ಮತ ಮತ್ತೊಂದು

edit

ಹಣಾಹಣಿಗೆ ಬಂತು ಚುನಾವಣೆ ತರತರದ ಚಿತಾವಣೆ
ಬಟ್ಟೆ ಕಟ್ಟಿ ಕಣ್ಣಿಗೆ ಚಿಟ್ಟೆ ತುಂಬಿ ತಲೆಯ ಒಳಗೆ
ಶಬ್ದಗಳ ಜಾದೂ ತೋರಿ ವಾಕ್ಯ ವಾಕ್ಯ ತರ್ಕಮಾಡಿ
ಮಸೆಯುತ್ತಾರೆ ಮೀಸೆ ಹೊಸೆಯುತ್ತಾರೆ ಆಸೆ

ಕೆಣಕು ಕುಟುಕು ಕೆಸರನೆರಚು ಅಣುಕು ಮಾಡಿ ಅಪಹಾಸ್ಯ ಮಾಡು
ಗುಂಪು ಕೂಡಿ ಸಂಪು ಮಾಡಿ ಹೊಡಿ ಬಡಿ ಶಾಂತಿ ಕದಡಿ
ಭರವಸೆಗಳ ಮೊಳಕೆ ಮಾಡಿ ಬೆನ್ನಿನಲ್ಲೇ ಅದರ ಹತ್ಯೆ ಮಾಡಿ
ಹಸಿ ಹಸಿ ಹಸಿವಿಗೆ ಹಾಸ್ಯ ಮಾಡಿ ಮೈಕಿಗೆ ಮುಖವಿಕ್ಕಿ
ತೆರೆದರು ಬಾಯ ಭೈರಿಗೆ ! ಬಂದರೆಲ್ಲ ಸವಾರಿಗೆ:

” ಕೂರಿ ನೀವು ಸುಮ್ಮನೆ, ಅರಮನೆಯಾಯ್ತು ನಿಮ್ಮನೆ
ನದಿಗಳೆಲ್ಲ ಸೇರಿಸಿ ಮನೆಬಾಗಿಲಲ್ಲೆ ತೋರಿಸಿ
ತೋಟ ಗದ್ದೆ ಹೊಲಗಳಲ್ಲಿ ಗಂಗೆತುಂಗೆ ಹರಿಯಿಸಿ
ಅಕ್ಕಿ ಗೋಧಿ ಬೇಳೆಕಾಳು ಬಿಟ್ಟಿಯಲ್ಲಿ ಹಂಚಿಸಿ
ಸಂಬಳ ಕುಳಿತೇ ತಿನ್ನಿರಿ ಉದ್ಯೋಗ ಖಾತ್ರಿ ತಿಳಿಯಿರಿ
ಎಲ್ಲರನ್ನೂ ಸೇರಿಸಿ ಹಿಂದುಳಿದ ಪಟ್ಟಿಗೆ ತೂರಿಸಿ
ಮೊದಲು ಮಣ್ಣ ಮಗನಿಗೆ ; ಅಗ್ರ ಪಟ್ಟ ಹೆಣ್ಣಿಗೆ
ಜಾತಿ ಅತೀತ ನಾವು; ಉಳಿದಪಕ್ಷ ಕೊಡಲಿಕಾವು
ಸಾಮಾನ್ಯರೆಲ್ಲ ಟೊಪ್ಪಿಗರು ಉಳಿದೆಲ್ಲರು ಭ್ರಷ್ಟರು ’’

“ಮತ್ತು ಇದೋ ಕಿವಿಕೊಟ್ಟು ಪಿಸು ಮಾತು ಕೇಳಿ
ನಮ್ಮ ನಿಮ್ಮೊಳಗಿನ ಬುದ್ಧಿಯೊಳಗಿನ ಚಾಳಿ
ಒಗೆಯಿರಿ ಅನುಮಾನ ನಾ ನಿಮ್ಮದೇ ಜಾತಿ
ತಲೆಲೆಕ್ಕ ಹೇಳಿದರೆ ತೀರಿಸುವೆ ಹಣದ ಋಣ
ಸಣ್ಣ ಒಡವೆ ಜೊತೆಗೆ ಒಗೆವೆ ಬಳೆ ಸೀರೆ ರವಿಕೆ ಕಣ
ಬಿಟ್ಟು ಬಿಡಿ ಟೀವಿ ಐಲು ತೆಗೆಯಿರಲ್ಲ ಸಣ್ಣ ಮೊಬೈಲು
ಒಳಗಿಟ್ಟುಕೊಳ್ಳಿ ಕಷ್ಟ ಕಳೆವ ಬಾಟ್ಳಿ ಕಳ್ಳು
ಮಾಡಿಸಲೆ ಬೇಕು ನಿಮಗೆ ಬಾಡೂಟ ಮ್ರುಷ್ಟಾನ್ನ
ಕುರಿ ಕೋಳಿ ಹಂದಿ ಮತ್ತೆ ಗುಟ್ಟಿನಲ್ಲಿ ಕಡಿಸಿ ದನ
ಎಸೆದೇವು ನೋಟು ಬೆಸೆದೇವು ನಂಟು
ನಿಂತುಬಿಡಿ ತೋರುತ್ತ ತೋರುಬೆರಳ ಗಂಟು
ಒತ್ತಿಬಿಡಿ ಒಂದೇ ದಿನ ನಮ್ಮ ಚಿನ್ಹೆಗೆ ನಿಮ್ಮ ಬಣ್ಣ”

ಚುನಾವಣೆ ಬಂತು ಹಣಾಹಣಿಗೆ ಮತ್ತೆ ಚಿತಾವಣೆಗೆ
ಒಂದು ದಿನಕ್ಕೆ ಮತ ಚಲಾವಣೆಗೆ

3 thoughts on “ಮತ ಮತ್ತೊಂದು

Leave a reply to anantharamesh ಪ್ರತ್ಯುತ್ತರವನ್ನು ರದ್ದುಮಾಡಿ