಿದೆ. ಅಳಬೇಕು ಅನ್ನಿಸದಿದ್ದರೂ ಅಳುವಿನಂಥ ಒಳ ಒದ್ದಾಟ ವಿನೀತನಿಗೆ ಆಗುತ್ತಿದೆ.

ಓದಿಕೊಳ್ಳಲು ಕೂತ. ಅಚಾನಕ ಬುದ್ಧನ ಪಾಠವೆ ಸಿಕ್ಕಿದೆ. ಮಜ ಅನ್ನಿಸದಿದ್ಧ ಬುದ್ಧನ ಪಾಠದ ಕೊನೆಯ ಭಾಗ ಈ ದಿನ ಕುತೂಹಲದಿಂದ ಓದಲು ಶುರುಮಾಡಿದ. ಮತ್ತೆ ಮೊದಲಿನಿಂದ ಕೊನೆಯವರೆಗೆ ಓದಿದ. ಸಿದ್ಧಾರ್ಥ ಅನ್ನುವುದಕ್ಕಿಂತ ಬುದ್ಧ ಅನ್ನುವ ಹೆಸರು ಇಷ್ಟವಾಯ್ತು. ಬುದ್ಧ ಅನ್ನುವುದೇ ಸುಲಭ.

ಕನ್ನಡ ಕ್ಲಾಸಲ್ಲಿ ಬುದ್ಧನ ಪಾಠ ಮುಗಿಸುತ್ತಿದ್ದಾರೆ ಟೀಚರ್. ವಿನೀತ ಅಮ್ಮನ ಬಗ್ಗೆ ಯೋಚಿಸುತ್ತಿದ್ದ. ಅಪ್ಪನ ಗಟ್ಟಿ ಧ್ವನಿ, ಅಮ್ಮನ ಅತ್ತ ಮುಖ, ಹಳಿಗಳ ಮಧ್ಯದ ವಿಕಾರ ಮುಂಡ, ಮಣ್ಣು ಮೆತ್ತಿಕೊಂಡು ಉರುಳಿ ಹೋಗಿದ್ದ ಶಾಂತ ಮುಖ. ಈ ಟೀಚರ್ ಬುದ್ಧನ ಕಥೆ ಪೂರ್ತಿ ಹೇಳುತ್ತಲೆ ಇಲ್ಲ ಅನ್ನಿಸಿಬಿಟ್ಟಿತು. ಇವರು ಹೇಳಿದ್ದೆಲ್ಲ ಬೆಳಿಗ್ಗೆ ತಾನು ಓದಿಕೊಂಡಿದ್ದೇನೆ. ಮತ್ತೆ ಅದನ್ನೇ ಕೇಳಬೇಕಲ್ಲ.

ಬೋರಾಗಿ ಬೋರ್ಡ್ ಮೇಲೆ ನೇತು ಹಾಕಿದ ಗಾಂಧಿ, ಬುದ್ಧ, ಮಹಾವೀರರ ಚಿತ್ರಗಳನ್ನೇ ನೋಡತೊಡಗಿದ. ಬುದ್ಧ ಮಾತ್ರ ತಲೆಯಲ್ಲಿ ಕುಳಿತಿದ್ದಾನೆ. ಅವನಿಗೆ ಅದು ಹೊಸ ಚಿತ್ರದಂತೆ ಈ ದಿನ ಕಾಣುತ್ತಿದೆ. ಆ ಮುಖವನ್ನೇ ನೋಡತೊಡಗಿದ.

ಬುದ್ಧನ ಮುಖ ವಿಚಿತ್ರವಾಗಿದೆ. ನಗುವಂತೆ ಕಾಣಿಸುತ್ತಿಲ್ಲ. ಅಳು ಮುಖವೂ ಅಲ್ಲ. ಸ್ವಲ್ಪ ಗಂಡಿನಂತೆ ಸ್ವಲ್ಪ ಹೆಣ್ಣಿನಂತೆ ಇದೆ. ಕಿವಿ ಏಕೆ ಇಷ್ಟು ಅಗಲ ಮತ್ತು ದೊಡ್ಡದೊ ಗೊತ್ತಾಗಲಿಲ್ಲ. ಕಣ್ಣುಗಳು ಮೆಲ್ಲಗೆ ತೆರೆಯುತ್ತಿದ್ದಾನೆಯೆ ಅಥವ ಮುಚ್ಚುತ್ತಿದ್ದಾನೆಯೆ. ಪದ್ಮಾಸನದಲ್ಲಿ ಕೈಗಳನ್ನು ಒಂದರ ಮೇಲೆ ಒಂದು ಇಟ್ಟು ಯೋಚಿಸುತ್ತ ಕುಳಿತಿದ್ದಾನೆ ಅಥವಾ ಯೋಚನೆಯೆ ಇಲ್ಲದಂತೆ ಮಲಗಿ ಎದ್ದಂತೆ ಅಥವಾ ಇದೀಗ ಮಲಗುತ್ತಿರುವಂತೆ. ಅಂತೂ ಬುದ್ಧ ಚೆನ್ನಾಗಿದ್ದಾನೆ. ಮುದ್ದಾಗಿಯೂ ಇದ್ದಾನೆ ಅಂತ ಖುಶಿಯಾಯಿತು.

ಅರಮನೆಯಲ್ಲಿದ್ದಾಗೆ ಇನ್ನೂ ಚೆನ್ನಾಗಿದ್ದನೊ ಏನೊ. ಒಳ್ಳೊಳ್ಳೆಯ ಬಟ್ಟೆಗಳು, ರಥ, ಸೈನಿಕರು, ಊಟ, ಸಿಹಿ ತಿಂಡಿಗಳು ಇತ್ಯಾದಿ. ಅವನು ಸ್ನೇಹಿತರ ಜೊತೆ ಯಾವ ಯಾವ ಆಟಗಳನ್ನು ಆಡುತ್ತಿದ್ದ. ಈಗಿನಂತೆ ಕ್ರಿಕೆಟ್, ಫ಼ುಟ್ಬಾಲ್, ಕಬಡ್ಡಿ, ಕೊಕ್ಕೊ ಅಥವ ಬರಿ ಕತ್ತಿ ಫ಼ೈಟ್ ಆಡುತ್ತ ಇದ್ದ ಅನ್ನಿಸುತ್ತೆ. ಆ ಯೋಚನೆಗೆ ಅವನಿಗೇ ನಗು ಬಂತು. ಅಂದ ಹಾಗೆ ರಾಜಕುಮಾರಿ ಒಬ್ಬಳು ಅವನ ಹೆಂಡತಿ. ಮದುವೆ ಆಗಿ ಆಮೇಲೆ ಅವಳನ್ನು ಬಿಟ್ಟು ಹೊರಟು ಹೋದನಂತೆ. ಎಲ್ಲರನ್ನೂ ಬಿಟ್ಟು ’ಜನರೆಲ್ಲ ಏಕೆ ದುಃಖ ಪಡುತ್ತಾರೆ?’ ಅಂತ ತಿಳಿದುಕೊಳ್ಳಲು ಹೊರಟ. ಗಲಿಬಿಲಿಯಾಯಿತು. ಮನೆಬಿಟ್ಟು ಹೋದರೆ ಬಹಳ ವಿಷಯ ತಿಳಿದುಕೊಳ್ಳಬಹುದೊ ಏನೊ? ಮೆಚ್ಚುಗೆಯಾಯ್ತು. ಬುದ್ಧ ಬಹಳ ಸುಂದರನಾಗಿ ಕಂಡ. ಅಮ್ಮ ಯಾಕೆ ಗೊತ್ತಾಗದಂತೆ ಅಳುತ್ತಾಳೆ. ತಾನು ಅದನ್ನು ತಿಳಿದುಕೊಳ್ಳಬೇಕು.

ಮತ್ತೆ ವಿನೀತ ಬುದ್ಧನ ಕಡೆ ನೋಡಿದ. ಈಗ ಅವನು ಮರವೊಂದರ ಕೆಳಗೆ ಕುಳಿತು ಯೋಚಿಸುತ್ತಿರುವುದು ಹೊಳೆಯಿತು. ಅವನ ತಲೆಯ ಮೇಲೆ ವಿಶಾಲವಾಗಿ ಹರಡಿದ ಮರ ಕನಸು ಕಾಣುತ್ತಿರುವ ಒಬ್ಬ ಮನುಷ್ಯನಂತೆ ಕಂಡಿತು. ಅಪ್ಪನ ಗಾಂಭಿರ್ಯ, ಅಮ್ಮನ ಅತ್ತಂತ ಮುಖ ಎರಡೂ ಬುದ್ಧನ ಮುಖದಲ್ಲಿ ಇದ್ದಂತಿದೆ. ಹಾಗೆ ಯೊಚನೆ ಮಾಡುವುದು ತಪ್ಪಿರಬಹುದೆ ಅಂದುಕೊಂಡ.

ಸಂಜೆ ಮನೆಗೆ ಬಂದಾಗ ಅಪ್ಪ ಬಂದುಬಿಟ್ಟಿದ್ದರು. ಮಾಮೂಲಾಗಿದ್ದರು. ಅಮ್ಮ ನೆನ್ನೆ ಜಗಳವೇ ಆಗಿಲ್ಲವೇನೊ ಅನ್ನುವಂತೆ ಅಪ್ಪನ ಜೊತೆ ಮಾತು ನಡೆಯುತ್ತಿತ್ತು. ಅಮ್ಮನ ಮುಖ ಆದರೂ ಗೆಲುವಾಗಿಲ್ಲ. ಇಬ್ಬರೂ ವಾಕಿಂಗ್ ಹೊರಟರು. ನನ್ನನ್ನು ಕರೆಯಲಿಲ್ಲವಲ್ಲ ಅನ್ನಿಸಿತು.

ಪುಸ್ತಕದ ಮುಂದೆ ಕೂತು ಏನು ಓದಲಿ ಯೋಚಿಸಿದ. ಬುದ್ಧನ ಪಾಠ ಇನ್ನೊಮ್ಮೆ ಓದುವ ಮನಸ್ಸು. ಓದುವುದರ ಬದಲು ಊಹೆ ಮಾಡುತ್ತಾ ಕುಳಿತ. ಟೀಚರ್ ಹೇಳಿದ್ದಕ್ಕಿಂತ ಬುದ್ಧನ ಕಥೆ ಬಹಳ ದೊಡ್ಡದಿದೆ. ದೊಡ್ಡ ಪುಸ್ತಕ ಸಿಕ್ಕಿದರೆ ಪೂರ್ತಿ ಓದಬೇಕು ಅನ್ನುವ ಆಸೆಯಾಯ್ತು. ಅಪ್ಪನಿಗೆ ಹೇಳಿ ನನ್ನ ರೂಮಿನಲ್ಲಿ ಒಂದು ಬುದ್ಧನ ಫ಼ೋಟೊ ಹಾಕಬೇಕು. ಈ ಸೂಪರ್ ಮನ್, ಬ್ಯಾಟ್ ಮನ್ ಚಿತ್ರ ತೆಗೆದುಬಿಡಬೇಕು. ನಾನೇನು ಚಿಕ್ಕ ಹುಡುಗನಲ್ಲ.

ಸರಿ, ತನ್ನ ಕ್ಲಾಸಿನಲ್ಲಿರುವುದು ಬಹಳ ಹಳೆ ಫ಼ೋಟೊ. ಹೊಸದು ಹುಡುಕಿ ತರಬೇಕು. ಬುದ್ಧನ ತಲೆಯ ಮೇಲಿನ ಮರ ಇನ್ನೂ ವಿಶಾಲವಾಗಿ ಕಾಣಬೇಕು. ಆಗ ಇನ್ನೂ ಚೆನ್ನಾಗಿರುತ್ತೆ. ರೂಮಿನ ಗೋಡೆ ತುಂಬಾ ಬುದ್ಧನ ಚಿತ್ರ.. ಅಬ್ಬಾ.. ಎಷ್ಟೊಂದು ಚಂದ.

ಅಪ್ಪ, ಅಮ್ಮ ವಾಕ್ ಮುಗಿಸಿ ಒಳಗೆ ಬರುವ ಸದ್ದಾಯಿತು. ಎದ್ದು ಹೊರಗೆ ಬಂದ. ಅವರಿಬ್ಬರ ಮುಖ ಹೊಸದಾಗಿ ನೋಡತೊಡಗಿದ. ಅಮ್ಮ’ “ಏನು ವಿನು.. ಹಾಗೆ ನೋಡ್ತಾ ಇದೀಯ. ಏನು ಬೇಕು.. ಬಾ .. ತಿನ್ನೋದಿಕ್ಕೆ ಏನಾದರು ಕೊಡ್ಲ ? ”

ಇಬ್ಬರೂ ಶಾಂತವಾಗಿದ್ದಾರೆ. ಅದರೂ ಇಬ್ಬರಲ್ಲು ಬುದ್ಧ ಹೇಳಿದಂತ ದು:ಖ ಇದೆ ಅನ್ನುವ ಖಾತ್ರಿ. ಏಕೊ ಮೊದಲಿನಂತೆ ಅಮ್ಮನ ಹತ್ತಿರ ನಗುತ್ತಾ ಮಾತನಾಡಲು ಆಗಲ್ಲವೇನೊ. ಅಪ್ಪನಂತು ಬಹಳ ಮೂಡಿ.

ಅಪ್ಪ ತನ್ನನ್ನೆ ನೋಡುತ್ತಿದ್ದಾರೆ. ಹತ್ತಿರ ಬಂದು ತಲೆ ಸವರಿದರು. ಏನೊ ಯೋಚಿಸುತ್ತಿದ್ದಾರೆ. ಜೋರಾಗಿ ನಿಟ್ಟುಸಿರು ಬಿಟ್ಟು ರೂಮಿಗೆ ಹೋದರು.

ರಾತ್ರಿ ಊಟ ಮಾತಿಲ್ಲದೆ ಮುಗಿಸಿದ. ಎದ್ದು ಹೋಗಿ ಮಲಗುವ ಮುಂಚೆ ಅದೇ ಪಾಠದ ಪುಟಗಳನ್ನು ತೆರೆದ. ಸಿದ್ದಾರ್ಥ ಹೆಸರಿನ ಕೆಳಗೆ ಪೆನ್ನಿನಿಂದ ದಪ್ಪ ಗೆರೆ ಎಳೆದು, ಪರೀಕ್ಷೆಗೆ ಈ ಪಾಠದಿಂದ ಮೂರಾದರು ಪ್ರಶ್ನೆ ಬಂದೇಬರುತ್ತೆ. ಅಮ್ಮ ನಾಳೆ ಇನ್ನೂ ಗೆಲುವಾಗಿರಲಪ್ಪ ದೇವರೆ.. ಅಂತ ಮನಸ್ಸಿನಲ್ಲಿ ಕೋರಿದ.

’ವಿನೂ.. ನಿದ್ರೆ ಬಂತಾ’ ಅಮ್ಮ ರೂಮಿಗೆ ಬಂದಿದ್ದಾಳೆ. ತಲೆ ನೇವರಿಸುತ್ತಾ ಹೇಳುತ್ತಿದ್ದಾಳೆ, ’ವಿನೂ.. ನಾಳೆ ನಾನು ಮತ್ತು ನೀನು ನಮ್ಮ ಅಮ್ಮನ ಊರಿಗೆ ಹೋಗ್ತಾ ಇದೀವಿ. ನಿನಗೆ ಅಜ್ಜಿ ಅಂದರೆ ತುಂಬಾ ಇಷ್ಟ ಅಲ್ವ. ಅಲ್ಲೇ ನಿನ್ನ ಸ್ಕೂಲಿಗು ಸೇರಿಸ್ತೀನಿ. ಅದು ಬಹಳ ಒಳ್ಳೆಯ ಸ್ಕೂಲ್. ಅಪ್ಪ ಇದೇ ಊರಲ್ಲೇ ಇರ್ತಾರೆ ಆಯ್ತಾ. ನಿನ್ನ ನೋಡ್ಬೇಕು ಅಂದಾಗ ಅಜ್ಜಿ ಮನೆಗೆ ಬಂದು ಹೋಗ್ತಾರೆ. ಗೊತ್ತಾಯ್ತ? ಇನ್ಮೇಲೆ ನಾವಿಬ್ರೂ ಅಜ್ಜಿ ಊರಲ್ಲೇ ಇರೋಣ. ಅಪ್ಪನಿಗೆ ಆಫ಼ೀಸ್ ಕೆಲಸ ತುಂಬಾ. ನಾವು ಅವರಿಗೆ ಕಷ್ಟ ಕೊಡೋದು ಬೇಡ. ನಾನು ನಿನ್ನ ಬಟ್ಟೆ, ಪುಸ್ತಕಗಳನ್ನೆಲ್ಲ ಪ್ಯಾಕ್ ಮಾಡಿದ್ದೇನೆ. ’

ವಿನೀತನಿಗೆ ಏನೂ ಹೇಳಲು ಗೊತ್ತಾಗಲಿಲ್ಲ. ಅಪ್ಪ ಕೆಟ್ಟವರು ಅನ್ನುವ ಕಲ್ಪನೆಯಷ್ಟೇ ಬಂದು ಹೋಯ್ತು.

ಅಮ್ಮ ಅವನ ಮನಸ್ಸು ಓದಿದಂತೆ ಅನ್ನಿಸಿತು. ’ವಿನೂ.. ಅಪ್ಪ ಒಳ್ಳೆಯವರು. ಅವರ ಬಗ್ಗೆ ಬೇಜಾರು ಮಾಡ್ಕೊ ಬೇಡ. ಈಗ ಮಲಗು’

ಅಮ್ಮ ಎದ್ದು ಹೋದಳು. ’ವಿಚಿತ್ರ ಅಪ್ಪ ಹಾಗೆ ಈ ಅಮ್ಮ ಕೂಡ”ಅಂದುಕೊಂಡ. ಅಜ್ಜಿ ಊರು ನೆನಪಾಯಿತು. ಚಿಕ್ಕ ಊರು ಆದ್ದರಿಂದ ಚಿಕ್ಕ ಸ್ಕೂಲಿಗೇ ನನ್ನ ಸೇರಿಸ್ತಾರೆ. ತನ್ನ ಈಗಿನ ಗೆಳೆಯರು ಇನ್ನು ಮುಂದೆ ತನಗೆ ಸಿಕ್ಕುವುದಿಲ್ಲ. ಯಾಕೊ ತುಂಬಾ ಬೇಜಾರಾಯಿತು. ಈ ಬೇಜಾರು ದು:ಖವೇ ಇರಬೇಕು. ಈ ಅಪ್ಪನೂ ತನಗೆ ಸಿಕ್ಕುವುದಿಲ್ಲವೇನೊ. ಏನೋ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸತೊಡಗಿತು. ಹಾಸಿಗೆಯಲ್ಲಿ ಅತ್ತ ಇತ್ತ ಉರುಳತೊಡಗಿದ.

ಕಣ್ಣು ನಿದ್ರೆಗೆಳೆಯತೊಡಗಿದೆ. ರೇಲು ಹಳಿಗಳು, ಉರುಳಿದ ತಲೆ, ಅಮ್ಮ ಹುಚ್ಚಿಯಾಗುತ್ತೇನೆ ಅಂತ ಅತ್ತದ್ದು, ಸಿದ್ಧಾರ್ಥ ಅರಮನೆ ಬಿಟ್ಟು ಹೊರಟುಹೋಗುತ್ತಿರುವುದು…. ಜಟೆ ಕಟ್ಟಿರುವ ಬುದ್ಧ ಕಾಣುತ್ತಿದ್ದಾನೆ. ತನ್ನ ನಿಮೀಲಿತ ಕಣ್ಣುಗಳನ್ನು ಪೂರ್ಣ ತೆರೆದಿದ್ದಾನೆ. ಇವನ ಕೈಹಿಡಿದು ಕೂರಿಸುತ್ತಿದ್ದಾನೆ. ಚಂದ್ರನ ಕಡೆ ಅಥವ ನಕ್ಷತ್ರಗಳ ಕಡೆ ಅಥವ ತಾನು ಇದುವರೆಗೆ ಕುಳಿತಿದ್ದ ವಿಶಾಲ ಮರದ ಕಡೆ ಕೈ ತೋರಿಸಿ, ಅವನು ನಗುತ್ತ ಏನೊ ಹೇಳುತ್ತಿದ್ದಾನೆ. ಅರ್ಥವಾಗುತ್ತಿಲ್ಲ ಅಥವ ಆಗುತ್ತಿದೆ. ಇನ್ನು ನೀನು ನನ್ನ ಸ್ನೇಹಿತ ಅನ್ನುತ್ತಿದ್ದಾನೆ…ಇದೀಗ ಈ ಹೊಸ ಸ್ನೇಹಿತ ಸಿದ್ಧಾರ್ಥನಿಗೆ ಅಲ್ಲ ಈ ಬುದ್ಧನಿಗೆ ಅಮ್ಮನ ಅತ್ತ ಮುಖಭಾವ ಬಂದಿದೆ ಅಥವ ಅಪ್ಪನ ಗಾಂಭೀರ್ಯ.

ಬೇಲಾ ಬೊಗಳಿದ ಶಬ್ಧ. ಎಚ್ಚರವಾಯಿತು. ತಾನು ಬೆಳಿಗ್ಗೆ ಅಜ್ಜಿ ಊರಿಗೆ ಹೋಗಬೇಕಲ್ಲ. ನಾಳೆ ಬೇಗ ಎದ್ದು ರೇಲುಹಳಿಗಳನ್ನು ನೋಡಬೇಕು. ಸತ್ತುಹೋದ ಹುಡುಗ ಯಾರಿರಬಹುದು? ಅವನ ತಲೆ ಅಲ್ಲೇ ಬಿದ್ದಿರಬಹುದಾ ಬಿದ್ದಿದ್ದರೆ ಸರಿಯಾಗಿ ನೋಡಬೇಕು. ಗುರುತು ಹಿಡಿಯಬೇಕು…

ವಿನೀತನಿಗೆ ನಿದ್ರೆ ಆವರಿಸಿದೆ. ಕನಸು… ಅಳುತ್ತಿರುವ ಅಮ್ಮ .. ಅಪ್ಪ ತನಗಾಗಿ ದೊಡ್ಡ ಬುದ್ಧನ ಚಿತ್ರ ಅಂಗಡಿಯಿಂದ ತರುತ್ತಿರುವ ಹಾಗೆ.. ಆ ಚಿತ್ರದ ಬುದ್ಧನನ್ನು ತಾನು ಎರಡೂ ಕೈ ಚಾಚಿ ಅಪ್ಪಿಕೊಂಡಹಾಗೆ.. ಮತ್ತೆ ಅಪ್ಪ ತನಗೆ ಬೆನ್ನು ಹಾಕಿ ಹೊರಟ ಹಾಗೆ.. ದೂರ.. ದೂರ. ಅಪ್ಪನ ಆಕೃತಿ ಚಿಕ್ಕದಾಗುತ್ತಾ..ಬುದ್ಧನ ಬೆನ್ನಿನಂತೆ ಕಾಣುತ್ತ.. ಅಪ್ಪನ ತಲೆಯಲ್ಲಿ ಜಟೆ ಇದ್ದಂತೆ… ಮತ್ತೆ ತಾನು ಮರವೊಂದರ ಕೆಳಗೆ ಕುಳಿತು ಹೊಸ ಸ್ನೇಹಿತನ ಕಾಯುತ್ತಿರುವ ಹಾಗೆ.

**********************

 (Published in “Panju” – Link address:http://www.panjumagazine.com/?p=13070)

5 thoughts on “ಹೊಸ ಸ್ನೇಹ

  1. ಅರ್ಥಗರ್ಭಿತ ಕಥೆ.. ಬುದ್ಧ, ಪ್ರಬುದ್ಧ, ಸಂಕೀರ್ಣ ಭಾವಗಳೆಲ್ಲದರ ಜಂಜಾಟಗಳ ಸಮೀಕರಣವನ್ನು ಮುಗ್ದ ನೋಟವೊಂದರ ಮಸೂರದಲ್ಲಿ ಹುಡುಕುತ್ತ ಹೋದ ಬಗೆ ಪರಿಣಾಮಕಾರಿಯಾಗಿದೆ.. 😊👍👌👏🏻

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s